ಚಿಕ್ಕೋಡಿ(ಮಾ.03): ರಾಜ ಮಹಾರಾಜರ ಪರಿಕಲ್ಪನೆಯೇ ವಿಶಿಷ್ಟ. ಆಗಿನ ಕಾಲದಲ್ಲಿ ಅತ್ಯಾಧುನಿಕ ಯಂತ್ರಗಳು ಇಲ್ಲದೆ ಹೋದರೂ ಕಿಲೋಮೀಟರ್ ಗಟ್ಟಲೇ ಸುರಂಗ ಮಾರ್ಗಗಳನ್ನು ನಿರ್ಮಾಣ ಮಾಡುತ್ತಿದ್ದರು. ವಿಷಮ ಪರಿಸ್ಥಿತಿ ಎದುರಾದಾಗ ಅಥವಾ ಕೋಟೆ ಮೇಲೆ ದಾಳಿ ನಡೆದ ಸಂದರ್ಭದಲ್ಲಿ ತಮ್ಮನ್ನ ತಾವು ರಕ್ಷಿಸಿಕೊಳ್ಳಲು ಸುರಂಗ ಮಾರ್ಗಗಳ ಬಳಕೆ ಮಾಡಿಕೊಳ್ಳುತ್ತಿದ್ದರು ಎನ್ನಲಾಗುತ್ತಿತ್ತು. ಸದ್ಯ ಅಂತಹುದೇ ಒಂದು ಸುರಂಗ ಮಾರ್ಗ ಈ ಪತ್ತೆಯಾಗಿದ್ದು ಜನರಲ್ಲಿ ಕೂತುಹಲ ಮೂಡಿಸಿದೆ.
ಹೌದು, ಇಂತಹದೊಂದು ಸುರಂಗ ಮಾರ್ಗ ಪತ್ತೆಯಾಗಿದ್ದು ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹರಗಾಪುರ ಗಡ ಎಂಬ ಗ್ರಾಮದಲ್ಲಿ. ಹರಗಾಪುರ ಗ್ರಾಮದಲ್ಲಿ ರಸ್ತೆ ಕಾಮಾಗಾರಿ ಮಾಡುವ ಸಂದರ್ಭ ಗುಡ್ಡ ಅಗೆಯುವ ಸಮಯದಲ್ಲಿ ಈ ಟನಲ್ ಪತ್ತೆಯಾಗಿದ್ದು ಸದ್ಯ ಎಲ್ಲರನ್ನು ಸೆಳೆಯುತ್ತಿದೆ. ಕುತೂಹಲ ಹೆಚ್ಚುವಂತೆ ಮಾಡಿದೆ. ಹರಗಾಪುರ ಗಡ್ ಗ್ರಾಮ ಇರೋದು ಗುಡ್ಡ ಪ್ರದೇಶ ಹಾಗೂ ಎತ್ತರದ ಪ್ರದೇಶದಲ್ಲಿ. ಇದೇ ಪ್ರದೇಶದಲ್ಲಿ ಇರುವ ಪುರಾತನ ಕೋಟೆ ಇದಾಗಿದೆ. ಈ ಕೋಟೆಯನ್ನ ಭೋಜರಾಜ ಎನ್ನುವ ಮಹಾರಾಜರು ನಿರ್ಮಾಣ ಮಾಡಿದ್ದರು ಎಂದು ಹೇಳಲಾಗುತ್ತದೆ.
ಗುಂಡಾರ್ ನದಿ ಜೊತೆ ಕಾವೇರಿ ನದಿ ಜೋಡಣೆಗೆ ಕನ್ನಡಪರ ಹೋರಾಟಗಾರರ ಆಕ್ರೋಶ; ಗಡಿಯಲ್ಲಿ ರಸ್ತೆ ತಡೆದು ಪ್ರತಿಭಟನೆ
ಇಲ್ಲಿ ಈ ಹಿಂದಿನ ಕಾಲದಲ್ಲಿ ಛತ್ರಪತಿ ಶಿವಾಜಿ ಮಹಾರಾಜರು ಇಲ್ಲಿಗೆ ಆಗಮಿಸಿ ಈ ಕೋಟೆಯನ್ನು ಉಪಯೋಗಿಸುತ್ತಿದ್ದರು. ಇದೇ ಸಂದರ್ಭದಲ್ಲಿ ಇದನ್ನ ಅಭಿವೃದ್ಧಿ ಮಾಡಿದ್ದರು ಎನ್ನಲಾಗುತ್ತದೆ. ಅಭಿವೃದ್ಧಿ ಬಳಿಕ ಇದನ್ನ ಇಲ್ಲಿನ ಶಿವಾಜಿ ಮಹಾರಾಜರು ಈ ಕೋಟೆಗೆ ವಲ್ಲಭಗಡ್ ಎಂದು ನಾಮಕರಣವನ್ನು ಮಾಡಿದ್ದರು. ಸದ್ಯ ಈ ವಲ್ಲಭಗಡ್ ಕೋಟೆಯ ಕೆಳಗಡೆಯೇ ಈ ಸುರಂಗ ಮಾರ್ಗ ಪತ್ತೆಯಾಗಿದ್ದು, ಕೂತುಹಲ ಮೂಡಿಸಿದೆ. ಈ ಒಂದು ಸುರಂಗ ಮಾರ್ಗ ಸುಮಾರು 4 ಅಡಿ ಅಗಲ ಹಾಗೂ 10 ಅಡಿ ಎತ್ತರವಿದೆ. ಓರ್ವ ವ್ಯಕ್ತಿ ಇದರಲ್ಲಿ ಆರಾಮವಾಗಿ ಹಾದು ಹೋಗಬಹುದು.
ಇನ್ನು ಈ ಕೋಟೆಯನ್ನ ಶಿವಾಜಿ ಮಹಾರಾಜರು ತಮ್ಮ ಬೇಸಿಗೆ ದಿನಗಳನ್ನು ಕಳೆಯಲಿಕ್ಕೆ ಕಟ್ಟಿಸಿ ಇದಕ್ಕೆ ವಲ್ಲಭಘಡ ಎಂದು ನಾಮಕರಣ ಮಾಡಿದ್ದರು ಎಂದು ಇತಿಹಾಸ ತಜ್ಞರು ಅಭಿಪ್ರಾಯ ಪಡುತ್ತಿದ್ದಾರೆ. ವೈರಿಗಳು ನಾಲ್ಕು ದಿಕ್ಕಿನಿಂದ ಕೋಟೆಯ ಮೇಲೆ ದಾಳಿ ಮಾಡಿದಾಗ ಈ ಟನಲ್ಗಳನ್ನು ಬಳಕೆ ಮಾಡಿಕೊಂಡು ರಾಜರು ಹಾಗೂ ಕೋಟೆಯ ಜನ ಪಾರಾಗುತ್ತಿದ್ದರು ಎಂದು ಹೇಳುತ್ತಿದ್ದಾರೆ. ಈಗ ಪತ್ತೆಯಾಗಿರುವ ಈ ಟನಲ್ ಹರಗಾಪುರ ಗ್ರಾಮದಿಂದ 8 ಕೀಮಿ ದೂರವಿರುವ ಸಂಕೇಶ್ವರ ಪಟ್ಟಣದ ಶಂಕರಲಿಂಗ ದೇವಸ್ಥಾನ ಹಾಗೂ ಮಹಾರಾಷ್ಟ್ರದ ಸಮಾನ್ಯಘಢ ಎಂಬ ಪ್ರದೇಶಕ್ಕೆ ಸಂಪರ್ಕ ಬೆಳೆಸುತ್ತೆ ಎನ್ನುತ್ತಿದ್ದಾರೆ ಇತಿಹಾಸ ತಜ್ಞರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ