ಬೆಂಗಳೂರು: ಅಳಿವಿನಂಚಿನಲ್ಲಿರುವ ಸಸ್ತನಿಗಳ ಪೈಕಿ ಪ್ರಮುಖವಾದ ಯಾಕಿ ಮಂಕಿ ಪ್ರಾಣಿಯು (Yaki monkey ) ಸೇರಿದಂತೆ ವಿವಿಧ ಬಗೆಯ ಅಪರೂಪದ ವನ್ಯಜೀವಿಗಳು ಬೆಂಗಳೂರಿನ ವ್ಯಕ್ತಿಯೊಬ್ಬನ ಮನೆಯಲ್ಲಿ ಕಟ್ಟಿ ಹಾಕಿರುವ ಪ್ರಕರಣ ಬೆಳಕಿಗೆ ಬಂದಿದೆ. ಸಾಮಾನ್ಯವಾಗಿ ಯಾಕಿ ಮಂಕಿ ಎಂದು ಕರೆಯಲ್ಪಡುವ ಸೆಲೆಬ್ಸ್ ಕ್ರೆಸ್ಟೆಡ್ ಮಕಾಕ್ ಪ್ರಾಣಿಯು (Celebes crested macaque) ಇಂಡೋನೇಷ್ಯಾದ ಕಾಡುಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಇತ್ತಿಚಿನ ಕೆಲ ವರ್ಷಗಳಿಂದ ಈ ಪ್ರಾಣಿಯು ಅಳಿವಿನ ಅಂಚಿಗೆ ತಲುಪಿದ್ದು, ಇಂತಹ ಹೊತ್ತಿನಲ್ಲೇ ಬೆಂಗಳೂರಿನ ಕೆಂಗೇರಿ ಸಮೀಪದಲ್ಲಿರುವ ಪ್ರಮುಖ ಶಂಕಿತ ವ್ಯಕ್ತಿಯೊಬ್ಬನ ಮನೆಯಲ್ಲಿ ಕಂಡು ಬಂದಿರೋದು ಅಚ್ಚರಿ ಮೂಡಿಸಿದೆ.
ಕಳೆದ ವಾರ ಕಂದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳ ತಂಡ ಈತನ ಮನೆಗೆ ದಾಳಿ ನಡೆಸಿದಾಗ ಯಾಕಿ ಮಂಕಿ ಪ್ರಾಣಿಯನ್ನು ಸ್ನಾನ ಗೃಹದ ಒಳಗೆ ಕಟ್ಟಿ ಹಾಕಿರುವುದು ಬೆಳಕಿಗೆ ಬಂದಿದೆ. ಕೂಡಲೇ ಶಂಕಿತ ವ್ಯಕ್ತಿಯ ಮನೆಯಿಂದ ಯಾಕಿ ಮಂಕಿಯನ್ನು ರಕ್ಷಿಸಲಾಗಿದ್ದು, ಸದ್ಯ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಇರಿಸಲಾಗಿದೆ. ಬೆಂಗಳೂರಿನ ವಾತಾವರಣದಲ್ಲಿ ಈ ಪ್ರಾಣಿಯು ಬದುಕುಳಿಯುವ ಸಾಧ್ಯತೆ ಕಡಿಮೆ ಇರುವುದರಿಂದ ಅದನ್ನು ಶೀಘ್ರದಲ್ಲೇ ಇಂಡೋನೇಷ್ಯಾಗೆ ಮರಳಿ ಕಳಿಸಲು ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ.
ಇದನ್ನೂ ಓದಿ: SS Mallikarjun: ವನ್ಯ ಪ್ರಾಣಿಗಳ ಪತ್ತೆ ಪ್ರಕರಣ; ಮಾಜಿ ಸಚಿವರ ರಕ್ಷಣೆಗೆ ಅರಣ್ಯ ಇಲಾಖೆ ಯತ್ನ?
4 ಜನರ ಬಂಧನ
ಕಳೆದ ಜನವರಿ 22ರಂದು ಬ್ಯಾಂಕಾಕ್‌ನಿಂದ 14 ಸರೀಸೃಪಗಳು ಮತ್ತು ನಾಲ್ಕು ಪ್ರೈಮೇಟ್ (ಕೋತಿ ಜಾತಿಗೆ ಸೇರಿದ ಪ್ರಾಣಿ) ಗಳನ್ನು ಬೆಂಗಳೂರಿಗೆ ಕಳ್ಳ ಸಾಗಾಣೆ ಮಾಡುತ್ತಿದ್ದ ಪ್ರಕರಣದಲ್ಲಿ ತಮಿಳುನಾಡಿನ ಓರ್ವ ಮಹಿಳೆ ಸೇರಿದಂತೆ ಒಟ್ಟು 4 ಜನರನ್ನು ಬಂಧಿಸಲಾಗಿತ್ತು. ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ವನ್ಯಜೀವಿಗಳನ್ನು ಕಳ್ಳ ಸಾಗಾಣಿಕೆ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿಯ ಮೇರೆಗೆ ಡಿಆರ್‌ಐ ಅಧಿಕಾರಿಗಳು ದಾಳಿ ನಡೆಸಿ ನಾಲ್ವರನ್ನು ಬಂಧಿಸಿದ್ದರು. ಆ ಪೈಕಿ ಇಬ್ಬರು ವನ್ಯಜೀವಿ ಕಳ್ಳ ಸಾಗಾಣಿಕೆದಾರರು ಟಿಕೆಟ್ ನಿಗದಿಪಡಿಸಿ ಪ್ರಾಣಿ ಸಂಗ್ರಹಾಲಯವನ್ನು ತೆರೆಯಲು ನಿರ್ಧರಿಸಿದ್ದರು ಎಂದು ತಿಳಿದು ಬಂದಿದೆ.
ಪ್ರಸಿದ್ಧ ಎನ್‌ಜಿಓದ ಕೈವಾಡ?
ಪ್ರಾಣಿಗಳ ಕಳ್ಳ ಸಾಗಾಣಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳು ಪ್ರಾಣಿ ಸಂರಕ್ಷಣೆಯ ಕುರಿತಂತೆ ಕಳೆದ 34 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಪ್ರಸಿದ್ಧ ಎನ್‌ಜಿಒ ಒಂದರಲ್ಲಿ ಕೆಲಸ ಮಾಡುತ್ತಿದ್ದರು ಎಂದು ಒಪ್ಪಿಕೊಂಡಿದ್ದಾರೆ. ಆದರೆ ಆ ಎನ್‌ಜಿಓದ ಮಾಹಿತಿಯನ್ನು ಬಹಿರಂಗ ಪಡಿಸಲು ಡಿಆರ್‌ಐನ ಬೆಂಗಳೂರು ಘಟಕದ ಅಧಿಕಾರಿಗಳು ನಿರಾಕರಿಸಿದ್ದಾರೆ. ಜೊತೆಗೆ ಈ ಪ್ರಕರಣದ ಪ್ರಮುಖ ಶಂಕಿತ ಆರೋಪಿ ಮತ್ತು ಆತನ ಸಹಚರರು ಎನ್‌ಜಿಓದ ಸೂಚನೆ ಮೇರೆಗೆ ಯಾಕಿ ಮಂಕಿಯನ್ನು ಕಳ್ಳ ಸಾಗಾಣೆ ಮಾಡಿದ್ದಾರೆಯೇ ಎಂಬ ಕುರಿತು ತನಿಖಾಧಿಕಾರಿಗಳು ಮಾಹಿತಿ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.
ವನ್ಯ ಜೀವಿಗಳಿಂದ ತುಂಬಿದೆ ಮನೆ!
ಕಳೆದ ವಾರ ಕೆಂಗೇರಿಯ ಕೋಡಿಪಾಳ್ಯದಲ್ಲಿ ಇರುವ ಈ ಪ್ರಕರಣದ ಕಿಂಗ್ ಪಿನ್ ಮನೆಗೆ ತನಿಖಾ ತಂಡ ದಾಳಿ ನಡೆಸಿದ ವೇಳೆ ವಿವಿಧ ವನ್ಯ ಜೀವಿಗಳು ಪತ್ತೆಯಾಗಿದ್ದು, ಆ ಪೈಕಿ ಹಸಿರು ಮತ್ತು ಹಳದಿ ಬಣ್ಣದ ಅನಕೊಂಡ, ಮೆಕ್ಸಿಕನ್ ಬ್ಲ್ಯಾಕ್ ಕಿಂಗ್ ಹಾವು, ಹಳದಿ ತಲೆಯ ಅಮೆಜಾನ್ ಗಿಳಿ, ನೈಲ್ ಮಾನಿಟರ್, ಕೆಂಪು ಕಾಲಿನ ಆಮೆ, ಇಗ್ವಾನಾಸ್, ಬಾಲ್ ಹೆಬ್ಬಾವುಗಳು, ಅಲಿಗೇಟರ್ ಗಾರ್ ಎಂಬ ಮೀನು, ಮುಸುಕು ಹಾಕಿದಂತೆ ಕಾಣುವ ಗೋಸುಂಬೆ, ರಕೂನ್ ಡಾಗ್ ಮತ್ತು ಬಿಳಿ ತಲೆಯ ಪಿಯೋನಸ್ ಹಕ್ಕಿ ಸೇರಿದಂತೆ ವಿವಿಧ 48 ವಿವಿಧ ಬಗೆಯ ಪ್ರದೇಶಗಳಿಂದ ತರಿಸಿದ ಒಟ್ಟು 135 ಕಾಡು ಪ್ರಾಣಿಗಳು ಸಿಕ್ಕಿವೆ.
ಇದನ್ನೂ ಓದಿ: Travel Plans: ಕರ್ನಾಟಕದಲ್ಲಿರುವ ವನ್ಯಜೀವಿ ಅಭಯಾರಣ್ಯಗಳಿವು, ವೀಕೆಂಡ್ ಎಂಜಾಯ್ ಮಾಡೋಕೆ ಬೆಸ್ಟ್ ಪ್ಲೇಸ್
ಆರೋಪಿಯು ತನ್ನ ಪೋಷಕರು ಮತ್ತು ಸಹೋದರನೊಂದಿಗೆ ಇರುವ ಸ್ವಂತ ಮನೆಯ ಬೆಡ್‌ರೂಂ, ಹಾಲ್, ಟೆರೇಸ್ ಮತ್ತು ಮನೆಯ ಹೊರಗಡೆಗಳಲ್ಲಿ ಸಂಗ್ರಹಿಸಿದ್ದ. ಮೆಕ್ಸಿಕನ್ ಬ್ಲ್ಯಾಕ್ ಕಿಂಗ್ ಸ್ನೇಕ್, ಕ್ಯಾಲಿಫೋರ್ನಿಯಾದ ಕಿಂಗ್ ಸ್ನೇಕ್, ಅನಕೊಂಡಗಳು ಮತ್ತು ಹೆಬ್ಬಾವುಗಳು ಆರೋಪಿಯ ಮಲಗುವ ಕೋಣೆಯಲ್ಲಿದ್ದವು ಎಂದು ತಿಳಿದು ಬಂದಿದೆ. ಯಾಕಿ ಮಂಕಿಯನ್ನು ವೆಸ್ಟರ್ನ್ ಟಾಯ್ಲೆಟ್ ಪಕ್ಕದಲ್ಲಿ ಮಾಡಲಾಗಿದ್ದ ಗೂಡಿನಲ್ಲಿ ಭಯಾನಕವಾಗಿ ಕಟ್ಟಿ ಹಾಕಲಾಗಿದ್ದು, ಇದನ್ನು ಇಂಡೋನೇಷ್ಯಾದ ಸುಲವೆಸಿ ದ್ವೀಪದಲ್ಲಿರುವ ಟ್ಯಾಂಕೊಕೊ ಬಟುವಾಂಗ್ಸ್ ನೇಚರ್ ರಿಸರ್ವ್‌ನಲ್ಲಿ ಬೇಟೆಯಾಡಿ ಬೆಂಗಳೂರಿಗೆ ಕಳ್ಳಸಾಗಣೆ ಮಾಡಲಾಗಿದೆ ಎಂದು ಶಂಕಿಸಲಾಗಿದೆ.
ಸದ್ಯ ವನ್ಯಜೀವಿಗಳನ್ನು ಕಳ್ಳ ಸಾಗಾಣೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿಂಗ್ ಪಿನ್ ಮತ್ತು ಆತನ ಸಹಚರನನ್ನು ಪೊಲೀಸರು ಬಂಧಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ