ರಾಜ್ಯ ರಾಜಕೀಯದಲ್ಲಿ ಅಚ್ಚರಿಯ ಬೆಳವಣಿಗೆ; ಬಿಜೆಪಿ-ಜೆಡಿಎಸ್ ಹೊಸ ಮೈತ್ರಿ ಸಾಧ್ಯತೆ?; ಸಿಎಂ ರಣತಂತ್ರಕ್ಕೆ ಬೆಚ್ಚಿ ಬಿದ್ದ ರೆಬೆಲ್ಸ್!

Karnataka Political Crisis; ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸಿದರೆ ರಾಜ್ಯ ರಾಜಕೀಯದಲ್ಲಿ ಹೊಸದೊಂದು ಬಿಜೆಪಿ-ಜೆಡಿಎಸ್ ಮೈತ್ರಿ ಸರ್ಕಾರ ಆಡಳಿತದ ಚುಕ್ಕಾಣಿ ಹಿಡಿದರೂ ಅಚ್ಚರಿ ಇಲ್ಲ. ಆದರೆ, ಈ ಬೆಳವಣಿಗೆ ಆಘಾತ ನೀಡಿರುವುದು ಮಾತ್ರ ಪ್ರಸ್ತುತ ಮೈತ್ರಿ ಸರ್ಕಾರದ ರೆಬೆಲ್​ ಶಾಸಕರಿಗೆ.

MAshok Kumar | news18
Updated:July 12, 2019, 12:35 PM IST
ರಾಜ್ಯ ರಾಜಕೀಯದಲ್ಲಿ ಅಚ್ಚರಿಯ ಬೆಳವಣಿಗೆ; ಬಿಜೆಪಿ-ಜೆಡಿಎಸ್ ಹೊಸ ಮೈತ್ರಿ ಸಾಧ್ಯತೆ?; ಸಿಎಂ ರಣತಂತ್ರಕ್ಕೆ ಬೆಚ್ಚಿ ಬಿದ್ದ ರೆಬೆಲ್ಸ್!
ಪ್ರಾತಿನಿಧಿಕ ಚಿತ್ರ.
  • News18
  • Last Updated: July 12, 2019, 12:35 PM IST
  • Share this:
ಬೆಂಗಳೂರು (ಜುಲೈ.12); ರಾಜ್ಯ ರಾಜಕೀಯದ ಇತ್ತೀಚಿನ ಬೆಳವಣಿಗೆಯಲ್ಲಿ ಜೆಡಿಎಸ್ ಪಕ್ಷ ಬಿಜೆಪಿ ಜೊತೆಗೆ ಮೈತ್ರಿ ಸಾಧಿಸಿದರೂ ಅಚ್ಚರಿ ಇಲ್ಲ ಎನ್ನುತ್ತಿದೆ ರಾಜಕೀಯ ವಠಾರದ ಬಲ್ಲ ಮೂಲಗಳು. ಇದೇ ಕಾರಣಕ್ಕೆ ಜೆಡಿಎಸ್ ಸಚಿವ ಸಾರಾ ಮಹೇಶ್ ಗುರುವಾರ ರಾತ್ರಿ ಕೆಕೆ ಗೆಸ್ಟ್​ಹೌಸ್​ನಲ್ಲಿ ಬಿಜೆಪಿ ನಾಯಕರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಕುರಿತ ಸಾಧ್ಯಾಸಾಧ್ಯತೆಯನ್ನೂ ಕೇಳಿಯೇ ಮೈತ್ರಿ ಸರ್ಕಾರದ ಅತೃಪ್ತ ಶಾಸಕರು ನಿಬ್ಬೆರಗಾಗಿದ್ದಾರೆ.

ಅಸಲಿಗೆ ಸರ್ಕಾರ ಉರುಳಿದರೆ ಮತ್ತೊಂದು ಮಧ್ಯಂತರ ಚುನಾವಣೆ ಎದುರಾಗುತ್ತದೆ. ಆದರೆ, ಈ ಚುನಾವಣೆಯನ್ನು ಎದುರಿಸಲು ಸದ್ಯಕ್ಕೆ ಯಾವ ಪಕ್ಷದ ನಾಯಕರಿಗೂ ಆಸಕ್ತಿ ಇಲ್ಲ. ಈ ನಡುವೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿ ಇಬ್ಬರಿಗೂ ಕಾಂಗ್ರೆಸ್ ಪಕ್ಷದ ಮೇಲೆ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತೀವ್ರ ಅಸಮಾಧಾನವಿದೆ.

ಈಗಲೂ ಸಾಮೂಹಿಕ ರಾಜೀನಾಮೆ ನೀಡಿ ಸರ್ಕಾರವನ್ನು ಬೀಳಿಸಲು ಮುಂದಾಗಿರುವ ಬಹುಪಾಲು ಶಾಸಕರು ಕಾಂಗ್ರೆಸ್ ಪಕ್ಷದವರೇ. ಇವರು ಸಿದ್ದರಾಮಯ್ಯ ಆಜ್ಞೆಯಂತೆಯೇ ನಡೆದುಕೊಳ್ಳುತ್ತಿದ್ದಾರೆ ಎಂಬುದು ಇವರ ಆರೋಪ. ಇದೇ ಕಾರಣಕ್ಕೆ ಮಾಜಿ ಪ್ರಧಾನಿ ಹಾಗೂ ಹಾಲಿ ಮುಖ್ಯಮಂತ್ರಿ ಇಬ್ಬರೂ ಕಾಂಗ್ರೆಸ್ ವಿರುದ್ಧ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ : Karnataka Political Crisis; ಅಧಃಪತನದತ್ತ ಅಸ್ಥಿರ ರಾಜ್ಯ ಸರ್ಕಾರ; ತರಾತುರಿಯಲ್ಲಿ ವರ್ಗಾವಣೆ ದಂಧೆಗೆ ಇಳಿದರೇ ಸಚಿವ ಪ್ರಿಯಾಂಕ್​ ಖರ್ಗೆ?

ಕಾಂಗ್ರೆಸ್ ವಿರುದ್ಧ ಸೇಡಿಗೆ ಮುಂದಾಗಿರುವ ಜೆಡಿಎಸ್ ಇದೀಗ ಬಿಜೆಪಿ ಸಖ್ಯ ಬೆಳೆಸುವ ಮನಸ್ಸು ಮಾಡಿದೆ. ಏಕೆಂದರೆ ಪ್ರಸ್ತುತ ಮೈತ್ರಿ ಸರ್ಕಾರ ಉಳಿದರೂ ಸಹ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ ಎಂದು ಹೇಳಲಾಗದು. ಅಲ್ಲದೆ, ಬಿಜೆಪಿ ಸ್ವತಂತ್ರ್ಯವಾಗಿ ಸರ್ಕಾರ ರಚನೆ ಮಾಡಿದರು ಸಹ ಬಹುಮತಕ್ಕೆ ಬಿಜೆಪಿ ಹಾಗೂ ಮೈತ್ರಿ ನಡುವಿನ ಅಂತರ ಕೇವಲ ಮೂರು-ನಾಲ್ಕು ಸ್ಥಾನಗಳ ಮಾತ್ರ. ಹೀಗಾಗಿ ಬಿಜೆಪಿಯೂ ಸಂಪೂರ್ಣ 4 ವರ್ಷ ಯಾವುದೇ ತೊಂದರೆ ಇಲ್ಲದೆ ಅಧಿಕಾರ ನಡೆಸುವುದು ಸಾಧ್ಯವಿಲ್ಲ ಎಂಬುದು ಬಹಿರಂಗ ಸತ್ಯ. ಇದೇ ಕಾರಣಕ್ಕೆ ಜೆಡಿಎಸ್ ಬಿಜೆಪಿ ಎದುರು ಹೀಗೊಂದು ಹೊಸ ಸೂತ್ರವನ್ನು ಇಟ್ಟಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.

ಸಾ.ರಾ. ಮಹೇಶ್ ಮುಂದಿಟ್ಟು ಆಟ ಶುರು ಮಾಡಿದ ಸಿಎಂ, ನಿಂತಲ್ಲೇ ಬೆಚ್ಚಿಬಿದ್ದ ಅತೃಪ್ತರು:

ಬಿಜೆಪಿ ಜೊತೆಗೆ ಮೈತ್ರಿ ಸಾಧ್ಯತೆಯ ಕುರಿತು ಮಾತುಕತೆ ನಡೆಸುವ ಸಲುವಾಗಿಯೇ ನಿನ್ನೆ ರಾತ್ರಿ ಜೆಡಿಎಸ್ ಸಚಿವ ಸಾ ರಾ ಮಹೇಶ್ ಕೆಕೆ ಗೆಸ್ಟ್​ಹೌಸ್​ನಲ್ಲಿ ಬಿಜೆಪಿ ಹಿರಿಯ ನಾಯಕ ಕೆ.ಎಸ್. ಈಶ್ವರಪ್ಪ ಹಾಗೂ ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರ ರಾವ್ ಅವರನ್ನು ಭೇಟಿ ಮಾಡಿದ್ದಾರೆ. ಸಿಎಂ ಕುಮಾರಸ್ವಾಮಿಯ ಅಣತಿಯ ಮೇರೆಗೆ ಅವರ ಆಪ್ತ ಸಾರಾ ಮಹೇಶ್ ಈ ಮಾತುಕತೆಗೆ ಮುಂದಾಗಿದ್ದರು ಎನ್ನಲಾಗುತ್ತಿದೆ. ಆದರೆ, ಈ ಭೇಟಿ ಅಚಾನಕ್ಕಾಗಿ ಮಾಧ್ಯಮಗಳ ಕಣ್ಣಿಗೆ ಬಿದ್ದದ್ದು ಜೆಡಿಎಸ್ ನಾಯಕರ ದುರಾದೃಷ್ಟವೇ ಸರಿ.ಸಾರಾ ಮಹೇಶ್ ಹಾಗೂ ಬಿಜೆಪಿ ನಾಯಕರ ಭೇಟಿ ಹಾಗೂ ಚರ್ಚೆ ಮಾಧ್ಯಮಗಳಲ್ಲಿ ದೊಡ್ಡ ಮಟ್ಟದ ಸುದ್ದಿಗೆ ಗ್ರಾಸವಾಗುತ್ತಿದ್ದಂತೆ ಸಿಎಂ ಕುಮಾರಸ್ವಾಮಿ ಆದಿಯಾಗಿ ಬಿಜೆಪಿಯ ಎಲ್ಲಾ ನಾಯಕರು ಇದೊಂದು ಅಚಾನಕ್ ಆದ ಭೇಟಿ ಎಂದು ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. ಇನ್ನೂ ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರ್ ಅವರಿಗೆ ಕರೆ ಮಾಡಿದ್ದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಈ ಸುದ್ದಿ ಹೊರಗೆ ಗೊತ್ತಾದರೆ ಅತೃಪ್ತರ ನಡೆ ಏನು? ಸರ್ಕಾರ ರಚನೆ ಆಗುವಾಗ ಇಂತಹ ಅಚಾತುರ್ಯಕ್ಕೆ ಎಡೆಮಾಡಿಕೊಡುವುದೆ? ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ ಎನ್ನಲಾಗುತ್ತಿದೆ.

ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸಿದರೆ ರಾಜ್ಯ ರಾಜಕೀಯದಲ್ಲಿ ಹೊಸದೊಂದು ಬಿಜೆಪಿ-ಜೆಡಿಎಸ್ ಮೈತ್ರಿ ಸರ್ಕಾರ ಆಡಳಿತದ ಚುಕ್ಕಾಣಿ ಹಿಡಿದರೂ ಅಚ್ಚರಿ ಇಲ್ಲ. ಆದರೆ, ಈ ಬೆಳವಣಿಗೆ ಆಘಾತ ನೀಡಿರುವುದು ಮಾತ್ರ ಪ್ರಸ್ತುತ ಮೈತ್ರಿ ಸರ್ಕಾರದ ರೆಬೆಲ್​ ಶಾಸಕರಿಗೆ.

ಇದನ್ನೂ ಓದಿ : Karnataka Political Crisis; ರೆಬೆಲ್ಸ್​ಗಳ ಮೇಲೆ ವಿಪ್ ಕುಣಿಕೆ; ಇಂದಿನಿಂದ ಆರಂಭವಾಗಲಿದೆ ಅಧಿವೇಶನ; ಕುತೂಹಲ ಮೂಡಿಸಿದೆ ಬಿಜೆಪಿ ಹಾಗೂ ಅತೃಪ್ತರ ನಡೆ!

ಬಿಜೆಪಿ-ಜೆಡಿಎಸ್ ಹೊಸ ಮೈತ್ರಿ ಸಾಧ್ಯತೆ?; ಅತೃಪ್ತರಲ್ಲಿ ಮನೆಮಾಡಿದ ಆತಂಕ:

ಬಿಜೆಪಿ ಬಹುಮತದೊಂದಿಗೆ ಆಡಳಿತದ ಚುಕ್ಕಾಣಿ ಹಿಡಿದರೆ ಹೊಸ ಸರ್ಕಾರದಲ್ಲಿ ಮಂತ್ರಿಗಿರಿ ಗಿಟ್ಟಿಸಿಕೊಳ್ಳಬಹುದು ಎಂಬ ಮಹತ್ವಾಕಾಂಕ್ಷೆಯಿಂದಲೇ 13 ಅತೃಪ್ತ ಶಾಸಕರು ಕಾಂಗ್ರೆಸ್-ಜೆಡಿಎಸ್ ತೊರೆದು ಕಳೆದ ಶನಿವಾರ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆದರೆ, ಈಗ ರಾಜಕೀಯದ ಚದುರಂಗದ ಆಟ ಬದಲಾಗಿದೆ.

ಬದಲಾದ ರಣತಂತ್ರದಲ್ಲಿ ಪ್ರಸ್ತುತ ಮೈತ್ರಿ ಸರ್ಕಾರ ಬಿದ್ದರೆ ಜೆಡಿಎಸ್ ಬಿಜೆಪಿ ಜೊತೆ ಕೈಜೋಡಿಸಲಿದೆ ಎನ್ನಲಾಗುತ್ತಿದೆ. ಸಾರಾ ಮಹೇಶ್ ಹಾಗೂ ಬಿಜೆಪಿ ನಾಯಕರ ಭೇಟಿ ಇದಕ್ಕೆ ಇಂಬು ನೀಡುವಂತಿದೆ.

ಹೀಗಾಗಿ ಜೆಡಿಎಸ್-ಬಿಜೆಪಿ ನಾಯಕರ ಭೇಟಿ ವಿಚಾರ ಕೇಳಿಯೇ ಅತೃಪ್ತರು ಬೆಚ್ಚಿ ಬಿದ್ದಿದ್ದಾರೆ. ತೆನೆ ಮತ್ತು ಕಮಲ ಒಂದಾದರೆ ನಮ್ಮ ಗತಿ ಏನು? ಎಂದು ಚಿಂತಿಸುತ್ತಾ ಆತಂಕದಲ್ಲೇ ಮುಂಬೈ ಸೇರಿದ್ದಾರೆ. ನಿನ್ನೆಯಿಂದ ಯಾವ ಅತೃಪ್ತ ಶಾಸಕರ ಮುಖದಲ್ಲೂ ಕಳೆ ಇಲ್ಲದಂತಾಗಿದೆ ಎಂದು ತಿಳಿದುಬಂದಿದೆ. ಇನ್ನೂ ಸಾಧ್ಯಾಸಾಧ್ಯತೆಗಳಂತೆ ಹೊಸ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದರೂ ಅತೃಪ್ತರು ಮಾತ್ರ ನೆಮ್ಮದಿಯಿಂದ ಇರಲು ಸಾಧ್ಯವಿಲ್ಲ. ಸ್ಪೀಕರ್​ ಅನರ್ಹತೆಯ ಅಸ್ತ್ರ ಬೀಸಿದರೆ ಯಾರೂ ಸಹಾಯಕ್ಕೆ ಬರುವುದಿಲ್ಲ ಎಂಬುದು ಪ್ರಸ್ತುತ ಅತೃಪ್ತರ ಆತಂಕಕ್ಕೆ ಕಾರಣವಾಗಿದೆ.

First published:July 12, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ