ಮಂಗಳೂರು (ಮೇ. 6): ದೇಶವ್ಯಾಪ್ತಿ ಹರಡಿರುವ ಕೋವಿಡ್ 1 ರ ವೈರಸ್ ನಿರ್ಮೂಲನೆ ಹಾಗೂ ಲೋಕ ಕಲ್ಯಾಣಾರ್ಥವಾಗಿ ಸಂಬಂಧವಾಗಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಧನ್ವಂತರಿ ಹೋಮ, ನಿರಂತರ ಧನ್ವಂತರಿ ಜಪ, ಕ್ರಿಮಿ ಹರ ಸೂಕ್ತ ಜಪ ಸಹಿತ ಹೋಮ ಜರುಗಲಿದೆ. ದೇಶ ಹಾಗೂ ರಾಜ್ಯದ ಎಲ್ಲಾ ಜನತೆಗೂ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರು ಆರೋಗ್ಯ ಮತ್ತು ಸುಖ ಶಾಂತಿ ನೆಮ್ಮದಿಯನ್ನು ಕರುಣಿಸಲಿ ಎಂಬ ಪ್ರಾರ್ಥನೆಯೊಂದಿಗೆ ಶ್ರೀ ದೇವಾಲಯದ ಆಡಳಿತ ಮಂಡಳಿ ಈ ಧಾರ್ಮಿಕ ಕಾರ್ಯಗಳನ್ನು ನೆರವೇರಿಸುತ್ತಿದೆ ಎಂದು ಶ್ರೀ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ದೇವಾಲಯದ ಪ್ರಧಾನ ಅರ್ಚಕ ವೇದಮೂರ್ತಿ ಸೀತಾರಾಮ ಎಡಪಡಿತ್ತಾಯರ ನೇತೃತ್ವದಲ್ಲಿ ಅರ್ಚಕರ ಹಾಗೂ ಪುರೋಹಿತರ ವರ್ಗದವರನ್ನೊಳಗೊಂಡು ಈ ಕಾರ್ಯಕ್ಕೆ ಚಾಲನೆ ನೀಡಲಾಗಿದೆ
ಈ ಹೋಮ ಹವನದಲ್ಲಿ ಸರಕಾರದ ಕೋವಿಡ್-19 ಮಾರ್ಗಸೂಚಿ ಪ್ರಕಾರ ಋಗ್ವೇದ, ಯರ್ಜುವೇದ, ಸಾಮವೇದ ಪಾರಾಯಣಗಳು, ರುದ್ರ ಪಾರಾಯಣ, ಪವಮಾನ ಸೂಕ್ತ ಪಾರಾಯಣ, ಸರ್ಪಸೂಕ್ತ, ಸರ್ಪತ್ರಯ ಮಂತ್ರ ಜಪ, ಮನ್ಯುಸೂಕ್ತ, ಧನ್ವಂತರಿ ಜಪ, ವಿಷ ಕ್ರಿಮಿಹರ ಮಂತ್ರ ಜಪಗಳನ್ನು ಮೇ. 5ರಿಂದ ಮೇ. 14ರ ತನಕ ನಿರಂತರವಾಗಿ ನೆರವೇರಿಸಲಾಗುತ್ತದೆ ಎಂದು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್ ರಾಂ ಸುಳ್ಳಿ ಹೇಳಿದ್ದಾರೆ.
ಲೋಕ ಕಲ್ಯಾಣಾರ್ಥವಾಗಿ ಮೇ. 11ರ ತನಕ ಶ್ರೀ ದೇವಾಲಯದ 11 ಜನ ಪುರೋಹಿತರು ನಿರಂತರವಾಗಿ ತಪ ಜಪದೊಂದಿಗೆ 1 ಲಕ್ಷ ಧನ್ವಂತರಿ ಜಪ ನೆರವೇರಿಸಲಿದ್ದಾರೆ. ಅಲ್ಲದೆ ಈ ಅವಧಿಯಲ್ಲಿ 10 ಸಾವಿರ ಕ್ರಿಮಿಹರ ಸೂಕ್ತ ಜಪ ನೆರವೇರಲಿದೆ. ಮೇ 12ರಂದು ಮುಂಜಾನೆ ಧನ್ವಂತರಿ ಹೋಮ ನೆರವೇರಲಿದೆ. 13ರಂದು ಮುಂಜಾನೆ ಕ್ರಿಮಿಹರ ಸೂಕ್ತ ಜಪ ಸಹಿತ ಹೋಮ ನಡೆಯಲಿದೆ. ಮೇ. 14ರಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರಿಗೆ ಮಹಾಭಿಷೇಕ ಮತ್ತು ಪರಿವಾರ ದೇವರುಗಳಿಗೆ ವಿಶೇಷ ಪೂಜೆ ಮತ್ತು ನೈವೇದ್ಯ ನೆರವೇರಲಿದೆ ಎಂದು ಮೋಹನರಾಂ ಸುಳ್ಳಿ ಹೇಳಿದ್ದಾರೆ.
ಇದನ್ನು ಓದಿ: ಟಗರು ನಟಿ ಅನಿತಾ ಭಟ್ಗೆ ಕೋವಿಡ್; ಹೋಮ್ ಕ್ವಾರಂಟೈನ್ನಲ್ಲಿ ಅಮ್ಮ, ಮಗಳು...
ಇನ್ನು ದೇವಾಲಯದಲ್ಲಿ ನಡೆಯುವ ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ದೇವತಾ ಪ್ರಸಾದವನ್ನು ಸ್ವೀಕರಿಸಲು ಸಾರ್ವಜನಿಕರಿಗೆ ಯಾವುದೇ ಅವಕಾಶ ಇಲ್ಲ. ಬದಲಾಗಿ ಭಕ್ತಾಧಿಗಳು ಪ್ರತಿ ನಿತ್ಯ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರನ್ನು ತಮ್ಮ ತಮ್ಮ ವಾಸ ಸ್ಥಾನದಲ್ಲಿ ಧ್ಯಾನ ಭಜನೆಗಳ ಮೂಲಕ ಸರ್ವರಿಗೂ ಒಳಿತಾಗಲಿ ಎಂದು ಪ್ರಾರ್ಥಿಸಿ ಎಂದು ಅಧ್ಯಕ್ಷರು ವಿನಂತಿಸಿದ್ದಾರೆ.
ರಾಜ್ಯದಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗದ ಎರಡನೇ ಅಲೆಯು ತೀವ್ರವಾಗಿ ಹೆಚ್ಚುತ್ತಿದೆ. ಈ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರಕಾರ ನಿರ್ದೇಶಿಸಿರುವ ಮಾರ್ಗಸೂಚಿಯಂತೆ ದೇವಾಲಯಕ್ಕೆ ಭಕ್ತರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಆದರೆ ದೇವಾಲಯದಲ್ಲಿ ದೇವರಿಗೆ ಪೂರ್ವ ಶಿಷ್ಠ ಸಂಪ್ರದಾಯದಂತೆ ನಡೆಯುವ ದೈನಂದಿನ ಪೂಜಾ ವಿಧಿ ವಿನಿಯೋಗಗಳು ಹಾಗೂ ಪಂಚ ಪರ್ವಾದಿ ವಿಶೇಷ ಉತ್ಸವಗಳು ಅರ್ಚಕರು, ಪುರೋಹಿತರು ಮತ್ತು ಸಂಬಂಧಪಟ್ಟ ಸಿಬ್ಬಂದಿಗಳ ಮೂಲಕ ದೇವಾಲಯದ ಒಳಾಂಗಣ ಮತ್ತು ಹೊರಾಂಗಣಕ್ಕೆ ಮಾತ್ರ ಸೀಮಿತಗೊಳಿಸಿ ನೆರವೇರಿಸಲ್ಪಡುತ್ತಿದೆ ಎಂದು ಮೋಹನರಾಂ ಸುಳ್ಳಿ ಹೇಳಿದರು.
ಈ ಸಂದರ್ಭ ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಪ್ರಸನ್ನ ದರ್ಬೆ, ವನಜಾ. ವಿ. ಭಟ್, ಪಿ.ಜಿ.ಎಸ್.ಎನ್. ಪ್ರಸಾದ್, ಮನೋಹರ ರೈ, ಲೋಕೇಶ್ ಮುಂಡೋಕಜೆ, ಶೋಭಾ ಗಿರಿಧರ್, ಶ್ರೀವತ್ಸ ಉಪಸ್ಥಿತರಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ