• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Shettar and BSY: ಜಗದೀಶ್ ಶೆಟ್ಟರ್‌ ವಿರುದ್ಧ ಫೀಲ್ಡ್‌ಗಿಳಿದ ಬಿಎಸ್‌ವೈ; ‘ಲಿಂಗಾಯತ ದ್ರೋಹ’ ಹಣೆಪಟ್ಟಿ ಕಳಚಲು ಬಿಜೆಪಿ ಯತ್ನ

Shettar and BSY: ಜಗದೀಶ್ ಶೆಟ್ಟರ್‌ ವಿರುದ್ಧ ಫೀಲ್ಡ್‌ಗಿಳಿದ ಬಿಎಸ್‌ವೈ; ‘ಲಿಂಗಾಯತ ದ್ರೋಹ’ ಹಣೆಪಟ್ಟಿ ಕಳಚಲು ಬಿಜೆಪಿ ಯತ್ನ

ಬಿಎಸ್‌ವೈ-ಶೆಟ್ಟರ್ (ಸಂಗ್ರಹ ಚಿತ್ರ)

ಬಿಎಸ್‌ವೈ-ಶೆಟ್ಟರ್ (ಸಂಗ್ರಹ ಚಿತ್ರ)

1884ರಿಂದ ಸತತ ಆರು ಬಾರಿ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಜಗದೀಶ್ ಶೆಟ್ಟರ್, ಕ್ಷೇತ್ರವನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಂಡಿಲ್ಲ. ಹೀಗಾಗಿ ಈ ಬಾರಿಯ ಚುನಾವಣೆಯ ಗೆಲುವು ಸಲೀಸಾಗಿದೆಯೇ? ಈ ಲೇಖನ ಓದಿ

  • Share this:

ಬೆಂಗಳೂರು: ಬಿಜೆಪಿ ಪಕ್ಷ (BJP) ಲಿಂಗಾಯತ ಸಮುದಾಯಕ್ಕೆ ದ್ರೋಹ ಬಗೆದಿದೆ ಎಂದು ಆರೋಪಿಸಿ ಪಕ್ಷ ತೊರೆದು ಕಾಂಗ್ರೆಸ್‌ (Congress) ಸೇರಿರುವ ಮಾಜಿ ಸಿಎಂ ಜಗದೀಶ್ ಶೆಟ್ಟರ್,  (Jagadish Shettar) ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿದ ಬೆನ್ನಲ್ಲೇ ಶೆಟ್ಟರ್‌ ಅವರನ್ನು ಸೋಲಿಸಲು ಬಿಜೆಪಿ ರಣತಂತ್ರ ಹೆಣೆದಿದೆ. ಜಗದೀಶ್ ಶೆಟ್ಟರ್ ಬಿಜೆಪಿ ಮೇಲೆ ಮಾಡುತ್ತಿರುವ ಆರೋಪಗಳನ್ನು ಎದುರಿಸಲು ಮತ್ತು ಅವರನ್ನು ಚುನಾವಣೆಯಲ್ಲಿ ಸೋಲಿಸಲು ಇದೀಗ ಮಾಜಿ ಸಿಎಂ, ಪ್ರಬಲ ಲಿಂಗಾಯತ (Lingayat Leader) ಮುಖಂಡ ಬಿಎಸ್‌ ಯಡಿಯೂರಪ್ಪ (BSY) ಅವರನ್ನೇ ಬಿಜೆಪಿ ಹೈಕಮಾಂಡ್‌ ಕಣಕ್ಕಿಳಿಸಿದೆ.


ಇದರ ಬೆನ್ನಲ್ಲೇ ಬಿಜೆಪಿ ಪಕ್ಷದ ವಿರುದ್ಧ ಜಗದೀಶ್ ಶೆಟ್ಟರ್ ಮಾಡಿರುವ ಆರೋಪಗಳು ಅವಿವೇಕತನದ್ದು ಎಂದು ಟೀಕಿಸಿರುವ ಬಿಎಸ್‌ವೈ, ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಸ್ಥಳೀಯ ಲಿಂಗಾಯತ ಮುಖಂಡರೊಂದಿಗೆ ಸಭೆ ನಡೆಸಿ ಜಗದೀಶ್ ಶೆಟ್ಟರ್ ಅವರನ್ನು ಸೋಲಿಸಲು ಎಲ್ಲ ರೀತಿಯಲ್ಲೂ ಕೆಲಸ ಮಾಡುವಂತೆ ಕೇಳಿಕೊಂಡಿದ್ದಾರೆ. ಆಪ್ತ ಸಭೆಯಲ್ಲಿ ಶೆಟ್ಟರ್‌ಗೆ ಟಿಕೆಟ್ ನಿರಾಕರಿಸಿದ್ದಕ್ಕೆ ಕಾರಣಗಳನ್ನು ವಿವರಿಸಿದ ಬಿಎಸ್‌ವೈ, ತಮ್ಮ ಒಂದು ಕಾಲದ ಒಡನಾಡಿಯನ್ನು ಸೋಲಿಸುವ ಹೊಣೆಯನ್ನು ಸ್ಥಳೀಯ ಲಿಂಗಾಯತ ಮುಖಂಡರು ಮತ್ತು ಕಾರ್ಯಕರ್ತರಿಗೆ ವಹಿಸಿದ್ದಾರೆ.


ಶೆಟ್ಟರ್ ವಿರುದ್ಧ ಬಿಜೆಪಿ ಸಿಡಿಮಿಡಿ


ಬಿಜೆಪಿಯಿಂದ ಟಿಕೆಟ್ ನಿರಾಕರಣೆಗೊಂಡ ಬೆನ್ನಲ್ಲೇ ಅಸಮಾಧಾನಗೊಂಡು ಕಾಂಗ್ರೆಸ್‌ಗೆ ಸೇರಿ ಚುನಾವಣೆಗೆ ಸ್ಪರ್ಧಿಸುತ್ತಿರುವ ಜಗದೀಶ್ ಶೆಟ್ಟರ್ ಅವರು ಬಿಜೆಪಿ ಮುಖಂಡರ ವಾಗ್ದಾಳಿಗೆ ಆರಂಭದಲ್ಲಿ ಮೃದುವಾಗಿಯೇ ಪ್ರತಿಕ್ರಿಯೆ ಕೊಡುತ್ತಿದ್ದರು. ಆದರೆ ಬಿಜೆಪಿಗರು ಕಟುಶಬ್ದಗಳಿಂದ ಟೀಕೆಗೆ ಮುಂದಾಗುತ್ತಿದ್ದ ಬೆನ್ನಲ್ಲೇ ತಾವೂ ಅದೇ ಅಸ್ತ್ರ ಪ್ರಯೋಗಿಸಿದ ಶೆಟ್ಟರ್ ಬಿಜೆಪಿಯನ್ನು ತರಾಟೆಗೆ ತೆಗೆದುಕೊಳ್ಳಲು ಆರಂಭಿಸಿದ್ದಾರೆ. ಲಿಂಗಾಯತ ಸಮುದಾಯದ ಜನರು ಬಿಜೆಪಿ ಜೊತೆ ಈ ಹಿಂದಿನಿಂದಲೂ ನಿಂತಿರುವುದರಿಂದ ಶೆಟ್ಟರ್‌ ಪಕ್ಷ ತೊರೆದಿರುವುದು ಖಂಡಿತವಾಗಿಯೂ ಪಕ್ಷಕ್ಕೆ ಹಾನಿಯುಂಟು ಮಾಡಬಹುದು ಎನ್ನುವ ಎಚ್ಚರಿಕೆಯನ್ನು ಅರಿತುಕೊಂಡಿರುವ ಬಿಜೆಪಿ ಲಿಂಗಾಯತ ಕಾರ್ಡ್‌ ಬಳಸಲು ಆರಂಭಿಸಿದೆ.


ಇದನ್ನೂ ಓದಿ: Pralhad Joshi: ಕರ್ನಾಟಕಕ್ಕೆ ನರೇಂದ್ರ ಮೋದಿ ಆದೇಶ ಪಾಲಿಸುವ ಸಿಎಂ ಮತ್ತು ಮಂತ್ರಿ ಬೇಕಾಗಿದೆ: ಪ್ರಹ್ಲಾದ್ ಜೋಶಿ


ಶೆಟ್ಟರ್‌ಗೆ ಟಿಕೆಟ್ ತಪ್ಪಲು ಕಾರಣರಾಗಿರುವ ಮತ್ತು ಸದ್ಯ ಬಿಜೆಪಿಯಲ್ಲಿ ಪ್ರಬಲ ನಾಯಕರಾಗಿ ಗುರುತಿಸಿಕೊಂಡಿರುವ ಪಕ್ಷದ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ಅವರನ್ನು ಭೇಟಿಯಾಗಿರುವ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಜಗದೀಶ್ ಶೆಟ್ಟರ್ ಬಿಜೆಪಿ ತೊರೆದಿರುವುದು ಮತ್ತು ಲಿಂಗಾಯತರ ಕಡೆಗಣನೆ ಆರೋಪವನ್ನು ಎದುರಿಸುವ ಬಗ್ಗೆ ಚರ್ಚೆ ನಡೆಸಿದ್ದಾರೆ. ಇದರ ಬೆನ್ನಲ್ಲೇ ಹುಬ್ಬಳ್ಳಿಗೆ ಬಂದಿದ್ದ ಬಿಎಸ್‌ವೈ, ಪಕ್ಷಕ್ಕೆ ದ್ರೋಹ ಎಸಗಿದ ಶೆಟ್ಟರ್ ಅವರನ್ನು ಭಾರೀ ಅಂತರದಿಂದ ಸೋಲಿಸಬೇಕು ಎಂದೂ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ. ಈ ಬಗ್ಗೆ ನ್ಯೂಸ್‌ 18 ವಾಹಿನಿ ಜೊತೆ ಮಾತನಾಡಿದ್ದ ಬಿಎಸ್‌ ಯಡಿಯೂರಪ್ಪ, ಜಗದೀಶ್ ಶೆಟ್ಟರ್ ಇಂದು ಏನಾಗಿದ್ದರೋ ಅದಕ್ಕೆ ಬಿಜೆಪಿ ಪಕ್ಷ ಕಾರಣ, ಶೆಟ್ಟರ್‌ಗೆ ದುರಾಸೆ ಇದೆ. ಹಾಗಾಗಿ ಅಧಿಕಾರದ ಆಸೆಯಿಂದ ಕಾಂಗ್ರೆಸ್‌ಗೆ ಸೇರಿದ್ದಾರೆ. ಅವರು ಇಡೀ ಲಿಂಗಾಯತ ಸಮುದಾಯದ ಜೊತೆ ತನ್ನನ್ನು ತಾನು ಸಮೀಕರಿಸಿಕೊಳ್ಳುತ್ತಿದ್ದಾರೆ. ನಾವು ಅದನ್ನು ಒಪ್ಪೋದಿಲ್ಲ. ಅವರನ್ನು ಈ ಚುನಾವಣೆಯಲ್ಲಿ ಸೋಲಿಸುತ್ತೇವೆ ಎಂದು ಹೇಳಿದ್ದರು.


ಶೆಟ್ಟರ್ ಏಕಾಂಗಿ ಪ್ರಚಾರ


1884ರಿಂದ ಸತತ ಆರು ಬಾರಿ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಜಗದೀಶ್ ಶೆಟ್ಟರ್, ಕ್ಷೇತ್ರವನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಂಡಿಲ್ಲ. ಹೀಗಾಗಿ ಈ ಬಾರಿಯ ಚುನಾವಣೆಯ ಗೆಲುವು ಸುಗಮವಾಗಿಲ್ಲ ಅನ್ನೋದು ಕಾಂಗ್ರೆಸ್‌ಗೆ ಸೇರ್ಪಡೆಯಾದಾಗಿನಿಂದ ಶೆಟ್ಟರ್‌ಗೆ ಅರಿವಾದಂತಿದೆ. ಈ ಕ್ಷೇತ್ರದಲ್ಲಿ ಬಿಜೆಪಿ ಪಕ್ಷ ಭದ್ರವಾಗಿ ತಳಮಟ್ಟದಿಂದ ನೆಲೆಯೂರಿದ್ದು, ಕಾರ್ಯಕರ್ತರು ಕೂಡ ಹೆಚ್ಚು ಕಡಿಮೆ ಬಿಜೆಪಿ ಪಕ್ಷದಲ್ಲೇ ಇದ್ದಾರೆ. ಇತ್ತ ಶೆಟ್ಟರ್‌ ಅವರು ತಮ್ಮ ಪತ್ನಿಯ ಜೊತೆಗೆ ಮನೆ ಮನೆಗೆ ತೆರಳಿ ಪ್ರಚಾರ ನಡೆಸಿ ಮತ್ತೆ ಮತ ನೀಡುವ ಮೂಲಕ ತಮ್ಮ ಗೌರವವನ್ನು ಉಳಿಸುವಂತೆ ವಿನಂತಿ ಮಾಡುತ್ತಿದ್ದಾರೆ.


ಇದನ್ನೂ ಓದಿ: Siddaramaiah: ಶೋಭಾ ಕರಂದ್ಲಾಜೆಯನ್ನು ವಿಚಾರಣೆಗೊಳಪಡಿಸಿ ಚುನಾವಣಾ ಪ್ರಚಾರದಿಂದ ನಿಷೇಧಿಸಿ: ಸಿದ್ದರಾಮಯ್ಯ ಆಕ್ರೋಶ


ವಿಶೇಷ ಅಂದ್ರೆ ಈ ವರೆಗೂ ಕಾಂಗ್ರೆಸ್‌ನ ಯಾವೊಬ್ಬ ದೊಡ್ಡ ನಾಯಕರು ಕೂಡ ಶೆಟ್ಟರ್ ಪರ ಪ್ರಚಾರ ಮಾಡಿಲ್ಲ. ಶೆಟ್ಟರ್ ಏಕಾಂಗಿಯಾಗಿಯೇ ತಮ್ಮ ಕ್ಷೇತ್ರದಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಇನ್ನೊಂದೆಡೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ಜಗದೀಶ್ ಶೆಟ್ಟರ್ ಅವರನ್ನು ಸೋಲಲು ಪಕ್ಷ ಚುನಾವಣೆಗೆ ನಿಲ್ಲಿಸಿಲ್ಲ ಎಂದೂ ಹೇಳಿದ್ದಾರೆ. ಇತ್ತೀಚೆಗೆ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಅವರು ಹುಬ್ಬಳ್ಳಿಗೆ ಬಂದಿದ್ದ ವೇಳೆ ರಾಗಾ ಜತೆ ಸಭೆ ನಡೆಸಿದ್ದ ಶೆಟ್ಟರ್, ಕಾಂಗ್ರೆಸ್‌ ಗೆಲುವಿಗೆ ತಾನು ಶಕ್ತಿ ಮೀರಿ ಶ್ರಮಿಸುವುದಾಗಿ ಹೇಳಿದ್ದರು. ಇದೆಲ್ಲದರ ಮಧ್ಯೆ ಮತದಾನದ ದಿನ ಹತ್ತಿರವಾಗುತ್ತಿದ್ದಂತೆ ಶೆಟ್ಟರ್ ತಮ್ಮ ಪರ ಅಲೆ ಸೃಷ್ಟಿಸುವ ನಿರೀಕ್ಷೆಯಲ್ಲಿದ್ದಾರೆ.


ಬಿಎಸ್‌ವೈ ಬಗ್ಗೆ ಶೆಟ್ಟರ್‌ ಮೃದುಧೋರಣೆ


ತಮ್ಮ ವಿರುದ್ಧ ಪ್ರಚಾರಕ್ಕೆ ಬಿಎಸ್‌ವೈ ಅವರನ್ನು ಕಣಕ್ಕಿಳಿಸುವ ಬಿಜೆಪಿ ನಿರ್ಧಾರದ ಬಗ್ಗೆ ಪ್ರತಿಕ್ರಿಯಿಸಿದ ಶೆಟ್ಟರ್, ಬಿಎಲ್ ಸಂತೋಷ್ ಅವರು ಬಿಎಸ್‌ವೈ ಭುಜದ ಮೇಲೆ ಗನ್ ಇಟ್ಟು ಗುಂಡು ಹಾರಿಸುತ್ತಿದ್ದಾರೆ. ಬಿಎಲ್‌ ಸಂತೋಷ್‌ ನೇರವಾಗಿ ಫೀಲ್ಡ್‌ಗೆ ಇಳಿದು ನನ್ನ ವಿರುದ್ಧ ಹೋರಾಡಬೇಕು. ಇತರರ ಮೂಲಕ ಅಲ್ಲ ಎಂದು ಹೇಳಿದ್ದರು. ಇದೇ ವೇಳೆ ಬಿಎಸ್‌ವೈ ಅವರನ್ನು ಹೊಗಳಿದ್ದ ಶೆಟ್ಟರ್, ಬಿಎಸ್‌ವೈ ನನ್ನ ನಾಯಕ. ನನಗೆ ಅಸೆಂಬ್ಲಿ ಟಿಕೆಟ್ ಕೊಡಿಸಲು ಶಕ್ತಿಮೀರಿ ಪ್ರಯತ್ನಿಸಿದರು. ನನ್ನ ರಾಜಕೀಯ ಬದುಕನ್ನು ರೂಪಿಸುವಲ್ಲಿ ಅವರು ದೊಡ್ಡ ಪಾತ್ರ ವಹಿಸಿದ್ದಾರೆ. ಈ ಚುನಾವಣೆಯಲ್ಲಿ ಗೆಲ್ಲಲು ತನ್ನನ್ನು ಬಳಸಿಕೊಳ್ಳಲಾಗುತ್ತಿದೆ ಎಂಬುದನ್ನು ಯಡಿಯೂರಪ್ಪ ಅರಿತುಕೊಳ್ಳಬೇಕು. ಚುನಾವಣೆಯ ನಂತರ ಲಿಂಗಾಯತ ಸಮುದಾಯವನ್ನು ಕಡೆಗಣಿಸಲಾಗುತ್ತದೆ ಎಂದು ಶೆಟ್ಟರ್ ಹೇಳಿದ್ದರು.


top videos



    ಬಿಜೆಪಿ ಶೆಟ್ಟರ್ ವಿರುದ್ಧ ಪ್ರಬಲ ಮಟ್ಟದಲ್ಲಿ ಅಭಿಯಾನವನ್ನು ರೂಪಿಸಲು ಯೋಜಿಸುತ್ತಿದೆ ಮತ್ತು ಶೀಘ್ರದಲ್ಲೇ ಪ್ರಧಾನಿ ಮೋದಿ ಅವರು ಮೆಗಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡುವ ನಿರೀಕ್ಷೆಯಿದೆ. ಕಾಂಗ್ರೆಸ್ ಚುನಾವಣಾ ವ್ಯವಸ್ಥಾಪಕರಿಗೆ ಜಗದೀಶ್ ಶೆಟ್ಟರ್ ಅವರ ಗೆಲುವಿನ ಬಗ್ಗೆ ಇನ್ನೂ ಖಚಿತತೆ ಸಿಕ್ಕಿಲ್ಲ. ಅವರು ಗೆಲ್ಲಲೂಬಹುದು ಅಥವಾ ಗೆಲ್ಲದಿರಲೂಬಹುದು ಎಂದು ಕಾಂಗ್ರೆಸ್‌ ಆಂತರಿಕ ವಲಯದಲ್ಲಿ ಅಡ್ಡಗೋಡೆ ಮೇಲೆ ದೀಪ ಇಡಲಾಗುತ್ತಿದೆ. ಜಗದೀಶ್ ಶೆಟ್ಟರ್‌ ಗೆದ್ದಿದ್ದೇ ಆದಲ್ಲಿ ಅವರ ಬಿಜೆಪಿಯಿಂದ ಅನ್ಯಾಯಕ್ಕೊಳಗಾಗಿ ಅನುಕಂಪದ ಮೇಲೆ ಗೆದ್ದು ಪುನಃ ಪ್ರಬಲ ನಾಯಕನಾಗಿ ಗುರುತಿಸಿಕೊಳ್ಳುತ್ತಾರೆ. ಇಲ್ಲವೇ ಈ ಸೋಲು ಅವರ ರಾಜಕೀಯ ವೃತ್ತಿಜೀವನವನ್ನೇ ಕೊನೆಗೊಳಿಸಬಹುದು.

    First published: