ಧಾರವಾಡ(ಫೆ.26) : ನೆರೆಹಾವಳಿ ಸಂತ್ರಸ್ತರಿಗೆ ಶೀಘ್ರ ಪರಿಹಾರ ನೀಡಲು ಆಗ್ರಹಿಸಿ ಮಾಜಿ ಸಚಿವ ವಿನಯ್ ಕುಲಕರ್ಣಿ ನೇತೃತ್ವದಲ್ಲಿ ನೂರಾರು ಜನರು ಪ್ರತಿಭಟನಾ ಮೆರವಣಿಗೆ ನಡೆಸಿದರು.
ಧಾರವಾಡ ಕಲಾಭವನದಿಂದ ಪ್ರಾರಂಭವಾದ ಪ್ರತಿಭಟನಾ ಮೆರವಣಿಗೆ ವಿವಿಧ ವೃತ್ತಗಳ ಮೂಲಕ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟಿಸಿದರು. ಜಿಲ್ಲಾಧಿಕಾರಿ ದೀಪಾ ಚೋಳನ್ ಅವರ ಮೂಲಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದರು.
ನೆರೆ ಹಾವಳಿಯಿಂದ ಹಾನಿಗೊಳಗಾದ ಮನೆಗಳನ್ನು ಮರು ಸರ್ವೆ ಮಾಡಬೇಕು. ರೈತರ ಹೊಲ ದಾರಿಗಳು ಹಾಳಾಗಿವೆ. ನೆರೆಯಿಂದ ಹಾನಿಯಾದ ಸ್ಥಳಗಳನ್ನು ಮತ್ತೆ ಸರ್ವೆ ಮಾಡಿ ಸರಿಯಾದ ಫಲಾನುಭವಿಗಳಿಗೆ ಪರಿಹಾರ ವಿತರಿಸಬೇಕು ಎಂದು ಆಗ್ರಹಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಚಿವ ವಿನಯ್ ಕುಲಕರ್ಣಿ, ರಾಜ್ಯ ಸರ್ಕಾರದ ನೆರೆ ಪರಿಹಾರದ ವಿತರಣೆಯಲ್ಲಿ ಕಮೀಷನ್ ದಂಧೆ ಮಾಡುತ್ತಿದೆ ಎಂದು ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದರು.
ಯಾರ ಮನೆಗಳು ಬಿದ್ದಿವೆಯೋ ಅವೆಲ್ಲವನ್ನು ಮರು ಸರ್ವೆ ಆಗಬೇಕು. ಬಿಜೆಪಿ ಕಾರ್ಯಕರ್ತರು, ಶಾಸಕರ ಏಜೆಂಟರಿಗೆ ಮನೆ ಹಾನಿ ಪರಿಹಾರ ಕೊಡುವ ಕೆಲಸ ಮಾಡಿದ್ದಾರೆ. 2 ಲಕ್ಷ ರೂಪಾಯಿ ಕಮೀಶನ್ ಕೊಡಲು ಮುಂದೆ ಬಂದವರನ್ನು ಮಾತ್ರ 5 ಲಕ್ಷ ಪರಿಹಾರಕ್ಕೆ ಸೇರಿಸಿದ್ದಾರೆ. ಪರಿಹಾರ ವಿತರಣೆಯ ತನಿಖೆ ಮಾಡಿದಲ್ಲಿ ಸತ್ಯ ಹೊರಗೆ ಬರುತ್ತೆ ಎಂದು ಒತ್ತಾಯಿಸಿದರು.
ಇದನ್ನೂ ಓದಿ :
ನೆರೆಗೆ ಸೂಕ್ತ ಪರಿಹಾರ ಸಿಗದೆ ನೊಂದು ಆತ್ಮಹತ್ಯೆಗೆ ಶರಣಾದ ವಿಶೇಷ ಚೇತನ ಯುವತಿ
ಮನೆ ಹಾನಿ ಪರಿಹಾರ ಬಾರದಕ್ಕೆ ಧಾರವಾಡದ ಮಂಜುಳಾ ಕಲ್ಲೂರ ಆತ್ಮಹತ್ಯೆ ವಿಚಾರಕ್ಕೆ ಮಾತನಾಡಿದ ಅವರು, ಆಕೆ ಸಾಕಷ್ಟು ಸಲ ಜಿಲ್ಲಾಧಿಕಾರಿ ಕಚೇರಿಗೆ ಓಡಾಡಿದ್ದಾಳೆ. ಆಕೆಯ ಆತ್ಮಹತ್ಯೆಯ ತನಿಖೆಯಾಗಬೇಕು. ಮೃತದೇಹದ ಶವ ಪರೀಕ್ಷೆ ಆಗಿಲ್ಲ ಪೋಸ್ಟ್ ಮಾರ್ಟಂ ಮಾಡದೇ ಅಂತ್ಯಸಂಸ್ಕಾರ ಮಾಡಿದ್ದಾರೆ. ಅವರ ಮೃತದೇಹದ ಪೋಸ್ಟ್ ಮಾರ್ಟಂ ಆಗಬೇಕು ಮಂಜುಳಾ ಸಾವಿನ ತನಿಖೆ ಮಾಡಬೇಕು ಎಂದು ಆಗ್ರಹ ಮಾಡಿದ್ದಾರೆ..
ಬಸ್ ದರ ಹೆಚ್ಚಳ ಖಂಡನೀಯ ಮಳೆ ಹಾನಿ ಪುನರ್ ಸರ್ವೆ ಮಾಡಲು 8 ದಿನ ಗಡುವು ನೀಡುತ್ತೇವೆ. ಕೆಲವೊಂದು ಊರಲ್ಲಿ ಒಂದೇ ಮನೆಗೆ ಇಬ್ಬರಿಗೆ ಪರಿಹಾರ ಕೊಟ್ಟಿದ್ದಾರೆ. ಅವರೆಲ್ಲ ಬಿಜೆಪಿ ಕಾರ್ಯಕರ್ತರೇ ಇದಾರೆ ಇದರ ವಿರುದ್ಧ ದೊಡ್ಡ ಹೋರಾಟ ಮಾಡುತ್ತೇವೆ.
ಇದು ಅಂತ್ಯವಲ್ಲ ಹೋರಾಟ ಆರಂಭ ಎಂದು ಎಚ್ಚರಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ