ಕರ್ತವ್ಯದ ಜೊತೆ ಪರಿಸರ ಪ್ರೇಮ; ಎಲ್ಲರಿಗೂ ಮಾದರಿ ರಾಯಚೂರಿನ ಈ ಪೊಲೀಸ್​ ಅಧಿಕಾರಿ

 ಪ್ಲಾಸ್ಟಿಕ್​ ಬಳಕೆ ಕಡಿಮೆ ಮಾಡುವ ನಿಟ್ಟಿನಲ್ಲೂ ವೇದಮೂರ್ತಿ ಒತ್ತು ನೀಡಿದ್ದರು. ತಮ್ಮ ಕಚೇರಿಯಲ್ಲಿ ವಾಟರ್ ಬಾಟಲ್ ಬಳಕೆ ಮಾಡದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ.

 ಡಾ. ಸಿ.ಬಿ. ವೇದಮೂರ್ತಿ

ಡಾ. ಸಿ.ಬಿ. ವೇದಮೂರ್ತಿ

  • Share this:
ರಾಯಚೂರು (ಡಿ.22): ಸದಾ ಒತ್ತಡ, ದರ್ಪದಿಂದ ಇರುವ ಪೊಲೀಸ್ ಅಧಿಕಾರಿಗಳ ಮಧ್ಯೆ ರಾಯಚೂರಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಿ.ಬಿ. ವೇದಮೂರ್ತಿ ಭಿನ್ನವಾಗಿ ಆಗಿ ನಿಲ್ಲುತ್ತಾರೆ. ಕರ್ತವ್ಯದ ಜೊತೆಗೆ ಜಿಲ್ಲೆಯಾದ್ಯಂತ ಪರಿಸರ ಪ್ರೇಮ ಹರಡುವ ಕೆಲಸ ಮಾಡುತ್ತಿದ್ದಾರೆ.

ಜೂನ್​ ತಿಂಗಳಲ್ಲಿ ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಡಾ. ಸಿ.ಬಿ. ವೇದಮೂರ್ತಿ ಕರ್ತವ್ಯ ಆರಂಭಿಸಿದರು. ಈ ವೇಳೆ ಅವರು ಮಾಡಿದ ಮುಖ್ಯ ಕೆಲಸವೆಂದರೆ ಪೊಲೀಸ್ ಠಾಣೆಯ ಮುಂದೆ ಸಸಿಗಳನ್ನು ನೆಡುವುದರ ಮುಖಾಂತರ ಜನರ ಮನ ಗೆದ್ದರು. ಪ್ಲಾಸ್ಟಿಕ್​ ಬಳಕೆ ಕಡಿಮೆ ಮಾಡುವ ನಿಟ್ಟಿನಲ್ಲೂ ವೇದಮೂರ್ತಿ ಒತ್ತು ನೀಡಿದ್ದಾರೆ. ಇದನ್ನು ಕಚೇರಿ ಮೂಲಕವೇ ಆರಂಭಿಸಿದ್ದು ವಿಶೇಷ.  ತಮ್ಮ ಕಚೇರಿಯಲ್ಲಿ ವಾಟರ್ ಬಾಟಲ್ ಬಳಕೆ ಆಗದಂತೆ ಅವರಯ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ.

ಐತಿಹಾಸಿಕ ಬಾವಿಗಳ ಸ್ವಚ್ಛತೆಗೂ ವೇದಮೂರ್ತಿ ಆದ್ಯತೆ ನೀಡಿದ್ದಾರೆ. ರಾಯಚೂರು ನಗರದಲ್ಲಿರುವ ತೋಟದ ಬಾವಿ ಮಲೀನಗೊಂಡಿತ್ತು. ಸ್ಥಳೀಯ ಯುವಕರು ಆಗಾಗ ಸ್ವಚ್ಛಗೊಳಿಸಿದ್ದರೂ ಪ್ರಯೋಜನವಾಗಿರಲಿಲ್ಲ. ಇದನ್ನು ಅರಿತ ವೇದಮೂರ್ತಿ ಸ್ಥಳೀಯ ಗ್ರೀನ್ ರಾಯಚೂರು, ಪರಿಸರ ಕಾಳಜಿ ವಹಿಸುವ ಸಂಘಟನೆ ಹಾಗೂ ಯುವಕರೊಂದಿಗೆ ಸೇರಿ ಸ್ವಚ್ಛತೆಗೆ ಇಳಿದಿದ್ದು ಈ ಬಾವಿ ಈಗ ಸಂಪೂರ್ಣವಾಗಿ ಸ್ವಚ್ಛವಾಗಿದೆ.

ಬಾವಿ ಸ್ವಚ್ಚತೆ ಕಾರ್ಯಕ್ರಮಗಳು ಮುಂದುವರಿದಿದ್ದು ಮಾನವಿ ತಾಲೂಕಿನ‌ ಕುರ್ಡಿ ಹಾಗು ಸಿರವಾರ ಪಟ್ಟಣದಲ್ಲಿದ್ದ ಬಾವಿಗಳನ್ನು ಸ್ವಚ್ಛ ಮಾಡುವಲ್ಲಿ ಹಾಗು ಮಾಡಿಸುವಲ್ಲಿ ಸಾಕಷ್ಟು ಮುತುವರ್ಜಿ ವಹಿಸಿದ್ದಾರೆ. ಇದರಿಂದ ಉತ್ತೇಜನಗೊಂಡ ಇನ್ನಷ್ಟು ಗ್ರಾಮಗಳ‌ ಬಾವಿಗಳು ಸ್ವಚ್ಛತೆ ಕಾರ್ಯ ಮುಂದುವರಿದಿದೆ.

ಪ್ರತಿ ಭಾನುವಾರ ವೇದಮೂರ್ತಿ ಮುಂಜಾನೆಯೇ ಸ್ಥಳೀಯರೊಂದಿಗೆ ಸೇರಿ ರಸ್ತೆಯ ಬಳಿಯಲ್ಲಿ ಜಾಲಿ ಗಿಡಗಳನ್ನು ಕಡಿದು ಅದೇ ಸ್ಥಳದಲ್ಲಿ ಸಸಿಗಳನ್ನು ನೆಡುತ್ತಾರೆ. ಇದೇ ರೀತಿ ಇಂದು ರಾಯಚೂರು ನಗರದ ಸರಾಫ‌ ಬಜಾರ್​ನಲ್ಲಿ ಸ್ವಚ್ಛತೆ ಮಾಡಿ ಹಾಗು ಸಸಿಗಳನ್ನು ನೆಟ್ಟರು. ಇದೇ ವೇಳೆ ಅಂಗಡಿ ಮಾಲೀಕರು ನೆಟ್ಟಿರುವ ಸಸಿಗಳು ಮರಗಳಾಗುವಂತೆ ಕಾಳಜಿ‌ ವಹಿಸಬೇಕೆಂದು ಅಂಗಡಿ ಮಾಲೀಕರಿಗೆ ಮನವರಿಕೆ ಮಾಡಿ‌ಕೊಟ್ಟರು.

ನಗರದ ಬೀದಿಯಲ್ಲಿ ತಿರುಗಾಡುತ್ತಿದ್ದ ಬೀಡಾಡಿ ದನಗಳನ್ನು ನಿಯಂತ್ರಿಸಲು ವೇದಮೂರ್ತಿ ಕ್ರಮ ಕೈಗೊಂಡಿದ್ದಾರೆ. ರಸ್ತೆಯಲ್ಲಿ ಓಡಾಡುವ ಬೀಡಾಡಿ ದನಗಳನ್ನು ಹಿಡಿಯಲಾಗುತ್ತದೆ.  ಅವುಗಳ ಮಾಲೀಕರಿದ್ದರೆ ಅವರು ದಂಡ ಕಟ್ಟಿ ಗೋವನ್ನು ಬಿಡಿಸಿಕೊಂಡು ಹೋಗಬೇಕು. ಯಾರೂ ವಾರಸುದಾರರು ಬಾರದಿದ್ದರೆ ಅವುಗಳನ್ನು ಗೋಶಾಲೆಗೆ ನೀಡಲಾಗುತ್ತದೆ.

ಇವರ ಪರಿಸರ ಕಾಳಜಿ ವಹಿಸುವ ವೇದಮೂರ್ತಿಯವರಿಗೆ ಸ್ಥಳೀಯ ಸಂಘ ಸಂಸ್ಥೆಗಳು ಸಹಕಾರ ನೀಡುತ್ತಿವೆ. ಅಷ್ಟೇ ಅಲ್ಲ ಅವರಿಗೆ ಸನ್ಮಾನ ಮಾಡಿ ಗೌರವಿಸುತ್ತಿವೆ. ಸದಾ ಚಟುವಟಿಕೆಯಲ್ಲಿರುವ ಡಾ. ಸಿ.ಬಿ. ವೇದಮೂರ್ತಿ ಪೊಲೀಸ್ ಇಲಾಖೆಯ ಇತರ ಅಧಿಕಾರಿಗಳ ಮಧ್ಯೆ ವಿಭಿನ್ನವಾಗಿ ಕಾಣುತ್ತಿದ್ದಾರೆ.
Published by:Rajesh Duggumane
First published: