• Home
  • »
  • News
  • »
  • state
  • »
  • ಮೀನುಗಳಿಗೂ ಇಲ್ಲಿ ನಿರ್ಮಾಣಗೊಂಡಿದೆ ಸ್ಮಾರಕ; ಮೀನುಗಳ ಮೇಲಾದ ದೌರ್ಜನ್ಯದ ದ್ಯೋತಕ

ಮೀನುಗಳಿಗೂ ಇಲ್ಲಿ ನಿರ್ಮಾಣಗೊಂಡಿದೆ ಸ್ಮಾರಕ; ಮೀನುಗಳ ಮೇಲಾದ ದೌರ್ಜನ್ಯದ ದ್ಯೋತಕ

ಸ್ಮಾರಕ

ಸ್ಮಾರಕ

ಶಿಶಿಲ ಗ್ರಾಮದ ಕಪಿಲಾ ನದಿ ತಟದಲ್ಲಿರುವ ಶಿಶಿಲೇಶ್ವರ ದೇವಸ್ಥಾನದ ಸಮೀಪದಲ್ಲೇ ಈ ಸ್ಮಾರಕವನ್ನು ನಿರ್ಮಿಸಲಾಗಿದೆ

  • Share this:

ಪುತ್ತೂರು (ಜ. 9): ಭೂಮಿಯ ಮೇಲಿರುವ ಎಲ್ಲಾ ಪ್ರಾಣಿ ಹಾಗೂ ಜಲಚರಗಳೊಂದಿಗೆ ಮನುಷ್ಯ ಒಂದಲ್ಲ ಒಂದು ರೀತಿಯ ಸಂಬಂಧವನ್ನು ಹೊಂದಿಕೊಂಡೇ ಬದುಕುತ್ತಿದ್ದಾನೆ. ಇವುಗಳಿಗೆ ಏನಾದರೂ ತೊಂದರೆಯಾದಲ್ಲಿ  ಮನುಷ್ಯನಿಗೆ ವೇದನೆಯಾಗೋದೂ ಸಹಜವೇ. ಅದರಲ್ಲಿಯೂ ತುಳುನಾಡಿನಲ್ಲಿ ಮೀನುಗಳು ಭೂತಾಯಿಯ ಸ್ಥಾನ ಪಡೆದು ಪೂಜನೀಯ ಭಾವದಿಂದ ಇಲ್ಲಿನ ಜನರು ಕಾಣುತ್ತಿದ್ದಾರೆ. ಇಂತಹ 1996 ರ ಮೇ 5  ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಶಿಶಿಲ ಎನ್ನುವ ಗ್ರಾಮದಲ್ಲಿನ ಮೀನುಗಳು ದುಷ್ಕರ್ಮಿಗಳ ಅಟ್ಟಹಾಸಕ್ಕೆ ಸಿಲುಕಿ ಸಾವನ್ನಪ್ಪಿದ ಕಹಿ ಘಟನೆ ನಡೆದಿತ್ತು. ಈ ಘಟನೆಯಲ್ಲಿ ಸಾವನ್ನಪ್ಪಿದ ಮೀನುಗಳ  ನೆನಪಿಗಾಗಿ ಇಲ್ಲಿನ ಜನರು  ಸ್ಮಾರಕ  ನಿರ್ಮಿಸಿ, ಪ್ರೀತಿ ಮೆರೆದಿದ್ದಾರೆ.  ಶಿಶಿಲ ಗ್ರಾಮದಲ್ಲಿ ನಡೆದ ಈ ದುರ್ಘಟನೆಯಲ್ಲಿ ಸುಮಾರು 6 ಲಾರಿ ಲೋಡಿನಷ್ಟು ದೇವರ ಮೀನುಗಳು  ಸಾವನ್ನಪ್ಪಿದ್ದವು. ಈ ಕಹಿ ಘಟನೆಯನ್ನು ಮರೆಯದ ಇಲ್ಲಿನ ಜನ ಇವುಗಳ ಮೇಲೆ ಇರುವ ತಮ್ಮ ಪ್ರೀತಿಯ ದ್ಯೋತಕವಾಗಿ ಇವುಗಳಿಗಾಗಿ ಇಲ್ಲಿ ಸ್ಮಾರಕವನ್ನೂ ನಿರ್ಮಿಸಿದ್ದಾರೆ.




ಶಿಶಿಲ ಗ್ರಾಮದ ಕಪಿಲಾ ನದಿ ತಟದಲ್ಲಿರುವ ಶಿಶಿಲೇಶ್ವರ ದೇವಸ್ಥಾನದ ಸಮೀಪದಲ್ಲೇ ಈ ಸ್ಮಾರಕವನ್ನು ನಿರ್ಮಿಸಲಾಗಿದೆ. ಕಪಿಲಾ ತಟದಲ್ಲಿರುವ ಶಿಶಿಲೇಶ್ವರ ಕ್ಷೇತ್ರದಲ್ಲಿ ಮೀನುಗಳ ಸಮೃದ್ಧವಾದ ಸಾಮ್ರಾಜ್ಯವೇ ಇದೆ.  ಶಿಶಿಲೇಶ್ವರ ದೇವಸ್ಥಾನದಲ್ಲಿ ಹರಕೆ ಸಲ್ಲಿಸಿ ಈ ಮೀನುಗಳಿಗೆ ಆಹಾರವನ್ನು ನೀಡಿದರೆ ಮನುಷ್ಯನ ದೇಹಕ್ಕೆ ಅಂಟಿರುವ ಚರ್ಮರೋಗ ಸೇರಿದಂತೆ ಇತರೇ ವ್ಯಾಧಿಗಳು ಗುಣಮುಖವಾಗುತ್ತದೆ ಎನ್ನುವ ನಂಬಿಕೆ ಇದೆ. ಪಶ್ಚಿಮಘಟ್ಟಗಳ ತಪ್ಪಲಿನಲ್ಲಿರುವ ಶಿಶಿಲೇಶ್ವರ ದೇವಸ್ಥಾನ ಶುಭ್ರವಾಗಿ ಹರಿಯುವ ಕಪಿಲಾ ನದಿಯ ತಟದಲ್ಲಿದೆ. ಘಟ್ಟ ಪ್ರದೇಶಗಳಿಂದ ಹರಿಯುವ ಈ ನದಿಯಲ್ಲಿ ನೀರಿನ ಜೊತೆಗೆ ಹೆಚ್ಚಿನ ಪ್ರಮಾಣದ ಮೀನುಗಳೂ ಹರಿದುಬರುತ್ತಿದೆ. ಈ ಮೀನುಗಳಲ್ಲಿ ಹೆಚ್ಚಿನ ಮೀನುಗಳು ಇದೇ ಶಿಶಿಲೇಶ್ವರ ದೇವಸ್ಥಾನದ ತದಿ ತಟದಲ್ಲೇ ಬೀಡು ಬಿಟ್ಟಿವೆ. ದೇವಸ್ಥಾನಕ್ಕೆ ಬಂದ ಭಕ್ತ ಈ‌ ಮೀನುಗಳ ದರ್ಶನ ಮಾಡದೆ ತೆರಳೋದೂ ಬಲು ವಿರಳ ಎನ್ನುವ ಮಟ್ಟಿಗೆ ಇಲ್ಲಿ ಮೀನಿಗೆ ಪ್ರಾಮುಖ್ಯತೆಯಿದೆ.




ಈ ನಂಬಿಕೆಯ ಕಾರಣದಿಂದಾಗಿಯೇ ಇಲ್ಲಿನ ಜನರಿಗೆ ಈ ಮೀನುಗಳ ಮೇಲೆ  ದೇವರಷ್ಟೇ ಪೂಜನೀಯ ಭಾವವಿದೆ. ಕ್ಷೇತ್ರಕ್ಕೆ ಭೇಟಿ ನೀಡುವ ಪ್ರತಿಯೊರ್ವ ಭಕ್ತನೂ ಕಪಿಲಾ ತಟಕ್ಕೆ ಬಂದು ಮೀನುಗಳಿಗೆ ಒಂದು ಹಿಡಿ ಆಹಾರವನ್ನು ನೀಡದೆ ಹಿಂದಿರುಗುವುದಿಲ್ಲ.  ಯಾರ ಮೇಲಿನ ದ್ವೇಷಕ್ಕಾಗಿ ಕ್ಷೇತ್ರದ ಮೀನುಗಳಿಗೆ ವಿಷ ಹಾಕಿ ಕೊಲ್ಲಲಾಗಿತ್ತು. ಆ ಬಳಿ   ನದಿಯ ಪಕ್ಕದಲ್ಲಿ ಮೀನು ಹಿಡಿಯುವುದಕ್ಕೆ ಹಾಗೂ ಬಲೆ ಹಾಕುವುದಕ್ಕೂ ನಿಷೇಧ ಹೇರಲಾಗಿದೆ. ಮೀನುಗಳನ್ನು ದೇವರ ಪ್ರತಿರೂಪ ಎಂದು ನೂರಾರು ವರ್ಷಗಳಿಂದ ನಂಬಿಕೊಂಡು ಬಂದ ಸಂಪ್ರದಾಯವನ್ನು ಇಲ್ಲಿನ ಜನ ಇಂದಿಗೂ ಪಾಲಿಸಿಕೊಂಡು ಬರುತ್ತಿದ್ದಾರೆ. ಪ್ರಕೃತಿಯ ಆರಾಧನೆಯೇ ದೇವರ ಆರಾಧನೆ ಎನ್ನುವುದಕ್ಕೆ ಶಿಶಿಲೇಶ್ವರ ದೇವಸ್ಥಾನ   ಹಾಗೂ ಗ್ರಾಮದ ಜನ ತೋರಿಸಿಕೊಟ್ಟಿದ್ದಾರೆ.

Published by:Seema R
First published: