ಹಾಸನ (ಮಾ.25): ಹಾಸನ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾದ ಎ.ಮಂಜು ಅವರು ಇಂದು ನಾಮಪತ್ರ ಸಲ್ಲಿಸಿದರು. ಈ ವೇಳೆ ಜೊತೆಗಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ನಾಮಪತ್ರ ಸಲ್ಲಿಕೆ ವೇಳೆ ಹರಿದುಬಂದಿರುವ ಬೃಹತ್ ಜನಸಾಗರವೇ ಕಂಡು ಗೆಲುವಿನ ವಿಶ್ವಾಸ ಹೆಚ್ಚಿಸಿದೆ ಎಂದು ಹೇಳಿದರು.
ನಾಮಪತ್ರ ಸಲ್ಲಿಕೆ ಬಳಿಕ ಮಾತನಾಡಿದ ಅವರು, ಇಷ್ಟೊಂದು ಜನ ಸೇರಿದ್ದನ್ನು ನೋಡಿ ನನಗೆ ಆಶ್ಚರ್ಯವಾಯಿತು. ರಾಜ್ಯದಲ್ಲಿ ಹಾಸನ ತುಮಕೂರು ಸೇರಿ 22 ಸೀಟು ಗೆಲ್ಲುವುದು ನಿಶ್ಚಿತ, ಕುಟುಂಬ ರಾಜಕಾರಣ ನೋಡಿ ಜನರು ಬೇಸತ್ತಿದ್ದಾರೆ. ಹಾಸನ ಜೆಡಿಎಸ್ ಭದ್ರಕೋಟೆಯಲ್ಲ, ಬಿಜೆಪಿ ಭದ್ರಕೋಟೆಯಾಗಿದೆ. ಸೂರ್ಯ-ಚಂದ್ರರು ಇರುವುದು ಎಷ್ಟು ಸತ್ಯವೋ, ಇಲ್ಲಿ ಬಿಜೆಪಿ ಗೆಲ್ಲುವುದೂ ಅಷ್ಟೇ ಸತ್ಯ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಅಂಬರೀಶ್ ಬದುಕಿದ್ದಾಗ ಕುಮಾರಸ್ವಾಮಿ ಮಾತನಾಡುತ್ತಿರಲಿಲ್ಲ. ಈಗ ಅಂಬರೀಶ್ ಬೆಂಬಲಿಗರ ಮೇಲೆ ಕಲ್ಲು ತೂರಾಟ ಮಾಡುತ್ತಿದ್ದಾರೆ. ಹಾಸನದಲ್ಲಿ ಅವರದೇ ಆಡಳಿತ ಮತ್ತು ಮಾತು ನಡೆಯಬೇಕು ಎಂದು ಬಯಸುತ್ತಾರೆ. ಆದರೆ ನಿರೀಕ್ಷೆ ಮೀರಿ ಜನ ಸೇರಿದ್ದಾರೆ. ಮೋದಿಗಾಗಿ ಇವರೆಲ್ಲ ಬಂದಿದ್ದಾರೆ ಎಂದರು.
ಇದನ್ನು ಓದಿ: ಹಾಸನದಲ್ಲಿ ಮುಂದುವರೆದ ಆಪರೇಷನ್ ಕಮಲ; ದೇವೇಗೌಡರ ಎದುರಾಳಿಯನ್ನು ಬಿಜೆಪಿಗೆ ಆಹ್ವಾನಿಸಿದ ಬಿಎಸ್ವೈ
ಯಾವುದೇ ಕಾಂಗ್ರೆಸ್-ಜೆಡಿಎಸ್ ಅತೃಪ್ತರನ್ನು ನಾವು ಬಿಜೆಪಿಗೆ ಸೆಳೆಯುವುದಿಲ್ಲ. ಅವರೇ ನಮ್ಮ ಪಕ್ಷಕ್ಕೆ ಬರುತ್ತಾರೆ. ಪುಟ್ಟೇಗೌಡರ ಮನೆಗೆ ಸೌಜನ್ಯಯುತವಾಗಿ ಭೇಟಿ ನೀಡಿದೆ ಅಷ್ಟೇ ಎಂದರು.
"ದೇವೇಗೌಡ ಅವರ ಕರ್ಮಭೂಮಿಯಲ್ಲಿ ಮೋದಿ ಅಲೆ ಕಾಣಿಸುತ್ತಿದೆ. ಬಿಎಸ್ ಯಡಿಯೂರಪ್ಪ ಅವರ ಜೊತೆಗೆ ಎ. ಮಂಜು ನಾಮಪತ್ರ ಸಲ್ಲಿಸಿದ್ದು, ಇಲ್ಲಿ ಸೇರಿರುವ ಜನಸಾಗರ ನೋಡಿದರೆ ತಿಳಿಯುತ್ತದೆ. ಇದು ಕುಟುಂಬ ರಾಜಕಾರಣದ ಪೆಟ್ಟಿಗೆಗೆ ಕೊನೆಯ ಮೊಳೆ" ಎಂದು ಬಿಜೆಪಿ ಸಹ ಟ್ವೀಟ್ ಮಾಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ