ಮಂಗಳೂರು: ಪ್ರತಿನಿತ್ಯ ಸಮಾಜದಲ್ಲಿ ಹೆಣ್ಣು ಮಕ್ಕಳ (Children) ಮೇಲೆ ದೌರ್ಜನ್ಯ ನಡೆಯುತ್ತಲೇ ಇದೆ. ಅದರಲ್ಲಿಯೂ 18 ವರ್ಷದ ಒಳಗಿನ ಮಕ್ಕಳಿಗೆ ದೌರ್ಜನ್ಯವೆಸಗುವುದು ಘೋರ ಅಪರಾಧ ಎಂದು ತಿಳಿದಿದ್ದರೂ, ಅದೆಷ್ಟು ಮಂದಿ ಮುಗ್ಧ ಮಕ್ಕಳ ಮೇಲೆ ಅತ್ಯಾಚಾರ (Rape), ಲೈಂಗಿಕ ದೌರ್ಜನ್ಯ , ಹೆಣ್ಣುಮಕ್ಕಳ ಮೇಲೆ ದಬ್ಬಾಳಿಕೆ ಹೀಗೆ ಅನೇಕ ಅಪರಾಧ ಕೃತ್ಯಗಳನ್ನು ಎಸಗುವುದನ್ನು ಮಾತ್ರ ಬಿಟ್ಟಿಲ್ಲ. ಇಂತಹ ಕಾಮುಕರ ಕೈಗೆ ಸಿಲುಕಿಕೊಂಡಿರುವ ಅದೆಷ್ಟೋ ಮಕ್ಕಳು ಜೀವ ಬೆದರಿಕೆಯಿಂದ ತಮ್ಮ ಮೇಲೆ ಆಗುತ್ತಿರುವ ಷೋಷಣೆಯನ್ನು ಹೇಳಿಕೊಳ್ಳಲಾಗದೇ ಮನಸ್ಸಿನಲ್ಲಿಯೇ ಇಟ್ಟುಕೊಂಡು ಒದ್ದಾಡುತ್ತಿರುತ್ತಾರೆ. ಇಂತಹ ದುಷ್ಕರ್ಮಿಗಳಿಗೆ ಒಮ್ಮೆ ತಕ್ಕ ಶಿಕ್ಷೆ ನೀಡಿದರೆ ಇಂತಹ ಕೃತ್ಯ ಮರುಕಳಿಸದಂತೆ ನೋಡಿಕೊಳ್ಳಲು ಕೊಂಚ ಮಟ್ಟಿಗೆ ಸಾಧ್ಯವಾಗುತ್ತದೆ. ಸದ್ಯ ಅಪ್ರಾಪ್ತ ಬಾಲಕಿ ಜೊತೆ ಅಸಭ್ಯವಾಗಿ ವರ್ತಿಸಿದ ವ್ಯಕ್ತಿಯನ್ನು ಪೋಷಕರು (Parents) ಕಂಬಕ್ಕೆ ಕಟ್ಟಿ ಥಳಿಸಿ ತಕ್ಕ ಪಾಠ ಕಲಿಸಿರುವ ಘಟನೆ ಮಂಗಳೂರಿನಲ್ಲಿ (Mangaluru) ನಡೆದಿದೆ.
ಬೈಕ್ ಮೂಲಕ ಹಿಂಬಾಲಿಸಿ ಬಾಲಕಿಯೊಂದಿಗೆ ಅಸಭ್ಯ ವರ್ತನೆ
ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ವರದಿಯಾಗಿದ್ದು, ಡಿಸೆಂಬರ್ 13 ರಂದು ಕರೆಕಾಡು ಎಂಬಲ್ಲಿ ನಡೆದಿದೆ. ಬೈಕ್ ಮೂಲಕ ಹಿಂಬಾಲಿಸಿ ಯುವಕನೋರ್ವ ಬಾಲಕಿ ಜೊತೆಗೆ ಅಸಭ್ಯವಾಗಿ ವರ್ತಿಸಿ ಪ್ರತಿನಿತ್ಯ ಕಿರುಕುಳ ನೀಡುತ್ತಿದ್ದನು. ಇದರಿಂದ ಬೇಸತ್ತ ಬಾಲಕಿ ಕೊನೆಗೆ ಈ ವಿಚಾರವನ್ನು ತನ್ನ ಪೋಷಕರ ಬಳಿ ಹೇಳಿಕೊಂಡಿದ್ದಳು.
ಕಾಮುಕನನ್ನು ಕಂಬಕ್ಕೆ ಕಟ್ಟಿ ಥಳಿಸಿದ ಪೋಷಕರು
ಮರುದಿನ ಮತ್ತೆ ಕರೆಕಾಡು ಪ್ರದೇಶದಲ್ಲಿ ಬಾಲಕಿಯನ್ನು ಹಿಂಬಾಲಿಸಿ ಕಿರುಕುಳ ನೀಡುವುದನ್ನು ಆರೋಪಿ ಮುಂದುವರಿಸಿದ್ದಾನೆ. ಹೀಗಾಗಿ ಬಾಲಕಿಯಿಂದ ಮಾಹಿತಿ ಪಡೆದ ಪೋಷಕರು ಆತನಿಗೆ ತಿಳಿಯದಂತೆ ಬಾಲಕಿಯನ್ನು ಹಿಂಬಾಲಿಸಿದ್ದಾರೆ. ಈ ವೇಳೆ ಆರೋಪಿ ಮತ್ತೆ ತನ್ನ ಹಳೆ ಚಾಳಿಯನ್ನು ಬಾಲಕಿಯೊಂದಿಗೆ ಮುಂದುವರಿಸಿದ್ದನ್ನು ಕಂಡು ಬಾಲಕಿಯ ಪೋಷಕರು ಮತ್ತು ಅವರ ಜೊತೆಗಿದ್ದವನ್ನು ಆತನನ್ನು ಕಂಬಕ್ಕೆ ಕಟ್ಟಿ ಹಲ್ಲೆ ನಡೆಸಿದ್ದಾರೆ.
ನಂತರ ಈ ಪ್ರಕರಣ ಸಂಬಂಧ ಪೊಲೀಸರಿಗೆ ಪೋಷಕರು ದೂರು ನೀಡಿದ್ದಾರೆ. ಸದ್ಯ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ಪೋಕ್ಸೋ ಕೇಸ್ ದಾಖಲಿಸಿದ ಪೊಲೀಸರು ಇದೀಗ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಮಂಡ್ಯದಲ್ಲೊಬ್ಬ ಕಾಮುಕ ಶಿಕ್ಷಕನಿಗೆ ವಿದ್ಯಾರ್ಥಿಗಳಿಂದಲೇ ಬಿದ್ದಿತ್ತು ಗೂಸಾ
ಇದೇ ರೀತಿ ಇತ್ತೀಚೆಗಷ್ಟೇ, ವಿದ್ಯಾರ್ಥಿ ನಿಲಯದಲ್ಲಿ ಲೈಂಗಿಕ ಕಿರುಕುಳ ನೀಡುತ್ತಿದ್ದ ಮುಖ್ಯ ಶಿಕ್ಷಕನೋರ್ವನಿಗೆ ವಿದ್ಯಾರ್ಥಿನಿಯರೆಲ್ಲ ಸೇರಿ ಧರ್ಮದೇಟು ನೀಡಿರುವ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿತ್ತು.
ಇದನ್ನೂ ಓದಿ: Danushka Gunathilaka: ಕಾಂಡೋಮ್ ಹಾಕು ಅಂದ್ರೂ ಕೇಳಲಿಲ್ಲ, ಶ್ರೀಲಂಕಾ ಕ್ರಿಕೆಟಿಗನ ಕರಾಳ ಮುಖ ಬಿಚ್ಚಿಟ್ಟ ಸಂತ್ರಸ್ತೆ!
ಶಿಕ್ಷಕನಿಗೆ ಕೋಲು, ದೊಣ್ಣೆಯಿಂದ ಥಳಿಸಿದ್ದ ವಿದ್ಯಾರ್ಥಿನಿಯರು
ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಕಟ್ಟೇರಿ ಗ್ರಾಮದಲ್ಲಿರುವ ವಿದ್ಯಾರ್ಥಿನಿಯರ ನಿಲಯದಲ್ಲಿ ಮುಖ್ಯಶಿಕ್ಷಕನೋರ್ವ ವಿದ್ಯಾರ್ಥಿನಿಯರಿಗೆ ಪ್ರತಿದಿನ ಲೈಂಗಿಕ ಕಿರುಕುಳ ನೀಡುತ್ತಿದ್ದನು ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದರು. ಇನ್ನೂ ಶಿಕ್ಷಕನ ಕಿರುಕುಳ ತಾಳಲಾರದೇ ಕೊನೆಗೆ, ವಿದ್ಯಾರ್ಥಿನಿಯರೇ ಕೋಲು, ದೊಣ್ಣೆ ಹಿಡಿದುಕೊಂಡು ಮನಸೋ ಇಚ್ಛೆ ಕಾಮುಕ ಶಿಕ್ಷಕನಿಗೆ ಹಿಗ್ಗಾಮುಗ್ಗಾ ಥಳಿಸಿದ್ದರು. ಇನ್ನೂ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
ಇದನ್ನೂ ಓದಿ:Bengaluru: ಚಿತ್ರನಟಿ ಕಂ ಮಾಡೆಲ್ಗೆ ಲೈಂಗಿಕ ದೌರ್ಜನ್ಯ; ಎದೆ ಹತ್ತಿರ ಮುಟ್ಟಿ ಚಾಲಕನಿಂದ ಕಿರುಕುಳ
ಗುರು ದೇವೋ ಭವ ಎಂದು ಹೇಳುತ್ತಾರೆ. ಆದರೆ ಮಕ್ಕಳಿಗೆ ಬುದ್ಧಿವಾದ ಹೇಳಿ, ವಿದ್ಯೆ, ಸನ್ನಡತೆ, ಸನ್ಮಾರ್ಗವನ್ನು ತಿಳಿಸಿಕೊಡಬೇಕಾದ ಶಿಕ್ಷಕನೇ ಕಾಮುಕನ ರೀತಿ ವರ್ತಿಸಿದರೆ, ಬೇಲಿಯೇ ಎದ್ದು ಹೊಲ ಮೇಯ್ದ ಪರಿಸ್ಥಿತಿಯಂತವಾಗುತ್ತದೆ. ಹೀಗಾಗಿ ಪೋಷಕರು ತಮ್ಮ ಮಕ್ಕಳು ಎಷ್ಟೇ ಜಾಗರೂಕರಾಗಿದ್ದರು, ಅವರ ಮೇಲೆ ನಿಗಾವಹಿಸುವುದು ಮತ್ತು ಇಂತಹ ಕಾಮುಖರಿಂದ ರಕ್ಷಿಸುವುದು ಅಗತ್ಯವಾಗಿದೆ. ಅಲ್ಲದೇ ಸರ್ಕಾರ ಕೂಡ ಇಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ