Chamarajanagar: 20 ವರ್ಷ ಮೊದಲೇ ಸಮಾಧಿ ನಿರ್ಮಾಣ: ಸಾವಿನಲ್ಲೂ ಸ್ವಾಭಿಮಾನ ಮೆರೆದ ರೈತ

ಪುಟ್ಟನಂಜಪ್ಪ ಕೇವಲ ಸಮಾಧಿ ನಿರ್ಮಿಸಿಕೊಂಡಿದ್ದಷ್ಟೇ ಅಲ್ಲ, ಲಿಂಗಾಯತ ಸಂಪ್ರದಾಯದಂತೆ ಕ್ರಿಯಾ ಸಮಾಧಿ ಮಾಡಿ ಅಂತ್ಯ ಸಂಸ್ಕಾರ ನೆರವೇರಿಸಲು ಬೇಕಾದ ವಿಭೂತಿ, ಕಂಚಿನ ಕಳಸಗಳು, ಕಂಚಿನ ದೀಪಗಳು ಸೇರಿದಂತೆ ಎಲ್ಲಾ ರೀತಿಯ ಪೂಜಾ ಸಾಮಗ್ರಿಗಳನ್ನು ಸಹ ಖರೀದಿಸಿ ಇಟ್ಟಿದ್ದರು. 

ಸಾವಿಗೂ ಮುನ್ನ ಸಮಾಧಿ ನಿರ್ಮಿಸಿದ್ದ ರೈತ

ಸಾವಿಗೂ ಮುನ್ನ ಸಮಾಧಿ ನಿರ್ಮಿಸಿದ್ದ ರೈತ

  • Share this:
ಚಾಮರಾಜನಗರ (ಜು.25): ಸಾಮಾನ್ಯವಾಗಿ ಸ್ವಾಮೀಜಿಗಳು, ಮಠಮಾನ್ಯಗಳ ಗುರುಗಳು ತಾವು ಸಾಯುವ ಮೊದಲೇ ಸಮಾಧಿ (Tomb) ನಿರ್ಮಿಸಿಕೊಳ್ಳುವುದನ್ನು ಹಾಗು ಅವರ  ನಿಧನದ ನಂತರ ನಿಗದಿತ ಸಮಾಧಿಯಲ್ಲೇ ಅಂತ್ಯ ಸಂಸ್ಕಾರ ಮಾಡುವುದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಸಾಮಾನ್ಯ ರೈತ (Farmer) 20 ವರ್ಷ ಮೊದಲೇ ತಮ್ಮ ಸಮಾಧಿಯನ್ನು ತಾವೇ ಕಟ್ಟಿಸಿಕೊಂಡಿದ್ದು ಇಂದು ನಿಧನರಾದ ಆ ರೈತನ ಅಂತ್ಯ ಸಂಸ್ಕಾರವನ್ನು (Funeral) ಅದೇ ಸಮಾಧಿಯಲ್ಲಿ  ನೆರವೇರಿಸಲಾಗಿದೆ.  

ತೋಟದಲ್ಲಿ ಗದ್ದುಗೆಯಾಕಾರದ ಸಮಾಧಿ

ಚಾಮರಾಜನಗರ ತಾಲೂಕು ನಂಜೇದೇವನಪುರ ಗ್ರಾಮದ ಪುಟ್ಟನಂಜಪ್ಪ ಒಬ್ಬ ಸ್ವಾಭಿಮಾನಿ ವ್ಯಕ್ತಿ. ಇವರಿಗೆ ಮೂವರು ಗಂಡು ಮಕ್ಕಳಿದ್ದಾರೆ. ಮುಂದೆ ತನ್ನ ಅಂತ್ಯ ಸಂಸ್ಕಾರದ ಖರ್ಚು ವೆಚ್ಚದ ವಿಚಾರದಲ್ಲಿ ಮಕ್ಕಳಲ್ಲಿ ಮನಸ್ತಾಪ ಉಂಟಾಗಬಾರದು, ಅವರಿಗೆ ಯಾವುದೇ ರೀತಿಯಲ್ಲೂ ತನ್ನಿಂದ ತೊಂದರೆಯಾಗಬಾರದು ಎಂದು ಯೋಚಿಸಿದ್ದ ಪುಟ್ಟ ನಂಜಪ್ಪ 20 ವರ್ಷಗಳ ಹಿಂದೆಯೇ ತಮ್ಮ ತೋಟದಲ್ಲಿ ಗದ್ದುಗೆಯಾಕಾರದ ಸಮಾಧಿ ಕಟ್ಟಿಸಿ ಅದಕ್ಕೆ ಮರಳು ತುಂಬಿದ್ದರು. ಜೊತೆಗೆ ಒಂದು ಅರಳಿ ಸಸಿಯನ್ನು ನೆಟ್ಟಿದ್ದರು

ತಿಥಿ ಕಾರ್ಯಕ್ಕೆ ಪೂಜಾ ಸಾಮಗ್ರಿಗಳ ಖರೀದಿಸಿ

ಲಿಂಗಾಯತ ಸಮಾಜಕ್ಕೆ ಸೇರಿದ ಪುಟ್ಟನಂಜಪ್ಪ ಕೇವಲ ಸಮಾಧಿ ನಿರ್ಮಿಸಿಕೊಂಡಿದ್ದಷ್ಟೇ ಅಲ್ಲ, ಲಿಂಗಾಯತ ಸಂಪ್ರದಾಯದಂತೆ ಕ್ರಿಯಾ ಸಮಾಧಿ ಮಾಡಿ  ಅಂತ್ಯ ಸಂಸ್ಕಾರ ನೆರವೇರಿಸಲು ಬೇಕಾದ ವಿಭೂತಿ, ಕಂಚಿನ ಕಳಸಗಳು, ಕಂಚಿನ ದೀಪಗಳು ಸೇರಿದಂತೆ ಎಲ್ಲಾ ರೀತಿಯ ಪೂಜಾ ಸಾಮಗ್ರಿಗಳನ್ನು ಸಹ ಖರೀದಿಸಿ ಇಟ್ಟಿದ್ದರು. ಜೊತೆಗೆ ತಮ್ಮ ತಿಥಿ ಕಾರ್ಯಕ್ಕೂ ತಮ್ಮ ಮಕ್ಕಳಿಗೆ ಹಣಕಾಸಿನ ತೊಂದರೆಯಾಗಬಾರದು ಎಂದು ಒಂದೂವರೆ ಲಕ್ಷ ರೂಪಾಯಿ  ಹಣವನ್ನು ಸಹ ತೆಗೆದಿರಿಸಿದ್ದರು

ಇದನ್ನೂ ಓದಿ: Bengaluru: ಅನುಮಾನಾಸ್ಪದ ವ್ಯಕ್ತಿಯನ್ನ ವಶಕ್ಕೆ ಪಡೆದ ಸಿಸಿಬಿ; ಟವರ್ ಲೊಕೇಷನ್ ಆಧರಿಸಿ 30 ಪೊಲೀಸರಿಂದ ದಾಳಿ

ನಿರ್ಮಿಸಿಕೊಂಡಿದ್ದ ಸಮಾಧಿಯಲ್ಲೇ ಅಂತ್ಯಸಂಸ್ಕಾರ

83 ವರ್ಷ ವಯಸ್ಸಿನ ಪುಟ್ಟನಂಜಪ್ಪ ಅವರಿಗೆ ಕೆಲ ದಿನಗಳ ಹಿಂದೆ ಪಾರ್ಶ್ವವಾಯು (ಲಕ್ವಾ) ಉಂಟಾಗಿ ಅನಾರೋಗಕ್ಕೀಡಾಗಿ ಭಾನುವಾರ ಸಂಜೆ ನಿಧನರಾದರು. ಅವರ ಇಚ್ಛೆಯಂತೆ  ಅವರು  ನಿರ್ಮಿಸಿಕೊಂಡಿದ್ದ ಸಮಾಧಿಯಲ್ಲೇ ಸೋಮವಾರ ಲಿಂಗಾಯತ  ಸಂಪ್ರದಾಯದ ಪ್ರಕಾರ ಅಂತ್ಯಸಂಸ್ಕಾರ ನೆರವೇರಿಸಲಾಯಿತು.  ಅಂತ್ಯ ಸಂಸ್ಕಾರಕ್ಕೆ ದೂರದ ಊರುಗಳಿಂದ ಬಂದವರಿಗೆ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು

ಅಂತ್ಯ ಸಂಸ್ಕಾರ ಬಂದವರಿಗೆ ಪ್ರಸಾದ

ತಮ್ಮ ಅಂತ್ಯ ಸಂಸ್ಕಾರಕ್ಕೆ ಬಂದವರು ಹಸಿದು ಹೋಗಬಾರದು ಅವರಿಗೆಲ್ಲಾ ಸರಿಯಾದ ರೀತಿಯಲ್ಲಿ ಪ್ರಸಾದ ವ್ಯವಸ್ಥೆ ಮಾಡಬೇಕು ಎಂದು ತಮ್ಮ ತಂದೆ ಸಾಯುವ ಕೆಲ ದಿನಗಳ ಹಿಂದೆ ಹೇಳಿದ್ದರು ಎಂದು ಪುಟ್ಟ ನಂಜಪ್ಪ ಅವರ ಪುತ್ರ ಗೌಡಿಕೆ ನಾಗೇಶ್ ನ್ಯೂಸ್ 18 ತಿಳಿಸಿದರು.

ಸ್ವಂತ ಖರ್ಚಿನಲ್ಲೇ ತಿಥಿ ಕಾರ್ಯ

ಕಳೆದ ವರ್ಷ ಪುಟ್ಟನಂಜಪ್ಪ ಅವರ ಪತ್ನಿ ಕೊರೊನಾ ಸಂದರ್ಭದಲ್ಲಿ ಮೃತಪಟ್ಟಿದ್ದರು. ಆಗಲು ಸಹ ಮಕ್ಕಳಿಂದ ಹಣ ಪಡೆಯದೆ ಅವರು ತಾವು ಕಟ್ಟಿಸಿ ಕೊಂಡಿದ್ದ ಸಮಾಧಿ ಪಕ್ಕದಲ್ಲೇ ತಮ್ಮ ಪತ್ನಿಯ ಅಂತ್ಯಸಂಸ್ಕಾರ  ನೆರವೇರಿಸಿ ಸ್ವಂತ ಖರ್ಚಿನಲ್ಲೇ ತಿಥಿ ಕಾರ್ಯ ನೆರವೇರಿಸಿದ್ದರು.

ಇದನ್ನೂ ಓದಿ: MonkeyPox: ದೇಶದಲ್ಲಿ ಮಂಕಿಪಾಕ್ಸ್ ಕೇಸ್​ಗಳು ಪತ್ತೆ; ರೋಗ ತಡೆಗೆ ಕರ್ನಾಟಕದಲ್ಲಿ ಕಟ್ಟೆಚ್ಚರ- ಸುಧಾಕರ್

ಮೂವರು ಮಕ್ಕಳಿಗೂ ಸಮನಾಗಿ ಆಸ್ತಿ ಹಂಚಿಕೆ

ತಾವೇ ದುಡಿದು ಆಸ್ತಿ ಪಾಸ್ತಿ ಸಂಪಾದಿಸಿದ್ದ ಪುಟ್ಟನಂಜಪ್ಪ ತಮ್ಮ ಮೂವರು ಮಕ್ಕಳಿಗೂ ಸಮನಾಗಿ ಹಂಚಿದ್ದರು.  ಜೀವಂತ ಇದ್ದಾಗಲು ಸ್ವಾಭಿಮಾನದಿಂದ ಬದುಕಿ ಬಾಳಿದ ಅವರು  ಇದೀಗ ಸಾವಿನಲ್ಲು ಸ್ವಾಭಿಮಾನ ಮೆರೆದಿದ್ದಾರೆ.
Published by:Pavana HS
First published: