news18-kannada Updated:February 23, 2021, 3:46 PM IST
ಲಾಕ್ ಡೌನ್ ಸಂದರ್ಭ ಶಾಲೆಗೆ ಯಾರೂ ಬರುತ್ತಿಲ್ಲ ಎನ್ನುವುದನ್ನು ಗಮನಿಸಿದ ವ್ಯಕ್ತಿಯು ಶಾಲೆಯ ಸುಮಾರು 600 ಚದರ ಅಡಿಯಷ್ಟು ಜಾಗವನ್ನು ಒತ್ತುವರಿ ಮಾಡಿ ತಂತಿ ಬೇಲಿ ಹಾಕಿದ್ದರು. ಈಗ ತಮ್ಮ ಗದ್ದೆಗಳಿಗೆ ಹೋಗಲು ರಸ್ತೆ ಬೇಕು ಎನ್ನೋ ನೆಪವೊಡ್ಡಿ ನೂರಾರು ಲೋಡ್ ಮಣ್ಣನ್ನು ಒತ್ತುವರಿ ಮಾಡಿ, ಶಾಲೆಯ ಜಾಗದಿಂದ ತೆಗೆದಿದ್ದಾರೆ
ಕೊಡಗು(ಫೆ.23): ಲಾಕ್ಡೌನ್ ಸಂದರ್ಭದಲ್ಲಿ ಶಾಲೆಯತ್ತ ಯಾರೂ ಸುಳಿಯದ ಸಂದರ್ಭವನ್ನೇ ದುರುಪಯೋಗ ಪಡಿಸಿಕೊಂಡ ವ್ಯಕ್ತಿಯೊಬ್ಬ ಶಾಲೆಯ ಜಾಗವನ್ನು ಕಬಳಿಸಲು ಮುಂದಾಗಿದ್ದಾರೆ. ಕೊಡಗು ಜಿಲ್ಲೆ ವಿರಾಜಪೇಟೆ ಪಟ್ಟಣದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಸೇರಿದ ಎರಡೂವರೆ ಎಕರೆ ಪ್ರದೇಶದ ಒಂದು ಭಾಗದಲ್ಲಿ ಖಾಲಿ ಇದ್ದ ಜಾಗವನ್ನು ಎಂ.ಸುರೇಶ್ ಎಂಬ ವ್ಯಕ್ತಿ ಒತ್ತುವರಿ ಮಾಡಿಕೊಂಡಿದ್ದಾರೆ. ಎರಡು ಜೆಸಿಬಿಗಳನ್ನು ಬಳಸಿ ನೂರಾರು ಲೋಡಿನಷ್ಟು ಮಣ್ಣನ್ನು ತೆಗೆದಿದ್ದಾರೆ. ಇದು ಶಾಲೆಯ ಅಕ್ಷರ ದಾಸೋಹದ ಅಡುಗೆ ಕೊಠಡಿಯನ್ನು ಬೀಳುವಂತೆ ಮಾಡಿದೆ.
ಲಾಕ್ ಡೌನ್ ಸಂದರ್ಭ ಶಾಲೆಗೆ ಯಾರೂ ಬರುತ್ತಿಲ್ಲ ಎನ್ನುವುದನ್ನು ಗಮನಿಸಿದ ವ್ಯಕ್ತಿಯು ಶಾಲೆಯ ಸುಮಾರು 600 ಚದರ ಅಡಿಯಷ್ಟು ಜಾಗವನ್ನು ಒತ್ತುವರಿ ಮಾಡಿ ತಂತಿ ಬೇಲಿ ಹಾಕಿದ್ದರು. ಈಗ ತಮ್ಮ ಗದ್ದೆಗಳಿಗೆ ಹೋಗಲು ರಸ್ತೆ ಬೇಕು ಎನ್ನೋ ನೆಪವೊಡ್ಡಿ ನೂರಾರು ಲೋಡ್ ಮಣ್ಣನ್ನು ಒತ್ತುವರಿ ಮಾಡಿ, ಶಾಲೆಯ ಜಾಗದಿಂದ ತೆಗೆದಿದ್ದಾರೆ. ನೂರಾರು ಲೋಡ್ ಮಣ್ಣು ತೆಗೆಸಿರುವುದರಿಂದ ಶಾಲೆಯ ಅಕ್ಷರ ದಾಸೋಹದ ಅಡುಗೆ ಕೊಠಡಿ ಮತ್ತು ಶೌಚಾಲಯ ಕೊಠಡಿಯ ಪಕ್ಕದಲ್ಲೇ ದೊಡ್ಡ ಕಂದಕ ನಿಮಾಣವಾಗಿದೆ.
LIC: ಎಲ್ಐಸಿಯಿಂದ ಬಿಮಾ ಜ್ಯೋತಿ ಹೊಸ ಪ್ಲಾನ್ ಬಿಡುಗಡೆ; ಸಂಪೂರ್ಣ ಮಾಹಿತಿ ಇಲ್ಲಿದೆ..!
ಕೊಡಗಿನಲ್ಲಿ ಸಹಜವಾಗಿಯೇ ಬಾರಿ ಮಳೆ ಸುರಿಯುವುದರಿಂದ ಶಾಲೆಯ ಅಕ್ಷರ ದಾಸೋಹ ಮತ್ತು ಶೌಚಾಲಯ ಕೊಠಡಿ ಎರಡು ಕೂಡ ಕುಸಿದು ಬೀಳುವ ಆತಂಕ ಎದುರಾಗಿದೆ. ಇದನ್ನು ಕೇಳಲು ಹೋದ ಶಿಕ್ಷಕರಿಗೆ ಮತ್ತು ಪಕ್ಕದ ಜಾಗದ ಮಾಲೀಕರಾದ ಡಾಕ್ಟರ್ ಉತ್ತಯ್ಯ ಅವರೊಂದಿಗೆ ಖಾಸಗಿ ವ್ಯಕ್ತಿ ವಾಗ್ವಾದಕ್ಕೆ ಇಳಿದಿದ್ದಾರೆ. ಬಳಿಕ ವಿರಾಜಪೇಟೆ ಬಿಇಓ ಅವರು ಶ್ರೀಶೈಲ ಬೀಳಗಿ ಅವರು ತಹಶೀಲ್ದಾರ್ ಯೋಗಾನಂದ ಅವರ ಗಮನಕ್ಕೆ ತಂದಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ತಹಶೀಲ್ದಾರ್ ಸದ್ಯ ಮಣ್ಣು ತೆಗೆಯದಂತೆ ತಡೆನೀಡಿದ್ದಾರೆ.
ಆದರೂ ಈಗಾಗಲೇ ಅಪಾರ ಪ್ರಮಾಣದ ಮಣ್ಣು ತೆಗೆದಿರುವುದರಿಂದ ಶಾಲೆಯ ಅಕ್ಷರ ದಾಸೋಹ ಕೊಠಡಿ ಮತ್ತು ಶೌಚಾಲಯ ಕೊಠಡಿಗೆ ಅಪಾಯ ತಪ್ಪಿದ್ದಲ್ಲ. ಈ ಕುರಿತು ಪ್ರತಿಕ್ರಿಯಿಸಿರುವ ಡಿಡಿಪಿಐ ಪೆರಿಗ್ರಿನ್ ಮಚಾಡೋ ಅವರು ಎರಡು ಎಕರೆ 83 ಸೆಂಟ್ ಜಾಗ ಶಾಲೆಯ ಹೆಸರಿನಲ್ಲಿ ದಾಖಲೆ ಇದೆ. 2 ಶತಮಾನಗಳ ಇತಿಹಾಸ ಇರುವ ಈ ಶಾಲೆಯ ಹೆಸರಿನಲ್ಲೇ ಜಾಗವಿದೆ. ಆದರೆ ಖಾಸಗಿ ವ್ಯಕ್ತಿ ಇದು ತನ್ನ ಜಾಗವೆಂದು ತಡೆಗೋಡೆಯನ್ನು ಹೊಡೆದು ಮಣ್ಣು ತೆಗೆದಿದ್ದಾರೆ. ಈ ಕುರಿತು ತಹಶೀಲ್ದಾರ್ ಮತ್ತು ಎಡಿಎಲ್ಆರ್ ಅವರಿಗೆ ದೂರು ನೀಡಲಾಗಿದೆ.
ಸರ್ವೇ ಕಾರ್ಯ ಮುಗಿಸಿ ಶಾಲೆಯ ಜಾಗದ ಗಡಿ ಗುರುತಿಸುವಂತೆ ಕೋರಲಾಗಿದೆ. ಸರ್ವೇ ಮಾಡಿದ ಬಳಿಕ ಜಾಗ ತಮ್ಮದೇ ಎನ್ನೋದು ಸಾಬೀತು ಆಗಲಿದೆ. ಈ ಬಳಿಕ ಆ ವ್ಯಕ್ತಿಯೇ ಈ ಹೊಡೆದು ಹಾಕಿರುವ ಶಾಲೆಯ ತಡೆಗೋಡೆಯನ್ನು ನಿರ್ಮಿಸಿಕೊಡಬೇಕು. ಜೊತೆಗೆ ಅಕ್ಷರ ದಾಸೋಹ ಅಡುಗೆ ಕೊಠಡಿ ಮತ್ತು ಶೌಚಾಲಯ ಕಟ್ಟಡಕ್ಕೆ ಆಗಲಿರುವ ನಷ್ಟಕ್ಕೂ ಅವರೇ ಹೊಣೆಗಾರರಾಗಬೇಕಾಗುತ್ತದೆ ಎಂದಿದ್ದಾರೆ.
Published by:
Latha CG
First published:
February 23, 2021, 3:46 PM IST