ಭಿಕ್ಷಾಟನೆ ವಿಚಾರವಾಗಿ ವ್ಯಕ್ತಿಯ ಕೊಲೆಗೈದ ಮಂಗಳಮುಖಿಯರ ಬಂಧನ

ಭಿಕ್ಷಾಟನೆ ವಿಚಾರವಾಗಿ ಬೆಂಗಳೂರು ಹೊರವಲಯ ಎಲೆಕ್ಟ್ರಾನಿಕ್ ಸಿಟಿ ಸಮೀಪದ ನೈಸ್ ರಸ್ತೆಯಲ್ಲಿ ಕಳೆದ ಶುಕ್ರವಾರ ಕೊಲೆಯಾಗಿದ್ದ ರಾಮನಗರ ಮೂಲದ ರಾಜೇಂದ್ರ ಪ್ರಕರಣದ ಆರೋಪಿಗಳನ್ನು ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಬಂಧಿಸಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಆನೇಕಲ್(ಆಗಸ್ಟ್​. 17): ಕೈಯಲ್ಲಿ ಕೆಲಸವಿದ್ದರು ಹಣ ಗಳಿಸಲು ಆತ ಅನ್ಯ ಮಾರ್ಗವೊಂದನ್ನು ಕಂಡುಕೊಂಡಿದ್ದ. ಅನ್ಯ ಮಾರ್ಗವೇ ತನಗೆ ಮುಳುವಾಗುತ್ತದೆ ಎಂದು ಆತ ಎಣಿಸಿರಲಿಲ್ಲ. ಅದೊಂದು ಜಗಳ ಅವನ ಜೀವಕ್ಕೆ ಕುತ್ತು ತಂದಿತ್ತು. ಜೀವ ತೆಗೆದ ಕೊಲೆಗಡುಕರು ಸಹ ಕಾನೂನು ಕುಣಿಕೆಯಲ್ಲಿ ಬಂಧಿಯಾಗಿದ್ದಾರೆ. 

ಭಿಕ್ಷಾಟನೆ ವಿಚಾರವಾಗಿ ಬೆಂಗಳೂರು ಹೊರವಲಯ ಎಲೆಕ್ಟ್ರಾನಿಕ್ ಸಿಟಿ ಸಮೀಪದ ನೈಸ್ ರಸ್ತೆಯಲ್ಲಿ ಕಳೆದ ಶುಕ್ರವಾರ ಕೊಲೆಯಾಗಿದ್ದ ರಾಮನಗರ ಮೂಲದ ರಾಜೇಂದ್ರ ಪ್ರಕರಣದ ಆರೋಪಿಗಳನ್ನು ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಬಂಧಿಸಿದ್ದಾರೆ. ಮಂಗಳಮುಖಿಯರಾದ ದೇವಿ, ಭಾವನಾ ಮತ್ತು ನಿತ್ಯ ಬಂಧಿತ ಆರೋಪಿಗಳು.

ಬಂಧಿತ ಮೂರು ಮಂದಿ ಆರೋಪಿಗಳು ಎಲೆಕ್ಟ್ರಾನಿಕ್ ಸಿಟಿ ಸುತ್ತಮುತ್ತ ಭಿಕ್ಷಾಟನೆ ಮಾಡಿಕೊಂಡು ಜೀವನ ಕಂಡು ಕೊಂಡಿದ್ದರು. ಆದರೆ ಇತ್ತೀಚೆಗೆ ಮೃತ ರಾಜೇಂದ್ರ ಸುಲಭವಾಗಿ ಹಣ ಮಾಡುವ ಸಲುವಾಗಿ ಹಗಲಿನಲ್ಲಿ ಗಾರ್ಮೆಂಟ್ಸ್​​ನಲ್ಲಿ ಕೆಲಸ ಮಾಡುತ್ತಿದ್ದ, ರಾತ್ರಿಯಾದ್ರೆ ಸೀರೆಯುಟ್ಟು ಮಂಗಳಮುಖಿಯರಂತೆ ನೈಸ್ ರಸ್ತೆ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಿಕ್ಷಾಟನೆ ಮಾಡುತ್ತಿದ್ದ. ತಮ್ಮ ಏರಿಯಾದಲ್ಲಿ ಬೇರೊಬ್ಬ ಮಂಗಳಮುಖಿ ಭಿಕ್ಷಾಟನೆ ಮಾಡುತ್ತಿರುವ ವಿಚಾರ ತಿಳಿದ ದೇವಿ, ಭಾವನಾ ಮತ್ತು ನಿತ್ಯ ಕಳೆದ ಶುಕ್ರವಾರ ರಾಜೇಂದ್ರನ ಜೊತೆ ಜಗಳಕ್ಕೆ ನಿಂತು ಬಿಡುತ್ತಾರೆ.

ಮಾತು ಮಾತಿಗೆ ಬೆಳೆದು ಮಂಗಳಮುಖಿಯರು ಮತ್ತು ರಾಜೇಂದ್ರನ ನಡುವೆ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗುತ್ತದೆ. ಆಕ್ರೋಶಗೊಂಡ ಮಂಗಳಮುಖಿಯರು ರಾಜೇಂದ್ರನಿಗೆ ಹಿಗ್ಗಾಮುಗ್ಗಾ ಥಳಿಸುತ್ತಾರೆ. ತೀವ್ರವಾಗಿ ಗಾಯಗೊಂಡ ರಾಜೇಂದ್ರ ಸಾವನ್ನಪ್ಪಿದ್ದಾನೆ. ರಾಜೇಂದ್ರ ಸಾವನ್ನಪ್ಪುತ್ತಿದ್ದಂತೆ ಅಂದು ರಾತ್ರಿಯೇ ರಾಮನಗರದ ಆಸ್ಪತ್ರೆಗೆ ರಾಜೇಂದ್ರನ ಮೃತದೇಹವನ್ನು ಕೊಂಡೊಯ್ದಿದ್ದ ಆರೋಪಿಗಳು ಅನಾಥ ಶವ ಎಂದು ಬಿಂಬಿಸಲು ಯತ್ನಿಸಿದ್ದಾರೆ.

ಇದನ್ನೂ ಓದಿ : ಸಬ್​ರಿಜಿಸ್ಟ್ರಾರ್ ಕಚೇರಿಯಲ್ಲಿ ಇನ್ನು ಮುಂದೆ ಏಜೆಂಟರು ಕಂಡುಬಂದರೆ ಜನರಿಂದಲೇ ಹೊಡೆಸುತ್ತೇನೆ; ಎಚ್.ಡಿ.ರೇವಣ್ಣ

ಮಂಗಳಮುಖಿಯರ ಮೇಲೆ ಅನುಮಾನಗೊಂಡ ಆಸ್ಪತ್ರೆ ಸಿಬ್ಬಂದಿ ರಾಮನಗರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಆಸ್ಪತ್ರೆಗೆ ಆಗಮಿಸಿದ ಪೊಲೀಸರು ಮೂರು ಮಂದಿ ಮಂಗಳಮುಖಿಯರನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸಿದಾಗ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಹೇಳಿಕೆ ನೀಡಿದ್ದು, ಪೊಲೀಸ್ ಶೈಲಿಯಲ್ಲಿ ವಿಚಾರಣೆ ನಡೆಸಿದಾಗ ಕೊಲೆ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ.

ನಂತರ ರಾಮನಗರ ಪೊಲೀಸರಿಂದ ಎಲೆಕ್ಟ್ರಾನಿಕ್ ಸಿಟಿ ಪೊಲೀಸರಿಗೆ ಮಾಹಿತಿ ದೊರಕಿದ್ದು, ಮೂವರು ಆರೋಪಿಗಳನ್ನು ಬಂಧಿಸಿರುವ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
Published by:G Hareeshkumar
First published: