ಅನ್ನ ತಿಂದ್ರೆ ರಕ್ತ ಕಾರುತ್ತೆ : ಈತನಿಗೆ ಅನುಪಯುಕ್ತ ಆಯಿಲ್, ಪೇಪರ್ ಆಹಾರ

news18
Updated:August 8, 2018, 9:10 PM IST
ಅನ್ನ ತಿಂದ್ರೆ ರಕ್ತ ಕಾರುತ್ತೆ : ಈತನಿಗೆ ಅನುಪಯುಕ್ತ ಆಯಿಲ್, ಪೇಪರ್ ಆಹಾರ
news18
Updated: August 8, 2018, 9:10 PM IST
- ಶಿವರಾಮ ಅಸುಂಡಿ, ನ್ಯೂಸ್ 18 ಕನ್ನಡ

ಕಲಬುರ್ಗಿ (ಆಗಸ್ಟ್ 08) :  ಮನುಷ್ಯನ ಶರೀರ ತುಂಬಾ ನಾಜೂಕು. ಕಲುಷಿತವಾದ ನೀರು ಕುಡಿದ್ರು... ಆಹಾರದಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಸಾಕಷ್ಟು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತೇವೆ. ಆದರೆ ಇಲ್ಲೊಬ್ಬ ವ್ಯಕ್ತಿ ಕಳೆದ 17 ವರ್ಷಗಳಿಂದ ಊಟ, ನೀರಿಲ್ಲದೇ ಬರೀ ಮೋಟಾರ್ ಗಳಿಂದ ತೆಗೆಯುವ ಅನುಪಯುಕ್ತ ಆಯಿಲ್ ಕುಡಿದು, ಸುಟ್ಟ ಪೇಪರ್ ತಿಂದು ಬದುಕು ಸಾಗಿಸುತ್ತಿದ್ದಾನೆ. 

ಹೌದು, ಇದು ಅಚ್ಚರಿ ಎನಿಸಿದ್ರೂ ಸತ್ಯ. ಹೀಗೆ ವೇಸ್ಟ್ ಆಯಿಲ್ ಕುಡಿದು, ಸುಟ್ಟು ಪೇಪರ್ ಗಳನ್ನು ತಿಂದು ಬದುಕುವ ಮೂಲಕ ಅಚ್ಚರಿ ಮೂಡಿಸಿರೋದ್ರ ಜತೆಗೆ ವೈದ್ಯಲೋಕಕ್ಕೆ ಸವಾಲಾಗಿರುವ ವ್ಯಕ್ತಿ ಕುಮಾರ್.

ಈತ ಮೂಲತಃ ಶಿವಮೊಗ್ಗ ಜಿಲ್ಲೆಯವನಾಗಿದ್ದಾನೆ. ಆದ್ರೆ ಕಳೆದ ಹಲವು ದಿನಗಳಿಂದ ಕಲಬುರಗಿ ನಗರದಲ್ಲಿ ವಾಸವಾಗಿದ್ದಾನೆ. ಈತ ಕಳೆದ 17 ವರ್ಷಗಳಿಂದ ಊಟ ನೀರು ಇಲ್ಲದೆ ಬದುಕುತ್ತಿದ್ದಾನೆ ಎನ್ನೋದು ಅಚ್ಚರಿ ಮೂಡಿಸಿದೆ. ಆತನಿಗೆ ಹಸಿವೆ ಆದಾಗ ಊಟದ ಬದಲಾಗಿ ಪೇಪರ್ ಗಳನ್ನು ಸುಟ್ಟು ತಿನ್ನುತ್ತಾನೆ. ಇನ್ನು ಆತನಿಗೆ ನೀರಡಿಕೆ ಆದ್ರೆ ಮೋಟರ್ ಇಂಜನ್ ಗಳಿಂದ ತೆಗೆದ ಅನುಪಯುಕ್ತ ಸುಟ್ಟ ಆಯಿಲ್ ಕುಡಿದು ಬದುಕುತ್ತಿದ್ದಾನೆ. ಆಯಿಲ್ ಕುಡಿದು, ಸುಟ್ಟ ಪೇಪರ್ ತಿನ್ನೋದರಿಂದ ಏನೂ ಆಗಿಲ್ಲ ಎನ್ನುತ್ತಾನೆ ಕುಮಾರ್.

ಇನ್ನು ಈತ ಹೀಗೆ ಆಯಿಲ್ ಕುಡಿದು ಪೇಪರ್ ತಿಂದು ಬದುಕೋದಕ್ಕೂ ಕಾರಣವಿದೆಯಂತೆ. ಕುಮಾರ್, ಚಿಕ್ಕವನಿದ್ದಾಗ ಅತನ ಹೆತ್ತವರು ಶಿವಮೊಗ್ಗದ ಬಸ್ ನಿಲ್ದಾಣದ ಬಳಿ ತಂದು ಬಿಟ್ಟು ಹೋಗಿದ್ದರಂತೆ. ಕೆಲಸಕ್ಕಾಗಿ ಅಲೆಯುತ್ತಿದ್ದ ವೇಳೆ ವ್ಯಕ್ತಿಯೋರ್ವ ಕಾರವಾರ ಜಿಲ್ಲೆಗೆ ಕರೆದುಕೊಂಡು ಹೋಗಿ ನಾಲ್ಕು ವರ್ಷಗಳ ಕಾಲ ಗಾರೆ ಕೆಲಸಕ್ಕಾಗಿ ದುಡಿಸಿಕೊಂಡು ಕೂಲಿ ಕೊಡದೇ ಕಳುಹಿಸಿದ್ದನಂತೆ. ಹಲವು ದಿನ ಊಟವಿಲ್ಲದೆ ಸಂಕಷ್ಟ ಎದುರಿಸಿದ ಕುಮಾರ್, ಸಿಕ್ಕ ಆಯಿಲ್, ಇಟ್ಟಿಗೆ, ಸುಟ್ಟ ಪೇಪರ್ ತಿನ್ನಲು ಪ್ರಾರಂಭಿಸಿದ್ದಾನೆ.  ನೀರಡಿಕೆಯೆನಿಸಿದಾಗ ಸುಟ್ಟ ಆಯಿಲ್ ಕುಡಿಯೋದನ್ನು ರೂಢಿ ಮಾಡಿಕೊಂಡಿದ್ದಾನೆ.

ಕಾಲಾಂತರದಲ್ಲಿ ಅದೇ ಆತನಿಗೆ ರೂಢಿಯಾಗಿ ಬಿಟ್ಟಿದೆ. ಈಗ ಅನ್ನ ತಿಂದರೆ ರಕ್ತ ಕಾರುತ್ತದೆ, ನೀರು ಕುಡಿದರೆ ವಾಂತಿಯಾಗುತ್ತದೆ. ಹೀಗಾಗಿ ಅನಿವಾರ್ಯವಾಗಿ ಸುಟ್ಟ ಆಯಿಲ್ ಮತ್ತು ಸುಟ್ಟಪೇಪರನ್ನೇ ಆತ ಸೇವಿಸುತ್ತಿದ್ದಾನೆ. ಚಹಾವೊಂದನ್ನು ಮಾತ್ರ ಇತರರಂತೆ ಕುಡಿಯುತ್ತಿದ್ದಾನೆ. ಕಳೆದ 17 ವರ್ಷಗಳಿಂದ ಅದನ್ನೇ ತಿಂದು, ಕುಡಿದು ಬದುಕು ಸಾಗಿಸುತ್ತಿರುವುದನ್ನು ನೋಡಿ ಕಲಬುರ್ಗಿ ಜನತೆ ಅಚ್ಚರಿ ವ್ಯಕ್ತಪಡಿಸಿದೆ.

ಇನ್ನು ನಾಜೂಕಾಗಿರುವ ಶರೀರಕ್ಕೆ ಸ್ವಲ್ಪವೂ ಏರುಪೇರಾದರೂ ಸಾಕಷ್ಟು ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ. ಆದ್ರೆ ಈತ 17 ವರ್ಷಗಳಿಂದ ಆಯಿಲ್ ಕುಡಿದು, ಸುಟ್ಟ ಪೇಪರ್ ಗಳನ್ನು ತಿಂದು ಬದುಕು ಸಾಗಿಸುತ್ತಿದ್ದರೂ ಯಾವುದೇ ಆರೋಗ್ಯ ಸಮಸ್ಯೆಯಾಗಿಲ್ಲ. ಒಂದಿನವೂ ಜ್ವರ, ಹೊಟ್ಟೆ ನೋವು ಅಂತಾ ಬಿದ್ದಿಲ್ವಂತೆ. ತನಗಿರುವ ಹವ್ಯಾಸ ಸರಿಪಡಿಸುವಂತೆ ಸಾಕಷ್ಟು ಜನ ವೈದ್ಯರ ಬಳಿ ಹೋಗಿ ತೋರಿಸಿದ್ದಾನೆ. ಇಡೀ ಶರೀರದಲ್ಲಿರುವ ನರಗಳು ಕಪ್ಪಾಗಿದ್ದು ಏನೂ ಮಾಡಲು ಆಗೋದಿಲ್ಲ ಎಂದು ವೈದ್ಯರು ಕೈಚಲ್ಲಿದ್ದಾರಂತೆ. ಎಲ್ಲಿ ಹೋದರೂ ಈತನ ಆರೋಗ್ಯ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಹೀಗಾಗಿ ಅದನ್ನೇ ತನ್ನ ಆಹಾರವಾಗಿ ಮುಂದುವರಿಸಿಕೊಂಡು ಹೋಗುತ್ತಿದ್ದಾನೆ. ಕುಮಾರ್ ನ ಆಹಾರ ಪದ್ದತಿ ವೈದ್ಯರಿಗೆ ಸವಾಲ್ ಆಗಿದೆ ಪರಿಣಮಿಸಿದೆಯಂತೆ.
Loading...

ಸದ್ಯ ಕಲಬುರ್ಗಿಯಲ್ಲಿರುವ ಕುಮಾರ್, ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಬದುಕು ಸಾಗಿಸುತ್ತಿದ್ದಾನೆ. ಬಾಟಲಿಯಲ್ಲಿ ಸದಾ ಆಯಿಲ್ ಇಟ್ಕೊಂಡು ನೀರಡಿಕೆ ಆದಾಗಲೊಮ್ಮೆ ಅದನ್ನೇ ಕುಡಿಯುತ್ತಿದ್ದಾನೆ. ಬಾಟಲಿ ಖಾಲಿಯಾದರೆ ಸಾಕು ಗ್ಯಾರೇಜ್ ಬಳಿ ಹೋಗಿ ಮತ್ತೆ ತುಂಬಿಸಿಕೊಂಡು ಬರುತ್ತಾನೆ. ಮೊದಲು ಇಟ್ಟಿಗೆಯನ್ನೂ ತಿನ್ನುತ್ತಿದ್ದನಾದರೂ ಇತ್ತೀಚಿನ ದಿನಗಳಲ್ಲಿ ಅದನ್ನು ಬಿಟ್ಟಿದ್ದಾನೆ.

ಅಯ್ಯಪ್ಪ ಸ್ವಾಮಿ ಭಕ್ತನಾಗಿರುವ ಕುಮಾರ್, ಅಯ್ಯಪ್ಪನ  ಸನ್ನಿಧಿಗೆ ಹೋಗೋಕೆ ಸಿದ್ದನಾಗಿದ್ದು ಆತನಲ್ಲಿ ಹಣವಿಲ್ಲದ ಹಿನ್ನೆಲೆ ಕಲಬುರ್ಗಿ ನಗರದ ಖಾಸಗಿ ವಾಹನ ಚಾಲಕರು ಆತನಿಗೆ ಆರ್ಥಿಕ ಸಹಾಯ ಮಾಡಿದ್ದಾರೆ. ಒಟ್ಟಾರೆಯಾಗಿ ಆಯಿಲ್ ಕುಡಿದು, ಪೇಪರ್ ತಿಂದು ಬದುಕುತ್ತಿರುವ ಕುಮಾರ್ ವೈದ್ಯಲೋಕಕ್ಕೆ ಸವಾಲಾಗಿರುವುದಂತೂ ಸತ್ಯ.

 

 
First published:August 8, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ