ಹಾವೇರಿ (ಆ.10): ಭಾರೀ ಮಳೆಯಿಂದಾಗಿ ನಡುಗಡ್ಡೆಯಲ್ಲಿ ಸಿಲಕಿದ್ದ ಮೂಕ ಪ್ರಾಣಿಗಳನ್ನು ರಕ್ಷಣೆ ಮಾಡಲು ಹೊಗಿ ಯುವಕನೊಬ್ಬ ನದಿಯ ಪಾಲಾದ ಘಟನೆ ಹಾವೇರಿ ಜಿಲ್ಲೆಯ ಹಾನಗಲ್ ತಾಲ್ಲೂಕಿನ ಇನಾಂಲಕಮಾಪುರ ಗ್ರಾಮದಲ್ಲಿ ನಡದಿದೆ. ಹೇಗಾದರೂ ಮಾಡಿ ನಡುಗಡ್ಡೆಯಲ್ಲಿ ಸಿಲುಕಿಕೊಂಡಿದ್ದ ತನ್ನ ಜಾನುವಾರುಗಳ ರಕ್ಷಣೆ ಮಾಡಬೇಕು ಎಂದು ಯುವಕನೋರ್ವ ಹಾತೊರೆಯುತ್ತಿದ್ದ. ಅಂದುಕೊಂಡಂತೆ ಆಗಿದ್ದರೆ ಮೂಕ ಪ್ರಾಣಿಗಳ ಜೊತೆ ಯುವಕನು ಸುರಕ್ಷಿತವಾಗಿ ಗ್ರಾಮ ಸೇರಬೇಕಿತ್ತು. ಆದರೆ ದುರ್ವಿಧಿ ನದಿಯ ರಭಸಕ್ಕೆ ಯುವಕ ಕೊಚ್ಚಿ ಹೋಗಿದ್ದಾನೆ.
ಹೌದು ಇನಾಂಲಕಮಾಪುರ ಗ್ರಾಮದ 28 ವರ್ಷದ ಯುವಕ ಚಂದ್ರಶೇಖರ್ ದಳವಾಯಿ (28) ವರದಾ ನದಿಯಲ್ಲಿ ನಿನ್ನೆ ಸಂಜೆಯಂದು ಕೊಚ್ಚಿಕೊಂಡು ಹೋಗಿದ್ದಾನೆ. ಕಳೆದ ನಾಲ್ಕೈದು ದಿನಗಳಿಂದ ಮಲೆನಾಡು ಭಾಗದಲ್ಲಿ ಮಳೆ ಹೆಚ್ಚಾದ ಹಿನ್ನೆಲೆ ವರದಾ ನದಿ ಮೈದುಂಬಿ ಹರಿಯುತ್ತಿದೆ. ವರದಾ ನದಿ ತುಂಬಿ ಹರಿಯಲು ಪ್ರಾರಂಭಿಸಿದ ಕಾಎರಣ ಇನಾಂಲಕಮಾಪುರ ಗ್ರಾಮದ ಹೊರ ವಲಯದಲ್ಲಿರುವ ನೀಲಗಿರಿ ತೋಪಿನ ಪ್ರದೇಶ ನಡುಗಡ್ಡೆಯಾಗಿದೆ
ಈ ಭಾಗದಲ್ಲಿ ನಾಲ್ಕು ಎಮ್ಮೆಗಳು ಸಿಲುಕಿಕೊಂಡು, ಮರಳಿ ಗ್ರಾಮದ ದಡ ಸೇರಲು ಪರದಾಡುತ್ತಿದ್ದವು. ಹೀಗಾಗಿ ಮೂರು ದಿನದಿಂದ ನಡುಗಡ್ಡೆಯಲ್ಲಿ ಸಿಲುಕಿಕೊಂಡಿದ್ದ ತಮ್ಮ ಜಾನುವಾರು ರಕ್ಷಣೆಗೆ ಮುಂದಾದ ಚಂದ್ರಶೇಖರ್ ರಭಸವಾಗಿ ಹರಿಯುತ್ತಿರೋ ನದಿಯಲ್ಲಿ ಈಜಲು ಹೋಗಿದ್ದಾನೆ. ಈತನ ಜೊತೆಗೆ ಹೋದ ಸ್ನೇಹಿತರು ಬೇಡ ಎಂದರೂ ನದಿಗಳಿದು ಹೋದವನು, ನೀರಿನ ಹರಿವಿನಲ್ಲಿ ಕಣ್ಮರೆಯಾಗಿದ್ದಾನೆ.
ಐಟಿಐ ಓದಿರೋ ಚಂದ್ರಶೇಖರ್ ಕಳೆದ ಹಲವು ವರ್ಷದಿಂದ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದ. ಕಳೆದ ಮೂರು ತಿಂಗಳ ಹಿಂದಷ್ಟೆ ಮದುವೆ ಕೂಡ ಆಗಿತ್ತು. ತನ್ನ ತಂದೆ, ತಾಯಿ, ಸೋದರ, ಪತ್ನಿ ಜೊತೆ ನೆಮ್ಮದಿಯಾಗಿ ಕಾಲ ಕಳೆಯುತ್ತಿದ್ದ. ಸದ್ಯ ಲಾಕ್ ಡೌನ್ ಪರಿಸ್ಥಿತಿಯಲ್ಲಿ ಮತ್ತೆ ಬೆಂಗಳೂರಿಗೆ ಹಿಂತಿರುಗದೇ ಊರಲ್ಲೇ ಉಳಿದುಕೊಂಡಿದ್ದ. ಈಗ ಆತ ನೀರು ಪಾಲಾಗಿರುವುದು ಕುಟುಂಬದವರಿಗೆ ನುಂಗಲಾರದ ತುತ್ತಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ