ಬೆಂಗಳೂರು; ಇಲ್ಲೊಬ್ಬ ತನ್ನ ತಂಗಿ ಮದುವೆಯೇನೋ ಮಾಡಿದ. ಮದುವೆ ಮಾಡಿಕೊಂಡ ತಂಗಿ ತನ್ನ ಗಂಡನೊಂದಿಗೆ ಸುಖ ಸಂಸಾರ ನಡೆಸಲು ತವರು ತೊರೆದು ಗಂಡನ ಮನೆ ಸೇರಿದರೆ, ತಂಗಿಯ ಮದುವೆ ಮಾಡಿದ ಅಣ್ಣ ಜೈಲು ಪಾಲಾಗಿದ್ದಾನೆ. ಸ್ವಂತ ಅಕ್ಕ- ತಂಗಿಯ ಮದುವೆ ಮಾಡಲು ವರ್ಷಾನುಗಟ್ಟಲೇ ದುಡಿದು ಹಣ ಕೂಡಿಟ್ಟರೆ, ಇಲ್ಲೊಬ್ಬ ವ್ಯಕ್ತಿ ಉದ್ಯಮಿಯೊಬ್ಬರ ಮನೆಗೆ ಕನ್ನ ಹಾಕಿ, ತನ್ನ ತಂಗಿಯ ಮದುವೆಯನ್ನು ಅದ್ದೂರಿಯಾಗಿ ಮಾಡಿ ಮುಗಿಸಿ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಈತನೊಂದಿಗೆ ಕೃತ್ಯದಲ್ಲಿ ಭಾಗಿಯಾಗಿದ್ದ ತಬರೇಜ್ ಖಾನ್‌ನನ್ನು ಸಹ ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಶೇಖ್ ಸಲ್ಮಾನ್ ತನ್ನ ತಂಗಿ ಮದುವೆ ಮಾಡಲು ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕು ಡಾಬಸ್‌ಪೇಟೆಯ ಛಾಯ ಶಂಕರ್ ಮನೆಗೆ ಕನ್ನ ಹಾಕಿದ್ದಾನೆ. ಡಿಸೆಂಬರ್ 9ರಿಂದ ಮನೆ ಮಾಲೀಕ ಛಾಯಾ ಶಂಕರ್ ತಂಗಿಯ ಮನೆಗೆಂದು ಹಿಂದೂಪುರಕ್ಕೆ ತೆರಳಿದ್ದರು. ಈ ವೇಳೆ ಹೊಂಚು ಹಾಕಿದ್ದ ಶೇಖ್ ಸಂಜೆ ಮನೆಗೆ ನುಗ್ಗಿ 300 ಗ್ರಾಂ ಚಿನ್ನ ಹಾಗೂ 1500 ಗ್ರಾಂ ಬೆಳ್ಳಿ ವಿಗ್ರಹಗಳು ಸೇರಿದಂತೆ ದೇವರ ವಿಗ್ರಹವನ್ನು ಕಳ್ಳತನ ಮಾಡಿದ್ದಾನೆ.
ಆಟೋ ಚಾಲಕರ ವಿಚಾರಣೆ
ಘಟನೆಗೆ ಸಂಬಂಧಿಸಿದಂತೆ ಛಾಯಾ ಶಂಕರ್ ಡಾಬಸ್‌ಪೇಟೆ ಪೊಲೀಸರಿಗೆ ದೂರು ನೀಡಿದ್ದಾರೆ. ಇನ್ಸ್ಪೆಕ್ಟರ್ ಕುಮಾರ್ ನೇತೃತ್ವದಲ್ಲಿ ಪಿಎಸ್‌ಐ ಮಂಜುನಾಥ್ ತಂಡ ತನಿಖೆ ಆರಂಭಿಸಿ ಆರೋಪಿಗಳ ಶೋಧಕ್ಕಾಗಿ ಪೊಲೀಸರು ಭಾರಿ ಶ್ರಮ ಪಟ್ಟಿದ್ದಾರೆ. ಡಾಬಸ್‌ಪೇಟೆ ಆಟೋ ನಿಲ್ದಾಣದ ಬಳಿ ಛಾಯ ಶಂಕರ್ ಮನೆ ಇದ್ದ ಕಾರಣ ಮೊದಲಿಗೆ ಆಟೋ ಸ್ಟ್ಯಾಂಡ್‌ನ ಎಲ್ಲಾ ಆಟೋ ಚಾಲಕರನ್ನ ಕರೆಸಿ ಪೊಲೀಸರು ತನಿಖೆ ಮಾಡಿದ್ದಾರೆ. ಆದರೆ ಯಾವುದೇ ಸುಳಿವು ಸಿಕ್ಕಿಲ್ಲ.
ಮೊಬೈಲ್ ಟವರ್ ಕೊಟ್ಟ ಸುಳಿವು
ಮೊಬೈಲ್ ಟವರ್ ಲೊಕೇಷನ್ ಸರ್ಚ್ ಮಾಡಿ ಬರೋಬ್ಬರಿ ಒಂದು ಲಕ್ಷದ ಎಪ್ಪತ್ತು ಸಾವಿರ ಮೊಬೈಲ್ ನಂಬರ್‌ಗಳ ಮಾಹಿತಿ ಕಲೆ ಹಾಕಿದ್ದಾರೆ. ಎಲ್ಲಾ ನಂಬರ್‌ಗಳನ್ನು ಅಳೆದು ತೂಗಿದಾಗ ಒಂದು ಮೊಬೈಲ್ ನಂಬರ್ ಕಳ್ಳತನ ದಿನ ಸ್ವಿಚ್ಡ್ ಆಫ್ ಬರುತ್ತೆ, ಸ್ವಿಚ್ ಆಫ್ ಇರೋ ನಂಬರ್ ಐಎಂಇಐ ಮೇಲೆ ತನಿಖೆ ಬಡೆಸಿದಾಗ ಆರೋಪಿ ಶೇಖ್ ಸಲ್ಮಾನ್ ಸಿಕ್ಕಿಬಿದ್ದಿದ್ದಾನೆ. ಆರೋಪಿಯನ್ನ ತೀವ್ರ ವಿಚಾರಣೆಗೆ ಒಳಪಡಿಸಿದಾಗ ತಂಗಿ ಮದುವೆಗಾಗಿ ಕಳ್ಳತನ ಮಾಡಿರುವುದಾಗಿ ತಿಳಿಸಿದ್ದು, ಕದ್ದ ಚಿನ್ನಾಭರಣವನ್ನು ಬೆಂಗಳೂರು, ರಾಮನಗರ ಸೇರಿದಂತೆ ವಿವಿಧೆಡೆ ಅಡಮಾನವಿಡಲು ಸ್ನೇಹಿತ ತಬರೇಜ್ ಖಾನ್‌ನ ಸಹಾಯ ಪಡೆದಿರುವುದಾಗಿ ತಿಳಿಸಿದ್ದಾನೆ.
ಇದನ್ನು ಓದಿ: ಅತ್ತೆ ಜೊತೆ ಅಳಿಯ ಲವ್ವಿಡವ್ವಿ, ಅಳಿಯನಿಗೆ ಮಾವ ಸ್ಕೆಚ್, ಹೊಳೆಯ ದಡದಲ್ಲಿ ಕೊಲೆಯಾದ ಪ್ರಿಯತಮ
ನಾಲ್ಕು ದಿನಗಳ ಸ್ಕೆಚ್
ಕಳ್ಳತನ ಮಾಡಲು ನಾಲ್ಕು ದಿನಗಳ ಹಿಂದಿನಿಂದ ಛಾಯಾಶಂಕರ್ ಮನೆಯ ಹಿಂಬದಿ ಇರುವ ಮಂಜುನಾಥ್ ಬೇಕರಿ ಬಳಿ ಕುಳಿತು ಗಮನಿಸುತ್ತಿದ್ದ ಎನ್ನಲಾಗಿದ್ದು, ಸದ್ಯ ಆರೋಪಿಗಳನ್ನ ವಶಕ್ಕೆ ಪಡೆದ ಪೊಲೀಸರು 15 ಲಕ್ಷ ಮೌಲ್ಯದ 300 ಗ್ರಾಂ ಚಿನ್ನಾಭರಣ, 1500 ಗ್ರಾಂ ಬೆಳ್ಳಿ, 2 ಕ್ಯಾಮೆರಾ, ದುಬಾರಿ ಬೆಲೆ ಬಾಳುವ 5 ವಾಚ್‌ಗಳನ್ನ ವಶಕ್ಕೆ ಪಡೆದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ