ಬೆಂಗಳೂರು: ಪ್ರೀತಿ (Love) ಮಾಡುವುದರಲ್ಲಿ ತಪ್ಪೇನಿಲ್ಲ, ಆದರೆ ಪ್ರೀತಿ ಮಾಡುವವರು ಮಾಡಿಕೊಳ್ಳುವ ವ್ಯಕ್ತಿಯ ಆಯ್ಕೆ ಸರಿಯಾಗಿರಬೇಕು. ಪ್ರತಿಯೊಬ್ಬರು ತಾವು ಪ್ರೀತಿ ಮಾಡುವವರು ತಮಗಿಂತ ಎಲ್ಲಾ ವಿಚಾರದಲ್ಲಿಯೂ ಮೇಲಿರಬೇಕು ಎಂದು ಬಯಸುತ್ತಾರೆ. ತಮ್ಮ ಪ್ರೀತಿ ನಿಜವಾಗಿದ್ದರೆ, ತಾವು ಪ್ರೀತಿಸುವವರನ್ನು ತಪ್ಪು ಮಾಡಿದರೂ ಅವರ ಕೈ ಬಿಡದೇ ಸರಿ ದಾರಿಯಲ್ಲಿ ನಡೆಸುವವರೇ ನಿಜವಾದ ಪ್ರೇಮಿ. ಆದರೆ ತಪ್ಪು ಹಾದಿಯಲ್ಲಿ ಸಾಗುತ್ತಿದ್ದ ತನ್ನ ಪ್ರಿಯಕರನನ್ನು (Lover) ಸರಿಯಾದ ದಾರಿಯಲ್ಲಿ ನಡೆಸಲು ಪ್ರಯತ್ನಿಸಿದ್ದಕ್ಕೆ, ಯುವತಿಯ ಬೈಕ್ನ್ನೇ (Bike) ಪ್ರೇಮಿಯೊಬ್ಬ ಸುಟ್ಟು ಹಾಕಿರುವ ಘಟನೆ ಬೆಂಗಳೂರಿನಲ್ಲಿ(Bengaluru) ನಡೆದಿದೆ.
ಡ್ರಗ್ ಪೆಡ್ಲಿಂಗ್ ಮಾಡುತ್ತಿದ್ದ ಪ್ರಿಯಕರ
ಯೆಸ್, ಡ್ರಗ್ ಪೆಡ್ಲಿಂಗ್ ಮಾಡುತ್ತಿದ್ದ ಪ್ರಿಯಕರನನ್ನು ಬದಲಾಯಿಸಲು ಪ್ರಯತ್ನಿಸಿದ ಯುವತಿಯ ಬೈಕ್ ಅನ್ನು ಪ್ರಿಯಕರನೇ ಸುಟ್ಟು ಹಾಕಿರುವ ಘಟನೆ ಹಲಸೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಡ್ರಗ್ ಪ್ಲೆಡ್ಲಿಂಗ್ ಬಿಡುವಂತೆ ವಿಕ್ರಮ್ಗೆ ಒತ್ತಾಯಿಸಿದ್ದ ಯುವತಿ
ಆರೋಪಿಯನ್ನು ವಿಕ್ರಮ್ ಎಂದು ಗುರುತಿಸಲಾಗಿದೆ. ವಿಕ್ರಮ್ ಮೂರು ವರ್ಷಗಳಿಂದ ಯುವತಿಯೊಬ್ಬಳನ್ನು ಪ್ರೀತಿ ಮಾಡುತ್ತಿದ್ದ. ವಿಕ್ರಮ್ ಮಾಡುತ್ತಿದ್ದ ಅಕ್ರಮಗಳ ಕುರಿತಂತೆ ಪ್ರೇಯಸಿಗೆ ತಿಳಿದಿತ್ತು. ಬಿಟಿಎಂ ಲೇಔಟ್ , ಮಡಿವಾಳ, ಕೋರಮಂಗಲ ಕಡೆಗಳಲ್ಲಿ ವಿಕ್ರಮ್ ಡ್ರಗ್ ಪೆಡ್ಲಿಂಗ್ ಮಾಡುತ್ತಿದ್ದ. ಅನೇಕ ಬಾರಿ ಡ್ರಗ್ ಪೆಡ್ಲಿಂಗ್ ಬಿಡುವಂತೆ ಯುವತಿ ವಿಕ್ರಮ್ಗೆ ಹೇಳಿದ್ದಳು. ಆದರೆ ಎಷ್ಟು ಸಾರಿ ಹೇಳಿದರೂ, ವಿಕ್ರಮ್ ಮಾತ್ರ ಎಂದಿನಂತೆ ಡ್ರಗ್ ಪೆಡ್ಲಿಂಗ್ ಮಾಡುವುದನ್ನು ಬಿಟ್ಟಿರಲಿಲ್ಲ.
ಕೊನೆಗೆ ಪ್ರಿಯಕರನ್ನು ಬದಲಾಯಿಸಲು ನಿರ್ಧರಿಸಿದ ಯುವತಿ, ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲು ಮುಂದಾದಳು. ಒಮ್ಮೆ ಅರೆಸ್ಟ್ ಆದರೂ ಪರವಾಗಿಲ್ಲ. ಬದಲಾದರೆ ಸಾಕು ಎಂದು ಯುವತಿ ಅಂದುಕೊಂಡಿದ್ದಳು.
ಹೇಗಾದರೂ ಮಾಡಿ ನನ್ನ ಪ್ರಿಯಕರನನ್ನು ಬದಲಾಯಿಸಿ
ಹೀಗಾಗಿ ಯುವತಿ ಪೊಲೀಸರಿಗೆ ಕರೆ ಮಾಡಿ, ಹೇಗಾದರೂ ಮಾಡಿ ನನ್ನ ಪ್ರಿಯಕರನನ್ನು ಬದಲಾಯಿಸಿ ಎಂದು. ಆತ ನಡೆಸುತ್ತಿದ್ದ ಅಕ್ರಮಗಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಳು. ನಂತರ ಮಾಹಿತಿ ಪಡೆದ ಮಡಿವಾಳ ಪೊಲೀಸರು ಮಾಲು ಸಮೇತ ವಿಕ್ರಮ್ನನ್ನು ಬಂಧಿಸಿದ್ದರು.
ಇದನ್ನೂ ಓದಿ: Thailand: ಡ್ರಗ್ಸ್ ಟೆಸ್ಟ್ ವೇಳೆ ಸಿಕ್ಕಿ ಬಿದ್ದ ಬೌದ್ಧ ಸನ್ಯಾಸಿಗಳು, ದೇಗುಲವೀಗ ಖಾಲಿ ಖಾಲಿ!
ಸುಮಾರು ಎಂಟು ತಿಂಗಳು ವಿಕ್ರಮ್ ಜೈಲಿನಲ್ಲಿ ಶಿಕ್ಷೆ ಅನುಭವಿಸಿ, ಕಳೆದ ವಾರವಷ್ಟೇ ಬಿಡುಗಡೆಯಾಗಿದ್ದ. ಬಿಡುಗಡೆಯಾದ ಬಳಿಕ ತನ್ನ ಪ್ರೇಯಸಿಯೇ ತಾನು ನಡೆಸುತ್ತಿದ್ದ ಅಕ್ರಮಗಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ ಎಂಬ ವಿಚಾರ ವಿಕ್ರಮ್ಗೆ ತಿಳಿದು ಬಂದಿದೆ.
ಯುವತಿ ಇಲ್ಲದಿದ್ದಾಗ ಆಕೆಯ ಬೈಕ್ ಸುಟ್ಟು ಎಸ್ಕೇಪ್ ಆದ ವಿಕ್ರಂ
ಇದರಿಂದ ಕೋಪಗೊಂಡ ವಿಕ್ರಮ್ 12ನೇ ತಾರೀಖು ಹಲಸೂರಿನಲ್ಲಿರುವ ಯುವತಿ ಮನೆಗೆ ಪೆಟ್ರೋಲ್ ತೆಗೆದುಕೊಂಡು ಹೋಗಿದ್ದಾನೆ. ಯುವತಿ ಇಲ್ಲದಿದ್ದಾಗ ಆಕೆಯ ಬೈಕ್ಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ, ಸುಟ್ಟು ಹಾಕಿ ಎಸ್ಕೇಪ್ ಆಗಿದ್ದಾನೆ.
ಬೈಕ್ ಸುಟ್ಟು ಎಸ್ಕೇಪ್ ಆಗೋ ದೃಶ್ಯ ಸಿಸಿಕ್ಯಾಮರದಲ್ಲಿ ಸೆರೆ
ಈ ಎಲ್ಲಾ ಕೃತ್ಯದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈ ಸಂಬಂಧ ಹಲಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇದೀಗ ಆರೋಪಿ ವಿಕ್ರಮ್ ಅನ್ನು ಮತ್ತೆ ಬಂಧಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ