ಚಿಕ್ಕಬಳ್ಳಾಪುರ(ನ.28): ಅತಿ ವೇಗದಿಂದ ಬಂದ ಲಾರಿ ರಸ್ತೆ ಹಂಪ್ ನಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ದಾಟುತ್ತಿದ್ದ ಕಾರು, ರಸ್ತೆ ಬದಿ ನಿಂತಿದ್ದ ಕಾರುಗಳು ಸೇರಿದಂತೆ ಗುದ್ದಿ ಟೀ ಅಂಗಡಿಗೆ ನುಗ್ಗಿದ ಪರಿಣಾಮ ಐವರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ಹೊರವಲಯದ ರಾಷ್ಟ್ರೀಯ ಹೆದ್ದಾರಿ ಏಳರ ಚದಲಪುರ ಗೇಟ್ ನಲ್ಲಿ ನಡೆದಿದೆ. ಈ ಘಟನೆಯಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಚಿಕ್ಕಬಳ್ಳಾಪುರ ಮೂಲದ ವಕೀಲ ಯಮುನಾಚಾರಿ, ಬೆಂಗಳೂರು ಮೂಲದ ಕಲಾಂಜಿಯಮ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ದೊಡ್ಡಬಳ್ಳಾಪುರ ಮೂಲದ ನಿತೀಶ್ ಗೌಡ, ಚಿಕ್ಕಬಳ್ಳಾಪುರ ತಾಲ್ಲೂಕಿನ ಗವಿಗಾನಹಳ್ಳಿಯ ವೆಂಕಟೇಶ್ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯದಲ್ಲಿ ಸಾವನ್ನಪ್ಪಿದ್ದಾರೆ. ಇನ್ನು, ರಂಗಪ್ಪ ಎಂಬ ಕೂಲಿ ಕಾರ್ಮಿಕ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಹೃದಯ ವಿದ್ರಾವಕ ಘಟನೆ ನಡೆದಿದೆ.
ಬೆಂಗಳೂರಿನಿಂದ ಹೈದರಾಬಾದ್ ಗೆ ತೆರಳಲು ಅತಿವೇಗದಲ್ಲಿ ಬರುತ್ತಿದ್ದ ಕಂಟೈನರ್ ಲಾರಿ ಚದುಲಪುರ ಗೇಟ್ ಬಳಿ ರಾಷ್ಟ್ರೀಯ ಹೆದ್ದಾರಿ 7ರಲ್ಲಿ ಹಾಕಿರುವ ಹಂಪ್ ನಿಂದ ಹಾರಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ದಾಟುತ್ತಿದ್ದ ಸ್ವಿಪ್ಟ್ ಕಾರಿಗೆ ಗುದ್ದಿ, ಅಲ್ಲಿಯೇ ರಸ್ತೆ ಬದಿ ನಿಲ್ಲಿಸಿದ್ದ ನೆಕ್ಸಾ ಕಾರ್ ಮತ್ತು ಸ್ವಿಫ್ಟ್ ಕಾರಿಗೆ ಗುದ್ದಿದೆ. ಚಾಲಕನ ನಿಂತ್ರಣ ತಪ್ಪಿ ರಸ್ತೆ ಪಕ್ಕದಲ್ಲೆ ಇದ್ದ ಕೃಷ್ಣ ಕಾಂಡಿಮೆಂಟ್ಸ್ ಮತ್ತು ಪಕ್ಕದ ಟೀ ಅಂಗಡಿಗೆ ನುಗ್ಗಿದೆ. ರಸ್ತೆ ದಾಟುತ್ತಿದ್ದ ಸ್ವಿಪ್ಟ್ ಕಾರಿನಲ್ಲಿದ್ದ ವಕೀಲ ಯಮುನಾಚಾರಿ , ವೆಂಕಟೇಶ್ ಮೃತರಾಗಿದ್ದು ಜಿ.ಹೆಚ್.ಮುನಿಯಪ್ಪ ತೀವ್ರ ಗಾಯಗೊಂಡಿದ್ದಾರೆ.
ಭಾರತದ ಆರ್ಥಿಕತೆ ನಿರೀಕ್ಷಿತ ಚೇತರಿಕೆ ಇಲ್ಲ; ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಶೇ 7.5 ಕುಸಿತ
ಕೃಷ್ಣ ಕಾಂಡಿಮೆಂಟ್ಸ್ ಮುಂದೆ ನೆಕ್ಸಾ ಕಾರ್ ನಿಲ್ಲಿಸಿ ಟೀ ಕುಡಿಯುತ್ತಿದ್ದ ನಿತೀಶ್ ಗೌಡ, ಕಲಾಂಜಿಯಮ್ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು ಮತ್ತೊಬ್ಬನ ಸ್ಥಿತಿ ಚಿಂತಾಜನಕವಾಗಿದೆ. ಗಾಯಾಳುಗಳಿಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ರವಾನಿಸಿದ್ದಾರೆ. ಘಟನೆಯಲ್ಲಿ ಅಂಗಡಿ ಕಾರುಗಳು ಹಾಗೂ ಲಾರಿ ನಜ್ಜುಗುಜ್ಜಾಗಿದ್ದು, ಅಪಘಾತಕ್ಕೆ ಲಾರಿಯ ಅತಿ ವೇಗ ಮತ್ತು ರಾಷ್ಟ್ರೀಯ ಹೆದ್ದಾರಿಯಲ್ಲಿ ಹಾಕಿರುವ ಅವಜ್ಞಾನಿಕ ರಸ್ತೆ ಉಬ್ಬು (ಹಂಪ್) ಕಾರಣ ಎನ್ನಲಾಗಿದೆ.
ಸ್ಥಳಕ್ಕೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಂದಿಗಿರಿಧಾಮ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಅಷ್ಟಕ್ಕೂ ತನ್ನದಲ್ಲದ ತಪ್ಪಿಗೆ ಐದು ಅಮಾಯಕ ಜೀವಗಳು ಬಲಿಯಾಗಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ