Belagavi Dispute: ಕುಕೃತ್ಯಗಳ ಸರಮಾಲೆ: ಬೆಳಗಾವಿಯಲ್ಲಿ ಇಲ್ಲಿಯವರೆಗೆ ಆಗಿದ್ದೇನು? ಒಂದು ವರದಿ

Incidents that led to Belgaum Burning: ಬೇಡವೆಂದರೂ ಕೇಳದೇ ಅಧಿವೇಶನಕ್ಕೆ ವಿರುದ್ಧವಾಗಿ ಎಂಇಎಸ್ ಮಹಾಮೇಳಾವ ನಡೆಸಿ ಬೆಳಗಾವಿಯನ್ನ ಮಹಾರಾಷ್ಟ್ರಕ್ಕೆ ಸೇರಿಸಬೇಕೆಂದು ಒತ್ತಾಯಿಸಿತು. ಇಲ್ಲಿ ಹೊತ್ತಿಕೊಂಡ ಕಿಡಿ ಈಗ ರೌದ್ರಾವತಾರ ತಾಳುತ್ತಿದೆ.

ಕನ್ನಡಪರ ಕಾರ್ಯಕರ್ತರು

ಕನ್ನಡಪರ ಕಾರ್ಯಕರ್ತರು

  • Share this:
ಬೆಂಗಳೂರು, ಡಿ. 20: ಕಳೆದ ಕೆಲ ದಿನಗಳಿಂದ ಬೆಳಗಾವಿಯಲ್ಲಿ ಪ್ರಕ್ಷುಬ್ದ ವಾತಾವರಣ ಮನೆಮಾಡಿದೆ. 1956ರಲ್ಲಿ ರಾಜ್ಯಗಳ ಮರುವಿಂಗಡಣೆ ಆದ ಬಳಿಕ ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳ ಮಧ್ಯೆ ಬೆಳಗಾವಿ ನಗರ ಬಗೆಹರಿಯದ ಸಮಸ್ಯೆಯಾಗಿದೆ, ವಿವಿಧ ರೀತಿಯ ಸಂಘರ್ಷಗಳಿಗೆ ಕಾರಣವಾಗಿದೆ. ಐದು ದಶಕದ ಹಿಂದೆಯೇ ಮಹಾಜನ್ ಆಯೋಗ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂದು ತನ್ನ ವರದಿಯಲ್ಲಿ ತಿಳಿಸಿತ್ತಾದರೂ ಮಹಾರಾಷ್ಟ್ರದ ಪ್ರಯತ್ನ ನಿಂತಿಲ್ಲ. ಈ ಬೆಳಗಾವಿ ಯಾರಿಗೆ ಸೇರಬೇಕು ಎನ್ನುವ ವಿಚಾರ ಸದ್ಯ ಸುಪ್ರೀಂ ಕೋರ್ಟ್ ಅಂಗಳದಲ್ಲಿದೆ.

ದಳವಿ ಮುಖಕ್ಕೆ ಮಸಿ: ವಾರದ ಹಿಂದೆ ಬೆಳಗಾವಿಯಲ್ಲಿ ವಿಧಾನಸಭೆಯ ಚಳಿಗಾಲದ ಅಧಿವೇಶನ ಆರಂಭಗೊಂಡಾಗ ಮಹಾರಾಷ್ಟ್ರ ಏಕೀಕರಣ ಸಮಿತಿ (MES) ಸಂಘಟನೆಯವರು ಅದಕ್ಕೆ ಪ್ರತಿಯಾಗಿ ಮಹಾಮೇಳಾವ ಆಯೋಜಿಸಿದರು. ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಅನುಮತಿ ನಿರಾಕರಿಸಿದ್ದರೂ ವ್ಯಾಕ್ಸಿನ್ ಡಿಪೋ ಬಳಿ ಮಹಾಮೇಳಾವ ನಡೆಸಲಾಯಿತು. ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿದ್ದು, ಇಲ್ಲಿ ಅಧಿವೇಶನ ನಡೆಸಬಾರದು ಎಂಬುದು ಎಂಇಎಸ್​ನ ವಿತಂಡ ವಾದ. ಆಗ ಕನ್ನಡಪರ ಸಂಘಟನೆಯವರು ಎಂಇಎಸ್ ಮುಖಂಡ ದೀಪಕ್ ದಳವಿ ಅವರ ಮುಖಕ್ಕೆ ಕಪ್ಪು ಮಸಿ ಮೆತ್ತಿ ಆಕ್ರೋಶ ವ್ಯಕ್ತಪಡಿಸಿದರು. ಇದಾದ ಬಳಿಕ ಪೊಲೀಸರು ಹತ್ತಾರು ಕನ್ನಡಪರ ಹೋರಾಟಗಾರರನ್ನ ಬಂಧಿಸಿ ಅವರ ಮೇಲೆ ಕೊಲೆ ಆರೋಪದ ಪ್ರಕರಣ ದಾಖಲಿಸಿದರು. ಸರ್ಕಾರದ ಈ ಕ್ರಮಕ್ಕೆ ರಾಜ್ಯವ್ಯಾಪಿ ಖಂಡನೆ ವ್ಯಕ್ತವಾಯಿತು.

ಕನ್ನಡ ಧ್ವಜ ಸುಟ್ಟ ದುರುಳರು: ಈ ಘಟನೆ ನಡೆದ ಮರುದಿನ ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಕೆಲ ಮರಾಠಿ ಸಂಘಟನೆಗಳು ಕನ್ನಡ ಧ್ವಜವನ್ನ ಸುಟ್ಟರು. ಈ ಘಟನೆಯನ್ನ ರಾಜ್ಯ ಸರ್ಕಾರ ಸೇರಿದಂತೆ ಪ್ರತಿಯೊಬ್ಬರೂ ಬಲವಾಗಿ ಖಂಡಿಸಿದರು. ಇದು ಇಷ್ಟಕ್ಕೆ ನಿಲ್ಲಲಿಲ್ಲ.

ಶಿವಾಜಿ, ರಾಯಣ್ಣ ಪ್ರತಿಮೆಗಳಿಗೆ ಘಾಸಿ:

ಒಂದು ದಿನದ ಬಳಿಕ ಕೆಲ ಕನ್ನಡಪರ ಕಾರ್ಯಕರ್ತರು ಬೆಂಗಳೂರಿನಲ್ಲಿ ಶಿವಾಜಿಯ ಪ್ರತಿಮೆಯ ಮೇಲೆ ದಾಳಿ ಮಾಡಲು ಯತ್ನಿಸಿದರು. ಇದಕ್ಕೆ ಪ್ರತೀಕಾರವೆಂಬಂತೆ ಎಂಇಎಸ್​ನವರು ಬೆಳಗಾವಿಯ ಆನುಗೋಳದಲ್ಲಿರುವ ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನ ಧ್ವಂಸ ಮಾಡಿದ್ದಾರೆ. 19ನೇ ಶತಮಾನದ ಆರಂಭಕಾಲಘಟ್ಟದಲ್ಲಿದ್ದ ಹಾಗೂ ನಮ್ಮ ರಾಜ್ಯ ಕಂಡ ಅತ್ಯಂತ ವೀರ ಸ್ವಾತಂತ್ರ್ಯ ಹೋರಾಟಗಾರನೆನಿಸಿದ್ದ ಸಂಗೊಳ್ಳಿ ರಾಯಣ್ಣ ಅವರಿಗೆ ನಮ್ಮ ರಾಜ್ಯದ ಜನಮಾನಸದಲ್ಲಿ ವಿಶಿಷ್ಟ ಸ್ಥಾನವಿದೆ. ಇಂಥವರ ಪ್ರತಿಮೆ ಹಾಳು ಮಾಡಿದ ಘಟನೆಯಿಂದ ರೊಚ್ಚಿಗೆದ್ದ ಕನ್ನಡಪರ ಸಂಘಟನೆಗಳು ಎಂಇಎಸ್ ಅನ್ನು ನಿಷೇಧಿಸಬೇಕೆಂದು ಬೇಡಿಕೆ ಇಟ್ಟಿವೆ. ಮಹಾರಾಷ್ಟ್ರದಲ್ಲಿ ಕನ್ನಡ ದ್ವಜ ಸುಟ್ಟ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿವೆ.

ಇದನ್ನೂ ಓದಿ: MES ಪುಂಡಾಟ, ಬೆಳಗಾವಿ ಚಲೋ: ರಾಯಣ್ಣ ಪ್ರತಿಮೆ ಮುಂದೆ ಶಿವಸೇನೆ ಬಾವುಟಕ್ಕೆ ಬೆಂಕಿ: ಇತ್ತ ಕಾಂಗ್ರೆಸ್ ವಿರುದ್ಧ ಬಿಜೆಪಿ ಟ್ವೀಟ್ ವಾರ್

ಎಂಇಎಸ್ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೀಡಿದ ಭರವಸೆ ಕನ್ನಡಪರ ಹೋರಾಟಗಾರರ ಆಕ್ರೋಶವನ್ನು ತಣಿಸಲು ಆಗಲಿಲ್ಲ. ಎಂಇಎಸ್​ನಂಥ ನಾಡದ್ರೋಹಿ ಸಂಘಟನೆಗಳ ವಿರುದ್ಧ ಕ್ರಮ ಕೈಗೊಳ್ಳುವ ಮನಸ್ಸಾಗಲೀ, ಇಚ್ಛಾಶಕ್ತಿಯಾಗಲೀ ಸಿಎಂ ಬೊಮ್ಮಾಯಿ ಅವರಿಗೆ ಇಲ್ಲ ಎಂಬ ಬೇಗುದಿಯಲ್ಲಿ ಹೋರಾಟಗಾರರಿದ್ದಾರೆ.

ಠಾಕ್ರೆ ಇಬ್ಬಗೆ ಧೋರಣೆಗ ಖಂಡನೆ:

ಇದೇ ವೇಳೆ, ಬೆಂಗಳೂರಿನಲ್ಲಿ ಶಿವಾಜಿ ಪ್ರತಿಮೆ ಮೇಲೆ ನಡೆದ ದಾಳಿ ಘಟನೆಯನ್ನ ರಾಜ್ಯದ ರಾಜಕೀಯ ಮುಖಂಡರೆಲ್ಲರೂ ಪಕ್ಷಭೇದ ಇಲ್ಲದೇ ಖಂಡಿಸಿದ್ದಾರೆ. ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಈ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ಧಾರೆ. ಆದರೆ, ರಾಯಣ್ಣ ಪ್ರತಿಮೆಯನ್ನ ಹಾಳುವ ಮಾಡಿದ ಘಟನೆ ಬಗ್ಗೆ ಮಹಾ ಸಿಎಂ ಏನೂ ಹೇಳದೇ ಹೋಗಿದ್ದು ಕನ್ನಡಪರ ಕಾರ್ಯಕರ್ತರನ್ನ ಕೆರಳಿಸಿದೆ. ಇನ್ನೂರು ವರ್ಷಗಳ ಹಿಂದೆ ಬ್ರಿಟಿಷರು ನೇಣುಗಂಬಕ್ಕೇರಿಸಿದ್ದ ಸಂಗೊಳ್ಳಿ ರಾಯಣ್ಣ ಬಗ್ಗೆ ಠಾಕ್ರೆ ಗೌರವವಾದರೂ ನೀಡಬೇಕಿತ್ತು ಎಂಬುದು ಕನ್ನಡಿಗರ ಭಾವನೆ.

ಕ.ರ.ವೇ. ಅಧ್ಯಕ್ಷರ ಕಿಡಿ:

ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣಗೌಡ ಅವರು “ಸರ್ಕಾರ ಈ ವಿವಾದದಲ್ಲಿ ಮೃದು ಧೋರಣೆ ಹೊಂದಿದೆ. ಎಂಇಎಸ್ ಪುಂಡರ ವಿರುದ್ಧ ಕ್ರಮ ತೆಗೆದುಕೊಳ್ಳುವ ಬದಲು ಕನ್ನಡಪರ ಕಾರ್ಯಕರ್ತರನ್ನ ಜೈಲಿಗೆ ಕಳುಹಿಸಿ ಕಿರುಕುಳ ನೀಡುತ್ತಿದೆ. ರಾಜಕೀಯ ಲಾಭಕ್ಕೋಸ್ಕರ ಮಹಾರಾಷ್ಟ್ರ ಪರ ಇರುವ ಜನರ ಓಲೈಕೆಗೆ ಪ್ರಯತ್ನಿಸುತ್ತಿದ್ದಾರೆ. ನಾವು ಈ ನಾಡದ್ರೋಹಿಗಳ ವಿರುದ್ಧ ನಮ್ಮ ಹೋರಾಟ ಮುಂದುವರಿಸುತ್ತೇವೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ನೀನು ಕಂಡ ಕನಸುಗಳೆಲ್ಲ ನನಸಾಗಲಿ: ಸೋದರ ಡಿ.ಕೆ.ಸುರೇಶ್ ಹುಟ್ಟುಹಬ್ಬಕ್ಕೆ ಡಿ.ಕೆ.ಶಿವಕುಮಾರ್ ವಿಶ್

ಕುಮಾರಸ್ವಾಮಿ ಆಕ್ರೋಶ:

ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಕೂಡ ಸರ್ಕಾರದ ವಿರುದ್ಧ ಖಾರವಾಗಿ ಪ್ರತಿಕ್ರಿಯಿಸಿದ್ಧಾರೆ. ನಾಡದ್ರೋಹಿಗಳ ವಿರುದ್ಧ ಕ್ರಮ ಕೈಗೊಳ್ಳಲು ಬಿಜೆಪಿಗೆ ಮನಸಿಲ್ಲ. ಎಂಇಎಸ್ ಬಗ್ಗೆ ಬಿಜೆಪಿಗೆ ಮೃದುಧೋರಣೆ ಇದೆ ಎಂದು ಹೆಚ್​ಡಿಕೆ ಆರೋಪಿಸಿದ್ಧಾರೆ. ಆದರೆ, ಕುಮಾರಸ್ವಾಮಿ ಆರೋಪ ಬಾಲಿಶವಾದುದು ಎಂದು ತಿರುಗೇಟು ನೀಡಿರುವ ಯಡಿಯೂರಪ್ಪ, ಎಂಇಎಸ್ ಕಾರ್ಯಕರ್ತರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಿಎಂ ಬೊಮ್ಮಾಯಿ ಅವರನ್ನ ಒತ್ತಾಯಿಸಿದ್ದಾರೆ.

ಕರ್ನಾಟಕದ ಬಸ್ಸುಗಳ ಮೇಲೆ ಮಹಾರಾಷ್ಟ್ರದಲ್ಲಿ ಕಲ್ಲೆಸೆತ:

ಈ ಬೆಳವಣಿಗೆಗಳ ಬೆನ್ನಲ್ಲೇ ಮಹಾರಾಷ್ಟ್ರದಲ್ಲಿ ಕೆಲ ದುರುಳರು ಕರ್ನಾಟಕ ರಾಜ್ಯ ಸಾರಿಗೆ ಬಸ್ಸುಗಳ ಮೇಲೆ ಕಲ್ಲು ತೂರಾಟ ನಡೆಸಿದ್ದು ವರದಿಯಾಗಿದೆ. ಮಹಾರಾಷ್ಟ್ರದಲ್ಲಿ ಕನ್ನಡಿಗು ಮತ್ತು ಅವರ ಆಸ್ತಿಪಾಸ್ತಿಯ ಸುರಕ್ಷತೆಗೆ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಮಹಾರಾಷ್ಟ್ರ ಪೊಲೀಸರೊಂದಿಗೆ ಸಂಪರ್ಕದಲ್ಲಿದ್ದು ನಿಗಾ ಇಡುವಂತೆ ಡಿಜಿಪಿ ಪ್ರವೀಣ್ ಸೂದ್ ಅವರಿಗೆ ಸಿಎಂ ಬೊಮ್ಮಾಯಿ ಸೂಚಿಸಿದ್ದಾರೆ.

ಎಂಇಎಸ್ ನಿಷೇಧಕ್ಕೆ ಕನ್ನಡಪರ ಸಂಘಟನೆಗಳ ಆಗ್ರಹ:

ಇದೇ ವೇಳೆ, ಎಂಇಎಸ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ತಾಳ್ಮೆ ಕಳೆದುಕೊಳ್ಳದೆ ಶಾಂತತೆ ಕಾಪಾಡಿ ಎಂದು ರಾಜ್ಯ ಸರ್ಕಾರ ಮನವಿ ಮಾಡಿದರೂ ಕನ್ನಡಪರ ಸಂಘಟನೆಗಳು ತಮ್ಮ ಪ್ರತಿಭಟನೆಗಳನ್ನ ಮುಂದುವರಿಸಿವೆ. ಎಂಇಎಸ್ ನಿಷೇಧಿಸಬೇಕು, ಆ ಸಂಘಟನೆಯ ಎಲ್ಲಾ ಮುಖಂಡರನ್ನೂ ಬಂಧಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಆದಿಯಾಗಿ ಕನ್ನಡಪರ ಸಂಘಟನೆಗಳ ಬೇಡಿಕೆ ಆಗಿದೆ.

ಇದನ್ನೂ ಓದಿ: ಕನ್ನಡಿಗರ ಮೇಲಿನ ದಬ್ಬಾಳಿಕೆ ಸಹಿಸಲ್ಲವೆಂದ ಪ್ರೇಮ್ - ಕಾನೂನು ಸುವ್ಯವಸ್ಥೆ ಹಾಳು ಮಾಡೋರಿಗೆ ಸಿಎಂ ಎಚ್ಚರಿಕೆ

ನೆಲೆ ಕಳೆದುಕೊಳ್ಳುತ್ತಿರುವ ಎಂಇಎಸ್:

ಕುತೂಹಲವೆಂದರೆ ಈ ಹಿಂದೆ ರಾಜ್ಯ ವಿಧಾನಸಭೆ ಚುನಾವಣೆಗಳಲ್ಲಿ ಬೆರಳೆಣಿಕೆಯಷ್ಟು ಸ್ಥಾನಗಳನ್ನ ಗೆಲ್ಲುತ್ತಿದ್ದ ಎಂಇಎಸ್ ಇತ್ತೀಚೆಗೆ ಒಂದೂ ಸೀಟು ಗೆಲ್ಲಲಾರದಷ್ಟು ನಿಕೃಷ್ಟ ಸ್ಥಿತಿಗೆ ಬಂದು ನಿಂತಿದೆ. ಹೀಗಾಗಿ ವಿವಾದಗಳ ಮೂಲಕ ಎಂಇಎಸ್ ತನ್ನ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಹೆಣಗಾಡುತ್ತಿರುವಂತಿದೆ.

ಬೆಳಗಾವಿಯ ಇತ್ತೀಚಿನ ಇತಿಹಾಸ:

1799ರಲ್ಲಿ ಬ್ರಿಟಿಷರ ವಿರುದ್ಧ ಟಿಪು ಸುಲ್ತಾನ್ ಸೋಲನುಭವಿಸಿದ ಬಳಿಕ ಬೆಳಗಾವಿ ಸೇರಿದಂತೆ ಆಗಿನ ಮೈಸೂರು ರಾಜ್ಯದ ನಾಲ್ಕು ಜಿಲ್ಲೆಗಳನ್ನ ಮರಾಠರಿಗೆ ಬಿಟ್ಟುಕೊಡಲಾಯಿತು. ನಂತರ ಇವು ಬ್ರಿಟಿಷರ ಬಾಂಬೆ ಪ್ರಾಂತ್ಯದ ಭಾಗವಾಗಿ 1947ರವರೆಗೆ ಬ್ರಿಟಿಷರ ಆಡಳಿತಕ್ಕೆ ಒಳಪಟ್ಟಿತು. 1956ರಲ್ಲಿ ಬೆಳಗಾವಿಯನ್ನ ಕರ್ನಾಟಕ ರಾಜ್ಯಕ್ಕೆ ಸೇರಿಸಲಾಯಿತು.

ವರದಿ: ಡಿ.ಪಿ. ಸತೀಶ್
Published by:Vijayasarthy SN
First published: