ಶಿವಮೊಗ್ಗ(ಅಕ್ಟೋಬರ್. 09): ಕೋವಿಡ್ ವಾರ್ಡ್ ಗಳಲ್ಲಿ ದಾಖಲಾಗಿರುವ ಸೋಂಕಿತರಿಗೆ ಏಕಾಂಗಿತನ ಕಾಡಬಾರದು. ಸೊಂಕಿತರಿಗೆ ಆಸ್ಪತ್ರೆಯಲ್ಲಿ ಒಂಟಿತನ ಕಾಡದಂತೆ ಅದರಿಂದ ದೂರ ಮಾಡಲು ವಿವಿಧ ರೀತಿಯಲ್ಲಿ ಹಲವು ಪ್ರಯತ್ನಗಳು ಮಾಡಲಾಗುತ್ತಿದೆ. ಅದೇ ರೀತಿ ಶಿವಮೊಗ್ಗ ಆಸ್ಪತ್ರೆಯಲ್ಲಿ ರಾಜ್ಯದಲ್ಲೇ ಮೊದಲು ಎಂಬಂತೆ, ವಿಶೇಷ ಪ್ರಯತ್ನ ಮಾಡಲಾಗಿದೆ. ಕೋವಿಡ್ ಸೋಂಕಿತರಲ್ಲಿ ಆತ್ಮವಿಶ್ವಾಸ ಮೂಡಿಸಲು, ಅವರಲ್ಲಿ ಜ್ಞಾನಾರ್ಜನೆ ಹೆಚ್ಚಿಸಲು ಈ ಪ್ರಯತ್ನ ಫಲಕಾರಿಯಾಗುತ್ತಿದೆ. ರಾಜ್ಯ ಸೇರಿದಂತೆ ಇಡೀ ದೇಶದಲ್ಲಿ ಈಗಾಗಲೇ, ಕೊರೋನಾ ಮಹಮಾರಿ ಅನಾಹುತವನ್ನೇ ಸೃಷ್ಟಿ ಮಾಡಿದೆ. ಸಾರ್ವಜನಿಕರು ಅತಂಕಕ್ಕೆ ಒಳಗಾಗುವಂತ ಮಾಡಿದೆ. ಸೋಂಕಿತರು ಹಾಗೂ ಅವರ ಕುಟುಂಬದಲ್ಲಿ ಇದೊಂದು ದೊಡ್ಡ ಆತಂಕವನ್ನೇ ಸೃಷ್ಟಿ ಮಾಡಿದೆ. ಕೋವಿಡ್ ಸೋಂಕಿತರಲ್ಲಿ ಆತ್ಮವಿಶ್ವಾಸ ಹೆಚ್ಚಿಸಲು ವಿವಿಧ ಆಸ್ಪತ್ರೆಗಳಲ್ಲಿ, ವಿವಿಧ ರೀತಿಯಲ್ಲಿ ಪ್ರಯತ್ನಗಳು ನಡೆಯುತ್ತಲೇ ಇವೆ. ಈ ನಡುವೆ, ಶಿವಮೊಗ್ಗ ಜಿಲ್ಲೆಯಲ್ಲಿ ರಾಜ್ಯದಲ್ಲೇ ಪ್ರಥಮ ಎಂಬಂತೆ, ವಿಶೇಷವಾದ ಪ್ರಯತ್ನವೊಂದನ್ನು ನಡೆಸುವ ಮೂಲಕ ಸೋಂಕಿತರಿಗೆ ಆತಂಕ ದೂರ ಮಾಡಲಾಗುತ್ತಿದೆ.
ಆರೋಗ್ಯ ಇಲಾಖೆ ಅಧಿಕಾರಿ ಮತ್ತು ನೌಕರರ ಸಂಘದಿಂದ ಶಿವಮೊಗ್ಗದ ಸಾಗರದ ಉಪವಿಭಾಗೀಯ ಆಸ್ಪತ್ರೆಯ ಕೋವಿಡ್ ವಾರ್ಡ್ ನಲ್ಲಿ, ಕೋವಿಡ್ ಗ್ರಂಥಾಲಯ ತೆರೆಯಲಾಗಿದೆ. ಈ ಮೂಲಕ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೋವಿಡ್ ಸೋಂಕಿತರಿಗೆ ಕಾಡಬಹುದಾದ ಒಂಟಿತನವನ್ನು ಏಕಾಂಗಿತನವನ್ನು ದೂರ ಮಾಡುವ ಒಂದು ಪ್ರಯತ್ನ ಮಾಡಲಾಗುತ್ತಿದೆ. ಅವರಲ್ಲಿ ಆತ್ಮವಿಶ್ವಾಸ ತುಂಬಲು, ಜ್ಞಾನವನ್ನು ಹೆಚ್ಚಿಸುವ ದೃಷ್ಟಿಯಿಂದ ಈ ಕೋವಿಡ್ ಗ್ರಂಥಾಲಯ ತೆರೆಯಲಾಗಿದ್ದು, ಸೋಂಕಿತರು ಇದರ ಸದುಪಯೋಗ ಪಡೆದುಕೊಳ್ಳಬೇಕಾಗಿದೆ.
ಕೋವಿಡ್-19 ಒಂದು ಆತಂಕದ ಕಾಯಿಲೆಯಾಗಿದೆ. ಸೋಂಕಿತರು ಆಸ್ಪತ್ರೆಗೆ ಸೇರಿದರೂ ಕೂಡ ಅವರ ಬಂದು ಬಳಗ, ಆಪ್ತರು, ಸ್ನೇಹಿತರು ಅವರನ್ನು ನೋಡಲು ಸಾಧ್ಯವಿಲ್ಲ. ಬಹುಪಾಲು ರೋಗಿಗಳು ಆತ್ಮವಿಶ್ವಾಸವನ್ನೇ ಕಳೆದುಕೊಳ್ಳುತ್ತಾರೆ. ಅನೇಕರು ಭಯದಲ್ಲೇ ಆಸ್ಪತ್ರೆಯಲ್ಲಿ ಇರುತ್ತಾರೆ. ಇವರ ನೆರವಿಗೆ ಪುಸ್ತಕಗಳಾದರೂ ಇರಲಿ ಎಂಬ ದೃಷ್ಟಿಯಿಂದ ಈ ಗ್ರಂಥಾಲಯ ಆರಂಭಿಸಲಾಗಿದೆ. ಇಂತಹ ಕೋವಿಡ್ ಗ್ರಂಥಾಲಯ ರಾಜ್ಯದಲ್ಲಿಯೇ ಪ್ರಥಮವಾಗಿದೆ.
ಇದನ್ನೂ ಓದಿ : ಪ್ರಧಾನಿ ನರೇಂದ್ರ ಮೋದಿಯವರ ತಪ್ಪುಗಳನ್ನು ಹುಡುಕುವುದೇ ನನ್ನ ಕೆಲಸವಲ್ಲ; ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ
ಇನ್ನು ಈ ಗ್ರಂಥಾಲಯದಲ್ಲಿ ಪುಸ್ತಕಗಳು, ಕಾದಂಬರಿ, ಕಥಾ ಸಂಕಲನಗಳಿವೆ. ಇದರ ಜೊತೆಗೆ, ಪ್ರತಿದಿನದ ಎಲ್ಲಾ ದಿನಪತ್ರಿಕೆಗಳು, ನಿಯತಕಾಲಿಕೆಗಳು ಇಲ್ಲಿ ಸಿಗುತ್ತವೆ. ಬಹುಪಾಲು ಸೋಂಕಿತರು ಪುಸ್ತಕಗಳನ್ನು ಓದುತ್ತಿದ್ದಾರೆ. ಇದೇ ರೀತಿ ಈಗ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಸಹ ಗ್ರಂಥಾಲಯ ತೆರೆಯಲು ಸಿದ್ಧತೆಗಳು ನಡೆದಿವೆ. ಜನರು ಸಹ ಈ ಗ್ರಂಥಾಲಯಗಳಿಗೆ ಪುಸ್ತಕ ನೀಡುವಂತೆ ಆರೋಗ್ಯ ಇಲಾಖೆ ಸಿಬ್ಬಂದಿಗಳು ಮನವಿ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ