ದಕ್ಷಿಣ ಕನ್ನಡ(ಏ.24): ರಾಜ್ಯದ ನಂಬರ್ ಒನ್ ಶ್ರೀಮಂತ ದೇವಸ್ಥಾನ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮತ್ತೆ ಅಕ್ರಮದ ಗಂಭೀರ ಆರೋಪ ಕೇಳಿ ಬಂದಿದೆ. ಕಳೆದ ಐದು ವರ್ಷಗಳಿಂದ ದೇವಸ್ಥಾನದ ಆದಾಯದ ಲೆಕ್ಕಪರಿಶೋಧನೆಯೇ ನಡೆದಿಲ್ಲ ಎಂದು ವಕೀಲರೊಬ್ಬರು ಮುಖ್ಯಮಂತ್ರಿಗಳಿಗೆ ದೂರು ನೀಡಿದ್ದಾರೆ. ಇದು ವಾರ್ಷಿಕ ಆದಾಯದಲ್ಲಿ ಭಾರೀ ಗೋಲ್ಮಾಲ್ ನಡೆದಿದೆಯಾ ಎಂಬ ಸಂಶಯಕ್ಕೆ ಕಾರಣವಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಪ್ರಸಿದ್ದ ನಾಗಕ್ಷೇತ್ರ ಕುಕ್ಕೆಸುಬ್ರಹ್ಮಣ್ಯಕ್ಕೆ ಕೇವಲ ರಾಜ್ಯ ಮಾತ್ರವಲ್ಲದೇ ಹೊರ ರಾಜ್ಯದಿಂದಲೂ ಸಾಕಷ್ಟು ಭಕ್ತರು ಬರುತ್ತಾರೆ. ಹೀಗಾಗಿ ರಾಜ್ಯದ ಅತೀ ಹೆಚ್ಚು ಆದಾಯವನ್ನು ಗಳಿಸುವ ನಂಬರ್ ಒನ್ ದೇವಸ್ಥಾನದಲ್ಲಿ ಪ್ರತಿವರ್ಷ ಕುಕ್ಕೆ ಹೆಸರೇ ಬರುತ್ತದೆ. ಆದ್ರೆ ಕಳೆದ ಐದು ವರ್ಷಗಳಲ್ಲಿ ಇಲ್ಲಿನ ಆದಾಯದ ಲೆಕ್ಕ ಪರಿಶೋಧನೆಯೇ ನಡೆದಿಲ್ಲವಂತೆ. ಹೀಗಾಗಿ ದೇವಸ್ಥಾನದ ಆಡಳಿತ ಮಂಡಳಿಯ ವಿರುದ್ಧ ಬೆಂಗಳೂರು ಮೂಲದ ವಕೀಲ ಶ್ರೀ ಹರಿ ಕುತ್ಸಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮತ್ತು ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರಿಗೆ ದೂರು ನೀಡಿದ್ದಾರೆ.
ದೇವಸ್ಥಾನದ ವಿರುದ್ಧದ ದೂರಿನಲ್ಲಿ ಪ್ರಮುಖ ಅಂಶಗಳ ಉಲ್ಲೇಖ ಮಾಡಿದ್ದಾರೆ. ಪ್ರತಿ ವರ್ಷ ಅಂದಾಜಿನ ಮಾಹಿತಿಯೇ ಕ್ಷೇತ್ರದ ಆಡಳಿತ ಮಂಡಳಿ ನೀಡುತ್ತಿದೆ. 5 ವರ್ಷಗಳಲ್ಲಿ 100 ಕೋಟಿಗೂ ಹೆಚ್ಚು ಹಣ ಸಂಗ್ರಹವಾದರೂ ಲೆಕ್ಕ ಪರಿಶೋಧನೆ ಆಗಿಲ್ಲ ಎಂದಿದ್ದಾರೆ.
2020-21ರ ಅವಧಿಯಲ್ಲಿ 68.94 ಕೋಟಿ ರೂ ಆದಾಯ ಸಂಗ್ರಹವಾಗಿದೆ ಎಂದು ಕೆಲ ದಿನಗಳ ಹಿಂದಷ್ಟೇ ದೇವಾಲಯ ನಿರ್ವಹಣಾ ಸಮಿತಿ ಅಧ್ಯಕ್ಷ ಮೋಹನ್ರಾಮ್ ಸುಲ್ಲಿ ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಿದ್ದರು. ಆದ್ರೆ ಆಡಿಟ್ ನಡೆಸದೇ ಈ ಲೆಕ್ಕ ಹೇಳಿರುವುದು ಭಾರೀ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಕಣ್ಣಳತೆಗೇ ಆದಾಯ ತೋರಿಸಿ ದೇವಸ್ಥಾನದ ಆಡಳಿತ ಮಂಡಳಿ ಲೆಕ್ಕ ಕೊಡುತ್ತಿದೆಯಾ ಎಂಬ ಅನುಮಾನ ಈಗ ಮೂಡುತ್ತಿದೆ.
ಚಿಕ್ಕಮಗಳೂರು: ಕಲ್ಯಾಣ ಮಂಟಪ ಬುಕ್ ಮಾಡಿದ್ದವರಿಗೆ ಅಡ್ವಾನ್ಸ್ ಹಣ ಕೊಡಲು ಮಾಲೀಕರ ಹಿಂದೇಟು
ಇನ್ನು ಈ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿರುವ ದೇವಸ್ಥಾನದ ಆಡಳಿತಾಧಿಕಾರಿಯಾಗಿದ್ದ ಪುತ್ತೂರು ಉಪವಿಭಾಗದ ಸಹಾಯಕ ಕಮೀಷನರ್ ಯತೀಶ್ ಉಳ್ಳಾಲ್ ಈ ದೂರಿನ ಬಗ್ಗೆ ಗಮನಕ್ಕೆ ಬಂದಿದೆ. ದೇವಳದ ಕಾರ್ಯನಿರ್ವಹಣಾಧಿಕಾರಿ, ನಿರ್ವಹಣಾ ಸಮಿತಿಯ ಅಧ್ಯಕ್ಷರಿಗೆ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ.
ದೇವಳದ ಚರಾಸ್ಥಿ, ಸ್ಥಿರಾಸ್ಥಿಗಳ ಬಗ್ಗೆಯು ಸರಿಯಾಗಿ ಲೆಕ್ಕವಿಟ್ಟಿಲ್ಲ,ಆದಾಯದ ಮೂಲಗಳ ಬಗ್ಗೆಯೂ ಸ್ಪಷ್ಟವಾಗಿ ನಮೋದಿಸಿಲ್ಲ ಎಂದು ದೂರುದಾರರು ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಒಟ್ಟಿನಲ್ಲಿ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕಿದ್ದು ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರು ಈ ಬಗ್ಗೆ ಕ್ರಮಕೈಗೊಳ್ಳಬೇಕಾಗಿದೆ.
ಪ್ರತಿವರ್ಷ ಅಂದಾಜಿನ ಮಾಹಿತಿಯೇ ಕ್ಷೇತ್ರದ ಆಡಳಿತ ಮಂಡಳಿ ನೀಡುತ್ತಿದೆ. 5 ವರ್ಷಗಳಲ್ಲಿ 100 ಕೋಟಿಗೂ ಹೆಚ್ಚು ಹಣ ಸಂಗ್ರಹವಾದರೂ ಲೆಕ್ಕ ಪರಿಶೋಧನೆ ಆಗದಿರೋದು ಭಾರೀ ಅನುಮಾನಕ್ಕೆ ಎಡಮಾಡಿಕೊಟ್ಟಿದೆ .ಕ್ಷೇತ್ರದ ಆಡಳಿತ ಮಂಡಳಿ 60 ಕೋಟಿಗೂ ಅಧಿಕ ರೂಪಾಯಿ ಪೋಲು ಮಾಡಿದೆ. ಕ್ಷೇತ್ರದ ಆಡಳಿತ ಮಂಡಳಿ ಧಾರ್ಮಿಕೇತರ ಚಟುವಟಿಕೆಗಳಿಗೆ ಹಣ ಪೋಲು ಮಾಡಿದೆ. ದೇಗುಲಕ್ಕೆ ಸಂಬಂಧಪಡದ ವ್ಯಕ್ಯಿಗಳು ದೇವಸ್ಥಾನದ ವ್ಯವಹಾರದಲ್ಲಿ ಭಾಗಿಯಾಗಿದ್ದಾರೆ.
ಕ್ಷೇತ್ರಕ್ಕೆ ಹರಕೆ ರೂಪದಲ್ಲಿಬಂದ ಚಿನ್ನ,ಬೆಳ್ಳಿ ಆಭರಣಗಳ ಬಗ್ಗೆ ಸಮರ್ಪಕವಾದ ಮಾಹಿತಿಯೇ ದೇವಸ್ಥಾನದ ಬಳಿ ಇಲ್ಲ. ದೇವಳಕ್ಕೆ ಬಂದ ಚಿನ್ನಾಭರಣವನ್ನು ಕರಗಿಸಲಾಗುತ್ತದೆ. ಕರಗಿಸದ ವೇಳೆ ಬಂದ ಒಳ್ಳೆಯ ಚಿನ್ನದ ಲೆಕ್ಕ ಮಾತ್ರ ಕೊಡಲಾಗಿದೆ. ಕರಗಿಸಿದ ವೇಳೆ ರಿಜೆಕ್ಟ್ ಆದ ಚಿನ್ನಾಭರಣದ ಲೆಕ್ಕವನ್ನು ಎಲ್ಲಿಯೂ ತೋರಿಸಿಲ್ಲ. ಈ ಲೆಕ್ಕವೇ ಲಕ್ಷಾಂತರ ರೂಪಾಯಿ ರೂಪದಲ್ಲಿ ಇರಬೇಕಿದೆ.
ಇನ್ನು ದೇವಸ್ಥಾನಕ್ಕೆ ಸಂಬಂಧಿಸಿದ ಅಂಗಡಿ ಬಾಡಿಗೆ, ಕಟ್ಟಡ ನಿರ್ವಹಣೆ ಬಗ್ಗೆ ದೇವಸ್ಥಾನ ದ ಆಡಳಿತ ಮಂಡಳಿ ಪ್ರತಿವರ್ಷ ಹರಾಜು ಪ್ರಕ್ರಿಯೆ ಮಾಡಬೇಕು. ಆದರೆ ಸುಬ್ರಹ್ಮಣ್ಯ ದಲ್ಲಿ ಈ ಪ್ರಕ್ರಿಯೆ ಯಾವುದೂ ನಡೆಯುತ್ತಿಲ್ಲ .ಹಲವು ವರ್ಷಗಳಿಂದ ಇದ್ದವರೇ ಈ ಆಸ್ತಿಯನ್ನು ನೋಡಿಕೊಳ್ಳುತ್ತಿದ್ದಾರೆ. ಸಮರ್ಪಕವಾಗಿ ಬಾಡಿಗೆಯನ್ನೂ ಯಾರೂ ನೀಡುತ್ತಿಲ್ಲ ಅಂತಾ ವಕೀಲ ಶ್ರೀಹರಿ ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ. ಕ್ಷೇತ್ರದಲ್ಲಿ ಕಾನೂನು ಬಾಹಿರ ಚಟುವಟಿಕೆಗಳು ನಡೆದಿದ್ದು,ಸರ್ಕಾರ ತನಿಖೆ ಮಾಡಬೇಕು ಅಂತಾ ಮುಖ್ಯಮಂತ್ರಿ ಗಳಿಗೆ ಕೊಟ್ಟ ದೂರಿನಲ್ಲಿ ಶ್ರೀ ಹರಿ ಕುತ್ಸ ಉಲ್ಲೇಖ ಮಾಡಿದ್ದಾರೆ.
ವಾರ್ಷಿಕ ಆದಾಯವನ್ನು ಕೇವಲ ಅಂದಾಜಿಸಿ ಬಿಡುಗಡೆ ಮಾಡುತ್ತಿದ್ದ ಕ್ಷೇತ್ರದ ಆಡಳಿತ ಮಂಡಳಿ ವಿರುದ್ಧ ಅನುಮಾನ ಮೂಡಿದ್ದು,ಕಳೆದ 5 ವರ್ಷಗಳಲ್ಲಿ ಕೊಡುತ್ತಿದ್ದ ಲೆಕ್ಕ ಕೇವಲ ಅಂದಾಜಿನ ಲೆಕ್ಕಾಚಾರ ಮಾತ್ರ ಕೊಡುತ್ತಿದೆ. ಈ ವರ್ಷ 68 ಕೋಟಿ ರೂಪಾಯಿ ಆದಾಯ ಅಂತಾ ಹೇಳಿದ್ದ ದೇವಳದ ಆಡಳಿತ ಮಂಡಳಿ ಕಳೆದ ಐದು ವರ್ಷಗಳಲ್ಲೂ ಅಂದಾಜಿನ ಲೆಕ್ಕವನ್ನು ಮಾತ್ರ ನೀಡಿತ್ತಾ ಎಂಬ ಅನುಮಾನ ಕಾಡಲಾರಂಭಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ