ಬಿಸಿಯೂಟ ಕಾರ್ಯಕರ್ತೆಗೆ ಒಲಿದು ಬಂದ ಅದೃಷ್ಟ; ಗಂಡನ ಜೊತೆ ಉದ್ಯೋಗ ಅರಸಿ ಬಂದಾಕೆ ಈಗ ಗ್ರಾ.ಪಂ.ಗೆ ಅವಿರೋಧ ಆಯ್ಕೆ

ಈ ಬಾರಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ 7ನೇ ವಾರ್ಡು ಎಸ್. ಟಿ. ಮಹಿಳೆಗೆ ಮೀಸಲಾಗಿತ್ತು.  ಇಡೀ ಊರಲ್ಲಿ ಇರುವ ಎಸ್. ಟಿ. ಸಮುದಾಯದ ಒಂದೇ ಮನೆ ಇವರದಾಗಿದ್ದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಈಕೆಯನ್ನು ಚುನಾವಣೆಗೆ ಸ್ಪರ್ಧಿಸಲು ಕೇಳಿದ್ದರು. 

ಬಿಸಿಯೂಟ ಕಾರ್ಯಕರ್ತೆ

ಬಿಸಿಯೂಟ ಕಾರ್ಯಕರ್ತೆ

  • Share this:
ವಿಜಯಪುರ (ಡಿ. 26):  ರಾಜಕೀಯದಲ್ಲಿ ಯಾರ ಅದೃಷ್ಠ ಯಾವಾಗ ತೆರೆಯುತ್ತದೆ.  ಯಾರಿಗೆ ಬಯಸದೇ ಭಾಗ್ಯ ಬರುತ್ತೆ ಎಂಬುದು ಗೊತ್ತಿಲ್ಲ ಎಂಬುದಕ್ಕೆ ಈ ಪ್ರಕರಣ ಪ್ರತ್ಯಕ್ಷ ಸಾಕ್ಷಿ. ಗಂಡನ ಜೊತೆ ಉದ್ಯೋಗ ಅರಸಿ ಬಂದಿದ್ದ ಮಹಿಳೆಗೆ ಗ್ರಾಮ ಪಂಚಾಯಿತಿ ಸ್ಥಾನ ಅನಾಯಾಸವಾಗಿ ದೊರೆತ ಸ್ಟೋರಿ ಇದು.  ಬಸವನಾಡುವ ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿ ತಾಲೂಕಿನಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ಎರಡನೇ ಹಂತದಲ್ಲಿ ನಡೆಯುತ್ತಿದೆ.  ಈ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ವಿಶಿಷ್ಠ ಪ್ರಕರಣವೊಂದು ಗಮನ ಸೆಳೆದಿದೆ.

ಅಡುಗೆ ಸಹಾಯಕಿಗೆ ಬಯಸದೇ ಭಾಗ್ಯ ಎಂಬಂತೆ ಅದೃಷ್ಠ ಒಲಿದು ಬಂದಿದೆ.  ಅದೃಷ್ಠ ಅಂದ್ರೆ ಇದಪ್ಪಾ ಎಂಬಂತಿದೆ ಈ ಪ್ರಕರಣ.  ಹೊಟ್ಟೆಪಾಡಿಗಾಗಿ ಎಲ್ಲಿಂದಲೋ ವಲಸೆ ಬಂದಿದ್ದ ಮಹಿಳೆಗೆ ಈಗ ಗ್ರಾಮ ಪಂಚಾಯಿತಿ ಸ್ಥಾನ ಸಿಕ್ಕಿದೆ.  ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿ ತಾಲೂಕಿನ ಮುಳಸಾವಳಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಡಗಾನೂರ ಗ್ರಾಮದ 7ನೇ ವಾರ್ಡಿನಲ್ಲಿ ಒಂದು ಸ್ಥಾನ ಎಸ್. ಟಿ. ಮಹಿಳೆಗೆ ಮೀಸಲಾಗಿತ್ತು.  ಮುಳಸಾವಳಗಿ ಮತ್ತು ಪಡಗಾನೂರ ಎರಡೂ ಊರುಗಳಲ್ಲಿ ಏಕೈಕ ಎಸ್. ಟಿ. ಕುಟುಂಬವಿದೆ.

ಮೂಲತಃ ಕೊಪ್ಪಳ ಜಿಲ್ಲೆಯ ಕುಷ್ಠಗಿ ತಾಲೂಕಿನ ಹಿರೆಮನ್ನಾಪುರ ಗ್ರಾಮದ ಶಂಕರಪ್ಪ ಗಣದಾಳ 2007ರಲ್ಲಿ ನೌಕರಿಗಾಗಿ ಪಡಗಾನೂರ ಗ್ರಾಮಕ್ಕೆ ವಲಸೆ ಬಂದಿದ್ದರು.  ಇಲ್ಲಿರುವ ವೆಂಕಟೇಶ್ವರ ಶಾಲೆಯಲ್ಲಿ ಅವರು ಶಿಕ್ಷಕರಾಗಿದ್ದಾರೆ.  ಹೀಗೆ ಗಂಡನ ಜೊತೆಗೆ ಗ್ರಾಮಕ್ಕೆ ಬಂದಿರುವ ರೇಣುಕಾ ಗಣದಾಳ ಶಾಲೆಯಲ್ಲಿ ಉಡುಗೆ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದಾರೆ.

CoronaVirus: ಇಂಗ್ಲೆಂಡ್​ ನಂತರ ನೈಜೀರಿಯಾದಲ್ಲಿ ಪತ್ತೆಯಾಯ್ತು ಮತ್ತೊಂದು ಹೊಸ ಕೊರೋನಾ ಪ್ರಭೇದ!

ಈ ಬಾರಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ 7ನೇ ವಾರ್ಡು ಎಸ್. ಟಿ. ಮಹಿಳೆಗೆ ಮೀಸಲಾಗಿತ್ತು.  ಇಡೀ ಊರಲ್ಲಿ ಇರುವ ಎಸ್. ಟಿ. ಸಮುದಾಯದ ಒಂದೇ ಮನೆ ಇವರದಾಗಿದ್ದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಈಕೆಯನ್ನು ಚುನಾವಣೆಗೆ ಸ್ಪರ್ಧಿಸಲು ಕೇಳಿದ್ದರು.  ಆದರೆ, ಈ ಮಹಿಳೆ ಬೇಡ ಎಂದು ರಾಜಕೀಯದಿಂದ ದೂರವೇ ಉಳಿದಿದ್ದರು.
ಎಸ್. ಟಿ. ಮೀಸಲಾತಿಯಲ್ಲಿ ಮಹಿಳೆಯರು ಸ್ಪರ್ಧಿಸದಿದ್ದರೆ ಎಸ್. ಸಿ. ಮಹಿಳೆಯರು ಸ್ಪರ್ಧಿಸಲು ಅವಕಾಶವಿದೆ.

ಈ ಮಹಿಳೆ ಸ್ಪರ್ಧಿಸದಿರುವ ನಿರ್ಧಾರ ತಿಳಿದ ಸುಮಾರು ಏಳೆಂಟು ಜನ ಎಸ್. ಸಿ. ಮಹಿಳೆಯರು ಎಸ್. ಟಿ. ಸ್ಥಾನಕ್ಕೆ ತಮ್ಮ ನಾಮಪತ್ರ ಸಲ್ಲಿಸಿದ್ದರು.  ಆದರೆ, ನಾಪಪತ್ರ ಸಲ್ಲಿಕೆಯ ಕೊನೆಯ ದಿನ ಕೊನೆಯ ಕ್ಷಣದಲ್ಲಿ ರೇಣುಕಾ ಶಂಕರಪ್ಪ ಗಣದಾಳ ತಮ್ಮ ನಾಮಪತ್ರ ಸಲ್ಲಿಸಿದ್ದಾರೆ.  ಹೀಗಾಗಿ ಎಸ್. ಸಿ. ಮಹಿಳೆಯರು ಸಲ್ಲಿಸಿದ್ದ ನಾಮಪತ್ರ ತಿರಸ್ಕೃತಗೊಂಡು, ಈಗ ರೇಣುಕಾ ಶಂಕರಪ್ಪ ಗಣದಾಳ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಈ ಮೂಲಕ ಹಣವನ್ನೂ ಖರ್ಚು ಮಾಡದೇ, ಮತವನ್ನೂ ಯಾಚಿಸದೇ ಕೇವಲ ನಾಮಪತ್ರ ಸಲ್ಲಿಸಿ ನೇರವಾಗಿ ಅವಿರೋಧ ಆಯ್ಕೆಯಾಗುವ ಮೂಲಕ ಪಡಗಾನೂರ ಗ್ರಾಮ ಪಂಚಾಯಿತಿ ರಾಜಕೀಯ ಪ್ರವೇಶಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ರೇಣುಕಾ ಶಂಕರಪ್ಪ ಗಣದಾಳ, ಗ್ರಾಮಸ್ಥರೆಲ್ಲರೂ ಸೇರಿ ತನ್ನ್ನನ್ನು ಕಣಕ್ಕೆ ಇಳಿಸಿದ್ದಾರೆ.  ತಾನು ಅವಿರೋಧವಾಗಿ ಆಯ್ಕೆಯಾಗಲು ಗ್ರಾಮಸ್ಥರೇ ಕಾರಣ.  ಅವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.  ಅಲ್ಲದೆ, ಗ್ರಾಮ ಪಂಚಾಯಿತಿ ಸದಸ್ಯೆಯಾಗಿ ಗ್ರಾಮಸ್ಥರ ಒಳಿತಿಗಾಗಿ ಶ್ರಮಿಸುವುದಾಗಿ ಭರವಸೆ ನೀಡಿದ್ದಾರೆ.
Published by:Latha CG
First published: