ಬಳ್ಳಾರಿ(ಏ.18): ಪ್ರತಿಯೊಬ್ಬರಿಗೂ ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಪ್ರವಾಸ ಮಾಡಲು ಹೋಗಬೇಕು, ವಿದೇಶ ಸೌಂದರ್ಯ ಸವಿಯಬೇಕು ಅಲ್ಲಿ ಸಂಸ್ಕೃತಿಯ ಬಗ್ಗೆ ತಿಳಿಯಬೇಕು ಎಂಬ ಆಸೆ ಇದ್ದೇ ಇರುತ್ತೆ. ಆದರೆ ಎಷ್ಟೋ ಮಂದಿಗೆ ಈ ಆಸೆ ಈಡೇರುವುದಿಲ್ಲ. ಆದರೆ ಇಲ್ಲೊಂದು ಬೀದಿ ನಾಯಿ ಮರಿ ಈಗ ಬಳ್ಳಾರಿಯನ್ನು ಬಿಟ್ಟು ಕೆನಡಾದತ್ತ ಪ್ರವಾಸ ಮಾಡುತ್ತಿದೆ. ಜೊತೆಗೆ ಅದಕ್ಕೆ ಅಲ್ಲೇ ನೆಲೆಸುವ ಭಾಗ್ಯ ಕೂಡ ದೊರಕಿದೆ.
ಕಳೆದ ಎರಡು ವರ್ಷಗಳ ಹಿಂದೆ ಕಾರಿನ ಚಕ್ರಕ್ಕೆ ಸಿಲುಕಿ ತನ್ನ ಮುಖಕ್ಕೆ ತೀವ್ರ ತರದ ಗಾಯಮಾಡಿಕೊಂಡು, ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದ ಬೀದಿ ನಾಯಿ ಮರಿ, ಇಂದು ಗುಣಮುಖವಾಗಿ ದಕ್ಷಿಣ ಅಮೆರಿಕದ ಕೆನಡಾ ಮೂಲದ ಮಹಿಳೆಗೆ ದತ್ತು ಮಗುವಾಗಿ ಹೊರಟಿದೆ.
ಪ್ರಸ್ತುತ ದಿನಗಳಲ್ಲಿ ಎಲ್ಲಿ ನೋಡಿದರಲ್ಲಿ ವಾಹನಗಳ ದಟ್ಟನೆ, ಸಂಚಾರ. ಗಿಜುಗುಡುವ ರಸ್ತೆಯಲ್ಲಿ ವಾಹನಗಳಿಗೆ ಸಿಕ್ಕಿ ನಿತ್ಯ ಪ್ರಾಣಿಗಳು ಬಲಿಯಾಗುತ್ತವೆ. ಅಂತೆಯೇ ಬೀದಿ ನಾಯಿಗಳೂ ಸಹ ರಸ್ತೆಯಲ್ಲಿ ವಾಹನಗಳಿಗೆ ಸಿಕ್ಕು ಬಲಿಯಾಗುತ್ತವೆ. ಜೊತೆಗೆ ಕೆಲವು ಬಾರಿ ಅಂಗಾಂಗ ಕಳೆದುಕೊಂಡು ನರಳುತ್ತವೆ. ಇಂತಹ ಪ್ರಾಣಿಗಳಿಗೆ ಆಶ್ರಯ ನೀಡಲೆಂದೇ ಹುಟ್ಟಿಕೊಂಡಿದ್ದ ಹ್ಯೂಮನ್ ವರ್ಲ್ಡ್ ಫಾರ್ ಅನಿಮಲ್ಸ್ ಸಂಸ್ಥೆ, ಇದೀಗ ಬಳ್ಳಾರಿ ಬೀದಿ ನಾಯಿ ಒಂದನ್ನು ವಿದೇಶಕ್ಕೆ ಕಳುಹಿಸಲು ಸಿದ್ಧತೆ ನಡೆಸಿದೆ.
ನಾವು ಆಹ್ವಾನ ಕೊಟ್ಟರೆ ಮಾತ್ರ ಕೊರೋನಾ ವೈರಸ್ ನಮ್ಮ ಬಳಿ ಬರುತ್ತೆ; ಸಚಿವ ಸುರೇಶ್ ಕುಮಾರ್
ಹೀಗೆ ಮುಖಕ್ಕೆ ತೀವ್ರ ತರದ ಗಾಯಮಾಡಿಕೊಂಡು, ಈಗ ಗುಣಮುಖವಾಗಿ ವಿದೇಶಿ ಪ್ರಯಾಣಕ್ಕೆ ರೆಡಿಯಾದ ನಾಯಿ ಮರಿ ಹೆಸರು ಅನಂತ್ಯಾ. ಕಳೆದ ಎರಡು ವರ್ಷಗಳ ಹಿಂದೆ ಈ ನಾಯಿ ಮರಿ ಪಾರ್ಕ್ ಬದಿಯಲ್ಲಿ ನಿಂತಿದ್ದ ಕಾರಿನ ಕೆಳಗೆ ಮಲಗಿತ್ತು. ಕಾರು ಚಾಲಕನಿಗೆ ಅರಿವಿಲ್ಲದೆ ಈ ನಾಯಿ ಮರಿಯ ಮುಖದ ಮೇಲೆ ಹರಿಸಿದ್ದಾನೆ. ಅಪಘಾತದಲ್ಲಿ ನಾಯಿ ಮರಿಯ ಮುಖ ಸಂಪೂರ್ಣ ನಜ್ಜುಗುಜ್ಜಾಗಿ, ಸಾವು-ಬದುಕಿನ ಮಧ್ಯೆ ಹೋರಾಟ ನಡೆಸಿ, ಈಗ ಬದುಕುಳಿದಿದೆ.
ಇನ್ನು ನಾಯಿ ಮರಿಗೆ ಗಾಯವಾಗಿರುವ ವಿಷಯ ತಿಳಿದು ಹ್ಯೂಮನ್ ವರ್ಲ್ಡ್ ಫಾರ್ ಅನಿಮಲ್ ಸಂಸ್ಥೆ ಇದಕ್ಕೆ ಆರೈಕೆ ಮಾಡಿದೆ. ಬೆಂಗಳೂರು, ಚೆನೈ ಸೇರಿದಂತೆ ಪ್ರತಿಷ್ಠಿತ ಪಶುವೈದ್ಯರ ಬಳಿ ಹೋಗಿ ಇದಕ್ಕೆ ಚಿಕಿತ್ಸೆ ಕೊಡಿಸಿದ್ದಾರೆ ಆದರೆ ಗುಣಮುಖ ವಾಗಿರಲಿಲ್ಲ. ಕೊನೆಗೆ ದೆಹಲಿಯ ಪ್ರತಿಷ್ಠಿತ ಆಸ್ಪತ್ರೆಗೆ ಸೇರಿಸಿ ಅಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಇವಾಗ ಆ ನಾಯಿ ಮರಿ ಚೇತರಿಕೆ ಕಂಡಿದೆ.
ಈ ನಾಯಿ ಮರಿಗೆ ದೆಹಲಿಯ ಪ್ರಸಿದ್ಧ ಪಶು ವೈದ್ಯರ ಬಳಿ ಚಿಕಿತ್ಸೆ ಕೊಡಿಸಿ ನಿಧಾನವಾಗಿ ಚೇತರಿಸಿಕೊಳ್ಳುವ ಹಾಗೆ ಮಾಡಿ, ನಾಯಿ ಮರಿಯನ್ನು ಮೊದಲಿನಂತೆ ಮಾಡಿದ್ದಾರೆ. ತದನಂತರದಲ್ಲಿ ಈ ನಾಯಿ ಮರಿ ಗುಣಮುಖವಾದ ನಂತರ, ದೆಹಲಿಯ ಪ್ರಸಿದ್ಧ ಪಶುವೈದ್ಯರು ನಾಯಿಮರಿ ಹೇಗೆ ಸಿಕ್ಕಿತು? ಏನಾಗಿತ್ತು! ಇದು ಎಲ್ಲಿಂದ ಬಂದಿದೆ? ಎಂಬ ಮಾಹಿತಿಯನ್ನು ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ. ಇದನ್ನು ಗಮನಿಸಿದ ಕೆನಡಾ ನಿವಾಸಿ ಭಾರತೀಯ ಮೂಲದ ಮಹಿಳೆ ದತ್ತು ಪಡೆಯಲು ಮುಂದಾಗಿದ್ದಾರೆ. ಈಗ ಅನಂತ್ಯಾ ಎಂಬ ನಾಯಿ ಮರಿ ವಿದೇಶಿ ಪ್ರವಾಸ ಮಾಡಲು ತುದಿಗಾಲಿನಲ್ಲಿ ನಿಂತುಕೊಂಡಿದೆ.
(ವರದಿ: ವಿನಾಯಕ ಬಡಿಗೇರ) ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ