ಚಿಕ್ಕಮಗಳೂರಿನಲ್ಲಿ ವರುಣದೇವ ಬಿಡುವೇ ಕೊಡುತ್ತಿಲ್ಲ. ನಿರಂತರ ಮಳೆಗೆ (Heavy Rain) ಎಲ್ಲಾ ಅಲ್ಲೋಲ-ಕಲ್ಲೋಲ ಆಗೋಗಿದೆ. ಜನಜೀವನ ಅಸ್ತವ್ಯಸ್ತಗೊಂಡಿದೆ. ಮುಳ್ಳಯ್ಯನಗಿರಿಯ (Mullayanagiri) ತಪ್ಪಲಲ್ಲೂ ಭಾರೀ ಮಳೆಯಾಗ್ತಿದೆ. ಇದೇ ವೇಳೆ ಚಿಕ್ಕಮಗಳೂರಿನ (Chikkamagaluru) ಮುಳ್ಳಯ್ಯನಗಿರಿಯಲ್ಲಿ ಚಾಲಕನ (Driver) ನಿಯಂತ್ರಣ ತಪ್ಪಿ ಜೀಪ್ (Jeep) ಪಲ್ಟಿಯಾಗಿದೆ. ನೋಡನೋಡ್ತಿದ್ದಂತೆ ಮೇಲ್ಭಾಗದ ರಸ್ತೆಯಿಂದ ಕೆಳಭಾಗದ ರಸ್ತೆಗೆ ಜೀಪ್ ಪಲ್ಟಿಯಾಗಿ ಬಿದ್ದಿದೆ. ವಾಹನದಲ್ಲಿದ್ದ ಮೂವರಿಗೆ ಗಂಭೀರ ಗಾಯವಾಗಿದೆ. ಇದರ ನಡುವೆ ರಾಜ್ಯದಲ್ಲೆಡೆ ಮಳೆ ಮತ್ತಷ್ಟು ಬಿರುಸು ಪಡೆದಿದೆ. ಗದಗದಲ್ಲಿ ಭಾರೀ ಮಳೆಯಿಂದ ನದಿಯೆಲ್ಲಾ (River Full) ಉಕ್ಕಿ ಹರಿಯುತ್ತಿದೆ. ಪ್ರವಾಹದಲ್ಲಿ ಸಿಲುಕಿದ್ದ ಮಹಿಳೆಯನ್ನು ರಕ್ಷಿಸಲಾಗಿದೆ. ಧಾರವಾಡದಲ್ಲಿ ಸಿಡಿಲು ಬಡಿದು ಗ್ರಾಮ ಪಂಚಾಯ್ತಿ ಸದಸ್ಯ ಸಾವನ್ನಪ್ಪಿದ್ದಾರೆ.
ಚಿಕ್ಕಮಗಳೂರಿನಲ್ಲಿ ವರುಣದೇವ ತನ್ನ ಪ್ರತಾಪ ನಿಲ್ಲುತ್ತಿಲ್ಲ. ಭಾರೀ ಮಳೆಗೆ ಇಡೀ ಚಿಕ್ಕಮಗಳೂರೇ ತೊಯ್ದು ತೊಪ್ಪೆಯಾಗಿದೆ. ಮಳೆಗೆ ಸಿಲುಕಿ ಪ್ರವಾಸಿಗರು ಪರದಾಡುತ್ತಿದ್ದಾರೆ. ಮುಳ್ಳಯ್ಯನಗಿರಿಯಲ್ಲಿ ಮಂಜು ಹಾಗೂ ಮಳೆಯಿಂದ ಪ್ರವಾಸಿಗರ ಜೀಪ್ ಒಂದು ನಿಯಂತ್ರಣ ತಪ್ಪಿದೆ.
ನಿಯಂತ್ರಣ ತಪ್ಪಿ ಕೆಳಗೆ ಬಿದ್ದ ಜೀಪ್heavyಇದನ್ನೂ ಓದಿ: ರಾಜ್ಯದಲ್ಲಿ ಇನ್ನೆರಡು ದಿನ ರಣ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್
ಸಿಡಿಲು ಬಡಿದು ಗ್ರಾ.ಪಂ. ಸದಸ್ಯ ಸಾವು
ಧಾರವಾಡದಲ್ಲಿ ಭಾರೀ ಮಳೆಯಾಗ್ತಿದೆ. ಸಿಡಿಲು ಬಡಿದು ಗ್ರಾಮ ಪಂಚಾಯ್ತಿ ಸದಸ್ಯ ದಾರುಣವಾಗಿ ಸಾವನ್ನಪ್ಪಿದ್ದಾರೆ. ನವಲಗುಂದ ತಾಲೂಕಿನ ಹಾಲಕುಸಗಲ್ ಗ್ರಾಮದಲ್ಲಿ ಘಟನೆ ನಡೆದಿದೆ. ವಿರೂಪಾಕ್ಷಪ್ಪ ಮೃತ ಗ್ರಾಮ ಪಂಚಾಯ್ತಿ ಸದಸ್ಯ. ಕೃಷಿ ಚಟುವಟಿಕೆಗಾಗಿ ಜಮೀನಿಗೆ ತೆರಳಿದ್ದಾಗ ಘಟನೆ ಸಂಭವಿಸಿದೆ.
ಮರದ ಕೆಳಗೆ ನಿಂತಿದ್ದ ವೇಳೆ ಸಿಡಿಲು ಬಡಿತ
ಮಳೆ ಬಂದ ಹಿನ್ನೆಲೆ ವಿರೂಪಾಕ್ಷಪ್ಪರವರು ಮರವೊಂದರ ಕೆಳಗೆ ನಿಂತಿದ್ದರು. ಈ ವೇಳೆ ಮಳೆ ಶುರುವಾಗಿ ಸಿಡಿಲು ಬಡಿದಿದೆ. ಪರಿಣಾಮ ಜಮೀನಿನಲ್ಲೇ ವಿರೂಪಾಕ್ಷಪ್ಪ ಸಾವನ್ನಪ್ಪಿದ್ದಾರೆ. ನವಲಗುಂದ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
ಮನೆಗಳಿಗೆ ನುಗ್ಗಿದ ಮಳೆ ನೀರು
ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಭಾರಿ ಮಳೆಯಾಗುತ್ತಿದ್ದು ಮೂಡಿಗೆರೆ ಪಟ್ಟಣದಲ್ಲಿ ಮನೆಗಳಿಗೆ ಮಳೆ ನೀರು ನುಗ್ಗಿದೆ. ಮೇಗಲ್ ಪೇಟೆ ಬೀದಿಯ ನಾಲ್ಕು ಮನೆಗಳಿಗೆ ನೀರು ನುಗ್ಗಿದ್ದು ಜನ ಪರದಾಡುವಂತಾಗಿದೆ. ಎಲೆಕ್ಟ್ರಾನಿಕ್ ಉಪಕರಣಗಳು ಸೇರಿದಂತೆ ಮನೆಯಲ್ಲಿದ್ದ ಧವಸ ಧಾನ್ಯಗಳು ಹಾನಿಯಾಗಿದೆ.
ಭೀಕರ ಮಳೆಗೆ ನಲುಗಿದ ಕಾಫಿನಾಡು
ಕೊಪ್ಪ ತಾಲೂಕಿನ ಜಯಪುರದಲ್ಲಿ ಗ್ರಾಮಸ್ಥರು ಮಳೆಗೆ ತತ್ತರಿಸಿದ್ದಾರೆ. ರಸ್ತೆಗಳೆಲ್ಲವೂ ಜಲಮಯವಾಗಿದೆ. ಮಳೆಯ ರಭಸಕ್ಕೆ ಗುಡ್ಡದಿಂದ ಭಾರಿ ಪ್ರಮಾಣದ ಮಣ್ಣು ಜಾರಿ ಬಿದ್ದಿದೆ. ಗುಡ್ಡದ ಮೇಲಿಂದ ಜಯಪುರ ಗ್ರಾಮಕ್ಕೆ ಭಾರಿ ಪ್ರಮಾಣದ ನೀರು ಹರಿದುಬರ್ತಿದೆ.
ಹತ್ತಾರು ಎಕರೆ ಅಡಿಕೆ, ಕಾಫಿ ತೋಟ ಮುಳುಗಡೆ
ಕೊಪ್ಪ ತಾಲೂಕಿನ ದಯಂಬಳ್ಳಿ ಗ್ರಾಮದಲ್ಲಿ ಭತ್ತದ ಗದ್ದೆಯೇ ಕೊಚ್ಚಿ ಹೋಗಿದೆ. ಕಳೆದ ಮೂರು ದಿನಗಳ ಹಿಂದಷ್ಟೇ ನಾಟಿ ಮಾಡಲಾಗಿತ್ತು. ಇನ್ನು ಹತ್ತಾರು ಎಕರೆ ಅಡಿಕೆ, ಕಾಫಿ ತೋಟ ಮುಳುಗಡೆಯಾಗಿದೆ. ಚಿಕ್ಕಮಗಳೂರು ನಗರದಲ್ಲೂ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ.
ಇದನ್ನೂ ಓದಿ: ಮಳೆ ಅವಾಂತರ ಖಾಸಗಿ ಬಡಾವಣೆ, ರೈಲ್ವೆ ಅಂಡರ್ ಪಾಸ್ ಜಲಾವೃತ
ಕೊಪ್ಪ-ಚಿಕ್ಕಮಗಳೂರು ರಾಜ್ಯ ಹೆದ್ದಾರಿ ಮುಳುಗಡೆ
ಕೊಪ್ಪ ತಾಲೂಕಿನ ಜಯಪುರದಲ್ಲಿ ಭಾರಿ ಮಳೆ ಹಿನ್ನೆಲೆ ಕೊಪ್ಪ-ಚಿಕ್ಕಮಗಳೂರು ರಾಜ್ಯ ಹೆದ್ದಾರಿ ನದಿಯಂತಾಗಿದೆ. ರಸ್ತೆಯಲ್ಲಿ ಭಾರಿ ಪ್ರಮಾಣದ ನೀರು ಹರಿಯುತ್ತಿದೆ. ನದಿಯಂತಾದ ರಸ್ತೆಯಲ್ಲಿ ಪ್ರಯಾಣಿಕರು, ಪ್ರವಾಸಿಗರು ಸಂಚರಿಸಲು ಪರದಾಡುತ್ತಿದ್ದಾರೆ. ಕಳೆದ ಒಂದು ಗಂಟೆಯಿಂದ ವಾಹನಗಳು ನಿಂತಲ್ಲೇ ನಿಂತಿದೆ. ಒಟ್ಟಿನಲ್ಲಿ ಚಿಕ್ಕಮಗಳೂರು ಭಾರೀ ಮಳೆಯಿಂದ ನಲುಗಿ ಹೋಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ