ಇಡೀ ಮನೆಯನ್ನೇ ಲಿಫ್ಟ್ ಮಾಡಲು ಮಾಲೀಕರ ನಿರ್ಧಾರ; ರಾಮನಗರದಲ್ಲಿ ಹರಿಯಾಣ ಕಂಪನಿ ಸಾಹಸ

3 ಅಡಿ ಎತ್ತರ ಮಾಡಲು ಬರೋಬ್ಬರಿ 6 ರಿಂದ 7 ಲಕ್ಷ ಖರ್ಚಾಗುತ್ತಿದ್ದು, ಇದಕ್ಕಾಗಿ ಹರಿಯಾಣದ ಕಾರ್ಮಿಕರು ಶ್ರಮವಹಿಸಿದ್ದಾರೆ. ಅಡಿಪಾಯದಿಂದ ಮನೆ ಎತ್ತರಿಸಿದರೂ 20 ವರ್ಷಗಳ ಕಾಲ ಮನೆಗೆ ಯಾವುದೇ ತೊಂದರೆಯಾಗುವುದಿಲ್ಲ.

Seema.R | news18-kannada
Updated:March 3, 2020, 10:39 AM IST
ಇಡೀ ಮನೆಯನ್ನೇ ಲಿಫ್ಟ್ ಮಾಡಲು ಮಾಲೀಕರ ನಿರ್ಧಾರ; ರಾಮನಗರದಲ್ಲಿ ಹರಿಯಾಣ ಕಂಪನಿ ಸಾಹಸ
ಮನೆ ಲಿಫ್ಟಿಂಗ್​ ಪ್ರಕ್ರಿಯೆ
  • Share this:
ರಾಮನಗರ (ಮಾ.02): ರಸ್ತೆ ಅಗಲೀಕರಣ, ಡಾಂಬರೀಕರಣ ಸಂದರ್ಭದಲ್ಲಿ ಮರಗಳನ್ನು ಬುಡಸಮೇತ ಒಂದು ಕಡೆಯಿಂದ ಮತ್ತೊಂದು ಕಡೆ ಲಿಫ್ಟ್​ ಮಾಡುವುದು ಸಾಮಾನ್ಯ. ಆದರೆ, ಇಲ್ಲೊಬ್ಬರು ಆಧುನಿಕ ತಂತ್ರಜ್ಞಾನ ಬಳಸಿ  ತಮ್ಮ ಮನೆಯನ್ನೇ ಲಿಫ್ಟ್​ ಮಾಡಲು ಮುಂದಾಗಿದ್ದಾರೆ. 

ಜಿಲ್ಲೆಯ ಚನ್ನಪಟ್ಟಣ ನಗರದ ವಿವೇಕಾನಂದ ನಗರದ ವೆಂಕಟೇಶ್​, ಸುಜಾತ ದಂಪತಿಗಳು ಈ ಪ್ರಯತ್ನಕ್ಕೆ ಮುಂದಾಗಿರುವವರು. ಮಂಡ್ಯದಲ್ಲಿ ವಾಸವಿರುವ ಈ ದಂಪತಿಗಳು ಚನ್ನಪಟ್ಟಣದಲ್ಲಿ ತಮ್ಮ ಕನಸಿನ ಮನೆ ಕಟ್ಟಿದ್ದಾರೆ.

ಕಾಲ ಕಳೆದಂತೆ ಮನೆ ಮುಂದೆ ಡಾಂಬರೀಕರಣ ಪ್ರಕ್ರಿಯೆಯಿಂದಾಗಿ ಮನೆಯ ತಳಪಾಯ ರಸ್ತೆಯಲ್ಲಿ ಹೂತು ಹೋಗಿ ಕೆಳಭಾಗಕ್ಕೆ ಸೇರಿಕೊಂಡಿತು. ಜೊತೆಗೆ ಈ ಮನೆಯಿರುವ ರಸ್ತೆಯಲ್ಲಿ ಒಳಚರಂಡಿ ವ್ಯವಸ್ಥೆ ಕೂಡ ಹಾಳಾಗಿ ಹೋಯಿತು. ಇದರಿಂದ ಮಳೆ ಬಂದಾಗ ಮನೆಗೆ ಕೊಳಚೆ ನೀರು ನುಗ್ಗಲು ಶುರುವಾಯಿತು.ಅಕ್ಕಪಕ್ಕದ ಮನೆಗಳು ಮೇಲ್ಬಾಗದಲ್ಲಿದ್ದ ಪರಿಣಾಮ ಅವುಗಳಿಗೆ ಹಾನಿಯಾಗಿಲ್ಲ. ಆದರೆ, ಇವರ ಮನೆಗೆ ಮಾತ್ರ ಸಾಕಷ್ಟು ತೊಂದರೆಯಾಯಿತು. ಈ ಕಾರಣದಿಂದ ಮನೆಯನ್ನೇ ಮಾರಬೇಕೆಂಬ ತೀರ್ಮಾನಕ್ಕೆ ಕೂಡ ಕುಟುಂಬಸ್ಥರು ಬಂದಿದ್ದರು. ಆದರೆ ಕಷ್ಟಪಟ್ಟು ಕಟ್ಟಿದ್ದ ಮನೆ  ಮಾರಲು ಮನಸ್ಸು ಬರಲಿಲ್ಲ.  ಈ ಹಿನ್ನೆಲೆ ಕುಟುಂಬ ಹೊಸ ತಂತ್ರಜ್ಞಾನದ ಮೊರೆಹೋಯಿತು. ಮನೆ ಮಾರುವ ಬದಲು ಮನೆಯನ್ನೇ ಮೂರು ಅಡಿಗಳಷ್ಟು ಮೇಲ್ಬಾಗಕ್ಕೆ ಎತ್ತರಿಸುವ ನಿರ್ಧಾರಕ್ಕೆ ಬಂದಿದ್ದಾರೆ.

ಹರಿಯಾಣ ಕಂಪನಿಗೆ ಮೊರೆ

ಹರಿಯಾಣದ ಯಮುನಾ ನಗರದಲ್ಲಿರುವ ಟಿ.ಡಿ.ವಿ.ಡಿ ಹೌಸ್ ಲಿಫ್ಟಿಂಗ್ ಸರ್ವೀಸ್ ಕಂಪನಿ ಈ ರೀತಿ ಕೆಲಸಕ್ಕೆ ಹೆಸರುವಾಸಿಯಾಗಿದೆ. ಈಗಾಗಲೇ ಮೈಸೂರಿನಲ್ಲಿ ಒಂದು ಮನೆ, ದೇವಸ್ಥಾನವನ್ನು ಸ್ಥಳಾಂತರಿಸಿ ಹೆಸರು ಮಾಡಿದೆ. ಈ ಹಿನ್ನೆಲೆ ವೆಂಕಟೇಶ್ ದಂಪತಿ ಹರಿಯಾಣದ ಈ ಕಂಪನಿಯ ಮೊರೆ ಹೋಗಿದ್ದು, ಮನೆಯನ್ನು ಎತ್ತರಿಸುವ ನಿರ್ಧಾರ ತೆಗೆದುಕೊಂಡಿದ್ದಾರೆ.

3 ಅಡಿ ಎತ್ತರ ಮಾಡಲು ಬರೋಬ್ಬರಿ 6 ರಿಂದ 7 ಲಕ್ಷ ಖರ್ಚಾಗುತ್ತಿದ್ದು, ಇದಕ್ಕಾಗಿ ಹರಿಯಾಣದ ಕಾರ್ಮಿಕರು ಶ್ರಮವಹಿಸಿದ್ದಾರೆ. ಅಡಿಪಾಯದಿಂದ ಮನೆ ಎತ್ತರಿಸಿದರೂ 20 ವರ್ಷಗಳ ಕಾಲ ಮನೆಗೆ ಯಾವುದೇ ತೊಂದರೆಯಾಗುವುದಿಲ್ಲ. ಈ ಮಧ್ಯೆ ಏನೇ ತೊಂದರೆಯಾದರೂ ಅದಕ್ಕೆ ಕಂಪನಿ ಹೊಣೆಯಾಗಿರುತ್ತದೆ ಎಂಬ ಭರವಸೆ ನೀಡಿದ ಹಿನ್ನೆಲೆ ಈ ದಂಪತಿ ಈ ಕೆಲಸಕ್ಕೆ ಮುಂದಾಗಿದ್ದಾರೆ.

(ವರದಿ: ಎಟಿ ವೆಂಕಟೇಶ್​​)
First published: March 2, 2020, 6:40 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading