Historical Lake: ಬ್ರಿಟಿಷರು ಕುದುರೆಗಳಿಗೆ ನೀರು ಕುಡಿಸುತ್ತಿದ್ದ ಜಾಗ ಇದು! ಐತಿಹಾಸಿಕ ಕೆರೆಗೆ ಈಗ ಧಕ್ಕೆ

ಬ್ರಿಟಿಷರ ಕಾಲದಲ್ಲಿ ಮೈಸೂರಿನಿಂದ ಮಂಗಳೂರು ದಾರಿಯಾಗಿ ಪ್ರಯಾಣಿಸುತ್ತಿದ್ದವರು ತಮ್ಮ ಕುದುರೆಗಳಿಗೆ ನೀರು ಕುಡಿಸಿಕೊಂಡು, ಧಣಿವಾರಿಸಿಕೊಳ್ಳುತ್ತಿದ್ದ ಸ್ಥಳವೆಂಬ ಪುರಾತನ ಇತಿಹಾಸ ಕೊಲ್ಯ ಕೆರೆಗಿದೆ. ಇದೀಗ ಕೆರೆಯ ಬದಿಯಲ್ಲಿದ್ದ ಬೃಹತ್ ಗಾತ್ರದ ಹುಣಸೆ-ಆಲದ ಮರಗಳು ಉರುಳಿಬಿದ್ದು ಕೆರೆಗೆ ಹಾನಿಯಾಗಿದೆ.

ಬ್ರಿಟಿಷರ ಕಾಲದ ಐತಿಹಾಸಿಕ ಕೆರೆ

ಬ್ರಿಟಿಷರ ಕಾಲದ ಐತಿಹಾಸಿಕ ಕೆರೆ

  • Share this:
ಪುತ್ತೂರು: ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಪುತ್ತೂರು (Puttur) ತಾಲೂಕಿನ ಆರ್ಯಾಪು ಗ್ರಾಮದ ಸಂಪ್ಯ ಸಮೀಪದಲ್ಲಿರುವ ಪುರಾತನ ಕಾಲದ `ಕೊಲ್ಯ ಕೆರೆ'ಯ ಬದಿಯಲ್ಲಿದ್ದ ಬೃಹತ್ ಗಾತ್ರದ ಮರಗಳೆರಡು (Tree) ಬುಡಸಮೇತ ಉರುಳಿಬಿದ್ದು, ಸಂಪೂರ್ಣವಾಗಿ ಕೆರೆಯನ್ನು (Lake) ಆವರಿಸಿಕೊಂಡಿದೆ. ಮಾತ್ರವಲ್ಲದೆ ಅಭಿವೃದ್ಧಿಗೊಂಡಿದ್ದ ಕೆರೆಗೆ ಹಾನಿಯಾಗಿದೆ. ಮರಗಳು ಬುಡಸಮೇತ ಉರುಳಿ ಬಿದ್ದಿರುವ ಪರಿಣಾಮವಾಗಿ ಕೆರೆಯ ಬದಿಯಲ್ಲಿರುವ ರಸ್ತೆ ಭಾಗ ಕುಸಿದು ಅಪಾಯದ ಸ್ಥಿತಿಯಲ್ಲಿದ್ದು, ರಸ್ತೆ ಸಂಪರ್ಕಕ್ಕೆ (Road) ತಡೆಯಾಗುವ ಆತಂಕ ಎದುರಾಗಿದೆ. ಮಾಣಿ-ಮೈಸೂರು ಹೆದ್ದಾರಿಗೆ (Highway) ಸಂಪರ್ಕ ಕಲ್ಪಿಸುವ ಸಂಪ್ಯ- ಬಾರಿಕೆ ರಸ್ತೆಯ ಬದಿಯಲ್ಲಿ ಅರಸರ ಕಾಲದದ್ದೆಂಬ ಇತಿಹಾಸ (History) ಹೊಂದಿರುವ `ಕೊಲ್ಯ ಕೆರೆ'ಯಿದೆ.

ಗ್ರಾಮದಲ್ಲಿ ಮಹತ್ವ ಪಡೆದಿದ್ದ ಕೆರೆ

ಈ ಭಾಗದಲ್ಲಿ ನಡೆಯುವ ಗಣೇಶೋತ್ಸವ, ಶಾರದೋತ್ಸವ ಕಾರ್ಯಕ್ರಮಗಳಲ್ಲಿ ಆರಾಧಿಸಲ್ಪಟ್ಟ ವಿಗ್ರಹಗಳ ಜಲಸ್ತಂಭನ ಮಾಡುವ ಕೆರೆಯಾಗಿಯೂ ಕೊಲ್ಯ ಕೆರೆ ಗುರುತಿಸಿಕೊಂಡಿದೆ. ಸರಕಾರಿ ದಾಖಲೆಯ ಪ್ರಕಾರ 8 ಸೆಂಟ್ಸ್ ವಿಸ್ತೀರ್ಣವಿರುವ, ಐತಿಹಾಸಿಕ ಹಿನ್ನಲೆಯಿರುವ ಕೊಲ್ಯ ಕೆರೆಯನ್ನು 10 ವರ್ಷಗಳ ಹಿಂದೆ ಜಿಲ್ಲಾ ಪಂಚಾಯತ್ 16 ಲಕ್ಷ ರೂಪಾಯಿ ಅನುದಾನದಲ್ಲಿ ಅಭಿವೃದ್ಧಿ ಪಡಿಸಿತ್ತು.  ಚೌಕಾಕಾರದಲ್ಲಿರುವ ಕೆರೆಯ ಸುತ್ತಲೂ ಬದಿಗೆ ಕಲ್ಲು ಕಲ್ಲಿನ ತಡೆಗೋಡೆ ನಿರ್ಮಿಸಿ, ಸುತ್ತಲೂ ಕಬ್ಬಿಣದ ಸಲಾಕೆಯ ಆವರಣ ಗೇಟ್ (ಬೇಲಿ) ನಿರ್ಮಿಸಲಾಗಿತ್ತು. ಕೆರೆಗೆ ಇಳಿಯಲು ಮೆಟ್ಟಿಲುಗಳನ್ನು ನಿರ್ಮಿಸುವ ಮೂಲಕ ಸುಂದರಗೊಳಿಸಲಾಗಿತ್ತು.

ಬ್ರಿಟಿಷರ ಕಾಲದ ಐತಿಹಾಸಿಕ ಕೆರೆ


ಮರ ಕುಸಿತದಿಂದಾಗಿ ಕೆರೆಗೆ ಧಕ್ಕೆ

10 ಅಡಿಯಷ್ಟು ಆಳವಿರುವ ಕೊಲ್ಯ ಕೆರೆಯಲ್ಲಿ ಕಡು ಬೇಸಿಗೆ ಕಾಲದಲ್ಲೂ ನೀರು ಇರುತ್ತದೆ. ಈ ಹಿಂದಿನಿಂದಲೂ ಕೆರೆಯಲ್ಲಿ ಸ್ಥಳೀಯರೇ ಮೀನು ಮರಿಗಳನ್ನು ಹಾಕಿ ಸಾಕುತ್ತಿದ್ದರು. ಈಗಲೂ ಈ ಕೆರೆಯಲ್ಲಿ ಬಹಳಷ್ಟು ಪ್ರಮಾಣದಲ್ಲಿ ಮೀನುಗಳಿವೆ. ಇದೀಗ ಕೆರೆಯ ಬದಿಯಲ್ಲಿ ಒಂದಕ್ಕೊಂದು ಅಂಟಿಕೊಂಡು ಬೆಳೆದಿದ್ದ ಬೃಹತ್ ಗಾತ್ರದ ಹುಣಸೆ ಮತ್ತು ಆಲದಮರ ಬುಡಸಮೇತ ಕೆರೆಯೊಳಗೆ ಉರುಳಿ ಬಿದ್ದಿದೆ. ಮರಗಳು ಉರುಳಿದ ಪರಿಣಾಮವಾಗಿ ಮರಗಳಿದ್ದ ಬದಿಯ ಕೆರೆಯ ಕಪ್ಪು ಕಲ್ಲಿನ ತಡೆಗೋಡೆ ಕುಸಿದು ಕೆರೆಯೊಳಗೆ ಬಿದ್ದಿದೆ.

ಐತಿಹಾಸಿಕ ಕೆರೆಗೆ ಹಾನಿ


ಇದನ್ನೂ ಓದಿ: Operation Elephant: ಭಾನುಮತಿ ಖೆಡ್ಡಾಕ್ಕೆ ಬಿದ್ದ ಹಾವೇರಿ ಟಸ್ಕರ್! ಮಲೆನಾಡಿಗರ ನಿದ್ದೆಗೆಡಿಸಿದ್ದ ಒಂಟಿ ಸಲಗ ಸೆರೆ

ಸ್ಥಳೀಯರಿಗೆ ಸಾಂಕ್ರಾಮಿಕ ರೋಗದ ಭೀತಿ

ಒಂದು ಬದಿಯ ಕಬ್ಬಿಣದ ಸಲಾಕೆಯ ಆವರಣ ಗೇಟ್ ಕಿತ್ತುಹೋಗಿ ಹಾನಿಗೊಂಡಿದೆ. ಉರುಳಿ ಬಿದ್ದಿರುವ ಮರಗಳ ಕೊಂಬೆಗಳು ಮತ್ತು ಸೊಪ್ಪುಗಳು ಕೆರೆಯ ಬಹುತೇಕ ಭಾಗವನ್ನು ಆವರಿಸಿಕೊಂಡಿದೆ. ಈ ಕೆರೆಯ ಅಕ್ಕಪಕ್ಕದಲ್ಲಿ ಹಲವು ಮನೆಗಳಿದ್ದು, ಮುಂದೆ ಕೆರೆಯಲ್ಲಿರುವ ಮರಗಳ ಸೊಪ್ಪು ಕೊಳೆತು ನೀರು ಮಲೀನಗೊಂಡು ಸಾಂಕ್ರಾಮಿಕ ರೋಗ ಹರಡಬಹುದೆಂಬ ಭೀತಿ ಸ್ಥಳೀಯರಲ್ಲಿ ಆವರಿಸಿದೆ.

ಹತ್ತಿರದ ರಸ್ತೆಗಳಿಗೂ ಹಾನಿ

ಸಂಪ್ಯದಿಂದ ಬಾರಿಕೆ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ಕಾಂಕ್ರೀಟ್ ರಸ್ತೆಯು ಕೊಲ್ಯ ಕೆರೆಯ ಬದಿಯಲ್ಲಿ ಸುತ್ತುವರಿದು ಸಾಗುತ್ತಿದ್ದು, ರಸ್ತೆ ಮತ್ತು ಕೆರೆಯ ಬದಿಯಲ್ಲಿದ್ದ ಬೃಹತ್ ಗಾತ್ರದ ಹುಣಸೆ ಮತ್ತು ಆಲದ ಮರಗಳು ಬುಡ ಸಮೇತ ಕೆರೆಗೆ ಉರುಳಿ ಬಿದ್ದಿರುವುದರಿಂದ ಆ ರಸ್ತೆ ಒಂದು ಭಾಗ ಕುಸಿದಿದೆ. ಉರುಳಿದ ಮರಗಳ ಬೇರುಗಳಿಂದಾಗಿ ಕಾಂಕ್ರೀಟ್ ರಸ್ತೆಯ ಅಡಿಭಾಗದಲ್ಲಿನ ಮಣ್ಣು ಕುಸಿದಿದ್ದು, ರಸ್ತೆಗೂ ಹಾನಿಯಾಗಿದೆ.

ಮಳೆ ಹೆಚ್ಚಾದರೆ ರಸ್ತೆ ಕುಸಿಯುವ ಆತಂಕ

ರಸ್ತೆ ಕುಸಿತವಾಗಿರುವ ಹಿನ್ನಲೆಯಲ್ಲಿ ಈ ರಸ್ತೆಯಲ್ಲಿ ಘನವಾಹನಗಳ ಸಂಚಾರಕ್ಕೆ ಅಡಚಣೆಯಾಗಿದ್ದು, ಮತ್ತೆ ಮಳೆಯ ಅಬ್ಬರ ಹೆಚ್ಚಾದಲ್ಲಿ ಇನ್ನಷ್ಟೂ ರಸ್ತೆ ಭಾಗ ಕುಸಿದು ರಸ್ತೆ ಸಂಪರ್ಕ ಕಡಿತಗೊಳ್ಳುವ ಆತಂಕ ಎದುರಾಗಿದೆ. `ರಸ್ತೆ ಕುಸಿದಿರುವ ಕಾರಣ ಘನವಾಹನಗಳ ಸಂಚಾರವನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ' ಎಂದು ಆರ್ಯಾಪು ಗ್ರಾಮ ಪಂಚಾಯಿತ್ ನವರು ಮಾಣಿ-ಮೈಸೂರು ಹೆದ್ದಾರಿ ಬದಿ ಬಾರಿಕೆ ಸಂಪರ್ಕ ರಸ್ತೆ ಭಾಗದಲ್ಲಿ ಸೂಚನಾ ಬೋರ್ಡ್ ಕೂಡಾ  ಅಳವಡಿಸಿದ್ದಾರೆ‌.

ಬ್ರಿಟಿಷರು ಕುದುರೆಗಳಿಗೆ ನೀರು ಕುಡಿಸುತ್ತಿದ್ದ ಜಾಗ

ಬ್ರಿಟಿಷರ ಕಾಲದಲ್ಲಿ ಮೈಸೂರಿನಿಂದ ಮಂಗಳೂರು ದಾರಿಯಾಗಿ ಪ್ರಯಾಣಿಸುತ್ತಿದ್ದವರು ತಮ್ಮ ಕುದುರೆಗಳಿಗೆ ನೀರು ಕುಡಿಸಿಕೊಂಡು, ಧಣಿವಾರಿಸಿಕೊಳ್ಳುತ್ತಿದ್ದ ಸ್ಥಳವೆಂಬ ಪುರಾತನ ಇತಿಹಾಸ ಕೊಲ್ಯ ಕೆರೆಗಿದೆ. ಇದೀಗ ಕೆರೆಯ ಬದಿಯಲ್ಲಿದ್ದ ಬೃಹತ್ ಗಾತ್ರದ ಹುಣಸೆ-ಆಲದ ಮರಗಳು ಉರುಳಿಬಿದ್ದು, 10 ವರ್ಷಗಳ ಹಿಂದೆ ಅಭಿವೃದ್ಧಿ ಕಂಡಿದ್ದ ಕೆರೆಗೆ ಹಾನಿಯಾಗಿದೆ. ರಸ್ತೆ ಭಾಗ ಜರಿದು ಘನವಾಹನಗಳ ಸಂಚಾರಕ್ಕೆ ಅಡಚಣೆಯಾಗಿದೆ.

ಇದನ್ನೂ ಓದಿ: Operation Cheetha: ಕಾಣದಂತೆ ಮಾಯವಾಯಿತೇ ಚಿರತೆ? ಬೆಳಗಾವಿಯಲ್ಲಿ ಆಪರೇಷನ್ ಚೀತಾ ಕಂಟಿನ್ಯೂ!

ಐತಿಹಾಸಿಕ ಹಿನ್ಮಲೆಯಿರುವ ಕೊಲ್ಯ ಕೆರೆಯನ್ನು ಕೂಡಲೇ ದುರಸ್ತಿಪಡಿಸುವ ಕಾರ್ಯ ನಡೆಯಬೇಕೆನ್ನು ಒತ್ತಾಯ ಸಾರ್ವಜನಿಕ ವಲಯದಿಂದ ಹೆಚ್ಚಾಗುತ್ತಿದೆ.
Published by:Annappa Achari
First published: