Lover Murder: ಊರಿಗೆ ಬಾ ಅಂತ ಕರೆದ ಯುವತಿ ಸಹೋದರರು, ನಂಬಿ ಬಂದ ಪ್ರಿಯಕರ ವಾಪಸ್ ಹೋಗಲೇ ಇಲ್ಲ!

ಯುವತಿ ಮತ್ತು ಚಂದ್ರಕಾಂತ್ ಹದಿನೈದು ದಿನದ ಹಿಂದೆ ಓಡಿ ಹೋಗಿದ್ದರು. ಆದ್ರು ಕೂಡಾ ಯುವತಿಯ ಸಹೋದರರು, ಯುವತಿಯನ್ನು ಪತ್ತೆ ಮಾಡಿ, ಮನೆಗೆ ಕರೆತಂದಿದ್ದರು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕಲಬುರಗಿ: ಪ್ರೀತಿ (Love) ಮಾಡಬಾರದು, ಮಾಡಿದರೆ ಜಗಕೆ ಹೆದರಬಾರದು ಅಂತಾರೆ. ಅದೇ ರೀತಿ ಅಲ್ಲಿ ಯುವಕ (Boy), ಯುವತಿ (Girl) ಪ್ರೀತಿಸಿದ್ದರು. ಕಾಲೇಜು (College) ಓದುತ್ತಿದ್ದ ಯುವತಿ, ಲಾಡ್ಜ್ ನಲ್ಲಿ (Lodge) ಕೆಲಸ ಮಾಡುತ್ತಿದ್ದ ಯುವಕನನ್ನು ಪ್ರೀತಿಸಿದ್ದಳು. ಆದ್ರೆ ಈ ಪ್ರೀತಿಗೆ ಯುವತಿಯ ಮನೆಯವರು ರೆಡ್ ಸಿಗ್ನಲ್ (Red Signal) ನೀಡಿದ್ರು. ಆದ್ರು ಕೂಡಾ ಇಬ್ಬರು ಓಡಿ ಹೋಗಿದ್ದರು. ನಂತರ ಯುವತಿಯ ಮನೆಯವರು ಯುವತಿಯನ್ನು ಕರೆದುಕೊಂಡು ತಮ್ಮ ಮನೆಗೆ ಹೋಗಿದ್ದರು. ಆದ್ರೆ ಯುವತಿ ಮಾತ್ರ ಪ್ರಿಯಕರನನ್ನು ಬಿಟ್ಟು ಇರಲಾರೆ ಅಂತ ಹಠಕ್ಕೆ ಬಿದ್ದಿದ್ದಳು. ಇದೇ ದ್ವೇಷ ಇಟ್ಟುಕೊಂಡಿದ್ದ ಯುವತಿ ಸಹೋದರರು, ಯುವಕನನ್ನು ಸಂಚು ಮಾಡಿ ಕರೆಯಿಸಿ, ಕೊಲೆ (Murder) ಮಾಡಿದ್ದಾರೆ...

ಮಗನ ಕಳೆದುಕೊಂಡು ತಾಯಿ ಕಣ್ಣೀರು

ಮನೆಗೆ ಆಧಾರವಾಗಿದ್ದ ಮಗನನ್ನು ಕಳೆದುಕೊಂಡು ಕಂಗಾಲಾಗಿರುವ ಈ ತಾಯಿಗೆ ಇದೀಗ ದಿಕ್ಕೆ ತೋಚದಂತಾಗಿದೆ. ಪತಿಯನ್ನು ಅನೇಕ ವರ್ಷಗಳ ಹಿಂದೆಯೇ ಕಳೆದುಕೊಂಡಿದ್ದ ಮಹಿಳೆಗೆ, ಮಗನೆ ಆಧಾರವಾಗಿದ್ದ. ಆದ್ರೆ ಇದೀಗ ಪ್ರೀತಿಯ ಪಾಶಕ್ಕೆ ಸಿಲುಕಿದ ಮಗ ಕೊಲೆಯಾಗಿರುವ ಸುದ್ದಿ ಕೇಳಿ, ತಾಯಿಗೆ ಆಕಾಶವೇ ತಲೆ ಮೇಲೆ ಬಿದ್ದಂತಾಗಿದೆ.

a girls family has murdered her lover in kalaburagi
ಕೊಲೆಯಾದ ಯುವಕ


ಕ್ರಿಮಿನಾಶಕ ಕುಡಿಸಿ ಕೊಲೆ

ಮಗನನ್ನು ಕಳೆದುಕೊಂಡು ಮುಂದೇನು ಅನ್ನೋ ಚಿಂತೆಯಲ್ಲಿರುವ ಈ ಮಹಿಳೆಯ ಹೆಸರು ಯಲ್ಲಮ್ಮಾ ಪೂಜಾರಿ ಅಂತ. ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಗಾಣಗಾಪುರ ನಿವಾಸಿ. ಈ ಮಹಿಳೆಯ ನೋವಿಗೆ ಕಾರಣವಾಗಿದ್ದು, ಈಕೆಯ ಹಿರಿಯ ಮಗ ದುಷ್ಕರ್ಮಿಗಳ ಮೋಸದ ಜಾಲಕ್ಕೆ ಸಿಲುಕಿ ಕೊಲೆಯಾಗಿದ್ದು. ಹೌದು ಯಲ್ಲಮ್ಮ ಪೂಜಾರಿಯ ಇಪ್ಪತ್ನಾಲ್ಕು ವರ್ಷದ ಹಿರಿಯ ಮಗ ಚಂದ್ರಕಾಂತ್ ಪೂಜಾರಿ ನಿನ್ನೆ ರಾತ್ರಿ ಕೊಲೆಯಾಗಿದ್ದಾನೆ. ಗಾಣಗಾಪುರದಲ್ಲಿ ಲಾಡ್ಜ್ ನಲ್ಲಿ ಕೆಲಸ ಮಾಡುತ್ತಿದ್ದ ಚಂದ್ರಕಾಂತ್ ನಿಗೆ ಕ್ರಿಮಿನಾಶಕ ಕುಡಿಸಿ, ನಂತರ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ.

ಇದನ್ನೂ ಓದಿ: Harsha Murder Case: ಹರ್ಷ ಹತ್ಯೆ ಆರೋಪಿಗಳಿಗೆ ಜೈಲಲ್ಲಿ ರಾಜಾತಿಥ್ಯ? ಕಾರಾಗೃಹದೊಳಗಿಂದಲೇ ಟಿಕ್‌ಟಾಕ್, ವಿಡಿಯೋ ಕಾಲ್!

ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಕೊಲೆ

ಅಫಜಲಪುರ ತಾಲೂಕಿನ ಇಂಗಳಗಿ ಗ್ರಾಮದ ಹೊರವಲಯದಲ್ಲಿರುವ ಕೃಷಿ ಜಮೀನಿನಲ್ಲಿ ಇಂದು ಮುಂಜಾನೆ ಚಂದ್ರಕಾಂತ್ ಶವ ಪತ್ತೆಯಾಗಿದೆ. ನಿನ್ನೆ ಸಂಜೆ ಏಳು ಗಂಟೆಗೆ ಮನೆಯಿಂದ ಹೋಗಿದ್ದ ಚಂದ್ರಕಾಂತ್ ಮತ್ತೆ ಮನೆಗೆ ಬಂದಿರಲಿಲ್ಲಾ. ರಾತ್ರಿ 9 ಗಂಟೆವರಗೆ ಆತನ ಮೊಬೈಲ್ ಆನ್ ಆಗಿತ್ತು. ಆದ್ರೆ ತಾಯಿ ಕರೆ ಮಾಡಿದ್ರು ಕೂಡಾ ಕರೆ ಸ್ವೀಕರಿಸಿರಲಿಲ್ಲಾ. ಆದ್ರೆ 9 ಗಂಟೆ ನಂತರ ಪೋನ್ ಸ್ವಿಚ್ ಆಪ್ ಆಗಿತ್ತು. ಹೀಗಾಗಿ ರಾತ್ರಿಯೆಲ್ಲಾ ತಾಯಿ ಮಗನಿಗಾಗಿ ಹುಡುಕಾಡಿದ್ದಳು. ಆದ್ರೆ ರಾತ್ರಿ ಕಳೆದು ಬೆಳಗಾಗೋದರಲ್ಲಿ ಚಂದ್ರಕಾಂತ್ ಕೊಲೆಯಾಗಿದ್ದ ಗೊತ್ತಾಗಿದೆ...

ಪ್ರೀತಿಗೆ ಯುವತಿ ಮನೆಯಲ್ಲಿ ವಿರೋಧ

ಇನ್ನು ಚಂದ್ರಕಾಂತ್ ಕೊಲೆಗೆ ಕಾರಣವಾಗಿದ್ದು ಪ್ರೀತಿ. ಹೌದು ಗಾಣಗಾಪುರದಲ್ಲಿ ಡಿಗ್ರಿ ಓದುತ್ತಿದ್ದ, ಜಿಲ್ಲೆಯ ಜೇವರ್ಗಿ ತಾಲೂಕಿನ ಹುಲ್ಲೂರು ಗ್ರಾಮದ ಓರ್ವ ಯುವತಿಯ ಪರಿಚಯ ಚಂದ್ರಕಾಂತ್ ಗೆ ಆಗಿತ್ತು. ಆರು ತಿಂಗಳಿಂದ ಚಂದ್ರಕಾಂತ್ ಮತ್ತು ಯುವತಿ ಪ್ರೀತಿಸುತ್ತಿದ್ದರಂತೆ. ಒಬ್ಬರನ್ನೊಬ್ಬರು ಬಿಟ್ಟಿರಲಾರದ ಹಂತಕ್ಕೆ ಪ್ರೀತಿ ಹೋಗಿತ್ತು. ಆದ್ರೆ ಈ ಪ್ರೀತಿಯ ವಿಚಾರ ಯುವತಿ ಮನೆಯವರಿಗೆ ಗೊತ್ತಾಗಿತ್ತು. ಹೀಗಾಗಿ ಯುವತಿ ಮನೆಯವರು ಮದುವೆಗೆ ರೆಡ್ ಸಿಗ್ನಲ್ ಹಾಕಿದ್ದರು.

ಹೆತ್ತವರಿಂದ ಬೇರೆಯಾಗಿದ್ದ ಪ್ರೇಮಿಗಳು

ಯುವತಿ ಮತ್ತು ಚಂದ್ರಕಾಂತ್ ಹದಿನೈದು ದಿನದ ಹಿಂದೆ ಓಡಿ ಹೋಗಿದ್ದರು. ಆದ್ರು ಕೂಡಾ ಯುವತಿಯ ಸಹೋದರರು, ಯುವತಿಯನ್ನು ಪತ್ತೆ ಮಾಡಿ, ಮನೆಗೆ ಕರೆತಂದಿದ್ದರು. ಚಂದ್ರಕಾಂತ್ ನನ್ನು ಆತನ ಮನೆಗೆ ಬಿಟ್ಟು, ಮುಂದೆ ತಮ್ಮ ಸಹೋದರಿಯ ತಂಟೆಗೆ ಬರದಂತೆ ವಾರ್ನಿಂಗ್ ನೀಡಿದ್ದರು. ನಂತರ ಚಂದ್ರಕಾಂತ್ ಬೆಂಗಳೂರಿಗೆ ಹೋಗಿದ್ದ.

ಚಂದ್ರಕಾಂತ್‌ನನ್ನು ಕರೆಸಿಕೊಂಡಿದ್ದ ಯುವತಿ ಸಹೋದರರು

ಆದ್ರೆ ಚಂದ್ರಕಾಂತ್ ಗೆ ಮತ್ತೆ ಕರೆ ಮಾಡಿದ್ದ ಯುವತಿ ಸಹೋದರರು, ನೀನು ಪೊಲೀಸ್ ಠಾಣೆಗೆ ಬಂದು, ಯುವತಿಗೆ ನನಗೂ ಯಾವುದೇ ಸಂಬಂಧವಿಲ್ಲಾ ಅಂತ ಆಕೆಯ ಮುಂದೆ ಹೇಳಬೇಕು ಅಂತ ಹೇಳಿದ್ದರಂತೆ. ಹೀಗಾಗಿ ಜೂನ್ 3 ರಂದು ಬೆಂಗಳೂರಿನಿಂದ ಚಂದ್ರಕಾಂತ್ ಗಾಣಗಾಪುರಕ್ಕೆ ಬಂದಿದ್ದ. ನಂತರ ನೆಲೋಗಿ ಠಾಣೆಗೆ ಯುವತಿಯ ಸಹೋದರರ ಜೊತೆ ಹೋಗಿದ್ದ. ಆದ್ರೆ ಯುವತಿ ಠಾಣೆಗೆ ಬಂದಿರಲಿಲ್ಲಾ. ಚಂದ್ರಕಾಂತ್ ತನ್ನ ಮನೆಗೆ ಬಂದು ನನಗೆ ಯಾವುದೇ ಸಂಬಂಧವಿಲ್ಲಾ ಅಂತ ಹೇಳುವಂತೆ ಯುವತಿ ಹೇಳಿದ್ದಳಂತೆ.

ಸಂಚು ಮಾಡಿ ಕೊಲೆ ಮಾಡಿದ ಪಾಪಿಗಳು

ಆದ್ರೆ ಯುವತಿ ಸಹೋದರರು ಚಂದ್ರಕಾಂತ್ ನನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಿರಲಿಲ್ಲಾ. ಹೀಗಾಗಿ ನಿನ್ನೆ ಸಂಜೆ ಆರು ಗಂಟೆಗೆ ಚಂದ್ರಕಾಂತ್ ಮನೆಗೆ ಬಂದಿದ್ದ. ಆದ್ರೆ ಮನೆಗೆ ಬಂದು ರಾತ್ರಿ ಏಳು ಗಂಟೆ ಸಮಯದಲ್ಲಿ ಹೊರಹೋದ ನಂತರ, ಯುವತಿಯ ಸಹೋದರನಾದ ಈರಪ್ಪ, ಮತ್ತು ಆತನ ಸಂಬಂಧಿಕರಾದ ಹುಲೆಪ್ಪಾ, ರಾಕೇಶ್ ಅನ್ನೋರು ಕರೆದುಕೊಂಡು ಹೋಗಿ ಕೊಲೆ ಮಾಡಿದ್ದಾರೆ. ತಮ್ಮ ಸಹೋದರಿಯ ಬಾಳು ಚಂದ್ರಕಾಂತ್ ನಿಂದಲೇ ಹಾಳಾಗುತ್ತಿದೆ. ಆತನನ್ನೇ ಮುಗಿಸಿದ್ರೆ, ತಮ್ಮ ಸಹೋದರಿ ನಾವು ಹೇಳಿದಂತೆ ಕೇಳುತ್ತಾಳೆ ಅಂತ ತಿಳಿದು ಕೊಲೆ ಮಾಡಿದ್ದಾರಂತೆ.

ಇದನ್ನೂ ಓದಿ: Chikkamagaluru: ಮಲೆನಾಡಲ್ಲಿ ವರುಣನ ಆರ್ಭಟ, ಭಾರೀ ಮಳೆಗೆ ಕೊಚ್ಚಿ ಹೋದ ಬಾಲಕಿ

ಯುವತಿಯ ಸಹೋದರರು ವಶಕ್ಕೆ

ಸದ್ಯ ಚಂದ್ರಕಾಂತ್ ಪೂಜಾರಿ ಕೊಲೆ ಬಗ್ಗೆ ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು, ಕೊಲೆ ಮಾಡಿರೋ ಯುವತಿಯ ಮೂವರು ಸಹೋದರರನ್ನು ವಶಕ್ಕೆ ಪಡೆದಿದ್ದು ವಿಚಾರಣೆ ನಡೆಸುತ್ತಿದ್ದಾರೆ. ಆದ್ರೆ ಬಾಳಿ ಬದುಕಬೇಕಿದ್ದ, ಹೆತ್ತವರಿಗೆ ಆಶ್ರಯವಾಗಬೇಕಿದ್ದ ಯುವಕ, ಯುವತಿಯ ಸಹೋದರರ ಆಕ್ರೋಶಕ್ಕೆ ಬಲಿಯಾಗಿರುವದು ಮಾತ್ರ ದುರಂತವೇ ಸರಿ.

(ವರದಿ: ಅರುಣ್ ಕದಂ, ನ್ಯೂಸ್ 18, ಕಲಬುರಗಿ)
Published by:Annappa Achari
First published: