ಬೆಂಗಳೂರು (ಜ. 12): ಕಳ್ಳರು ಸಾಮಾನ್ಯವಾಗಿ ಸಿಕ್ಕ ಸಿಕ್ಕ ವಾಹನಗಳನ್ನು ಕದ್ದು ಮನಸಿಗೆ ಬಂದ ಬೆಲೆಗೆ ಮಾರಾಟ ಮಾಡ್ತಾರೆ. ಅಲ್ಲದೆ ಗುಜರಿಗಳಿಗೆ ಗ್ಯಾರೇಜ್‌ಗಳಿಗೆ ಹಾಕ್ತಾರೆ. ಆದರೆ ಸ್ಮಾರ್ಟ್ ಕಳ್ಳರ ಗ್ಯಾಂಗ್ ಒಂದು ಕಸ್ಟಮರ್ ಬಳಿ ಆರ್ಡರ್ ತಗೊಂಡು ಯಾವ ಗಾಡಿ ಬೇಕೋ ಅದೇ ಗಾಡಿಯನ್ನು ಕಳ್ಳತನ ಮಾಡಿ ಮೂರು ಕಾಸಿಗೆ ಮಾರಾಟ ಮಾಡುತ್ತಿದ್ದರು. ಇದೀಗ ಆ ಗ್ಯಾಂಗ್ ಈಗ ಪೊಲೀಸರ ಅತಿಥಿಯಾಗಿದೆ. ಬಾಲಾಜಿ (20) , ಲೋಕೇಶ್ (21), ಗೋವಿಂದರಾಜು (35), ಕೆಂಪರಾಜು (22) ಬಂಧಿತ ಆರೋಪಿಗಳು.
ಬೆಂಗಳೂರಿನ ಹೆಸರಘಟ್ಟ ರಸ್ತೆಯ ಮಂಜುನಾಥ ನಗರ ಬಸ್ ನಿಲ್ದಾಣದ ಬಳಿಯ ಮರಳು ಸ್ಟ್ಯಾಂಡ್‌ನಲ್ಲಿ ಡಿಸೆಂಬರ್ 30 ನೇ ತಾರೀಖು ಎಂ ಸ್ಯಾಂಡ್ ಲೋಡ್ ಸಮೇತ ನಿಂತಿದ್ದ ಟ್ರ್ಯಾಕ್ಟರ್ ಅನ್ನು ಬೆಳಗಿನ ಜಾವ ಮೂರು ಗಂಟೆ ಸುಮಾರಿಗೆ ಕಳ್ಳತನ ಮಾಡುತ್ತಾರೆ. ಕಳ್ಳತನ ಸಂಬಂಧ ಟ್ರ್ಯಾಕ್ಟರ್ ಮಾಲೀಕ ಮಂಜುನಾಥ್ ಬಾಗಲಗುಂಟೆ ಪೊಲೀಸರಿಗೆ ದೂರು ಸಲ್ಲಿಸುತ್ತಾರೆ.
6 ದಿನಗಳಲ್ಲೇ ಮತ್ತೊಂದ್ರು ಟ್ರ್ಯಾಕ್ಟರ್ ಕಳವು
ಪ್ರಕರಣದ ಸಂಬಂಧ ಬಾಗಲಗುಂಟೆ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆಗೆ ಮುಂದಾದಾಗ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸತ್ಯನಾರಾಯಣ್ ಎನ್ನುವ ವ್ಯಕ್ತಿಯ ಮತ್ತೊಂದು ಟ್ರ್ಯಾಕ್ಟರ್ ಕಳುವಾಗುತ್ತದೆ. ಎರಡು ಪ್ರಕರಣಗಳು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಗ ಪೊಲೀಸರಿಗೆ ಪ್ರಕರಣ ತಲೆಬಿಸಿಯಾಗುತ್ತದೆ.
ಗ್ರಾಹಕರನ್ನ ಕೇಳಿ ವಾಹನ ಕಳವು
ಹೌದು ಈ ಖತರ್ನಾಕ್ ಗ್ಯಾಂಗ್ ದೂರದ ಹಳ್ಳಿಗಳಲ್ಲಿ ಗ್ರಾಹಕರನ್ನು ಹಿಡಿದು ಬೆಂಗಳೂರಿನಿಂದ ವಾಹನ ತಂದು ಕೊಡ್ತೀವಿ. ನಿಮಗೆ ಯಾವ ವಾಹನ ಬೇಕು ಹೇಳಿ ಎಂದು ಆರ್ಡರ್ ತೆಗೆದುಕೊಳ್ಳುತ್ತಿದ್ದರು. ಅವರು ಹೇಳಿದ ಗಾಡಿಗಳಿಗೆ ನಕಲಿ ಜ಼ೆರಾಕ್ಸ್ ದಾಖಲಾತಿಗಳನ್ನು ಸೃಷ್ಟಿಸಿ ಮಾರಾಟ ಮಾಡುತ್ತಿದ್ದರು.
ಹಳ್ಳಿ ರಸ್ತೆಗಳಲ್ಲಿ ವಾಹನ ಸಾಗಾಟ
ಪೊಲೀಸರ ತನಿಖೆಯ ದಿಕ್ಕು ತಪ್ಪಿಸಲು ಕದ್ದ ವಾಹನಗಳನ್ನು ಹೆದ್ದಾರಿಗಳಲ್ಲಿ ಕೊಂಡೊಯ್ಯದೇ ಹಳ್ಳಿಗಾಡಿನ ರಸ್ತೆಗಳಲ್ಲಿ ತೆಗೆದುಕೊಂಡು ಹೋಗುತ್ತಿದ್ದರು. ಬಳಿಕ ಆಂಧ್ರ ಪ್ರದೇಶದ ರೊಳ್ಳೆಯಲ್ಲಿ ವಾಹನಗಳಿಗೆ ರೀಪೇಯಿಂಟ್ ಮಾಡಿಸಿ ನಂಬರ್ ಬದಲಾಯಿಸಿ ಮತ್ತೆ ಕರ್ನಾಟಕಕ್ಕೆ ತಂದು ಮಾರಾಟ ಮಾಡುತ್ತಿದ್ದರು.
ಇದನ್ನು ಓದಿ: ಬೆಂಗಳೂರಿನಲ್ಲಿ ನಮ್ಮದೇನು ಕೆಲಸ, ನಮ್ಮ ಮೊಬೈಲ್ ಕರೆನ್ಸಿ ಖಾಲಿಯಾಗಿದೆ; ಯತ್ನಾಳ ಮಾರ್ಮಿಕ ಮಾತು
ಪ್ರಕರಣದ ಬೆನ್ನತ್ತಿದ ಬಾಗಲಗುಂಟೆ ಪೊಲೀಸರು ಸುಮಾರು 250 ಕಿಲೋ ಮೀಟರ್ ಸಿಸಿ ಕ್ಯಾಮೆರಾಗಳ ಬೆನ್ನು ಬಿದ್ದಾಗ ಆರೋಪಿಗಳ ಸುಳಿವು ಸಿಕ್ಕಿದೆ. ಬೆಂಗಳೂರಿನ ಶೆಟ್ಟಿಹಳ್ಳಿಯಲ್ಲಿ ಕದ್ದ ಬೈಕ್‌ನಲ್ಲಿ ಅನುಮಾನವಾಗಿ ಓಡಾಡುತ್ತಿದ್ದ ಆರೋಪಿಗಳಾದ ಕೆಂಪರಾಜು ಹಾಗೂ ಗೋವಿಂದನನ್ನು ಬೈಕ್ ತಡೆದು ವಿಚಾರಿಸಿದಾಗ ಕದ್ದ ಬೈಕ್ ಎಂದು ಪೊಲೀಸರಿಗೆ ತಿಳಿದ ನಂತರ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ನಂತರ ನಾಲ್ಕು ಜನ ಸೇರಿ ಬಾಗಲಗುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎರಡು ಟ್ರ್ಯಾಕ್ಟರ್, ನಾಲ್ಕು ಬೈಕ್ ಹಾಗೂ ಮಾದನಾಯಕನಹಳ್ಳಿ ಠಾಣಾ ವ್ಯಾಪ್ತಿಯ ಎರಡು ಬೈಕ್‌ಗಳನ್ನು ಸೇರಿದಂತೆ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೂರು ಬೈಕ್ ಕದ್ದಿರುವುದು ತಿಳಿದು ಬರುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ