Kidnap: ಎಣ್ಣೆ ಪಾರ್ಟಿ ಮಾಡೋಣ ಬಾ ಅಂತ ಸ್ನೇಹಿತನನ್ನೇ ಕಿಡ್ನಾಪ್ ಮಾಡಿದ್ದ ಐನಾತಿ ಗ್ಯಾಂಗ್...!

ದೂರು ದಾಖಲಾಗುತ್ತಿದ್ದಂತೆ ಕುಟುಂಬಸ್ಥರಿಗೆ ಕರೆ‌ ಮಾಡಿ ಎರಡು ದಿನದಲ್ಲಿ ಹಣ ಕೊಡಲಿಲ್ಲ ಅಂದರೆ ನಾವು ಸಾಯ್ತೀವಿ, ಅವನನ್ನು ಸಾಯಿಸ್ತೀವಿ ಎಂದು ಅಪಹರಣಕಾರರು ಬೆದರಿಕೆ ಹಾಕಿದ್ದರು. ತಕ್ಷಣವೇ ಪೊಲೀಸರ ಎರಡು ತಂಡಗಳು ತಮಿಳುನಾಡಿನತ್ತ ಪ್ರಯಾಣ ಬೆಳೆಸಿತ್ತು.

ಸಾಂದರ್ಭಿಕ ಚಿತ್ರ.

ಸಾಂದರ್ಭಿಕ ಚಿತ್ರ.

  • News18
  • Last Updated :
  • Share this:
ಬೆಂಗಳೂರು: ಎಣ್ಣೆ ಪಾರ್ಟಿ ಮಾಡೋಣ ಬಾ ಎಂದು ಕಾರಿನಲ್ಲಿ ಕರೆದುಕೊಂಡು ಹೋದ ಸ್ನೇಹಿತರೇ ಸ್ನೇಹಿತನನ್ನು ಕಿಡ್ನಾಪ್ (Kidnaped By Friends) ಮಾಡಿದ್ದಾರೆ‌. ಸ್ನೇಹಿತನನ್ನು ಅಪಹರಿಸಿ ಎರಡು ಕೋಟಿ ರೂಪಾಯಿಗೆ ಬೇಡಿಕೆಯಿಟ್ಟಿದ್ದ ಆರೋಪದಡಿ ಮೂವರು ಅಪಹರಣಕಾರರನ್ನು ಕೋರಮಂಗಲ ಪೊಲೀಸರು ಬಂಧಿಸಿರುವುದು ತಡವಾಗಿ ಬೆಳಕಿಗೆ ಬಂದಿದೆ. ಟೆಕ್ಕಿ ವಿನೀತ್ ವರ್ಧನ್ ಅಪಹರಣಕ್ಕೆ ಒಳಗಾಗಿದ್ದು ಸ್ನೇಹಿತ ಅಹಮದ್ ಸನೂಪ್ ಎಂಬುವರು ನೀಡಿದ‌ ದೂರಿನ ಮೇರೆಗೆ ಆರೋಪಿಗಳಾದ‌ ಪ್ರಶಾಂತ್, ಸಂತೋಷ್ ಹಾಗೂ ಅರಿವೇಗನ್ ಎಂಬುವರನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ‌‌‌ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವೃತ್ತಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದ ವಿನೀತ್ ವರ್ಧನ್ ಕೆಲ ತಿಂಗಳ ಹಿಂದೆ ಸ್ಟಾರ್ಟಪ್ ಕಂಪೆನಿ ಆರಂಭಿಸಿದ್ದರು. ಇತ್ತೀಚೆಗೆ ಬೇರೊಂದು ಕಂಪೆನಿ ಜೊತೆ ಒಡಂಬಡಿಕೆ ಮಾಡಿಕೊಂಡಿದ್ದರು. ಆರೋಪಿಗಳಾದ ಪ್ರಶಾಂತ್ ಹಾಗೂ ಸಂತೋಷ್ ನೊಂದಿಗೆ ವಿನೀತ್ ಹಣಕಾಸಿನ ವ್ಯವಹಾರ ಹೊಂದಿದ್ದ.‌ ಆದರೆ ವಿನೀತ್ ಕಡೆಯಿಂದ ಬರಬೇಕಾಗಿದ್ದ ಹಣ ಕೊಡಲು ಆರೋಪಿಗಳಿಗೆ ನಿರಾಕರಿಸುತ್ತಿದ್ದನಂತೆ. ಅಲ್ಲದೇ ಒಡಂಬಡಿಕೆ ಮಾಡಿಕೊಂಡಿದ್ದ ಕಂಪೆನಿಯಿಂದ ವಿನುತ್ ಹಣ ನೀಡಬೇಕಾಗಿತ್ತು. ಈ ವಿಷಯ ಅರಿತಿದ್ದ ಸ್ನೇಹಿತರು ಈತನನ್ನು ಅಪಹರಿಸಿದರೆ ಹಣ ಗಳಿಸಬಹುದು ಎಂದು ಯೋಜನೆ ರೂಪಿಸಿದ್ದಾರೆ‌.

ಅದರಂತೆ ಸ್ನೇಹಿತನ ಪೋರ್ಡ್ ಕಾರು ಪಡೆದು ಮನೆ ಬಳಿ ಹೋಗಿ ಎಣ್ಣೆ ಸಮೇತ ಪಾರ್ಟಿ ಮಾಡೋಣ ಬಾ ಎಂದು ಕರೆದಿದ್ದಾರೆ. ಅಪಹರಣ ಪ್ಲ್ಯಾನ್ ಅರಿಯದ ವಿನೀತ್,  ಸ್ನೇಹಿತರು ಎಂಬ ಕಾರಣಕ್ಕಾಗಿಯೇ ಸಹಜವಾಗಿ ಕಾರು ಹತ್ತಿದ್ದಾನೆ. ಕೋರಮಂಗಲ- ಸಿಲ್ಕ್ ಬೋರ್ಡ್ ಮಾರ್ಗವಾಗಿ ಎಲೆಕ್ಟ್ರಾನಿಕ್ ಸಿಟಿ ಟೋಲ್ ಕ್ರಾಸ್ ಆಗುತ್ತಿದ್ದಂತೆ ಅನುಮಾನ ವ್ಯಕ್ತಪಡಿಸಿ ಎಲ್ಲಿಗೆ ಹೋಗುತ್ತಿರುವುದಾಗಿ ವಿನೀತ್ ಪ್ರಶ್ನಿಸಿದ್ದಾರೆ. ಈ ವೇಳೆ‌ ಅಸಲಿ ಮುಖ ಪ್ರದರ್ಶಿಸಿದ ಸ್ನೇಹಿತರು ವಿನೀತ್ ಮುಖಕ್ಕೆ ಬಟ್ಟೆ ತುರುಕಿ ಕಿರುಚಾಡದಂತೆ ತಾಕೀತು ಮಾಡಿದ್ದಾರೆ. ನಂತರ ತಮಿಳುನಾಡಿಗೆ ಕರೆದುಕೊಂಡು ಹೋಗಿ ಒಂದೆಡೆ ಕೂಡಿ ಹಾಕಿಕೊಂಡು ಕಿಡ್ನ್ಯಾಪ್ ಮಾಡಿದ್ದಾರೆ‌. ಎರಡು ದಿನ‌ವಾದರೂ ವಿನೀತ್ ಮನೆಗೆ ಬರದಿದ್ದಾಗ ಕೋರಮಂಗಲ ಠಾಣೆಗೆ ಕುಟುಂಬಸ್ಥರು ದೂರು ನೀಡಿದ್ದಾರೆ.

ವಿನೀತ್ ಕುಟುಂಬಸ್ಥರು ಠಾಣೆಯಲ್ಲಿ ಇರುವಾಗಲೇ 2 ಕೋಟಿ ರೂ. ಕೊಟ್ಟರೆ ಬಿಡುವುದಾಗಿ ಆರೋಪಿಗಳು ವಾಟ್ಸಾಪ್ ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ವಿಶೇಷ ತಂಡ ರಚಿಸಿ ಆರೋಪಿಗಳ ಪತ್ತೆ ಕಾರ್ಯಾಚರಣೆಗೆ ಇಳಿದಿತ್ತು. ಪ್ರಾಥಮಿಕ ಹಂತವಾಗಿ ತನಿಖೆ ವೇಳೆ ಕಾರಿನಲ್ಲಿ‌ ಕಿಡ್ನ್ಯಾಪ್ ಮಾಡಿ‌ ಓಡಾಡುತ್ತಿರುವ ಬಗ್ಗೆ ಸಿಸಿಟಿವಿ ಸೆರೆಯಾಗಿತ್ತು‌. ಕಾರಿನ‌ ನೋಂದಣಿ ಸಂಖ್ಯೆ ಆಧರಿಸಿ ಜಾಡು ಹಿಡಿದ ಪೊಲೀಸರಿಗೆ ಆರೋಪಿ‌ ಪ್ರಶಾಂತ್ ಸ್ನೇಹಿತರೊಬ್ಬರಿಂದ ಪೋರ್ಡ್ ಕಾರು ಪಡೆದಿರುವುದು ಗೊತ್ತಾಗಿತ್ತು. ಕಾರಿನ ಮಾಲೀಕನನ್ನು ಕರೆಯಿಸಿ ವಿಚಾರಿಸಿದಾಗ ಆರೋಪಿಯೇ ಕಾರು ಪಡೆದಿರುವುದು ದೃಢವಾಗಿತ್ತು. ಬಳಿಕ ತಮಗೆ ಬಂದ ಫಾಸ್ಟ್ ಟ್ಯಾಗ್ ನಿಂದ ಹಣ ಕಡಿತವಾಗಿರುವ ಮೇಸೆಜ್ ಬಂದಿರುವುದನ್ನು ಮಾಲೀಕ ಪೊಲೀಸರಿಗೆ ತೋರಿಸಿದ್ದ. ಎಲೆಕ್ಟ್ರಾನಿಕ್ ಸಿಟಿ ಟೋಲ್ ನಲ್ಲಿ ಕಾರು ಹೋಗಿರುವುದನ್ನು ಪೊಲೀಸರು ಖಚಿತಪಡಿಸಿಕೊಂಡಿದ್ದರು. ಇದೇ ಮಾಹಿತಿ ಆಧರಿಸಿ ಆರೋಪಿಗಳು ತಮಿಳುನಾಡಿನಲ್ಲಿ ಇರುವ ಬಗ್ಗೆ ಪೊಲೀಸರು ಅರಿತುಕೊಂಡಿದ್ದರು.

ಇದನ್ನು ಓದಿ: Yadagiri Farmers Protest: ಜೀವ ಹೋದರೂ ಪರವಾಗಿಲ್ಲ ಕೈಗಾರಿಕೆ ಸ್ಥಾಪನೆಗೆ ಭೂಮಿ ನೀಡಲ್ಲ: ಸರಕಾರದ ವಿರುದ್ಧ ಅನ್ನದಾತರ ಅಕ್ರೋಶ...!

ಇನ್ನೊಂದೆಡೆ‌‌ ದೂರು ದಾಖಲಾಗುತ್ತಿದ್ದಂತೆ ಕುಟುಂಬಸ್ಥರಿಗೆ ಕರೆ‌ ಮಾಡಿ ಎರಡು ದಿನದಲ್ಲಿ ಹಣ ಕೊಡಲಿಲ್ಲ ಅಂದರೆ ನಾವು ಸಾಯ್ತೀವಿ, ಅವನನ್ನು ಸಾಯಿಸ್ತೀವಿ ಎಂದು ಅಪಹರಣಕಾರರು ಬೆದರಿಕೆ ಹಾಕಿದ್ದರು. ತಕ್ಷಣವೇ ಪೊಲೀಸರ ಎರಡು ತಂಡಗಳು ತಮಿಳುನಾಡಿನತ್ತ ಪ್ರಯಾಣ ಬೆಳೆಸಿತ್ತು. ಆರೋಪಿಗಳ ಮೊಬೈಲ್ ಲೋಕೇಷನ್ ಆಧರಿಸಿ ಉಳಿದುಕೊಂಡಿದ್ದ ಹೊಟೇಲ್ ನಲ್ಲಿ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
Published by:HR Ramesh
First published: