• Home
  • »
  • News
  • »
  • state
  • »
  • ಕುಕ್ಕೆ ಸುಬ್ರಹ್ಮಣ್ಯದಲ್ಲಿ ದೇವರ ನೈವೇದ್ಯ ಸ್ವೀಕರಿಸದೆ ತೆರಳಿದ ದೇವರ ಮೀನುಗಳು..!

ಕುಕ್ಕೆ ಸುಬ್ರಹ್ಮಣ್ಯದಲ್ಲಿ ದೇವರ ನೈವೇದ್ಯ ಸ್ವೀಕರಿಸದೆ ತೆರಳಿದ ದೇವರ ಮೀನುಗಳು..!

ದೇವರ ಮೀನುಗಳಿಗೆ ನೈವೇದ್ಯ ಹಾಕುತ್ತಿರುವ ಪುರುಷರಾಯ ದೈವ

ದೇವರ ಮೀನುಗಳಿಗೆ ನೈವೇದ್ಯ ಹಾಕುತ್ತಿರುವ ಪುರುಷರಾಯ ದೈವ

ಕುಮಾರಧಾರಾ ಸ್ನಾನಘಟ್ಟದಲ್ಲಿ ಭಕ್ತರಿಗೆ ತೀರ್ಥಸ್ನಾನ ನೆರವೇರಿಸಲು ನೀರನ್ನು ಶೇಖರಿಸಲು ಮೀನುಗಳಿಂದ ತುಂಬಿದ್ದ ಸ್ನಾನಘಟ್ಟದ ಬಳಿ ಜೆಸಿಬಿ ಬಳಸಿ ಹೂಳು ತೆಗೆಯಲಾಗಿತ್ತು. ಯಂತ್ರಗಳ ಶಬ್ದಕ್ಕೆ ಬೆಚ್ಚಿದ್ದ ಮೀನುಗಳು ಸ್ನಾನಘಟ್ಟದಿಂದ ಬೇರಡೆಗೆ ಸ್ಥಳಾಂತರಗೊಂಡಿದೆ.

  • Share this:

ಮಂಗಳೂರು(ಡಿಸೆಂಬರ್​. 29): ಹಲವಾರು ವೈಶಿಷ್ಠ್ಯಗಳನ್ನು ಹೊಂದಿರುವ ಹೆಸರಾಂತ ನಾಗಕ್ಷೇತ್ರ ದಕ್ಷಿಣಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭಕ್ತರಂತೆ ಮೀನುಗಗಳು ಜಾತ್ರೆ ನೋಡಲು ಬರುವುದು ಇಲ್ಲಿನ ವಿಶಿಷ್ಠತೆಯಾಗಿದೆ. ಕ್ಷೇತ್ರದಲ್ಲಿ ಪ್ರತಿವರ್ಷ ಚಂಪಾ ಷಷ್ಠಿಯಂದು ನಡೆಯುವ ಜಾತ್ರೋತ್ಸವಕ್ಕೆ ಲಕ್ಷಾಂತರ ಮಂದಿ ಭಕ್ತಾಧಿಗಳು ಆಗಮಿಸಿ ಇಲ್ಲಿನ ವೈಭವಕ್ಕೆ ಸಾಕ್ಷಿಯಾಗುತ್ತಾರೆ. ಹಲವು ಪವಾಡಗಳ ನಾಡಾಗಿರುವ ಸುಬ್ರಹ್ಮಣ್ಯದಲ್ಲಿ ಜಾತ್ರೆಯ ಸಂದರ್ಭ ದೇವಾಲಯದ ಕುಮಾರಧಾರ ಸ್ನಾನ ಘಟ್ಟಕ್ಕೆ ಮೀನುಗಳು ಅತಿಥಿಗಳಾಗಿ ಬರುವುದು ಅವುಗಳಲ್ಲಿ ಒಂದಾಗಿದೆ. ದೇವಸ್ಥಾನದಲ್ಲಿ ಜಾತ್ರೆಯ ಸಂದರ್ಭ ಕೊಪ್ಪರಿಗೆ ಏರುವ ದ್ವಾದಶಿಯಂದು , ದೂರದ ಏನೆಕಲ್ಲು- ಸಂಕಪಾಲ ಸುಬ್ರಹ್ಮಣ್ಯ ದೇವಸ್ಥಾನದ ಮೀನುಗಳು ಇಲ್ಲಿಗೆ ಬರುತ್ತದೆ. ಜಾತ್ರೆ ಮುಗಿಯುವವರೆಗೂ ಇಲ್ಲೇ ಕಂಡು ಬರುವ ಈ ಮೀನುಗಳು ದೇವಸ್ಥಾನದ ಜಾತ್ರೋತ್ಸವದ ಕೊನೆಯಲ್ಲಿ ನಡೆಯುವ ದೈವದ ಕೋಲದ ಬಳಿಕ ತಮ್ಮ ಸ್ವಸ್ಥಾನಕ್ಕೆ ಮರಳುವುದು ಇಲ್ಲಿ ಪ್ರತಿವರ್ಷ ನಡೆಯುವ ವಾಡಿಕೆಯಾಗಿದೆ.


ದೈವವು ಬಂದು ನದಿಗೆ ನೈವೇದ್ಯ ಹಾಕಿದ ಬಳಿಕ ಅದನ್ನು ತಿಂದು ಅವುಗಳು ಮತ್ತೆ ಬಂದಲ್ಲಿಗೆ ಮರಳುತ್ತವೆ. ದೇವಸ್ಥಾನದ ಆವರಣದಲ್ಲಿ ನಡೆಯುವ ಪುರುಷರಾಯ ದೈವದ ಕೋಲದ ಬಳಿಕ ಈ ದೈವವು ದೇವಸ್ಥಾನದಿಂದ ಸುಮಾರು ಎರಡು ಕಿಲೋಮೀಟರ್ ದೂರದಲ್ಲಿರುವ ಕುಮಾರಧಾರಾ ಸ್ನಾನಘಟ್ಟದ ಬಳಿಗೆ ಬಂದು ದೇವರ ಮೀನುಗಳಿಗೆ ನೈವೇದ್ಯ ಹಾಕುತ್ತದೆ. ಆದರೆ ಈ ಬಾರಿ ದೈವ ಹಾಕಿದ ನೈವೇದ್ಯ ಸ್ವೀಕರಿಸಲು ದೇವರ ಮೀನುಗಳೇ ಇರಲಿಲ್ಲ. ಮೀನುಗಳು ಇರದಿರುವುದನ್ನು ಕಂಡು ದೈವವೂ ಅಸಮಾಧಾನ ವ್ಯಕ್ತಪಡಿಸಿದ ಘಟನೆಯೂ ನಡೆದಿದೆ.


ಕುಮಾರಧಾರಾ ಸ್ನಾನಘಟ್ಟದಲ್ಲಿ ಭಕ್ತರಿಗೆ ತೀರ್ಥಸ್ನಾನ ನೆರವೇರಿಸಲು ನೀರನ್ನು ಶೇಖರಿಸಲು ಮೀನುಗಳಿಂದ ತುಂಬಿದ್ದ ಸ್ನಾನಘಟ್ಟದ ಬಳಿ ಜೆಸಿಬಿ ಬಳಸಿ ಹೂಳು ತೆಗೆಯಲಾಗಿತ್ತು. ಯಂತ್ರಗಳ ಶಬ್ದಕ್ಕೆ ಬೆಚ್ಚಿದ್ದ ಮೀನುಗಳು ಸ್ನಾನಘಟ್ಟದಿಂದ ಬೇರಡೆಗೆ ಸ್ಥಳಾಂತರಗೊಂಡಿದೆ. ತೀರ್ಥಸ್ನಾನ ನೆರವೇರಿಸುವ ಸ್ನಾನಘಟ್ಟದ ಬಳಿ ಕ್ಷೇತ್ರದಲ್ಲಿ ಜಾತ್ರಾ ಮಹೋತ್ಸವ ಆರಂಭಕ್ಕೆ ಮೊದಲೇ ಹೂಳು ತೆಗೆಯುವ ವ್ಯವಸ್ಥೆಯನ್ನು ಪ್ರತೀ ವರ್ಷ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಜಾತ್ರೆ ಆರಂಭಗೊಂಡು ಮೀನುಗಳು ಸ್ನಾನಘಟ್ಟದ ಬಳಿ ಬಂದ ಬಳಿಕ ಹೂಳು ತೆಗೆಯುವ ಕಾಮಗಾರಿ ನಡೆಸಲಾಗಿದೆ. ಇದರಿಂದಾಗಿ ಮೀನುಗಳು ಜಾತ್ರೆ ಕಳೆದ ನೈವೇದ್ಯ ಸ್ವೀಕರಿಸುವ ಮೊದಲೇ ಬೇರೆಡೆಗೆ ಹೋಗಿವೆ.


ಇದನ್ನೂ ಓದಿ : ಪ್ರಕೃತಿ ಪ್ರಿಯರಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ : ಗೋಕಾಕ್ ಫಾಲ್ಸ್ ಗೆ 350 ಕೋಟಿ ವೆಚ್ಚದಲ್ಲಿ ಗಾಜಿನ ಸೇತುವೆ


ದೇವರ ಮೀನುಗಳಿಗಾಗಿಯೇ ಸುಬ್ರಹ್ಮಣ್ಯ ದೇವರ ನೈವೇದ್ಯ ತರುವ ದೈವಕ್ಕೂ ಈ ಬಾರಿ ನಿರಾಶೆಯಾಗಿದೆ. ಈ ವಿಚಾರವಾಗಿ ದೈವವು ತನ್ನ ಅಸಮಾಧಾನವನ್ನು ದೇವಸ್ಥಾನದ ಅಭಿವೃದ್ಧಿ ಸಮಿತಿ ಹಾಗೂ ಕಾರ್ಯನಿರ್ವಾಹಕ ಅಧಿಕಾರಿಗಳ ಮುಂದೆಯೂ ತೋರಿಸಿದೆ.


ಜಾತ್ರೆಗೆ ಮೊದಲೇ ಹೂಳು ತೆಗೆಯದ ಕಾರಣ ಸ್ನಾನಘಟ್ಟಕ್ಕೆ ಬರುವ ಮೀನುಗಳ ಸಂಖ್ಯೆಯಲ್ಲೂ ಈ ಬಾರಿ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿತ್ತು. ಮಾಧ್ಯಮಗಳ ವರದಿಗಳ ಬಳಿಕ ಹೂಳು ತೆಗೆಯುವ ಕಾರ್ಯ ಮಾಡಲಾಗಿತ್ತಾದರೂ, ತಮ್ಮ ನೈಸರ್ಗಿಕ ವ್ಯವಸ್ಥೆಗೆ ತೊಂದರೆಯಾದ ಹಿನ್ನಲೆಯಲ್ಲಿ ದೇವರ ಮೀನುಗಳು ತಮ್ಮ ಪಾಡಿಗೇ ತಾವು ತೆರಳಿರುವುದು ಭಕ್ತರ ಬೇಸರಕ್ಕೂ ಕಾರಣವಾಗಿದೆ.

Published by:G Hareeshkumar
First published: