Kodagu: ಉಕ್ರೇನ್‌ನಲ್ಲಿ ಬಾಂಬ್ ಬೀಳುತ್ತಿದೆ ಎಂದ ಮಗ, ಇಲ್ಲಿ ಪುತ್ರನಿಗಾಗಿ ಕಣ್ಣೀರಿಟ್ಟ ತಂದೆ

ಉಕ್ರೇನ್‌ನಲ್ಲಿ ಕ್ಷಣ-ಕ್ಷಣಕ್ಕೂ ಆತಂಕ ಜಾಸ್ತಿಯಾಗುತ್ತಲೇ ಇದೆ. ಅಲ್ಲಿ ಸಿಲುಕಿಕೊಂಡ ಭಾರತೀಯ ವಿದ್ಯಾರ್ಥಿಗಳೆಲ್ಲ ಭಯದಿಂದಲೇ ಇದ್ದಾರೆ. ಇತ್ತ ಇಲ್ಲಿರುವ ಅವರ ಹೆತ್ತವರೂ ಕೂಡ ಆತಂಕದಲ್ಲೇ ಇದ್ದಾರೆ.

ಮಗನಿಗಾಗಿ ಕಣ್ಣೀರಿಡುತ್ತಿರುವ ತಂದೆ

ಮಗನಿಗಾಗಿ ಕಣ್ಣೀರಿಡುತ್ತಿರುವ ತಂದೆ

  • Share this:
ಕೊಡಗು: ಉಕ್ರೇನ್ (Ukraine) ದೇಶದ ಮೇಲೆ ರಷ್ಯಾ (Russia) ನಿರಂತರ ದಾಳಿ (Attack) ನಡೆಸುತ್ತಿದ್ದು ಉಕ್ರೇನ್ ದೇಶದ ಖಾರ್ಕಿವ್ ನಗರದಲ್ಲಿ ಸಿಲುಕಿರುವ ತಮ್ಮ ಮಗ ಚಂದನ್ ಗೌಡನನ್ನು ನೆನೆದು ಕೊಡಗಿನ (Kodagu) ಕುಶಾಲನಗರ (Kushalanagara) ತಾಲ್ಲೂಕಿನ ಕೂಡ್ಲೂರಿನಲ್ಲಿರುವ ತಂದೆ ಕೆ.ಕೆ. ಮಂಜುನಾಥ್ ಎಂಬುವರು ಕಣ್ಣೀರಿಟ್ಟಿದ್ದಾರೆ. “ಅಲ್ಲಿ ಉತ್ತಮ ವೈದ್ಯಕೀಯ ಶಿಕ್ಷಣ ಇದೆಯೆಂದು ಉಕ್ರೇನ್ ದೇಶಕ್ಕೆ ಕಳುಹಿಸಿದೆವು. ಕಳೆದ ತಿಂಗಳ ಹಿಂದೆಯಷ್ಟೇ ಊರಿಗೆ ಬಂದಿದ್ದ. ಅದಾಗಲೇ ಯುದ್ಧದ ಭೀತಿ ಇತ್ತು. ಆದರೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಅದೆಲ್ಲಾ ಸಾಮಾನ್ಯ. ಆದರೆ ನಾಗರಿಕರಿಗೆ ಯಾವುದೇ ಸಮಸ್ಯೆ ಆಗುವುದಿಲ್ಲ ಎಂಬ ನಂಬಿಕೆ ಮೇಲೆ ಉಕ್ರೇನ್ ಗೆ ಕಳುಹಿಸಿದ್ದೆವು. ಈಗ ಭೀಕರ ಯುದ್ಧ ಆರಂಭವಾಗಿದೆ. ಕ್ಷಣ ಕ್ಷಣಕ್ಕೂ ಯುದ್ಧ ತೀವ್ರಗೊಳ್ಳುತ್ತಲೇ ಇದ್ದು ಆತಂಕ ಶುರುವಾಗಿದೆ” ಅಂತ ತಂದೆ, ಮಗನ ಫೋಟೋ (Photo) ಹಿಡಿದು ಕಣ್ಣೀರು ಹಾಕುತ್ತಿದ್ದಾರೆ.

ಉಕ್ರೇನ್‌ನಲ್ಲಿ ನಿದ್ದೆಗೆಟ್ಟು ಕಾಯುತ್ತಿದ್ದಾರೆ ವಿದ್ಯಾರ್ಥಿಗಳು

ಗುರುವಾರ ರಾತ್ರಿ ಇಡೀ ಕಾರ್ಕಿವ್ ನಗರದ ಬೆಕೆಟೋವಾ ಮೆಟ್ರೊ ರೈಲು ನಿಲ್ದಾಣದ ಅಂಡರ್ ಗ್ರೌಂಡ್ ನಲ್ಲಿ ರಕ್ಷಣೆ ಪಡೆದಿದ್ದರು. ಶುಕ್ರವಾರ ಬೆಳಿಗ್ಗೆ ಪುನಃ ಅವರವರ ಪ್ಲಾಟ್ ಗಳಿಗೆ ತೆರಳಿದ್ದಾರೆ. ಆದರೆ ಅಲ್ಲಿಯೂ ಎಲ್ಲರೂ ನೆಮ್ಮದಿಯಾಗಿ ನಿದ್ದೆ ಮಾಡಲು ಸಾಧ್ಯವಾಗುತ್ತಿಲ್ಲ. ಒಂದು ಪ್ಲಾಟ್ ನಲ್ಲಿರುವ ಎಲ್ಲರೂ ನಿದ್ದೆ ಮಾಡಿದರೆ ಇಬ್ಬರು ಎಚ್ಚರದಿಂದ ಇದ್ದು, ಯಾವ ಕ್ಷಣದಲ್ಲಿ ಏನು ದುರಂತ ನಡೆಯುವುದೋ ಎಂದು ನಿದ್ದೆಬಿಟ್ಟು ಕಾದು ಕುಳಿತುಕೊಳ್ಳಬೇಕಾಗಿದೆ ಎಂದು ಮಗನ ಸ್ಥಿತಿಯ ನೆನೆದು ಕಣ್ಣೀರು ಇಟ್ಟಿದ್ದಾರೆ.

“ನಮ್ಮ ಕಷ್ಟ ಕೇಳುತ್ತಲೇ ಇಲ್ಲ ಜಿಲ್ಲಾಡಳಿತ”

ಆದರೆ ಇಷ್ಟೆಲ್ಲಾ ಆದರೂ ಇದರೆಗೆ ಜಿಲ್ಲಾಡಳಿತವಾಗಲಿ ಅಥವಾ ಸರ್ಕಾರದ ಯಾವ ಅಧಿಕಾರಿ ಆಗಲಿ ನಮ್ಮನ್ನು ಸಂಪರ್ಕಿಸಿ ನಮ್ಮ ಅಳಲು ಆಲಿಸಿ, ಸಾಂತ್ವನ ಹೇಳುವ ಕೆಲಸ ಮಾಡಿಲ್ಲ ಅಂತಿದ್ದಾರೆ ಮಂಜುನಾಥ್. ಅವರಿಗೆ ತೊಂದರೆಯಾದರೆ ಮಾತ್ರ ನೋವು ಎನ್ನುವ ರೀತಿ ಅಧಿಕಾರಿಗಳು ವರ್ತಿಸುತ್ತಿರುವುದು ಎಷ್ಟು ಮಟ್ಟಿಗೆ ಸರಿ ಎಂದು ಅಸಮಾಧಾನ ತೋಡಿಕೊಂಡಿದ್ದಾರೆ.

ಇದನ್ನೂ ಓದಿ: Russia-Ukraine War: ಉಕ್ರೇನ್‌ನಿಂದ ನಿಮ್ಮ ಮಕ್ಕಳು ಸೇಫ್ ಆಗಿ ಬರ್ತಾರೆ, Don't Worry ಇಲ್ಲಿದೆ ಹೆಲ್ಪ್‌ಲೈನ್

“ಯಾವ ಸಮಯದಲ್ಲಿ ಬಾಂಬ್ ಬೀಳುತ್ತೋ ಗೊತ್ತಿಲ್ಲ”

ಇನ್ನು ಉಕ್ರೇನ್ ನಲ್ಲಿ ಸಿಲುಕಿರುವ ಮೂರನೇ ವರ್ಷದ ಎಂಬಿಬಿಎಸ್ ಓದುತ್ತಿರುವ ಚಂದನ್ ಗೌಡ ಕೂಡ ತಮ್ಮ ಅಳಲು ತೋಡಿಕೊಂಡಿದ್ದು, ಕಾರ್ಕಿವ್ ನಗರದಿಂದ 15 ರಿಂದ 16 ಕಿಲೋ ಮೀಟರ್ ದೂರದಲ್ಲಿಯೇ ಬಾಂಬ್ ಬೀಳುತ್ತಿವೆ. ಇಲ್ಲಿಯೂ ಯಾವಾಗ ಬ್ಲಾಸ್ಟ್ ಆಗುತ್ತಿವೆಯೋ ಎನ್ನುವ ಭಯ ಕಾಡುತ್ತಿದೆ ಅಂತ ಆತಂಕ ತೋಡಿಕೊಂಡಿದ್ದಾನೆ.

“ಊಟಕ್ಕೆ ಏನು ಮಾಡುವುದು ಅಂತ ತೋಚುತ್ತಿಲ್ಲ”

ಪರಿಸ್ಥಿತಿ ಭೀಕರವಾಗುತ್ತಿದೆ ಎನ್ನುವಾಗ ಮೆಟ್ರೋ ಅಂಡರ್ ಗ್ರೌಂಡ್ ಹೋಗಿ ಆಶ್ರಯ ಪಡೆಯಲು ಹೇಳುತ್ತಿದ್ದಾರೆ. ಆದರೆ ಅಲ್ಲಿ ಯಾವುದೇ ಸೌಲಭ್ಯಗಳಿಲ್ಲದೆ ಇರೋದಾದರು ಹೇಗೆ, ಎಷ್ಟು ಗಂಟೆ ಅದರೊಳಗೆ ಇರೋದು. ನಾವು ಇರುವ ಮನೆಯಲ್ಲೂ ಕೂಡ ಒಂದೆರಡು ದಿನಗಳಿಗೆ ಆಗುವಷ್ಟು ಆಹಾರ ಪದಾರ್ಥಗಳಿವೆ. ಆನಂತರ ಊಟಕ್ಕೆ ಏನು ಎನ್ನುವ ಆತಂಕವಿದೆ.

ಪಶ್ಚಿಮ ಕಾರ್ಕಿವ್ ಮೂಲಕ ನಮ್ಮನ್ನು ಹಂಗೇರಿ ತಲುಪಿಸಿ, ಅಲ್ಲಿಂದ ಭಾರತಕ್ಕೆ ಕರೆದೊಯ್ಯುವ ಕೆಲಸವನ್ನು ಭಾರತ ಸರ್ಕಾರ ಮಾಡಲಿ ಎಂದು ಚಂದನ್ ಗೌಡ ಬೇಡಿಕೊಂಡಿದ್ದಾರೆ.

ಇದನ್ನೂ ಓದಿ: Ukraine Crisis: ನನ್ನ ಮಗಳಿರುವ ಸ್ಥಳದಲ್ಲೇ ಬಾಂಬ್​​ಗಳು ಸ್ಫೋಟಿಸುತ್ತಿವೆ: ಬಾಗಲಕೋಟೆಯಲ್ಲಿ ತಾಯಿಯ ಕಣ್ಣೀರು

ಉಕ್ರೇನ್‌ನಲ್ಲೇ ಸಿಲುಕಿದ್ದಾರೆ ಕೊಡಗಿನ ಇನ್ನಷ್ಟು ವಿದ್ಯಾರ್ಥಿಗಳು

ಮತ್ತೊಂದೆಡೆ ಕೂಡಿಗೆಯ ಅಕ್ಷಿತಾ, ಮುಳ್ಳುಸೋಗೆಯ ಲಿಖಿತ್ ಕೂಡ ಇಲ್ಲಿಯೇ ಸಿಲುಕಿದ್ದು, ಅವರು ತಮ್ಮನ್ನು ರಕ್ಷಿಸುವಂತೆ ಬೇಡುತ್ತಿದ್ದಾರೆ. ಇನ್ನು ವಿರಾಜಪೇಟೆ ತಾಲ್ಲೂಕಿನ ಆರ್ಜಿ ಗ್ರಾಮದ ಸೋನು ಬಗ್ಗೆ ಯಾವುದೇ ಮಾಹಿತಿ ದೊರೆತಿಲ್ಲ.
Published by:Annappa Achari
First published: