news18-kannada Updated:January 20, 2020, 1:14 PM IST
ಶಾಸಕರಾದ ಆನಂದ್ ಸಿಂಗ್ ಹಾಗೂ ಸೋಮಶೇಖರ್ ರೆಡ್ಡಿ
ಬಳ್ಳಾರಿ(ಜ. 20): ಪೌರತ್ವ ತಿದ್ದುಪಡಿ ಕಾಯ್ದೆ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯದ ವಿವಿಧ ಕಡೆಗಳಲ್ಲಿ ಪರ ವಿರೋಧದ ಚರ್ಚೆಗಳು ನಡೆಯುತ್ತಿವೆ. ಕಾಯ್ದೆ ವಿರೋಧಿಸಿ ವ್ಯಾಪಕ ಪ್ರತಿಭಟನೆಗಳು ನಡೆಯುತ್ತಿರುವಂತೆಯೇ, ಸಿಎಎ ಬೆಂಬಲಿಸಿ ರ್ಯಾಲಿಗಳೂ ಅಲ್ಲಲ್ಲಿ ನಡೆಯುತ್ತಿವೆ. ಈ ನಡುವೆ ಒಂದು ಕೋಮಿನ ವಿರುದ್ದ ಬರೆದಿರುವ ಶಾಸಕರ ಹೆಸರಿನ ಪತ್ರಗಳು ಮಸೀದಿಗಳಿಗೆ ತಲುಪುತ್ತಿವೆ. ಇದು ದೊಡ್ಡ ಅವಾಂತರ ಸೃಷ್ಟಿಸುತ್ತಿದೆ. ಜೊತೆಗೆ ಕಿಡಿಗೇಡಿಗಳ ಪತ್ತೆ ಹಚ್ಚಲು ಕೂಡ ಪೊಲೀಸರಿಗೆ ದೊಡ್ಡ ತಲೆನೋವಾಗಿದೆ.
ಈ ಪತ್ರವನ್ನು ಸೂಕ್ಷ್ಮವಾಗಿ ಗಮನಿಸಿದ್ರೆ ಮೇಲ್ನೋಟಕ್ಕೆ ಇದು ಕಿಡಿಗೇಡಿಗಳ ಕೃತ್ಯ ಅನಿಸಿದ್ರೂ ಈ ಪತ್ರವೀಗ ರಾಜ್ಯದ ಕೆಲ ಜಿಲ್ಲೆಗಳ ಮಸೀದಿಗಳನ್ನು ತಲುಪಿವೆ. ಈ ನಕಲಿ ಅನುಮಾನಾಸ್ಪದ ಲೆಟರ್ಗಳು ದೊಡ್ಡ ಅವಾಂತರವನ್ನು ಸೃಷ್ಠಿ ಮಾಡಿದ್ದಲ್ಲದೇ ಅಲ್ಲಲ್ಲಿ ಪೊಲೀಸ್ ಠಾಣೆಗೆ ದೂರು ಕೂಡ ನೀಡಲಾಗಿದೆ. ಪೌರತ್ವ ತಿದ್ದುಪಡಿ ಕಾಯ್ದೆ ಪರ ಮಾತನಾಡೋ ಭರದಲ್ಲಿ ಸೋಮಶೇಖರ ರೆಡ್ಡಿ ಜನವರಿ 3 ರಂದು ಪ್ರಚೋದನಾಕಾರಿ ಹೇಳಿಕೆ ನೀಡಿದ್ರು. ಇದು ಬಳ್ಳಾರಿ ಸೇರಿದಂತೆ ರಾಜ್ಯದ ವಿವಿಧೆಡೆ ಖಂಡನೆ ವ್ಯಕ್ತವಾಗಿತ್ತು.
ಬಳ್ಳಾರಿಯಲ್ಲಿ ಈ ಬಗ್ಗೆ ಸೋಮಶೇಖರ್ ರೆಡ್ಡಿ ವಿರುದ್ದ ಎಫ್ಐಆರ್ ಕೂಡ ದಾಖಲಾಗಿದೆ. ಇದನ್ನೇ ನೆಪವಾಗಿಟ್ಟುಕೊಂಡು ಕೆಲವರು ಶಾಸಕ ಆನಂದ ಸಿಂಗ್ ಸಹಿಯುಳ್ಳ ಪತ್ರದಲ್ಲಿ ಹದಿನಾರು ಅಂಶಗಳ ಅಕ್ಷೇಪಾರ್ಹ ಬರಹವನ್ನು ಬರೆದು ಸೋಮಶೇಖರ ರೆಡ್ಡಿ ಹೆಸರಲ್ಲಿ ಮಸೀದಿಗಳಿಗೆ ಪೋಸ್ಟ್ ಮಾಡುತ್ತಿದ್ದಾರೆ. ಈ ಪರಿಣಾಮ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಈ ಪತ್ರದ ಸಂಬಂಧ ಪೊಲೀಸ್ ಠಾಣೆಗಳಲ್ಲಿ ದೂರು ನೀಡಲಾಗುತ್ತಿದೆ.

ಸೋಮಶೇಖರ್ ರೆಡ್ಡಿ ಹೆಸರಿನಲ್ಲಿ ಬದಂದಿರುವ ನಕಲಿ ಪತ್ರ
ಕೆಲ ಕಿಡಿಗೇಡಿಗಳು ಆನಂದ್ ಸಿಂಗ್ ಸಹಿವುಳ್ಳ ಪತ್ರವನ್ನ ನನ್ನ ವಿಳಾಸದೊಂದಿಗೆ ಕಳುಹಿಸುತ್ತಿದ್ದಾರೆ. ಈ ಬಗ್ಗೆ ಬಳ್ಳಾರಿ ಐಜಿಪಿಯವರು ತನಿಖೆ ನಡೆಸುತ್ತಿದ್ದಾರೆ. ನಾನು ಕೂಡ ಗೃಹ ಸಚಿವ ಬಸವರಾಜ ಬೊಮ್ಮಯಿ ಅವರನ್ನು ಭೇಟಿ ಮಾಡಿ, ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸುತ್ತೇನೆ ಎಂದು ಬಳ್ಳಾರಿ ನಗರ ಬಿಜೆಪಿ ಶಾಸಕ ಸೋಮಶೇಖರ ರೆಡ್ಡಿಹೇಳಿದ್ದಾರೆ.

ಶಾಸಕ ಆನಂದ್ ಸಿಂಗ್ ಹೆಸರಿನಲ್ಲಿ ಬಂದ ನಕಲಿ ಪತ್ರ
ಈಗಾಗಲೇ ಪೌರತ್ವ ತಿದ್ದುಪಡಿ ಕಾಯ್ದೆ ಗದ್ದಲದ ಮಧ್ಯೆ ಈ ಅನುಮಾನಾಸ್ಪದ ಪತ್ರಗಳು ಶಾಂತಿ ಕದಡುವ ಪ್ರಯತ್ನ ಮಾಡುತ್ತಿವೆ. ಕಾರವಾರ, ಭಟ್ಕಳ, ರಾಯಚೂರು, ಹಾಸನ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮಸೀದಿಗಳಿಗೆ ಪೋಸ್ಟ್ ಮೂಲಕ ಈ ಪತ್ರಗಳು ಬರುತ್ತಿವೆ. ಇನ್ನು, ಪ್ರಕರಣ ಗಂಭೀರ ಸ್ವರೂಪ ಪಡೆಯುತ್ತಿದ್ದಂತೆಯೇ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡಿದ್ದು, ಈ ಅನುಮಾನಾಸ್ಪದ ಪತ್ರಗಳ ಕುರಿತು ತನಿಖೆ ಮಾಡಲು ಮುಂದಾಗಿದೆ.ಇದನ್ನೂ ಓದಿ :
ಸಾಮಾಜಿಕ ನ್ಯಾಯದ ಆಧಾರದ ಮೇಲೆ ಕೆಪಿಸಿಸಿ ಅಧ್ಯಕ್ಷರ ನೇಮಕ ಮಾಡಿ - ಸೋನಿಯಾಗೆ ಪತ್ರ ಬರೆದ ಪರಮೇಶ್ವರ್
ರಾಯಚೂರು ಎಸ್ಪಿ ವೇದಮೂರ್ತಿ ನೇತೃತ್ವದಲ್ಲಿ ತನಿಖೆ ನಡೆಸುವಂತೆ ಬಳ್ಳಾರಿ ವಲಯದ ಐಜಿಪಿ ನಂಜುಂಡ ಸ್ವಾಮಿ ಸೂಚಿಸಿದ್ದಾರೆ. ಈ ಪತ್ರಗಳನ್ನ ಪೋಸ್ಟ್ ಮಾಡುತ್ತಿರುವ ಕಿಡಿಗೇಡಿಗಳನ್ನ ಪತ್ತೆ ಹಚ್ಚಿ ಕಾನೂನು ರೀತಿಯ ಕ್ರಮ ಕೈಗೊಳ್ಳುವುದಾಗಿ ಬಳ್ಳಾರಿ ವಲಯದ ಐಜಿಪಿ ಎಂ ನಂಜುಂಡಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆಯ ಪರ ವಿರೋಧ ಚರ್ಚೆ ನಡೆಯುವ ಸಂದರ್ಭದಲ್ಲಿ ಒಂದು ಕೋಮಿನ ಕುರಿತ ಅನುಮಾನಾಸ್ಪದ ಪತ್ರಗಳು ಕೆಲ ಪ್ರಶ್ನೆಗಳಿಗೆ ಎಡೆ ಮಾಡಿಕೊಟ್ಟಿದೆ. ಶಾಂತಿ ಕದುಡುವ ದೃಷ್ಟಿಯಿಂದ ಕಿಡಿಗೇಡಿಗಳು ಮಾಡುತ್ತಿರುವ ಈ ಕೃತ್ಯದ ಬಗ್ಗೆ ಗೃಹ ಇಲಾಖೆ ತನಿಖೆ ನಡೆಸಬೇಕಾಗಿದೆ. ಆ ಮೂಲಕ ಇಂತಹ ಅನುಮಾನಾಸ್ಪದ ಪತ್ರಗಳಿಗೆ ಬ್ರೇಕ್ ಹಾಕಿ ಕಿಡಿಗೇಡಿಗಳ ವಿರುದ್ದ ಕಠಿಣ ಕ್ರಮಕೈಗೊಳ್ಳಬೇಕಾಗಿದೆ.
First published:
January 20, 2020, 12:54 PM IST