Lake Damage: ಮೀನಿಗಾಗಿ ಕೆರೆ ಏರಿಯನ್ನೇ ಒಡೆದ ಭೂಪ! ಆರೋಪಿ ವಿರುದ್ಧ ದೂರು ದಾಖಲು

ಕೆರೆ ತುಂಬಿಸುವ ಯೋಜನೆಯಲ್ಲಿ ಬಸವನ ಕೆರೆಗೆ ಈಗಾಗಲೇ ನೀರನ್ನು ಬಿಡಲಾಗಿದೆ. ಮುಂದೊಂದು ದಿನ ಕೆರೆ ತುಂಬಿ ಕೋಡಿ ಹರಿದರೆ, ಈಗ ಕೆರೆ ಏರಿ ಒಡೆದಿರುವುದರಿಂದ ಅಪಾಯ ಸಂಭವಿಸಲಿದೆ ಎಂಬ ಆತಂಕ ಸ್ಥಳೀಯರಲ್ಲಿ ಮನೆ ಮಾಡಿದೆ.

ಮೀನಿಗಾಗಿ ಕೆರೆ ಏರಿ ಒಡೆದ ಭೂಪ

ಮೀನಿಗಾಗಿ ಕೆರೆ ಏರಿ ಒಡೆದ ಭೂಪ

  • Share this:
ಕನಕಪುರ, ರಾಮನಗರ: ಮೀನು (Fish) ಹಿಡಿಯಲು ವ್ಯಕ್ತಿಯೊಬ್ಬ ಏರಿ ಒಡೆದು ನೀರು (Water) ಪೋಲು (Waste) ಮಾಡಿರುವ ಘಟನೆ ರಾಮನಗರ (Ramanagar) ಜಿಲ್ಲೆಯ ಕನಕಪುರ (Kanakapur) ತಾಲೂಕಿನ ಉಯಂಬಳ್ಳಿ ಗ್ರಾಮದಲ್ಲಿ ನಡೆದಿದೆ. ಉಯಂಬಳ್ಳಿ ಗ್ರಾಮದ ಹೊರ ವಲಯದ ಬಸವನ ಕೆರೆಯ (Lake) ಪೂರ್ವ ಭಾಗದಲ್ಲಿ ಗ್ರಾಮದ ಯು.ವಿ. ಶಿವಕುಮಾರ್‌ ಜೆಸಿಬಿ (JCB) ಯಂತ್ರದ ಮೂಲಕ ಅನಧಿಕೃತವಾಗಿ ಏರಿ ಒಡೆದು ನೀರನ್ನು ಪೈಪ್‌ (Pipe) ಮೂಲಕ ಹೊರ ಬಿಟ್ಟು ಪೋಲು ಮಾಡಿದ್ದಾನೆಂಬ ಆರೋಪ ಕೇಳಿಬಂದಿದೆ. ಸ್ವಾರ್ಥಕ್ಕೆ ಕೆರೆ ಏರಿ ಒಡೆದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ರೈತ ಮುಖಂಡನ ವಿರುದ್ಧ ಆರೋಪ

ಗ್ರಾಮ ಪಂಚಾಯತ್‌ನಿಂದ ಕೆರೆಯ ಮೀನು ಪಾಸುವಾರು ಹಕ್ಕನ್ನು ಹರಾಜು ಪ್ರಕ್ರಿಯೆ ಮೂಲಕ ನೀಡಲಾಗಿತ್ತು. ಇತ್ತೀಚಿಗೆ ಸುರಿದ ಮಳೆಯಿಂದ ಕೆರೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹವಾಗಿತ್ತು. ಇದರಿಂದ ಮೀನುಗಾರಿಕೆ ಮಾಡಲು ಅಡ್ಡಿಯಾಗಿದೆ ಎಂಬ ಕಾರಣಕ್ಕೆ ಏರಿಯನ್ನೇ ಒಡೆದು ಪೈಪ್‌ ಮೂಲಕ ನೀರನ್ನು ಹೊರ ಬಿಡಲಾಗಿದೆ ಎಂಬ ಆರೋಪ ರೈತ ಮುಖಂಡರಿಂದ ಕೇಳಿ ಬಂದಿದೆ.

ಕೆರೆಯ ಮೂಲ ಸ್ವರೂಪಕ್ಕೆ ಧಕ್ಕೆ

ಜಲ ಮೂಲಗಳಿಗೆ ಕೊಂಡಿ ಆಗಿರುವ ಕೆರೆ, ಹಳ್ಳಗಳ ಮೂಲ ಸ್ವರೂಪಕ್ಕೆ ಧಕ್ಕೆ ತರುವುದು ಕ್ರಿಮಿನಲ್‌ ಅಪರಾಧ. ಕೆರೆ ಸಂರಕ್ಷಣೆ, ಅಭಿವೃದ್ಧಿಪಡಿಸಲು ಸರ್ಕಾರ ನರೇಗಾ ಯೋಜನೆಯಡಿ ಕೋಟ್ಯಂತರ ರೂಪಾಯಿ ಅನುದಾನ ಬಿಡುಗಡೆ ಮಾಡುತ್ತಿದೆ. ಅದಾಗಿಯೂ ಬೃಹದಾಕಾರವಾದ ಕೆರೆ ಏರಿ ಯಂತ್ರದ ಮೂಲಕ ಒಡೆದು ಹಾಕಿರುವುದು ಸಹಜವಾಗಿಯೇ ಜನಾಕ್ರೋಶಕ್ಕೆ ಕಾರಣವಾಗಿದೆ.

ಇದನ್ನೂ ಓದಿ: Tungabhadra Dam: ತುಂಬುತ್ತಿದೆಯಾ ತುಂಗಭದ್ರಾ ಜಲಾಶಯ? ನೀರಿನ ಸಂಗ್ರಹದ ಬಗ್ಗೆ ನೀಡಲಾಗ್ತಿದ್ಯಾ ತಪ್ಪುಲೆಕ್ಕ?

ಸರಿಯಾದ ಮಾಹಿತಿ ನೀಡಿಲ್ಲ

ಮೀನು ಪಾಸುವಾರು ಹಕ್ಕು ಹರಾಜು ಸಂದರ್ಭದಲ್ಲಿ ಕೆರೆಗಳ ಮೂಲ ಸ್ವರೂಪಕ್ಕೆ ಧಕ್ಕೆಯಾಗದಂತೆ ಕೆರೆ ಸಂರಕ್ಷಣೆ ಮಾಡುವ ಬಗ್ಗೆ ಗ್ರಾಪಂ ಅಧಿಕಾರಿಗಳು ಸಾರ್ವಜನಿಕರಿಗೆ ಸರಿಯಾದ ಮಾಹಿತಿ ನೀಡಿದೇ ಇರುವುದೇ ಇಂತಹ ಅವಘಡಗಳಿಗೆ ಕಾರಣ ಎಂಬ ಆರೋಪಗಳು ಸ್ಥಳೀಯರಿಂದ ಕೇಳಿ ಬರುತ್ತಿವೆ.

ಸ್ಥಳೀಯರಲ್ಲಿ ಆತಂಕ

ಕೆರೆ ತುಂಬಿಸುವ ಯೋಜನೆಯಲ್ಲಿ ಬಸವನ ಕೆರೆಗೆ ಈಗಾಗಲೇ ನೀರನ್ನು ಬಿಡಲಾಗಿದೆ. ಮುಂದೊಂದು ದಿನ ಕೆರೆ ತುಂಬಿ ಕೋಡಿ ಹರಿದರೆ, ಈಗ ಕೆರೆ ಏರಿ ಒಡೆದಿರುವುದರಿಂದ ಅಪಾಯ ಸಂಭವಿಸಲಿದೆ ಎಂಬ ಆತಂಕ ಸ್ಥಳೀಯರಲ್ಲಿ ಮನೆ ಮಾಡಿದೆ.

ಸಾತನೂರು ಠಾಣೆಗೆ ದೂರು

ತಮ್ಮ ಜಮೀನಿಗೆ ನೀರು ಹಾಯಿಸಿಕೊಳ್ಳುವ ದುರುದ್ದೇಶದಿಂದ ಅನಧಿಕೃತವಾಗಿ ಕೆರೆಯ ಏರಿಯನ್ನು ಒಡೆದಿರುವ ಯು.ವಿ. ಶಿವಕುಮಾರ್‌ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಉಯ್ಯಂಬಳ್ಳಿ ಪಿಡಿಒ ಮುನಿಮಾರೇಗೌಡ ಸಾತನೂರು ಠಾಣೆಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಸಾತನೂರು ಎಸ್‌ಎಚ್‌ಒ ಭೇಟಿನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬಿಜೆಪಿ, ಕೈ ಮಧ್ಯೆ ಮಾತಿನ ಚಕಮಕಿ

ಕೆರೆ ಏರಿ ಒಡೆದ ವ್ಯಕ್ತಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಗ್ರಾಪಂ ಅಧಿಕಾರಿಗಳಿಗೆ ಬಿಜೆಪಿ ಮುಖಂಡರುಮನವಿ ಮಾಡಲು ಹೋದಾಗ ಕಾಂಗ್ರೆಸ್‌ ಮತ್ತುಬಿಜೆಪಿ ಮುಖಂಡರ ನಡುವೆ ಘರ್ಷಣೆ ನಡೆದಿದೆ.

ಗ್ರಾಮ ಪಂಚಾಯತ್ ವಿರುದ್ಧ ಆಕ್ರೋಶ

ಬಿಜೆಪಿ ಜಿಲ್ಲಾ ಉಪಾಧ್ಯಕ್ಷೆ ನಂದಿನಿ ಗೌಡ ಮತ್ತು ಕೆಲ ಮುಖಂಡರು ಕಾರ್ಯಕರ್ತರು ಕೆರೆ ಏರಿ ಒಡೆದಿರುವ ಸ್ಥಳಕ್ಕೆ ಭೇಟಿ ನೀಡಿ ಉಯ್ಯಂಬಳ್ಳಿ ಗ್ರಾಮ ಪಂಚಾಯತ್ ಕಚೇರಿಗೆ ಭೇಟಿ ನೀಡಿ, ಅಧಿಕಾರಿಗಳ ನಿರ್ಲಕ್ಷದಿಂದಲೇ ಏರಿ ಒಡೆಯಲು ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: Water Project: ಕೋಟೆನಾಡಲ್ಲಿ 122 ಪ್ರಾಕೃತಿಕ ಜಲಮೂಲಗಳ ರಕ್ಷಣೆಗೆ ಅಮೃತ ಸರೋವರ ಯೋಜನೆ ಜಾರಿ

ಈ ಸಂದರ್ಭದಲ್ಲಿ ಕೆಲವು ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್‌ ಪಕ್ಷಕ್ಕೆ ಧಿಕ್ಕಾರ ಕೂಗಿದರು. ಸ್ಥಳದಲ್ಲಿದ್ದ ಕೆಲವು ಕಾಂಗ್ರೆಸ್‌ ಕಾರ್ಯಕರ್ತರು ಬಿಜೆಪಿಗೆ ಧಿಕ್ಕಾರ ಕೂಗಿದರು. ಇದು ಕಾಂಗ್ರೆಸ್‌ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆಗೆ ಕಾರಣವಾಯಿತು.
Published by:Annappa Achari
First published: