ಬಳ್ಳಾರಿಯಲ್ಲೊಬ್ಬ ‘ವಾಕ್ ಮ್ಯಾನ್’! ವಾಹನ ಹತ್ತಿಲ್ಲ, ಚಪ್ಪಲಿ ಧರಿಸಲ್ಲ, ಕಾಲ್ನಡಿಗೆಯೇ ಜೀವನ; ಕಾರಣವೇನಿರಬಹುದು?

ಅಂದಹಾಗೆ ಪೂಜಾರಿ ಪಾಪುರಾಜು ಯಾವುದೇ ಊರಿಗೂ ಹೋದ್ರೂ ನಡೆದುಕೊಂಡೇ ಹೋಗ್ತಾರೆ. ಅದೆಷ್ಟೇ ದಿನಗಳಾದ್ರೂ ರಾತ್ರಿ ಅಲ್ಲಿಯೇ ವಾಸ್ತವ್ಯ ಹೂಡಿ ನಡೆದುಕೊಂಡು ಹೋಗುತ್ತೇನೆ ಎಂದು ನಗುತ್ತಲೇ ಉತ್ತರಿಸುತ್ತಾರೆ ಪೂಜಾರಿ ಪಾಪುರಾಜು.ಇನ್ನು ಪೂಜಾರಿ ಪಾಪುರಾಜು ಆಸ್ಪತ್ರೆಗೆ ಹೋಗಬೇಕಾದ್ರೂ ನಡೆದುಕೊಂಡು ಹೋಗುತ್ತಾರೆ.

ಶ್ರೀಮರುಕುಂಟ್ಲೇಶ್ವರಸ್ವಾಮಿಯ ಪೂಜೆಯಲ್ಲಿ ನಿರತರಾಗಿರುವ ಪೂಜಾರಿ ಪಾಪುರಾಜು.

ಶ್ರೀಮರುಕುಂಟ್ಲೇಶ್ವರಸ್ವಾಮಿಯ ಪೂಜೆಯಲ್ಲಿ ನಿರತರಾಗಿರುವ ಪೂಜಾರಿ ಪಾಪುರಾಜು.

  • Share this:
ಬಳ್ಳಾರಿ; ಇಲ್ಲೊಂದು ಪೂಜಾರಿ ಕುಟುಂಬ ಇದೆ. ಈ ಕುಟುಂಬದ ಪೂಜಾರಿಯಾದವರು ನೂರಾರು ವರ್ಷಗಳಿಂದಲೂ ಇದುವರೆಗೆ ಚಪ್ಪಲಿ ಧರಿಸುವುದಿಲ್ಲ. ಯಾವುದೂ ವಾಹನಗಳನ್ನೂ ಹತ್ತುವುದಿಲ್ಲ. ಅದೆಷ್ಟೇ ದೂರದ ಊರಿಗೆ ಹೋಗಬೇಕಾದ್ರೂ ನಡೆದುಕೊಂಡೇ ಹೋಗಬೇಕು. ಇದು ಶತಮಾನಗಳಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯ! ಹಾಗಾದ್ರೆ ಈ ಪೂಜಾರಿ ಕುಟುಂಬ ವಿಶೇಷತೆಯೇನು? ಈ ದೇವರ ಮಹಿಮೆಯಾದ್ರೂ ಏನು? ಅವರು ಎಲ್ಲಿಯವರು ಗೊತ್ತಾ? ಈ ಎಲ್ಲ ಕೂತೂಹಲಗಳಿಗೆ ಇಲ್ಲಿದೆ ಇಂಟರೆಸ್ಟಿಂಗ್ ಸ್ಟೋರಿ.

ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕು ಹಲವು ವಿಶೇಷತೆಗಳಿಗೆ ಸಾಕ್ಷಿಯಾಗುತ್ತಲೇ ಇದೆ. ಈಗ ಪೂಜಾರಿ ಕುಟುಂಬ ವಿಶೇಷತೆ ಸಾಕಷ್ಟು ಆಶ್ಚರ್ಯಕ್ಕೆ ಎಡೆಮಾಡಿಕೊಟ್ಟಿದೆ. ಕೂಡ್ಲಿಗಿ ತಾಲೂಕಿನ ಕೆ.ದಿಬ್ಬದಹಳ್ಳಿ ಎನ್ನುವ ಗ್ರಾಮದಲ್ಲಿ ಶ್ರೀಮರುಕುಂಟ್ಲೇಶ್ವರಸ್ವಾಮಿಯ ಪೂಜಾರಿ ಕುಟುಂಬ ತಲಾತಲಾಂತರಗಳಿಂದಲೂ ತನ್ನದೇ ಆದ ಕಟ್ಟುಪಾಡುಗಳನ್ನ ಕಟ್ಟುನಿಟ್ಟಾಗಿ ಪಾಲಿಸುತ್ತಿದೆ.

ಈ ದೇವರಿಗೆ ಪೂಜಾರಿಯಾದವರು ಯಾವುದೇ ವಾಹನಗಳನ್ನ ಹತ್ತಬಾರದು. ಟೈರ್ ಇರುವ ಸೈಕಲ್, ಬೈಕ್, ಕಾರು, ಬಸ್ ಸೇರಿದಂತೆ ಯಾವುದೇ ವಾಹನಗಳನ್ನ ಏರುವಂತಿಲ್ಲ. ಜೊತೆಗೆ ಚಪ್ಪಲಿ ಕೂಡ ಧರಿಸಬಾರದು. ಈಗ ಕಳೆದ ಕಾಲು ದಶಕದಿಂದ ಈ ದೇವರ ಪೂಜಾರಿಯಾಗಿರುವ ಪೂಜಾರಿ ಈ ಸಂಪ್ರದಾಯವನ್ನ ಅತ್ಯಂತ ನಿಷ್ಟೆಯಿಂದ ಅನುಸರಿಸುತ್ತಿದ್ದಾರೆ. ಈ ಹಿಂದೆ ಇವರ ಪೂರ್ವಿಕರು ಈ ಸಂಪ್ರದಾಯವನ್ನ ಪಾಲನೆ ಮಾಡುತ್ತಿದ್ದರು.

ಪೂಜಾರಿಯಾದವರೂ ವಾಹನಗಳನ್ನ ಹತ್ತಿದರೆ ಕೆಡುಕಾಗುತ್ತದೆ ಎನ್ನುವ ನಂಬಿಕೆ ಈ ಕುಟುಂಬಕ್ಕಿದೆ. ಈ ಕಾರಣಕ್ಕಾಗಿಯೇ ಪೂರ್ವಜರು ಹಾಕಿಕೊಟ್ಟ ಸಂಪ್ರದಾಯವನ್ನ ಪೂಜಾರಿ ಪಾಪುರಾಜು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಇದೇ ರೀತಿ ಪೂಜಾರಿ ಪಾಪುರಾಜು ಸಹೋದರ ಸಹ ಈ ಸಂಪ್ರದಾಯವನ್ನು ಪಾಲನೆ ಮಾಡುತ್ತಿದ್ದಾರೆ. ಉಳಿದ ಕುಟುಂಬದ ಸದಸ್ಯರು ಇಂಥ ಆಚರಣೆಯನ್ನು ಮಾಡುತ್ತಿಲ್ಲ.

ಇನ್ನು ಈ ಗ್ರಾಮದಲ್ಲಿ ಯಾರೂ ಕೋಳಿ ಸಾಕುವಂತಿಲ್ಲ. ಜೊತೆಗೆ ಕೋಳಿಗಳನ್ನ ಯಾರಾದ್ರೂ ತಂದರೂ ಅವು ಸಾವನ್ನಪ್ಪುತ್ತಿವೆ ಎಂದು ಹೇಳಲಾಗುತ್ತಿದೆ. ಜೊತೆಗೆ ಈ ದೇವಸ್ಥಾನದ ಸುತ್ತಮುತ್ತಲಿರುವ ಸುಮಾರು 30 ಕ್ಕೂ ಹೆಚ್ಚು ಮನೆಗಳಿಗೆ ಸುಣ್ಣ ಹೊಡೆಯುವಂತಿಲ್ಲ. ಅಲ್ಲದೇ, ಮನೆಯಲ್ಲಿ ಎಣ್ಣೆಯಲ್ಲಿ ಕರಿಯುವ ಪದಾರ್ಥಗಳನ್ನ ಮಾಡುವಂತಿಲ್ಲ. ಒಂದು ವೇಳೆ ಮಾಡಿದ್ದಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದೆಯಂತೆ. ಹೀಗಾಗಿ ಜನರು ಇದನ್ನ ಕಟ್ಟುನಿಟ್ಟಾಗಿ ಪಾಲನೆ ಮಾಡುತ್ತಾರೆ.

ಕೆ.ದಿಬ್ಬದಹಳ್ಳಿ ಗ್ರಾಮ ಚಿಕ್ಕ ಗ್ರಾಮವಾದರೂ ಈ ದೇವರ ಮಹಿಮೆಗೆ ಜನರು ಸಾಕಷ್ಟು ಆಶ್ಚರ್ಯಕ್ಕೂ ಒಳಗಾಗಿದ್ದಾರೆ. ಜೊತೆಗೆ ನಿತ್ಯ ಸುತ್ತಮುತ್ತಲಿನ ಗ್ರಾಮಗಳ ಜನರು ಕೂಡ ಈ ದೇವಸ್ಥಾನಕ್ಕೆ ಆಗಮಿಸಿ ಪೂಜೆ ಸಲ್ಲಿಸುತ್ತಾರೆ ಎಂದು ಗ್ರಾಮಸ್ಥ ಚಂದ್ರಪ್ಪ ಮಾಹಿತಿ ನೀಡುತ್ತಾರೆ. ದೇವರ ಕೃಪೆಗೆ ಪಾತ್ರರಾಗುವವರು ಎಲ್ಲರೂ ಸಂಪ್ರದಾಯದಂತೆ ಕಟ್ಟುನಿಟ್ಟಾಗಿ ಪೂಜೆಗಳನ್ನ ಮಾಡುವುದು ಹರಕೆಗಳನ್ನ ಸಲ್ಲಿಸುವುದು ಸಾಮಾನ್ಯ. ಆದರೆ, ಕೆ.ದಿಬ್ಬದಹಳ್ಳಿ ಗ್ರಾಮದಲ್ಲಿ ಮಾತ್ರ ಪೂಜಾರಿ ಕುಟುಂಬ ಶತಮಾನಗಳಿಂದಲೂ ವಾಹನಗಳನ್ನ ಹತ್ತದೇ ಕಾಲ್ನಡಿಗೆಯಲ್ಲಿ ನಡೆದುಕೊಂಡು ಹೋಗುತ್ತಿರುವುದು ವಿಶೇಷವೇ ಸರಿ.

ಇದನ್ನೂ ಓದಿ : ಬಳ್ಳಾರಿ ಜಿಲ್ಲೆಯ ಮಕ್ಕಳಲ್ಲಿ ಹೆಚ್ಚಿದ ಅಪೌಷ್ಟಿಕತೆ; ಕಳೆದೆರಡು ವರ್ಷಕ್ಕೆ ಹೋಲಿಸಿದರೆ ಈ ವರುಷ ಡಬಲ್ ಏರಿಕೆ!
First published: