Pregnant Lady Problem: ಈ ಊರಲ್ಲಿ ಪೌಷ್ಠಿಕ ಆಹಾರಕ್ಕಾಗಿ 7 ಕಿಮೀ ನಡೆಯಬೇಕು! ಗರ್ಭಿಣಿ ಗೋಳು ಕೇಳೋರಿಲ್ಲ

ಸರ್ಕಾರದ ನಿಯಮದ ಪ್ರಕಾರ ಗರ್ಭಿಣಿ ಮಹಿಳೆಯೇ ಅಂಗನವಾಡಿಗೆ ಬಂದು ಅಲ್ಲಿಯೇ ಪೌಷ್ಠಿಕ ಆಹಾರ ಸೇವಿಸಬೇಕು, ಆದರೆ ಮನೆಗೆ ಕೊಡಲ್ಲ. ಗ್ರಾಮದಲ್ಲಿ ಭೂ ಕುಸಿತದಿಂದ ರಸ್ತೆ ಕುಸಿದುಹೋಗಿದ್ದು, ಅಂಗನವಾಡಿಗೆ ಹೋಗಿ ಪೌಷ್ಠಿಕ ಆಹಾರ ಪಡೆಯೋಕೆ ಆಗ್ತಿಲ್ಲ.

ಗರ್ಭಿಣಿ ಮಹಿಳೆ ಪರದಾಟ

ಗರ್ಭಿಣಿ ಮಹಿಳೆ ಪರದಾಟ

  • Share this:
ಕೊಡಗು: ಹುಟ್ಟುವ ಮಕ್ಕಳು ಅಪೌಷ್ಟಿಕತೆಯಿಂದ (Malnutrition) ಬಳಲಬಾರದು ಎಂಬ ಉದ್ದೇಶದಿಂದ ಸರ್ಕಾರವೇನೋ (Government) ಗರ್ಭಿಣಿ ಮಹಿಳೆಯರಿಗೆ (Pregnant lady) ಪೌಷ್ಟಿಕ ಆಹಾರ (Nutritious food) ಪೂರೈಕೆ ಮಾಡುತ್ತಿದೆ. ಆದರೆ ಇಲ್ಲೊಬ್ಬರು ಗರ್ಭಿಣಿ ಮಹಿಳೆ ಆ ಪೌಷ್ಟಿಕ ಆಹಾರ ಪಡೆದುಕೊಳ್ಳಲು ನಿತ್ಯ 7 ಕಿಲೋ ಮೀಟರ್ ದೂರ ಹೋಗಲಾದರೆ ಪರದಾಡುತ್ತಿದ್ದಾರೆ. ಇಂತಹ ಘಟನೆಗೆ ಸಾಕ್ಷಿಯಾಗಿರುವುದು ಕೊಡಗು (Kodagu) ಜಿಲ್ಲೆ ಮಡಿಕೇರಿ (Madikeri) ತಾಲ್ಲೂಕಿನ ಗಾಳಿಬೀಡು ಪಂಚಾಯಿತಿ ವ್ಯಾಪ್ತಿಯ 2ನೇ ಮೊಣ್ಣಂಗೇರಿ ಗ್ರಾಮ. ರಾಷ್ಟ್ರೀಯ ಹೆದ್ದಾರಿ 275ರಿಂದ (NH 275) ಈ ನಾಲ್ಕು ಕಿಲೋ ಮೀಟರ್ ದೂರದಲ್ಲಿದ್ದು, ಇಂದಿಗೂ ಕಾಲ್ನಡಿಗೆ ರಸ್ತೆ ಮೂಲಕವೇ ಗ್ರಾಮಕ್ಕೆ ಹೋಗಬೇಕು.

ಪೌಷ್ಠಿಕ ಆಹಾರಕ್ಕಾಗಿ ಗರ್ಭಿಣಿ ಪರದಾಟ

ಈ ಕಾಲು ದಾರಿ ತೀರಾ ಹದಗೆಟ್ಟಿದ್ದು ಜೀಪುಗಳಲ್ಲಿ ಮಾತ್ರ ಅಲ್ಲಿಗೆ ತಲುಪಲು ಸಾಧ್ಯ. ಅಷ್ಟು ದುಸ್ಥರವಾಗಿರುವ ರಸ್ತೆಯಲ್ಲಿ ಪೌಷ್ಟಿಕ ಆಹಾರಕ್ಕಾಗಿ ಐದು ತಿಂಗಳ ಗರ್ಭಿಣಿ ನಡೆದು ರಾಷ್ಟ್ರೀಯ ಹೆದ್ದಾರಿಯನ್ನು ತಲುಪಿ ನಂತರ ಮತ್ತೆ ಯಾವುದಾದರೂ ವಾಹನ ಏರಿ ಎರಡು ಕಿಲೋಮೀಟರ್ ಪ್ರಯಾಣಿಸಿ ಮತ್ತೆ ನಡೆದು ಅಂಗನವಾಡಿ ತಲುಪಬೇಕು. ಇಲ್ಲ ಯಾವುದಾದರು ಜೀಪು ಏರಿ ಪ್ರಯಾಣಿಸಬೇಕೆಂದರೆ ಕನಿಷ್ಠ 500 ರೂಪಾಯಿ ಡೀಸೆಲ್ ಹಾಕಿ ಹೋಗಿ ಬರಬೇಕು.

ಕುಗ್ರಾಮದಲ್ಲಿರುವ ಮನೆ


ಅಂಗನವಾಡಿಗೆ ಗರ್ಭಿಣಿಯರು ನಡೆದೇ ಹೋಗಬೇಕು

ಗ್ರಾಮದಲ್ಲಿ ಇಬ್ಬರು ಗರ್ಭಿಣಿಯರಿದ್ದು ಇಬ್ಬರೂ ಈ ದುಸ್ಥಿತಿಯನ್ನು ಅನುಭವಿಸಬೇಕಾಗಿದೆ. ಗರ್ಭಿಣಿ ಮಹಿಳೆ ಶಿಲ್ಪಾ ಇರುವ ಮನೆಯಿಂದ ಅಂಗನವಾಡಿಗೆ ತಲುಪುವುದಕ್ಕೆ ಎರಡು ಕಿಲೋ ಮೀಟರ್ ಹತ್ತಿರದ ರಸ್ತೆಯೊಂದಿತ್ತು. ಈ ರಸ್ತೆ ಜುಲೈ ತಿಂಗಳ ವರೆಗೂ ಚೆನ್ನಾಗಿಯೇ ಇತ್ತು. ಆದರೆ ಧಾರಕಾರವಾಗಿ ಸುರಿದ ಮಳೆಯಿಂದ ರಸ್ತೆ ಸಂಪೂರ್ಣ ಭೂಕುಸಿತದಿಂದ ಕೊಚ್ಚಿ ಹೋಗಿದೆ. ಇದರಿಂದಾಗಿ ಹತ್ತಿರದ ರಸ್ತೆ ಇಲ್ಲದಂತಾಗಿ ಇದೀಗ ಗ್ರಾಮದ ಜನರಷ್ಟೇ ಅಲ್ಲ ಗರ್ಭಿಣಿ ಮಹಿಳೆ ಕೂಡ ನಡೆಯಬೇಕಾದ ಅನಿವಾರ್ಯತೆ ಎದುರಾಗಿದೆ.

ಇದನ್ನೂ ಓದಿ: Kodagu Flood: ಜಲಪ್ರಳಯವಾದ ಊರಿನಲ್ಲಿ ಬದುಕು ಕಟ್ಟಿಕೊಳ್ಳುವುದೇ ದುಸ್ಥರ! ಆತಂಕದಲ್ಲಿದ್ದಾರೆ ಕೊಡಗಿನ ಜನ

ಹಾಳಾದ ರಸ್ತೆಯಿಂದಾಗಿ ಸಮಸ್ಯೆ

ಸರ್ಕಾರದ ನಿಯಮದ ಪ್ರಕಾರ ಗರ್ಭಿಣಿ ಮಹಿಳೆಯೇ ಅಂಗನವಾಡಿಗೆ ಬಂದು ಅಲ್ಲಿಯೇ ಪೌಷ್ಠಿಕ ಆಹಾರ ಸೇವಿಸಬೇಕು, ಆದರೆ ಮನೆಗೆ ಕೊಡಲ್ಲ. ಗ್ರಾಮದಲ್ಲಿ ಭೂ ಕುಸಿತದಿಂದ ರಸ್ತೆ ಕುಸಿದುಹೋಗಿದ್ದು, ಅಂಗನವಾಡಿಗೆ ಹೋಗಿ ಪೌಷ್ಠಿಕ ಆಹಾರ ಪಡೆಯೋಕೆ ಆಗ್ತಿಲ್ಲ. ಇತ್ತ ಕುಗ್ರಾಮ ಮತ್ತು ರಸ್ತೆ ಸಮಸ್ಯೆ ಇರೋದ್ರಿಂದ ಆಶಾ ಕಾರ್ಯಕರ್ತೆಯರಾಗಲೀ, ನರ್ಸ್ ಆಗಲೀ ಗರ್ಭಿಣಿ ಮಹಿಳೆಯ ಮನೆಯತ್ತ ಸುಳಿದಿಲ್ಲ. ಇದಕ್ಕೆಲ್ಲಾ ರಸ್ತೆ ಸಮಸ್ಯೆಯೇ ಕಾರಣ ಅಂತ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸ್ತಿದ್ದಾರೆ.

ಮಾಧ್ಯಮದವರು ಬಂದಾಗ ಸ್ಥಳಕ್ಕೆ ಬಂದ ಆಶಾ ಕಾರ್ಯಕರ್ತೆಯರು

ಅಲ್ಲದೆ ಇದನ್ನ ವಿಶೇಷ ಪ್ರಕರಣ ಅಂತ ಪರಿಗಣಿಸಿ ಇಂತಹ ಕುಗ್ರಾಮಗಳ ಗರ್ಭಿಣಿ ಮಹಿಳೆಯರ ಮನೆಗಳಿಗೆ ಪೌಷ್ಠಿಕ ಆಹಾರ ತಲುಪಿಸುವಂತಾಗಬೇಕು ಅಂತ ಜನರು ಒತ್ತಾಯಿಸಿದ್ದಾರೆ. ಕುಗ್ರಾಮದ ಗರ್ಭಿಣಿಯ ಸಮಸ್ಯೆ ಇದೆ ಅಂತ ಮಾಧ್ಯಮದವರು ಸುದ್ದಿ ಮಾಡೋಕೆ ತೆರಳಿದ್ದಾರೆ ಅಂತ ತಿಳಿದಿದ್ದೇ ತಡ, ಸಂಜೆ ಹೊತ್ತಿಗೆ ಅವರ ಮನೆಗೆ ಆಶಾ ಕಾರ್ಯಕರ್ತೆಯರು ಭೇಟಿ ಕೊಟ್ಟ ಪ್ರಸಂಗವೂ ನಡೆದಿದೆ.

ಇದನ್ನೂ ಓದಿ: Fishing Port: ಬಹು‌ಕೋಟಿ ವೆಚ್ಚದ ಮೀನುಗಾರಿಕಾ ಬಂದರು ನಿರ್ಮಾಣಕ್ಕೆ ಸ್ಥಳೀಯ ಮೀನುಗಾರರಿಂದಲೇ ವಿರೋಧ!

ಒಟ್ನಲ್ಲಿ ಸರ್ಕಾರದ ಯೋಜನೆ ಒಳ್ಳೆಯದೇ ಇದ್ರೂ, ಎಲ್ಲದಕ್ಕೂ ರೂಲ್ಸ್ ರೂಲ್ಸ್ ಅನ್ಕೊಂಡು, ಸ್ಥಳೀಯ ಸಮಸ್ಯೆ ಏನಿದೆ ಅಂತ ತಿಳಿದು ಸ್ಪಂದಿಸದಿರೋದು ನಿಜಕ್ಕೂ ದುರಂತವೇ ಸರಿ.
Published by:Annappa Achari
First published: