ಚಿತ್ರದುರ್ಗ: ಮೋದಿ ಕೇರ್ ವ್ಯವಹಾರದಲ್ಲಿ (Modi Care Business) ತೊಡಗಿದ್ದ ಚಿತ್ರದುರ್ಗ ಜಿಲ್ಲೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ & ಪ್ರೌಢ ಶಾಲೆಯ ಎಂಟು ಶಿಕ್ಷಕರನ್ನು (Teachers Suspend) ಅಮಾನತುಗೊಳಿಸಿ ಡಿಡಿಪಿಐ ರವಿಶಂಕರ್ ರೆಡ್ಡಿ ಆದೇಶ ಹೊರಡಿಸಿದ್ದಾರೆ. ಶಿಕ್ಷಕರಾದ ರವಿಕುಮಾರ್, ಶ್ರೀನಿವಾಸ್, ಸಿದ್ದಮ್ಮ, ಇಂದ್ರಾಣಿ, ಮಂಜುಳಾ ಸೇರಿದಂತೆ ಒಟ್ಟು ಎಂಟು ಜನರನ್ನು ಅಮಾನತುಗೊಳಿಸಲಾಗಿದೆ. ಶಿಕ್ಷಕರು ಕೆಲಸದ ಅವಧಿಯಲ್ಲಿ (School Timing) ಮೋದಿ ಕೇರ್ ವ್ಯವಹಾರದಲ್ಲಿ ತೊಡಗಿಕೊಂಡಿದ್ದಾರೆ. ಈ ಮೋದಿ ಕೇರ್ ಚೈನ್ ಲಿಂಕ್ನಲ್ಲಿ (Modi Care Chain Link) 500ಕ್ಕೂ ಹೆಚ್ಚು ಶಿಕ್ಷಕರಿದ್ದಾರೆ ಎಂದು ಆರೋಪಿಸಿ ಮಲ್ಲಿಕಾರ್ಜುನ್ ಎಂಬವರು ಶಿಕ್ಷಣ ಇಲಾಖೆಗೆ (Department Of Education) ದೂರು ದಾಖಲಿಸಿದ್ದರು. ಶಿಕ್ಷಣ ಇಲಾಖೆ ಆಯುಕ್ತರ ಸೂಚನೆ ಮೇರೆಗೆ 16 ಜನರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ಆರೋಪ ಸಾಬೀತಾದ ಹಿನ್ನೆಲೆ ಎಂಟು ಜನರನ್ನು ಅಮಾನತುಗೊಳಿಸಿ ಆದೇಶ (Suspension Order) ಹೊರಡಿಸಲಾಗಿದೆ.
ಮಲ್ಲಿಕಾರ್ಜುನ್ ನೀಡಿದ ದೂರಿನಲ್ಲಿ ಏನಿತ್ತು?
ಚಿತ್ರದುರ್ಗ ಜಿಲ್ಲೆಯ ಸುಮಾರು 500ಕ್ಕೂ ಹೆಚ್ಚು ಶಿಕ್ಷಕರು ಮೋದಿ ಕೇರ್ ಚೈನ್ ಲಿಂಕ್ ವ್ಯವಹಾರದಲ್ಲಿ ತೊಡಗಿಕೊಂಡಿದ್ದಾರೆ. ತಮ್ಮ ವೃತ್ತಿಯನ್ನು ದುರ್ಬಳಕೆ ಮಾಡಿಕೊಂಡು ತಿಂಗಳಿಗೆ 10,000 ರೂ.ಗಳಿಂದ 12 ಸಾವಿರ ರೂಪಾಯಿ ಕಮಿಷನ್ ಪಡೆದು ದಂಧೆ ನಡೆಸುತ್ತಿದ್ದಾರೆ.
ಮಕ್ಕಳ ಭವಿಷ್ಯವನ್ನು ರೂಪಿಸಬೇಕಾದ ಶಿಕ್ಷಕರು ತಮ್ಮ ವೃತ್ತಿಯನ್ನು ದುರುಪಯೋಗಪಡಿಸಿಕೊಂಡು ರಾಜ್ಯಾದ್ಯಂತ ಮೋದಿ ಕೇರ್ನಲ್ಲಿ ಭಾಗಿಯಾಗಿ ವ್ಯವಹಾರ ನಡೆಸುತ್ತಿದ್ದಾರೆ.
ಜೂಮ್ ಆಪ್ ಮೂಲಕ ವ್ಯವಹಾರ
ಜೂಮ್ ಆಪ್ ಮೂಲಕ ವ್ಯವಹಾರ ನಡೆಸಲಾಗುತ್ತಿದೆ. ಶಾಲಾವಧಿಯಲ್ಲಿ ವ್ಯವಹಾರ ಮಾಡೋದರಿಂದ ಮಕ್ಕಳ ಭವಿಷ್ಯವನ್ನು ಹಾಳು ಮಾಡುತ್ತಿದ್ದಾರೆ. ಇಡೀ ರಾಜ್ಯಾದ್ಯಂತ ಶಿಕ್ಷಣ ಸಮುದಾಯವನ್ನು ಮೋದಿ ಕೇರ್ ನಲ್ಲಿ ಭಾಗಿಯಾಗುವಂತೆ ಪ್ರೇರೆಪಿಸುತ್ತಿದ್ದಾರೆ.
ಮೋದಿ ಕೇರ್ನಲ್ಲಿ ಭಾಗಿಯಾಗಿರುವ ಶಿಕ್ಷಕರ ಮಾಹಿತಿಯನ್ನು ಫೋಟೋ ಸಮೇತ ನೀಡಿದ್ದೇನೆ. ಇದರ ಜೊತೆಗೆ ವ್ಯವಹಾರದಲ್ಲಿ ಭಾಗಿಯಾಗಿದ್ದಕ್ಕೆ ದಾಖಲೆಗಳು ಸಹ ನನ್ನ ಬಳಿಯಲ್ಲಿವೆ. ಹಾಗಾಗಿ ಶಿಕ್ಷಣ ಇಲಾಖೆ ತಮ್ಮ ವೃತ್ತಿಯನ್ನು ದುರುಪಯೋಗಪಡಿಸಿಕೊಂಡ ಶಿಕ್ಷಕರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಮಲ್ಲಿಕಾರ್ಜುನ್ ಪತ್ರದ ಮೂಲಕ ಆಗ್ರಹಿಸಿದ್ದರು.
16 ಜನರಿಗೆ ಶೋಕಾಸ್ ನೋಟಿಸ್
ಮಲ್ಲಿಕಾರ್ಜುನ್ ನೀಡಿದ್ದ ದೂರನ್ನು ಗಂಭೀರವಾಗಿ ಪರಿಗಣಿಸಿದ ಶಿಕ್ಷಣ ಇಲಾಖೆ ಮೊದಲ ಹಂತದಲ್ಲಿ 16 ಜನರಿಗೆ ಶೋಕಾಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿತ್ತು. 16ರಲ್ಲಿ 15 ಜನರು ವಿಚಾರಣೆಗೆ ಹಾಜರಾಗಿ ತಮ್ಮ ವಿರುದ್ಧ ಕೇಳಿ ಬಂದ ಆರೋಪಗಳೆಲ್ಲ ಸುಳ್ಳು ಎಂದು ಹೇಳಿ ಸ್ಪಷ್ಟನೆ ನೀಡಲು ಸಮಯವಕಾಶ ಪಡೆದುಕೊಂಡಿದ್ದರು.
ತಮ್ಮ ಬ್ಯಾಂಕ್ ಖಾತೆಗೆ ಜಮೆ ಆಗಿರುವ ವಿವಿಧ ಹಣದ ಬಗ್ಗೆ ಕೆಲವರು ದಾಖಲೆಗಳನ್ನು ಸಲ್ಲಿಸಿದ್ರೆ, ಒಂದಿಷ್ಟು ಶಿಕ್ಷಕರು ಅಪೂರ್ಣ ಮಾಹಿತಿ ನೀಡಿದ್ದಾರೆ. ಸುದೀರ್ಘ ವಿಚಾರಣೆ ಮತ್ತು ದಾಖಲೆ ಪರಿಶೀಲನೆ ಬಳಿಕ ಎಂಟು ಜನರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.
ಇದನ್ನೂ ಓದಿ: Education News: ಪಠ್ಯದಲ್ಲಿ ನೈತಿಕ ಶಿಕ್ಷಣ ಸೇರೋದು ಖಚಿತ, ಸಾತ್ವಿಕ ಆಹಾರ ಪೂರೈಕೆ ಆಗುತ್ತಾ ಇಲ್ವಾ?
ಅಮಾನತುಗೊಂಡ ಶಿಕ್ಷಕರು
1.ರವಿಕುಮಾರ್, ಸಹ ಶಿಕ್ಷಕರು, ಸರ್ಕಾರಿ ಕ್ಷೇತ್ರ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಬಸ್ ನಿಲ್ದಾಣ, ಹೊಳಲ್ಕೆರೆ ಟೌನ್
2.ಶ್ರೀನಿವಾಸ್, ಸಹ ಶಿಕ್ಷಕರು, ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ, ರಾಮಗಿರಿ, ಹೊಳಲ್ಕೆರೆ, ಚಿತ್ರದುರ್ಗ ಜಿಲ್ಲೆ
3.ಸಿದ್ದಮ್ಮ, ಸಹ ಶಿಕ್ಷಕರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಗುಯಿಲಾಲು, ಹಿರಿಯೂರು
4.ಇಂದ್ರಾಣಿ, ಸಹ ಶಿಕ್ಷಕರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಪಾಲವ್ವನಹಳ್ಳಿ, ಹಿರಿಯೂರು‘
5.ಶಿವಕುಮಾರ್, ಸಹ ಶಿಕ್ಷಕರು, ಸರ್ಕಾರಿ ಪ್ರೌಢ ಶಾಲೆ, ದೊಡ್ಡಲಾಘಟ್ಟ, ಚಿತ್ರುದುರ್ಗ
6.ಶೈಲಜಾ, ಸಹ ಶಿಕ್ಷಕರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಹಿಂಡಸಕಟ್ಟೆ, ಹಿರಿಯೂರು
7.ಮಂಜುಳಾ ಶ್ರೀನಿವಾಸ್, ಸಹ ಶಿಕ್ಷಕರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಪರಮೇನಹಳ್ಳಿ, ಹಿರಿಯೂರು
8.ರಂಗಪ್ಪ, ಸಹ ಶಿಕ್ಷಕರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಹಿರಿಯೂರು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ