ಚಾಮರಾಜನಗರ( ಜ.05): ಜಿಲ್ಲೆಯ ಬಿ.ಆರ್.ಟಿ. ಹುಲಿ ಸಂರಕ್ಷಿತ ಪ್ರದೇಶದಲ್ಲಿ ಏಳನೇ ಕರ್ನಾಟಕ ಹಕ್ಕಿ ಹಬ್ಬ ಆಯೋಜಿಸಲಾಗಿದ್ದು ಇಂದಿನಿಂದ ಮೂರು ದಿನಗಳ ಕಾಲ ನಡೆಯಲಿರುವ ಹಕ್ಕಿ ಹಬ್ಬಕ್ಕೆ ಚಾಲನೆ ದೊರೆತಿದೆ. ರಾಜ್ಯವು 500ಕ್ಕೂ ಹೆಚ್ಚು ವಿವಿಧ ಜಾತಿಯ ಪಕ್ಷಿಗಳ ನೆಲೆಯಾಗಿದೆ. ಈ ಪ್ರಭೇದಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಮೂಲಕ ಅವುಗಳ ಸಂರಕ್ಷಣೆ ಹಾಗೂ ಪಕ್ಷಿ ವೀಕ್ಷಣೆಯನ್ನು ಉತ್ತೇಜಿಸುವ ಉದ್ದೇಶದಿಂದ ಅರಣ್ಯ ಇಲಾಖೆ ಹಾಗೂ ಅರಣ್ಯ ವಸತಿ ಮತ್ತು ವಿಹಾರಧಾಮಗಳ ಸಂಸ್ಥೆಯ ಸಹಯೋಗದಲ್ಲಿ ಕರ್ನಾಟಕ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯು ರಾಜ್ಯದ ವಿವಿಧೇಡೆ ಕಳೆದ ಆರು ವರ್ಷಗಳಿಂದ ಹಕ್ಕಿ ಹಬ್ಬ ಆಚರಿಸಿಕೊಂಡು ಬರುತ್ತಿದೆ. ಈ ಬಾರಿ ಏಳನೇ ಹಕ್ಕಿ ಹಬ್ಬವನ್ನು ಬಿ.ಆರ್.ಟಿ. ಹುಲಿರಕ್ಷಿತಾರಣ್ಯದಲ್ಲಿ ಆಚರಿಸಲಾಗುತ್ತಿದೆ.
ಬಿ.ಆರ್.ಟಿ.ಹುಲಿಸಂರಕ್ಷಿತ ಪ್ರದೇಶದಲ್ಲಿ ಆಯೋಜಿಸಿರುವ ಏಳನೇ ಹಕ್ಕಿ ಹಬ್ಬದ ರಾಯಭಾರಿ ಹಕ್ಕಿಯಾಗಿ ರೂಫಸ್ ಬೆಲ್ಲಿಡ್ ಹದ್ದನ್ನು ಆಯ್ಕೆ ಮಾಡಲಾಗಿದೆ. ಇದು ಬಿಳಿಗಿರಿರಂಗನ ಬೆಟ್ಟ ಹಾಗೂ ಕಾಡುಗಳಲ್ಲಿ ಕಂಡುಬರುವ ಹದ್ದಾಗಿದ್ದು ಅಳಿನಂಚಿನಲ್ಲಿರುವ ಪ್ರಭೇದಗಳಲ್ಲಿ ಒಂದಾಗಿದೆ.
ಈ ಹಕ್ಕಿ ಹಬ್ಬದಲ್ಲಿ ದೇಶದ ವಿವಿಧೆಡೆಯಿಂದ 50 ಕ್ಕೂ ಹೆಚ್ಚು ಪಕ್ಷಿ ಪ್ರಿಯರು ಭಾಗವಹಿಸಿದ್ದಾರೆ. ಹತ್ತು ತಂಡಗಳಾಗಿ ಅರಣ್ಯದಲ್ಲಿ ಸಂಚರಿಸಿ ಪಕ್ಷಿ ವೀಕ್ಷಣೆ, ಸಮೀಕ್ಷೆ ಪಕ್ಷಿಗಳ ಚಲನವಲನ ದಾಖಲು ಮಾಡಲಿದ್ದಾರೆ, ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿ ವಿನಿಮಯ, ಪಕ್ಷಿ ತಜ್ಞರೊಂದಿಗೆ ಸಂವಾದ ಕಾರ್ಯಕ್ರಮ ಗಳನ್ನು ಸಹ ಆಯೋಜಿಸಲಾಗಿದೆ
ಹಕ್ಕಿ ಹಬ್ಬದ ಅಂಗವಾಗಿ ಭಾರತೀಯ ಅಂಚೆ ಇಲಾಖೆಯಿಂದ ಸ್ಟ್ಯಾಂಪ್ ಹಾಗೂ ಲಕೋಟೆಯನ್ನು ಹೊರತರಲಾಗಿದ್ದು ಕೊಳ್ಳೇಗಾಲ ಶಾಸಕ ಎನ್ ಮಹೇಶ್ ಮತ್ತು ಹಿರಿಯ ಅರಣ್ಯಾಧಿಕಾರಿಗಳು ಬಿಡುಗಡೆ ಮಾಡಿದರು.
ಇದನ್ನು ಓದಿ: ಬಾಳೆ ಮೂಲಕ ಲಕ್ಷ ಲಕ್ಷ ಸಂಪಾದನೆ; ಬರದ ನಾಡಿನಲ್ಲಿ ತೋಟಗಾರಿಕೆ ಬೆಳೆ ಲಾಭ ಪಡೆದ ಗದಗ ರೈತ
ರಾಜ್ಯದಲ್ಲಿ 500 ಕ್ಕೂ ಹೆಚ್ಚು ಪ್ರಭೇದದ ಹಕ್ಕಿಗಳಿದ್ದರೆ ಬಿ.ಆರ್.ಟಿ. ಹುಲಿರಕ್ಷಿತಾರಣ್ಯವೊಂದರಲ್ಲೇ 280 ಕ್ಕೂ ಹೆಚ್ಚು ಜಾತಿಯ ಪಕ್ಷಿಗಳು ಇವೆ. ಇದು ದೇಶದ ಪ್ರಮುಖ ಪಕ್ಷಿ ಪ್ರದೇಶ ಎಂದು ಸಹ ಗುರುತಿಸಲಾಗಿದೆ. ಬಿ.ಆರ್.ಟಿ.ಹುಲಿ ಸಂರಕ್ಷಿತ ಪ್ರದೇಶ 540 ಚದುರ ಕಿಲೋ ಮೀಟರ್ ವಿಸ್ತೀರ್ಣವಿದ್ದು ಪೂರ್ವ ಹಾಗು ಪಶ್ಚಿಮ ಘಟ್ಟಗಳ ನಡುವಿನ ಸೇತುವೆಯು ಆಗಿದೆ.
ಖ್ಯಾತ ಪಕ್ಷಿ ತಜ್ಞ ಡಾ.ಸಲೀಂ ಆಲಿ ಇಲ್ಲಿಗೆ ಭೇಟಿ ನೀಡಿ ಇಲ್ಲಿಂದಲೇ ತಮ್ಮ ಬರ್ಡ್ಸ್ ಆಫ್ ಮೈಸೂರು ಸಮೀಕ್ಷೆಯನ್ನು ಪ್ರಾರಂಭಿಸಿದ್ದರು. 1939 ರಲ್ಲಿ ಇಲ್ಲಿ ನೂರಕ್ಕು ಹೆಚ್ಚು ಪ್ರಭೇದ ಪಕ್ಷಿಗಳನ್ನು ಗುರುತಿಸಿದ್ದರು. 2012 ರಲ್ಲಿ ನಡೆದ ಸಮೀಕ್ಷೆ ಪ್ರಕಾರ ಇಲ್ಲಿ 280 ಕ್ಕು ಹೆಚ್ಚು ಪ್ರಭೇದದ ಪಕ್ಷಿಗಳನ್ನು ಗುರುತಿಸಲಾಗಿತ್ತು. ಈಗ ನಡೆಯುತ್ತಿರುವ ಹಕ್ಕಿ ಹಬ್ಬದ ಸಂದರ್ಭದ ಸಮೀಕ್ಷೆಯಲ್ಲಿ 300 ಕ್ಕು ಹೆಚ್ಚು ಪ್ರಭೇದಗಳು ಕಂಡು ಬರುವ ಸಾಧ್ಯತೆಗಳಿವೆ ಎನ್ನುತ್ತಾರೆ ಪಕ್ಷಿತಜ್ಞರು
(ವರದಿ: ಎಸ್.ಎಂ.ನಂದೀಶ್)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ