Crime news: ಭೀಕರ ಅಪಘಾತ, ಮದುವೆ ಮನೆಯಿಂದ ಒಟ್ಟಿಗೇ ಮಸಣ ಸೇರಿದ 7 ಸ್ನೇಹಿತರು

ತಮ್ಮ ಸ್ನೇಹಿತ ಜಾನಿ ಎಂಬುವರ ಮದುವೆಗೆ ಹುಣುಸೂರಿಗೆ ಹೋಗಿದ್ದ ಜನರಲ್ಲಿ ಏಳು ಜನರು ಅಪಘಾತದಲ್ಲಿ ಮಡಿದು ಸ್ಮಶಾನ ಸೇರಿದ್ದಾರೆ. ರಾಜೇಶ್, ಫಿಲೀಫ್ ಅನಿಲ್, ದಯಾನಂದರೈ, ಬಾಬು, ಸಂತೋಷ್, ವಿನೀದ್ ಅಪಘಾತದಲ್ಲಿ ದಾರುಣವಾಗಿ ಸಾವನ್ನಪ್ಪಿದ್ದಾರೆ.

ಅಪಘಾತಕ್ಕೊಳಗಾದ ವಾಹನ

ಅಪಘಾತಕ್ಕೊಳಗಾದ ವಾಹನ

  • Share this:
ಕೊಡಗು(ಏ.22): ಯಾವ ರಸ್ತೆಯಲ್ಲಿ ನೋಡಿದರು ಜನವೋ ಜನ. ರಸ್ತೆಗಳಲ್ಲಿ ವಾಹನಗಳ ಓಡಾಟವೂ ಕಡಿಮೆ. ಒಂದೇ ಬೀದಿಯಲ್ಲಿ ಒಂದು ಮನೆ ಬಿಟ್ಟು ಮತ್ತೊಂದು ಮನೆ ಮುಂದೆ ಇಟ್ಟಿರುವ ಮೃತದೇಹಗಳು. ಎಲ್ಲರ ಮುಖದಲ್ಲೂ ದುಃಖ, ಕಣ್ಣೀರು, ಆಕ್ರಂದನ. ಇದು ಶೋಕ ಸಾಗರದಲ್ಲಿ ಮುಳುಗಿರುವ ಕೊಡಗು ಜಿಲ್ಲೆ ವಿರಾಜಪೇಟೆ ತಾಲ್ಲೂಕಿನ ಪಾಲಿಬೆಟ್ಟ ಗ್ರಾಮ. ನಿನ್ನೆ ತಮ್ಮ ಸ್ನೇಹಿತ ಜಾನಿ ಎಂಬುವರ ಮದುವೆಗೆ ಹುಣುಸೂರಿಗೆ ಹೋಗಿದ್ದ ಜನರಲ್ಲಿ ಏಳು ಜನರು ಅಪಘಾತದಲ್ಲಿ ಮಡಿದು ಸ್ಮಶಾನ ಸೇರಿದ್ದಾರೆ. ರಾಜೇಶ್, ಫಿಲೀಫ್ ಅನಿಲ್, ದಯಾನಂದರೈ, ಬಾಬು, ಸಂತೋಷ್, ವಿನೀದ್ ಅಪಘಾತದಲ್ಲಿ ದಾರುಣವಾಗಿ ಸಾವನ್ನಪ್ಪಿದ್ದಾರೆ.

ಇವರೆಲ್ಲರೂ ತಮ್ಮ ಗೆಳೆಯನನ್ನ ಹೊಸ ಬಾಳಿನ ಹೊಸ್ತಿಲಿಗೆ ನಿಲ್ಲಿಸಿ ಹರಸಿದ್ರು. ಮದುವೆಗೆ ಬಾರದಿರುವವರಿಗಾಗಿ ಊರಿನಲ್ಲಿ ಔತಣ ನೀಡೋಣ ಅಂತ ಅದರ ಸಿದ್ಧತೆಗಾಗಿ ಅಷ್ಟೇ ಸಂಭ್ರಮದಲ್ಲಿ ಹುಣಸೂರಿನಿಂದ ಊರಿಗೆ ವಾಪಸ್ ಹೊರಟಿದ್ದರು. ಆದರೆ ರಸ್ತೆ ಬದಿಯಲ್ಲಿ ಯಮ ಸ್ವರೂಪಿಯಾಗಿ ನಿಂತಿದ್ದ ಮರ ಏಳು ಜನರನ್ನು ಸೆಳೆದುಬಿಟ್ಟಿತ್ತು.

ರಾಜೇಶ್, ಅನಿಲ್, ದಯಾನಂದರೈ, ಬಾಬು, ಸಂತೋಷ್, ವಿನೀದ್ ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಊರಿನ ಆರು ಯುವಕರು ಹೀಗೆ ದಾರುಣವಾಗಿ ಸಾವನ್ನಪ್ಪಿದ ವಿಷಯ ತಿಳಿಯುತ್ತಿದ್ದಂತೆ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಎನ್ನದೇ ಎಲ್ಲರೂ ತಮ್ಮ ವ್ಯಾಪಾರ ವಹಿವಾಟು ಬಂದ್ ಮಾಡಿ ಇಡೀ ಊರು ಶೋಕ ಸಾಗರದಲ್ಲಿ ಮುಳುಗಿತ್ತು.

ಅತ್ತ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ಸೇರಿದ್ದ ಮಧುಮಗ ಜಾನಿ ಅವರ ತಂದೆ ಫಿಲೀಫ್ ಕೂಡ ಚಿಕಿತ್ಸೆ ಫಲಕಾರಿಯಾಗದೇ ಮೈಸೂರು ಆಸ್ಪತ್ರೆಯಲ್ಲಿ ನಿನ್ನೆ ರಾತ್ರಿ ಪ್ರಾಣಬಿಟ್ಟಿದ್ದರು. ಈ ಎಲ್ಲಾ ಏಳು ಜನರು ತೀರಾ ಬಡತನದ ಕುಟುಂಬದವರು. ಎಲ್ಲರೂ ಕಟ್ಟಡ, ತೋಟ ಮತ್ತು ಖಾಸಗಿ ಬಸ್ಸಿನ ಕೂಲಿ ಕಾರ್ಮಿಕರಾಗಿ ದುಡಿಯುತ್ತಾ ಜೀವನ ಸಾಗಿಸುತ್ತಿದ್ದವರು.

ಇದನ್ನೂ ಓದಿ: Ramanagara: ಕೆರೆಗೆ ವಿಷಯುಕ್ತ ನೀರು, ಸಾವಿರಾರು ಮೀನುಗಳ ಸಾವು!

ಹೀಗಾಗಿ ಒಬ್ಬೊಬ್ಬರದು ಒಂದೊಂದು ಕಣ್ಣೀರಿನ ಕಥೆ. ಮೃತ ವಿನೀದ್ ತಾನೂ ಕೂಡ ಇನ್ನೆರಡು ದಿನಗಳಲ್ಲಿ ಅಂದ್ರೆ ಬರುವ ಭಾನುವಾರ ಹಸೆಮಣೆ ಏರಬೇಕಾಗಿತ್ತು. ಅದಕ್ಕಾಗಿ ತಾಯಿ ಲೀಲಾವತಿ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದರು. ಮನೆಗೆ ಸುಣ್ಣ, ಬಣ್ಣ ಬಳಿದು, ಮದುವೆಗೆ ಬೇಕಾದ ಎಲ್ಲಾ ವಸ್ತುಗಳನ್ನು ಕೊಂಡು ಸಿದ್ಧಮಾಡಿಕೊಂಡಿದ್ದರು. ಅಷ್ಟರಲ್ಲಿ ಹೀಗೆ ಬಿಟ್ಟು ಹೊರಟ ಮಗನ ದಾರುಣ ಸ್ಥಿತಿ ಕಂಡು ತಾಯಿ ಹೃದಯ ಹೊಡೆದು ಹೋಗಿತ್ತು.

ಕೊನೆ ಗಳಿಯಲ್ಲೂ ಮುಖವನ್ನೂ ನೋಡಲು ಅವಕಾಶವಿಲ್ಲ

ಅಪಘಾತದಲ್ಲಿ ಮಗ ವಿನೀದ್ ನ  ಮುಖ ಸಂಪೂರ್ಣ ಜಜ್ಜಿ ಹೋಗಿದ್ದರಿಂದ ಕೊನೆ ಗಳಿಯಲ್ಲೂ ಮುಖವನ್ನೂ ನೋಡಲು ಅವಕಾಶವಿಲ್ಲದೆ ಮಗನ ಫೋಟೋ ಹಿಡಿದು ತಾಯಿ ಲೀಲಾವತಿ ಕಣ್ಣೀರಿಟ್ಟ ದೃಶ್ಯ ಕರುಳು ಕಿತ್ತು ಬರುವಂತೆ ಮಾಡಿತ್ತು. ಗುರುವಾರ ಅಂತ್ಯ ಸಂಸ್ಕಾರ ಇದ್ದಿದ್ದರಿಂದ ಗುರುವಾರವು ಕೂಡ ಇಡೀ ಊರಿನಲ್ಲಿ ವ್ಯಾಪಾರ ವಹಿವಾಟು ಎಲ್ಲವೂ ಸ್ತಬ್ಧವಾಗಿತ್ತು.

ಇದನ್ನೂ ಓದಿ: Bengaluru Rain: ಕಳೆದ 7 ವರ್ಷಗಳಲ್ಲೇ ಈ ಬಾರಿಯ ಏಪ್ರಿಲ್ ತಿಂಗಳಿನಲ್ಲಿ ಬೆಂಗಳೂರಲ್ಲಿ ಹೆಚ್ಚು ಮಳೆ, ಕಾರಣವೇನು?

ಒಟ್ಟಿನಲ್ಲಿ ಏಳು ಜನರ ದುರಂತ ಅಂತ್ಯ ಕಂಡಿದ್ದು ಗ್ರಾಮವೇ ದುಃಖದ ಕಡಲಲ್ಲಿ ಮುಳುಗಿತ್ತು. ಬೇರೆ ದಾರಿಯಿಲ್ಲದೆ ಬಿಟ್ಟು ಹೊರಟವರನ್ನು ಗ್ರಾಮದ ಹಿಂದೂ ರುದ್ರಭೂಮಿಯಲ್ಲಿ 6 ಜನರ ಅಂತ್ಯ ಸಂಸ್ಕಾರವನ್ನು ಮಾಡಲಾಯಿತು. ಆದರೆ ಮೃತ ಅನಿಲ್ ಅವರ ಮಗ ದುಬೈನಲ್ಲಿ ಇರುವುದರಿಂದ ಅನಿಲ್ ಅಂತ್ಯ ಸಂಸ್ಕಾರ ಶುಕ್ರವಾರ ನಡೆಯಲಿದೆ. ಏನೆ ಆಗಲಿ ಮದುವೆ ಸಂಭ್ರಮದಲ್ಲಿದ್ದವರನ್ನು ಕ್ರೂರ ವಿಧಿ ಈ ರೀತಿ ಕರೆದೊಯ್ದಿದ್ದು ಮಾತ್ರ ವಿಪರ್ಯಾಸ.
Published by:Divya D
First published: