HOME » NEWS » State » 60000 CRORES WORTH OF CORRUPTION BEHIND LAND REFORM AMENDMENT SAYS SIDDARAMAIAH MAK

ಭೂ ಸುಧಾರಣೆ ತಿದ್ದುಪಡಿಯ ಹಿಂದೆ 60,000 ಕೋಟಿ ರೂ.ಗಳ ಭ್ರಷ್ಟಾಚಾರವಿದೆ: ಸಿದ್ದರಾಮಯ್ಯ ಆರೋಪ

ಕರ್ನಾಟಕ ಭೂ ಸುಧಾರಣಾ ಕಾಯ್ದೆ 1961ರ 79ಎ, ಬಿ, ಸಿ ಮತ್ತು 80ನೇ ಕಲಂಗಳನ್ನು ರದ್ದುಗೊಳಿಸಿ, ಕಲಂ 63ರಲ್ಲಿ ನಿಗದಿಪಡಿಸಿದ ಭೂ ಒಡೆತನದ ಮಿತಿಯನ್ನು ದ್ವಿಗುಣಗೊಳಿಸಲು ರಾಜ್ಯ ಸರ್ಕಾರ ನಿರ್ಧರಿಸಿರುವುದು ಕೃಷಿ ಕ್ಷೇತ್ರದ ಶವಪೆಟ್ಟಿಗೆಗೆ ಹೊಡೆದಿರುವ ಕೊನೆಯ ಮೊಳೆ ಹೊಡೆದಿದೆ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

news18-kannada
Updated:September 26, 2020, 3:00 PM IST
ಭೂ ಸುಧಾರಣೆ ತಿದ್ದುಪಡಿಯ ಹಿಂದೆ 60,000 ಕೋಟಿ ರೂ.ಗಳ ಭ್ರಷ್ಟಾಚಾರವಿದೆ: ಸಿದ್ದರಾಮಯ್ಯ ಆರೋಪ
ಸಿದ್ದರಾಮಯ್ಯ.
  • Share this:
ಬೆಂಗಳೂರು (ಸೆಪ್ಟೆಂಬರ್ 26); ಕೇಂದ್ರ ಸರ್ಕಾರದ ಮೂರು ನೂತನ ಕೃಷಿ ಮಸೂದೆಗಳಿಗೆ ಸಂಸತ್​ನಲ್ಲಿ ಅಂಗೀಕಾರ ಸಿಕ್ಕಿದೆ. ಆದರೆ, ಈ ಮಸೂದೆಯನ್ನು ವಿರೋಧಿಸಿ ದೇಶದಾದ್ಯಂತ ದೊಡ್ಡ ಮಟ್ಟದ ರೈತ ಹೋರಾಟ ನಡೆಯುತ್ತಿದೆ. ಇನ್ನೂ ಪಂಜಾಬ್ ಹರಿಯಾಣ ರಾಜ್ಯಗಳಲ್ಲಿ ಪರಿಸ್ಥಿತಿ ಕೈಮೀರಿದೆ. ರೈತ ಹೋರಾಟದಲ್ಲಿ ಕೆಲವು ರೈತರು ಸಾವನ್ನಪ್ಪಿದ ಪ್ರಕರಣಗಳೂ ವರದಿಯಾಗುತ್ತದೆ. ರಾಜ್ಯದಲ್ಲೂ ಸಹ ಕೃಷಿ ಮಸೂದೆಗಳು ಮತ್ತು ರಾಜ್ಯ ಸರ್ಕಾರದ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ವಿರೋಧಿಸಿ ರಾಜ್ಯಾದ್ಯಂತ ರೈತರು ಬೀದಿಗಿಳಿದಿದ್ದಾರೆ. ಸರ್ಕಾರದ ವಿರುದ್ಧ ತೀವ್ರ ಹೋರಾಟಕ್ಕಿಳಿದಿದ್ದಾರೆ. ಅಲ್ಲದೆ, ಸೆಪ್ಟೆಂಬರ್ 28 ರಂದು ಈ ಕಾಯ್ದೆಯನ್ನು ವಿರೋಧಿಸಿ ಭಾರತ್ ಬಂದ್ ಮಾಡಲು ಎಲ್ಲಾ ರೈತ ಸಂಘಟನೆಗಳು ನಿರ್ಧರಿಸಿವೆ. ಇದರ ಬೆನ್ನಿಗೆ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ವಿರುದ್ಧ ಸರಣಿ ಟ್ವೀಟ್​ ಮಾಡುವ ಮೂಲಕ ಕಿಡಿಕಾರಿರುವ ಮಾಜಿ ಸಿಎಂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, "ಭೂ ಸುಧಾರಣೆ ಕಾಯ್ದೆಯ ಉಲ್ಲಂಘನೆ ಮಾಡಿರುವ ಅಂದಾಜು 60,000 ಎಕರೆ ಜಮೀನು ಒಳಗೊಂಡಿರುವ 13,814 ಪ್ರಕರಣಗಳು ರಾಜ್ಯದ ನ್ಯಾಯಾಲಯದಲ್ಲಿವೆ. ಪ್ರಸ್ತಾಪಿತ ತಿದ್ದುಪಡಿಯಿಂದ ಈ ಎಲ್ಲ ಪ್ರಕರಣಗಳು ರದ್ದಾಗಿ ಅಕ್ರಮಗಳೆಲ್ಲ ಸಕ್ರಮವಾಗಲಿವೆ. ಈ ಭೂಗಳ್ಳರನ್ನು ರಕ್ಷಿಸಲಿಕ್ಕಾಗಿಯೇ ತಿದ್ದುಪಡಿ ತರಲಾಗಿದೆ" ಎಂದು ಆರೋಪಿಸಿದ್ದಾರೆ.



ಸರಣಿ ಟ್ವೀಟ್ ಮೂಲಕ ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿರುವ ಸಿದ್ದರಾಮಯ್ಯ, "ಒಂದೆಡೆ ಕೇಂದ್ರ ಕೃಷಿ ಮಸೂದೆಯನ್ನು ವಿರೋಧಿಸಿ ರೈತ ಸಂಘಟನೆಗಳು ಭಾರತ್ ಬಂದ್ ಮಾಡಲು ಮುಂದಾಗಿದ್ದರೆ, ಪಂಜಾಬ್ ರಾಜ್ಯದಲ್ಲಿ ಮಾತ್ರ ರೈತರು ಸತತ ಮೂರು ದಿನಗಳ ‘ರೈಲ್ ರೋಖೋ’ ಚಳುವಳಿ ನಡೆಸುವ ಮೂಲಕ ರೈಲು ಸಂಚಾರವನ್ನೇ ಪಂಜಾಬ್​ನಲ್ಲಿ ಸ್ಥಗಿತಗೊಳಿಸಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ.



ಉದ್ಯಮಿಗಳು, ಬಹುರಾಷ್ಟ್ರೀಯ ಕಂಪೆನಿಗಳು ಮತ್ತು ರಿಯಲ್ ಎಸ್ಟೇಟ್ ವ್ಯಾಪಾರಿಗಳು ಅಸಹಾಯಕ ರೈತರಿಗೆ ವಂಚಿಸಿ ಸುಲಭದಲ್ಲಿ ಭೂಮಿ ಖರೀದಿ ಮಾಡಲು ನೆರವಾಗುವ ಉದ್ದೇಶದಿಂದಲೇ ಈ ತಿದ್ದುಪಡಿಯನ್ನು ತರಲಾಗಿದೆ. ಇದರಲ್ಲಿ ಯಾವ ರೈತರ ಹಿತದೃಷ್ಟಿಯೂ ಇಲ್ಲ.



ಭೂ ಸುಧಾರಣೆ ಕಾಯ್ದೆ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮ. ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದಾಗ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಜಾರಿಗೆ ತಂದು ಉಳುವವನನ್ನೇ ಭೂಮಿಯ ಒಡೆಯನನ್ನಾಗಿ ಮಾಡಿದ್ದರು, ರಾಜ್ಯ ಬಿಜೆಪಿ ಸರ್ಕಾರ ಉಳ್ಳವನನ್ನೇ ಭೂ ಒಡೆಯನನ್ನಾಗಿ ಮಾಡಲು ಹೊರಟಿದೆ.



ಕರ್ನಾಟಕ ಭೂ ಸುಧಾರಣಾ ಕಾಯ್ದೆ 1961ರ 79ಎ, ಬಿ, ಸಿ ಮತ್ತು 80ನೇ ಕಲಂಗಳನ್ನು ರದ್ದುಗೊಳಿಸಿ, ಕಲಂ 63ರಲ್ಲಿ ನಿಗದಿಪಡಿಸಿದ ಭೂ ಒಡೆತನದ ಮಿತಿಯನ್ನು ದ್ವಿಗುಣಗೊಳಿಸಲು ರಾಜ್ಯ ಸರ್ಕಾರ ನಿರ್ಧರಿಸಿರುವುದು ಕೃಷಿ ಕ್ಷೇತ್ರದ ಶವಪೆಟ್ಟಿಗೆಗೆ ಹೊಡೆದಿರುವ ಕೊನೆಯ ಮೊಳೆ ಹೊಡೆದಿದೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭೂ ಸುಧಾರಣಾ ಕಾಯ್ದೆ ತಿದ್ದುಪಡಿಯಲ್ಲಿರುವ ಹುಳುಕುಗಳನ್ನು ಎತ್ತಿ ತೋರಿಸಿರುವ ಸಿದ್ದರಾಮಯ್ಯ, " ಕೃಷಿ ಭೂಮಿ ಖರೀದಿಗೆ ಆದಾಯದ ಮಿತಿಯ ಸೆಕ್ಷನ್ 79ಎ, ಕೃಷಿಕರೇತರರಿಗೆ ಭೂಮಿ ಖರೀದಿ ನಿಷೇಧಿಸಿದ್ದ ಸೆಕ್ಷನ್ 79ಬಿ, ಸುಳ್ಳು ಪ್ರಮಾಣಪತ್ರಕ್ಕೆ ದಂಡ ವಿಧಿಸುವ ಸೆಕ್ಷನ್ 79 ಸಿ, ಕೃಷಿಕರಲ್ಲದವರಿಗೆ ಭೂಮಿ ವರ್ಗಾವಣೆ ನಿಷೇಧಿಸಿದ್ದ ಸೆಕ್ಷನ್ 80, ಗರಿಷ್ಠ ಭೂಮಿತಿಯ ಸೆಕ್ಷನ್ 63ರ ರದ್ದತಿ ಭೂತಾಯಿಗೆ ಬಗೆವ ದ್ರೋಹ.



ತಿದ್ದುಪಡಿಗೆ ಒಳಗಾಗಿರುವ ಎಲ್ಲಾ ಸೆಕ್ಷನ್ ಗಳು ಭೂಮಲೀಕರ ದೌರ್ಜನ್ಯದಿಂದ ಸಣ್ಣ ರೈತರನ್ನು ರಕ್ಷಿಸುವ ಹಾಗೂ ಸಣ್ಣ ಪುಟ್ಟ ಹಿಡುವಳಿದಾರರ ಅಸಹಾಯಕತೆಯನ್ನು ಶ್ರೀಮಂತರು ಹಾಗು ಉದ್ಯಮಿಗಳು ದುರುಪಯೋಗ ಪಡಿಸಿಕೊಳ್ಳದಂತೆ ತಡೆಹಿಡಿಯುವ ಅವಕಾಶಗಳನ್ನು ಒದಗಿಸುತ್ತಿದ್ದವು.



ಈ ಎಲ್ಲಾ ತಿದ್ದುಪಡಿಗಳ ಪರಿಣಾಮವಾಗಿ ಕಾರ್ಪೋರೇಟ್ ಸಂಸ್ಥೆಗಳು, ರಿಯಲ್ ಎಸ್ಟೇಟ್ ಕುಳಗಳು ಮತ್ತು ಶ್ರೀಮಂತರು ಸುಲಭವಾಗಿ ಕೃಷಿ ಭೂಮಿಯನ್ನು ಕಬಳಿಸಬಹುದು. ಸಣ್ಣ ರೈತಾಪಿಗಳು ಇನ್ನಷ್ಟು ವೇಗವಾಗಿ ಹಾಗೂ ಶಾಸನಬದ್ಧವಾಗಿ ಕೃಷಿಯಿಂದ ಹೊರದೂಡಲ್ಪಡುತ್ತಾರೆ.



ಭೂ ಸುಧಾರಣೆ ಕಾಯ್ದೆಯ ಉಲ್ಲಂಘನೆ ಮಾಡಿರುವ ಅಂದಾಜು 60,000 ಎಕರೆ ಜಮೀನು ಒಳಗೊಂಡಿರುವ 13,814 ಪ್ರಕರಣಗಳು ರಾಜ್ಯದ ನ್ಯಾಯಾಲಯದಲ್ಲಿವೆ. ಪ್ರಸ್ತಾಪಿತ ತಿದ್ದುಪಡಿಯಿಂದ ಈ ಎಲ್ಲ ಪ್ರಕರಣಗಳು ರದ್ದಾಗಿ ಅಕ್ರಮಗಳೆಲ್ಲ ಸಕ್ರಮವಾಗಲಿವೆ. ಈ ಭೂಗಳ್ಳರನ್ನು ರಕ್ಷಿಸಲಿಕ್ಕಾಗಿಯೇ ತಿದ್ದುಪಡಿ ತರಲಾಗಿದೆ.



ಭೂ ಸುಧಾರಣೆ ಕಾಯ್ದೆ ಉಲ್ಲಂಘಣೆಯ 13,814 ಪ್ರಕರಣಗಳಲ್ಲಿ ಬಹುತೇಕ ಪ್ರಕರಣಗಳು ಭೂಮಿಗೆ ಚಿನ್ನದ ಬೆಲೆ ಇರುವ ಬೆಂಗಳೂರು ಮತ್ತು ಸುತ್ತಮುತ್ತಲಿನ ಜಿಲ್ಲೆಗಳಿಗೆ ಸಂಬಂಧಿಸಿದ್ದಾಗಿದೆ. ಈ ರಿಯಲ್ ಎಸ್ಟೇಟ್ ಮಾಫಿಯಾ ಜೊತೆ ಶಾಮೀಲಾಗಿ ಸರ್ಕಾರ ಈ ತಿದ್ದುಪಡಿ ತಂದಿದೆ.



ಭೂ ಸುಧಾರಣೆ ತಿದ್ದುಪಡಿಯ ಹಿಂದೆ ಕೋಟ್ಯಂತರ ರೂಪಾಯಿಗಳ ಹಗರಣ ಇದೆ. ಅಂದಾಜು 60,000 ಎಕರೆ ಜಮೀನನ್ನು ಪಡೆಯಲಿರುವ ಭೂಗಳ್ಳರಿಂದ ಆಡಳಿತ ಪಕ್ಷದವರಿಗೆ ಏನು ಲಾಭ ಎನ್ನುವುದನ್ನು ನಾನು ವಿವರಿಸಲು ಹೋಗುವುದಿಲ್ಲ" ಎಂದು ಆರೋಪಿಸಿದ್ದಾರೆ.



ಇನ್ನೂ ಸರ್ಕಾರದ ಭ್ರಷ್ಟಾಚಾರ ಮತ್ತು ಲಂಚದ ಕುರಿತು ಮಾತನಾಡಿರುವ ಅವರು "ಭೂ ಸುಧಾರಣಾ ಕಾಯ್ದೆಯಿಂದಾಗಿ ಭ್ರಷ್ಟಾಚಾರ ಹೆಚ್ಚಾಗಿದೆ, ಅಧಿಕಾರಿಗಳು ಲಂಚ ಹೊಡೆಯಲು ಅನುಕೂಲವಾಗಿದೆ ಎಂದು ಸರ್ಕಾರ ಹೇಳುತ್ತಿದೆ. ಲಂಚ ಎಲ್ಲಿ ಇಲ್ಲ? ತಹಶೀಲ್ದಾರ್, ಪೊಲೀಸ್, ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಲಂಚ ಇಲ್ಲವೇ? ನಿರ್ಮೂಲನೆ ಮಾಡಬೇಕಾಗಿರುವುದು ಲಂಚವನ್ನೇ? ಇಲ್ಲ ಕಾನೂನನ್ನೇ?



ಅಧಿಕಾರಿಗಳು ಲಂಚಕೋರರಾಗಿದ್ದಾರೆ ಎಂದರೆ ಸರ್ಕಾರ ಅವರನ್ನು ನಿಯಂತ್ರಿಸಲು ವಿಫಲವಾಗಿದೆ ಇಲ್ಲವೇ ಸರ್ಕಾರವೇ ಲಂಚಕೋರರ ಜೊತೆ ಶಾಮೀಲಾಗಿದೆ ಎಂದರ್ಥವಲ್ಲವೇ? ಇದನ್ನೂ ಸಮರ್ಥಿಸಿಕೊಳ್ಳಲು ನಾಚಿಕೆ ಆಗುವುದಿಲ್ವೇ?



ಇಡೀ ದೇಶ ಕೊರೊನಾ ಸೋಂಕಿನಿಂದ ತತ್ತರಿಸುತ್ತಿರುವಾಗ ತರಾತುರಿಯಲ್ಲಿ ಈ ತಿದ್ದುಪಡಿಯನ್ನು ಸುಗ್ರೀವಾಜ್ಞೆ ಮೂಲಕ ತರುವ ಅನಿವಾರ್ಯತೆ ಏನಿತ್ತು? ಇದನ್ನು ತರುವ ಮೊದಲು ರೈತರ ಜೊತೆ ಸಮಾಲೋಚನೆ ಮಾಡಿದ್ದೀರಾ? ವಿರೋಧ ಪಕ್ಷಗಳ ಜೊತೆ ಚರ್ಚೆ ಮಾಡಿದ್ದೀರಾ? ಕನಿಷ್ಠ ನಿಮ್ಮ ಪಕ್ಷದೊಳಗಾದರೂ ಚರ್ಚೆ ಮಾಡಿದ್ದೀರಾ?



ಈ ಭೂ ಸುಧಾರಣಾ ತಿದ್ದುಪಡಿಯಿಂದ ಕೃಷಿಗೇನು ತೊಂದರೆಯಾಗಲಾರದು ಎಂದು ಹೇಳುತ್ತೀರಲ್ಲಾ? ಕೃಷಿಯೇತರ ಬಳಕೆಗೆ ಕೃಷಿ ಭೂಮಿಯನ್ನು ಬಳಸಿಕೊಳ್ಳಬಾರದೆಂಬ ನಿರ್ಬಂಧವೇನಾದರೂ ತಿದ್ದುಪಡಿಯಲ್ಲಿದೆಯೇ? ಯಾಕೆ ಅದನ್ನು ಸೇರಿಸಿಲ್ಲ? ಇದರ ಹಿಂದಿನ ದುರುದ್ದೇಶ ಏನು?" ಎಂದು ಪ್ರಶ್ನಿಸಿದ್ದಾರೆ.



ಅಲ್ಲದೆ, "ರೈತ ವಿರೋಧಿಯಾಗಿರುವ ಭೂ ಸುಧಾರಣಾ ತಿದ್ದುಪಡಿಯನ್ನು ನಾವು ಮಾತ್ರವಲ್ಲ, ಆಡಳಿತ ಪಕ್ಷದ ಸದಸ್ಯರಲ್ಲಿ ಆತ್ಮಸಾಕ್ಷಿ ಇದ್ದರೆ ಅವರೂ ವಿರೋಧಿಸಬೇಕು ಎಂದು ಮನವಿ ಮಾಡುತ್ತೇವೆ. ನಮ್ಮ ಹೋರಾಟ ಸದನಕ್ಕೆ ಮಾತ್ರ ಸೀಮಿತವಲ್ಲ, ಮುಂದಿನ ದಿನಗಳಲ್ಲಿ ಬೀದಿಗಿಳಿದು ಹೋರಾಟ ಮಾಡುತ್ತೇವೆ" ಎಂದು ಆಡಳಿತರೂಢ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
Published by: MAshok Kumar
First published: September 26, 2020, 2:43 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories