ಉಡುಪಿ (ಜು.20): ಚಾಕೊಲೇಟ್ (Chocolate) ತಿನ್ನುವಾಗ ಕವರ್ ನುಂಗಿದ ಬಾಲಕಿ ಉಸಿರುಗಟ್ಟಿ ಮೃತಪಟ್ಟ ಘಟನೆ ಬೈಂದೂರು ತಾಲೂಕು ಬವಳಾಡಿ ಗ್ರಾಮದಲ್ಲಿ ನಡೆದಿದೆ. ಸಮನ್ವಿ (6) (Samanvi) ಮೃತಪಟ್ಟ ಬಾಲಕಿಯಾಗಿದ್ದು, ಉಪ್ಪುಂದ ಸ್ಥಳೀಯ ಆಂಗ್ಲ ಮಾಧ್ಯಮ ಸ್ಕೂಲ್ ವಿದ್ಯಾರ್ಥಿನಿಯಾಗಿದ್ದಳು. ಇನ್ನು ಬಾಲಕಿ ಶಾಲೆಯ ಬಸ್ಗೆ (School Bus) ಕಾಯುತ್ತಿರುವ ಸಮಯದಲ್ಲಿ ಘಟನೆ ನಡೆದಿದ್ದು, ಸದ್ಯ ಬೈಂದೂರು ಠಾಣೆಯಲ್ಲಿ (Byndooru Police Station) ಪ್ರಕರಣ ದಾಖಲಾಗಿದೆ.
ಶಾಲೆ ಬಸ್ನಲ್ಲೇ ಉಸಿರುಗಟ್ಟಿ ಸಾವು
ಉಪ್ಪುಂದ ಸ್ಥಳೀಯ ಆಂಗ್ಲ ಮಾಧ್ಯಮ ಸ್ಕೂಲ್ ವಿದ್ಯಾರ್ಥಿನಿ ಬವಳಾಡಿ ಮೂಲದ ಸಮನ್ವಿ (6) ಮೃತಪಟ್ಟ ಬಾಲಕಿ. ಶಾಲೆಯ ಬಸ್ ಗೆ ಕಾಯುತ್ತಿರುವ ಸಮಯದಲ್ಲಿ ಚಾಕಲೇಟ್ ತಿನ್ನಲು ಹೋಗಿ ಚಾಕಲೇಟ್ ಕವರ್ ನುಂಗಿದ್ದಾಳೆ.
ಸ್ಕೂಲ್ ವ್ಯಾನ್ ನಲ್ಲೇ ಉಸಿರುಗಟ್ಟಿ ಬಾಲಕಿ ಸಾವನ್ನಪ್ಪಿದ್ದು, ಮಣಿಪಾಲ್ ಕೆ.ಎಂ.ಸಿ ಆಸ್ಪತ್ರೆಗೆ ಬಾಲಕಿ ಮೃತದೇಹ ರವಾನೆ ಮಾಡಲಾಗುತ್ತಿದೆ. ಈ ಸಂಬಂಧ ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: CM Basavaraj Bommai: ಕಬಿನಿ, ಕೆಆರ್ಎಸ್ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಸಿಎಂ ಬೊಮ್ಮಾಯಿ
ವಿದ್ಯುತ್ ತಂತಿ ತುಂಡಾಗಿ ಮೈಮೇಲೆ ಬಿದ್ದು ಬಾಲಕಿ ಸಾವು
ಧಾರವಾಡ: ವಿದ್ಯುತ್ ತಂತಿ ಬಿದ್ದು 12 ವರ್ಷದ ಬಾಲಕಿ ಸಾವನ್ನಪ್ಪಿದ ದಾರುಣ ಘಟನೆ ಕಲಘಟಗಿ ತಾಲೂಕಿನ ಪರಸಾಪುರ ಗ್ರಾಮದಲ್ಲಿ ನಡೆದಿದೆ. ಸಿಮ್ರಾನ್ ಬಾನು ಬಡಿಗೇರ್ ಮೃತ ದುರ್ದೈವಿ. ಮನೆ ಮುಂದೆ ಪಾತ್ರೆ ತೊಳೆಯುತ್ತಿದ್ದ ವೇಳೆ ವಿದ್ಯುತ್ ತಂತಿ ತುಂಡಾಗಿ ಆಕೆಯ ಮೇಲೆ ಬಿದ್ದಿದೆ. ಕೂಡಲೇ ಆಕೆ ಓಡಿ ಹೋಗಲು ಯತ್ನಿಸಿದರೂ ಸಾಧ್ಯವಾಗಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಶಾಲಾ ಬಸ್ ಹರಿದು ಬಾಲಕಿ ಸಾವು
ಬೆಂಗಳೂರು: ಬನಶಂಕರಿ ಸಂಚಾರ ಠಾಣೆ ವ್ಯಾಪ್ತಿಯ ಕಿತ್ತೂರ ರಾಣಿ ಚನ್ನಮ್ಮ ವೃತ್ತದ ಬಳಿ ಅಪಘಾತ ಸಂಭವಿಸಿದ್ದು, ಶಾಲೆ ಬಸ್ ಮೈ ಮೇಲೆ ಹರಿದು 16 ವರ್ಷದ ಬಾಲಕಿ ಕೀರ್ತನಾ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.
‘ಹಾರೋಹಳ್ಳಿ ನಿವಾಸಿ ಕೀರ್ತನಾ, ಇತ್ತೀಚೆಗಷ್ಟೇ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ 70 ಫಲಿತಾಂಶ ಪಡೆದಿದ್ದು, ಕಾಲೇಜೊಂದರಲ್ಲಿ ಪಿ.ಯು. ತರಗತಿ ಪ್ರವೇಶಕ್ಕೆ ಸಿದ್ಧತೆ ನಡೆಸುತ್ತಿದ್ದಳು. ಅಕ್ಕ ಹರ್ಷಿತಾ ಹಾಗೂ ಸ್ನೇಹಿತೆ ಜೊತೆ ಗುರುವಾರ ಬೆಳಿಗ್ಗೆ 9.20ರ ಸುಮಾರಿಗೆ ದ್ವಿಚಕ್ರ ವಾಹನದಲ್ಲಿ ಹೊರಟಿದ್ದಾಗ ಈ ಅವಘಡ ಸಂಭವಿಸಿದೆ’ ಎಂದು ಬನಶಂಕರಿ ಸಂಚಾರ ಠಾಣೆ ಪೊಲೀಸರು ಹೇಳಿದರು.
ಹರ್ಷಿತಾ ಚಲಾಯಿಸುತ್ತಿದ್ದ ದ್ವಿಚಕ್ರ ವಾಹನದಲ್ಲಿ ಅಕ್ಕ ತಂಗಿಯ ನಡುವೆ ಸ್ನೇಹಿತೆ ಕುಳಿತಿದ್ದರು. ಅವರ ಹಿಂದೆ ಕೀರ್ತನಾ ಇದ್ದರು. ಮೂವರು ಒಂದೇ ದ್ವಿಚಕ್ರ ವಾಹನದಲ್ಲಿ ಹೊರಟಿದ್ದರು. ಅತೀ ವೇಗವಾಗಿ ತೆರಳುತ್ತಿದ್ದ ಡೆಲ್ಲಿ ಪಬ್ಲಿಕ್ ಶಾಲೆ ಬಸ್ (ಕೆಎ 51 ಬಿ 3877), ದ್ವಿಚಕ್ರ ವಾಹನಕ್ಕೆ ಗುದ್ದಿತ್ತು. ರಸ್ತೆಗೆ ಬಿದ್ದ ಕೀರ್ತನಾ ಮೇಲೆಯೇ ಬಸ್ಸಿನ ಚಕ್ರ ಹರಿದಿತ್ತು. ತೀವ್ರ ಗಾಯಗೊಂಡು ಕೀರ್ತನಾ ಸ್ಥಳದಲ್ಲೇ ಮೃತಪಟ್ಟರು’ ಎಂದೂ ತಿಳಿಸಿದರು.
‘ಅಪಘಾತದಲ್ಲಿ ಕೀರ್ತನಾಳ ಅಕ್ಕ ಹಾಗೂ ಸ್ನೇಹಿತೆಗೂ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಸ್ ಅನ್ನು ಸ್ಥಳದಲ್ಲೇ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ಗಾಯಾಳು ಹಾಗೂ ಪ್ರತ್ಯಕ್ಷದರ್ಶಿಗಳ ಹೇಳಿಕೆ ಪಡೆದು ತನಿಖೆ ನಡೆಸಲಾಗುತ್ತಿದೆ. ಯಾರ ನಿರ್ಲಕ್ಷ್ಯದಿಂದ ಅಪಘಾತ ಸಂಭವಿಸಿದೆ ಎಂಬುದು ತನಿಖೆಯಿಂದ ತಿಳಿಯಬೇಕಿದೆ’ ಎಂದೂ ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ