Digital Library: ಡಿಜಿಟಲ್ ಗ್ರಂಥಾಲಯ ಯೋಜನೆಗೆ 5 ಲಕ್ಷ ಮಂದಿ ನೊಂದಣಿ : ಸಚಿವ ಸುರೇಶ್ ಕುಮಾರ್

ಕಲೆ ಮತ್ತು ಮಾನವಿಕತೆ, ವ್ಯಕ್ತಿತ್ವ ಕೌಶಲ್ಯ ಮತ್ತು ಸಾಹಿತ್ಯವನ್ನು ಒಳಗೊಂಡಂತೆ ಶಾಲೆ, ಕಾಲೇಜು ಮುಂತಾದ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಸುಮಾರು 5000ಕ್ಕೂ ಹೆಚ್ಚು ಕನ್ನಡ ವಿಷಯಗಳಿವೆ.

ಸಚಿವ ಸುರೇಶ್​ ಕುಮಾರ್

ಸಚಿವ ಸುರೇಶ್​ ಕುಮಾರ್

  • Share this:
ಬೆಂಗಳೂರು(ಸೆಪ್ಟೆಂಬರ್​. 24): ದೇಶದಲ್ಲಿಯೇ ಪ್ರಪ್ರಥಮವಾಗಿ ರಾಜ್ಯ ಗ್ರಂಥಾಲಯ ಇಲಾಖೆ ಅನುಷ್ಠಾನಗೊಳಿಸಿದ ಡಿಜಿಟಲ್ ಗ್ರಂಥಾಲಯ ಯೋಜನೆಗೆ 5 ಲಕ್ಷಕ್ಕೂ ಹೆಚ್ಚು ಮಂದಿ ನೊಂದಾಯಿಸಿದ್ದು ದಾಖಲೆ ಸಂಖ್ಯೆಯ ಓದುಗರು ಡಿಜಿಟಲ್ ಗ್ರಂಥಾಲಯದ ಪ್ರಯೋಜನ ಪಡೆದಿದ್ದಾರೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ. ಕೋವಿಡ್-19 ಸಾಂಕ್ರಾಮಿಕ ರೋಗದ ಪ್ರಸರಣದ ಹಿನ್ನೆಲೆಯಲ್ಲಿ ಲಾಕ್​ಡೌನ್​​ ದಿನಗಳಲ್ಲಿ ಇಲಾಖೆಯು ಸಾರ್ವಜನಿಕರಲ್ಲಿ ಓದುವ ಸಂಸ್ಕೃತಿಯನ್ನು ಬೆಳೆಸಲು ಸಾರ್ವಜನಿಕ ಗ್ರಂಥಾಲಯ ಇಲಾಖೆಯು ಸಾರ್ವಜನಿಕ ಗ್ರಂಥಾಲಯಗಳನ್ನು ತಂತ್ರಜ್ಞಾನ ಮತ್ತು ಡಿಜಿಟಲ್ ಮೂಲ ಸೌಕರ್ಯದೊಂದಿಗೆ ಆಧುನೀಕರಿಸುವ ಮಹತ್ವಾಕಾಂಕ್ಷೆಯ ಯೋಜನೆ ಕೈಗೆತ್ತಿಕೊಂಡಿತ್ತು ಎಂದು ಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ರಾಜ್ಯದಾದ್ಯಂತ ಈ ಯೋಜನೆ ಅಡಿಯಲ್ಲಿ 26 ನಗರ ಕೇಂದ್ರ ಗ್ರಂಥಾಲಯಗಳು 30 ಜಿಲ್ಲಾ ಕೇಂದ್ರ ಗ್ರಂಥಾಲಯಗಳು, 216 ತಾಲ್ಲೂಕು ಗ್ರಂಥಾಲಯಗಳು ಸೇರಿ ಒಟ್ಟು 272 ಸಾರ್ವಜನಿಕ ಗ್ರಂಥಾಲಯಗಳಲ್ಲಿ ಪ್ರಥಮ ಹಂತವಾಗಿ ಡಿಜಿಟಲ್ ಗ್ರಂಥಾಲಯ ಸೌಲಭ್ಯವನ್ನು ಒದಗಿಸಲಾಗಿದೆ.

ಸೆಪ್ಟೆಂಬರ್​ 23 ರವರೆಗೆ ರಾಜ್ಯಾದ್ಯಂತ ಒಟ್ಟು 5,02, 512 ಸದಸ್ಯರು ಡಿಜಿಟಲ್ ಗ್ರಂಥಾಲಯದಲ್ಲಿ ನೋಂದಣಿಯಾಗಿದ್ದು ಸಾರ್ವಜನಿಕರು ಬಹಳ ಪರಿಣಾಮಕಾರಿಯಾಗಿ ಇದರ ಪ್ರಯೋಜನವನ್ನು ಪಡೆಯುತ್ತಿರುವುದು ಇಲಾಖೆಗೆ ಹೆಮ್ಮೆಯ ವಿಷಯವಾಗಿದೆ ಎಂದು ಅವರು ಹೇಳಿದ್ದಾರೆ.

ಶ್ಯೆಕ್ಷಣಿಕ ಮತ್ತು ಕಲಿಕೆಗೆ ಅಗತ್ಯವಿರುವ ಎಲ್ಲಾ ವಿಭಾಗಗಳಲ್ಲಿನ ವಿಷಯಗಳಿಗೆ ಸಂಬಂದಿಸಿದ ಇತ್ತೀಚಿನ ತಂತ್ರಜ್ಞಾನದೊಂದಿಗೆ ಡಿಜಿಟಲ್ ಗ್ರಂಥಾಲಯವನ್ನು ಸ್ಥಾಪಿಸಲಾಗಿದ್ದು ವಿಷಯವಾರು ಇ-ಕಂಟೆಂಟ್ ಗಳನ್ನು ನೂತನವಾಗಿ ಅಳವಡಿಸಲಾಗಿದೆ. ಈ ಉಪ ಕ್ರಮವು ಕನ್ನಡ, ಆಂಗ್ಲ, ಹಿಂದಿ, ಉರ್ದು, ಮರಾಠಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಪಾಠಗಳನ್ನು ಒದಗಿಸುತ್ತದೆ. ರಾಜ್ಯ ಮತ್ತು ಸಿಬಿಎಸ್ಇ ಮಂಡಳಿಯ ಪಠ್ಯಕ್ರಮದ ವಿದ್ಯಾರ್ಥಿಗಳಿಗೆ ಅಧ್ಯಯನ ಮಾಡಲು ಡಿಜಿಟಲ್ ರೂಪದಲ್ಲಿ ಮಾಹಿತಿಯನ್ನು ಸಹ ಒದಗಿಸುತ್ತದೆ.

ಕಲೆ ಮತ್ತು ಮಾನವಿಕತೆ, ವ್ಯಕ್ತಿತ್ವ ಕೌಶಲ್ಯ ಮತ್ತು ಸಾಹಿತ್ಯವನ್ನು ಒಳಗೊಂಡಂತೆ ಶಾಲೆ, ಕಾಲೇಜು ಮುಂತಾದ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಸುಮಾರು 5000ಕ್ಕೂ ಹೆಚ್ಚು ಕನ್ನಡ ವಿಷಯಗಳಿವೆ. ನಿರ್ದಿಷ್ಟವಾಗಿ ರಾಜ್ಯ ಮತ್ತು ಸಿಬಿಎಸ್ಇ ಶಾಲಾ ಮಕ್ಕಳಿಗೆ ಪಠ್ಯ ಕ್ರಮದ ಪ್ರಕಾರ ಇ-ಪುಸ್ತಕಗಳು ಮತ್ತು ವೀಡಿಯೋಗಳನ್ನು ಒದಗಿಸಲಾಗಿದ್ದು, 1 ರಿಂದ 12ನೇ ತರಗತಿಯವರೆಗೆ ಸಂಪೂರ್ಣ ವಿಷಯಗಳನ್ನು ಒಳಗೊಂಡಿದೆ.

ಇದನ್ನೂ ಓದಿ :  ಸಚಿವರಿಗೆ ಅಧಿಕಾರ ಶಾಶ್ವತವಲ್ಲ, ಆದರೆ ರೈತರಿಗೆ ಹೋರಾಟ ಶಾಶ್ವತ : ರೈತ ಮುಖಂಡ ಕುರುಬೂರು ಶಾಂತಕುಮಾರ್

ಕನ್ನಡದಲ್ಲಿ ಸುಮಾರು 4200ಕ್ಕೂ ಹೆಚ್ಚು ಇ-ಪುಸ್ತಕಗಳಿಗೆ ಮತ್ತು ಕನ್ನಡ ಭಾಷೆಯಲ್ಲಿ ಸುಮಾರು 600 ಕ್ಕೂ ಹೆಚ್ಚು ವೀಡಿಯೋಗಳಿವೆ ಎಂದು ಸುರೇಶ್ ಕುಮಾರ್ ತಿಳಿಸಿದ್ದಾರೆ.  ಸಾರ್ವಜನಿಕರು ಡಿಜಿಟಲ್ ಗ್ರಂಥಾಲಯ ಆಪ್ ಡೌನ್ಲೋಡ್ ಮಾಡಿಕೊಳ್ಳುವ ಮೂಲಕ ಓದುವುದರಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಇಲಾಖೆಯ ಸೌಲಭ್ಯದ ಪ್ರಯೋಜನ ಪಡೆದುಕೊಳ್ಳಬೇಕೆಂದು ಸುರೇಶ್ ಕುಮಾರ್ ಕೋರಿದ್ದಾರೆ.

ಡಿಜಿಟಲ್ ಗ್ರಂಥಾಲಯವನ್ನು ಮೊಬೈಲ್ ಮೂಲಕ ವೀಕ್ಷಿಸಲು e-sarvajanikagranthalaya ಆ್ಯಪ್ ನ್ನು ಸಾರ್ವಜನಿಕ ಸೇವೆಗೆ ಒದಗಿಸಲಾಗಿದೆ. ವಿವಿಧ ಜಾಲತಾಣಗಳ ಲಿಂಕ್ಸ್ ಗಳನ್ನು ಕರ್ನಾಟಕ ಡಿಜಿಟಲ್ ಸಾರ್ವಜನಿಕ ಗ್ರಂಥಾಲಯ ಜಾಲತಾಣದಲ್ಲಿ ಒದಗಿಸಲಾಗಿದೆ.
Published by:G Hareeshkumar
First published: