ಚಿಕ್ಕಮಗಳೂರು: ಚಿಕ್ಕಮಗಳೂರು (Chikkamagaluru) ಅಂದ ತಕ್ಷಣ ಪ್ರತಿಯೊಬ್ಬರಿಗೂ ಬಿಜೆಪಿ ಮುಖಂಡ, ಶಾಸಕ ಸಿ.ಟಿ ರವಿ (CT Ravi) ತಕ್ಷಣ ನೆನಪಿಗೆ ಬರುತ್ತಾರೆ. ರಾಜಕೀಯವಾಗಿ ನೆಗೆಟಿವೋ, ಪಾಸಿಟಿವೋ, ಆದರೆ ಸಿಟಿ ರವಿ ನೆನಪಿಗೆ ಬರೋದಂತೂ ಖಂಡಿತಾ. ಸತತ ನಾಲ್ಕು ಅವಧಿಗೆ ಈ ಕ್ಷೇತ್ರದಲ್ಲಿ ಸ್ಪರ್ಧಿಸಿ ಶಾಸಕ ಸ್ಥಾನದಲ್ಲಿ ಮುಂದುವರಿದಿರುವ ಸಿಟಿ ರವಿ, ಬಿಜೆಪಿಯ ಪ್ರಬಲ ನಾಯಕನೂ ಹೌದು.
ಪಕ್ಷ ಅಂತ ಬಂದರೆ ಮೊದಲು ನಿಲ್ಲುವ ಪಕ್ಷದ ಪಕ್ಷ ನಿಷ್ಠ ನಾಯಕನಾಗಿಯೂ ಗುರುತಿಸಿಕೊಂಡಿರುವ ಸಿಟಿ ರವಿ, ತಮ್ಮ ವಿವಾದಾತ್ಮಕ, ಅಸಂಬದ್ಧ ಹೇಳಿಕೆಗಳಿಂದಲೂ ಟೀಕೆ ಟಿಪ್ಪಣಿಯನ್ನು ಎದುರಿಸುತ್ತಲೇ ಇರುತ್ತಾರೆ. ಹೇಳಿಕೆ, ಟೀಕೆಗಳಿಂದ ಯಾವಾಗಲೂ ಸುದ್ದಿಯಲ್ಲಿರುವ ಸಿ.ಟಿ.ರವಿ ಕಳೆದ ಕೆಲ ವರ್ಷಗಳಿಂದ ರಾಷ್ಟ್ರ ರಾಜಕೀಯದಲ್ಲೂ ಸಕ್ರಿಯರಾಗಿದ್ದು, ಇತ್ತ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ನಾಲ್ಕು ಬಾರಿ ಸೋಲಿಲ್ಲದ ಸರದಾರನಂತೆ ಜಯಭೇರಿ ಭಾರಿಸಿದ್ದಾರೆ.
ಇದನ್ನೂ ಓದಿ: CT Ravi: ಕಿವಿಗೆ ಹೂವಿಟ್ಟ ಕಾಂಗ್ರೆಸ್ ನಾಯಕರನ್ನು ಮಂಗಳಮುಖಿಯರಿಗೆ ಹೋಲಿಸಿದ್ರಾ ಸಿಟಿ ರವಿ?!
ಪಕ್ಷದ ನಿರ್ಧಾರದ ಮೇರೆಗೆ ಮೂರು ವರ್ಷದ ಹಿಂದೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿರುವ ಸಿಟಿ ರವಿಯ ಹೆಸರನ್ನು ಈ ಬಾರಿಯೂ ಕೂಡ ಟಿಕೆಟ್ ಫೈನಲಿಸ್ಟ್‌ಗಳಲ್ಲಿ ನಿರೀಕ್ಷೆ ಮಾಡಲಾಗಿದೆ. 2023 ರ ಕರ್ನಾಟಕ ಚುನಾವಣೆಯಲ್ಲಿ ತಮ್ಮ ಭದ್ರಕೋಟೆಯಾದ ಚಿಕ್ಕಮಗಳೂರಿನಲ್ಲಿ ಸ್ಪರ್ಧಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಸಿ.ಟಿ. ರವಿ ಪರಿಚಯ
18 ಜುಲೈ 1967ರಲ್ಲಿ ಜನಿಸಿದ ಇವರ ಪೂರ್ತಿ ಹೆಸರು ಚಿಕ್ಕಮಗರವಳ್ಳಿ ತಿಮ್ಮೇಗೌಡ ರವಿ. ಇವರು ಪ್ರಸ್ತುತ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಪಕ್ಷ ಸಂಘಟನೆಯ ಜವಾಬ್ದಾರಿ ಹೊತ್ತುಕೊಂಡು ಕೆಲಸ ಮಾಡುತ್ತಿದ್ದಾರೆ.
ಸಿ.ಟಿ. ರವಿ ಅವರು ಭದ್ರಕೋಟೆ ಚಿಕ್ಕಮಗಳೂರು ಕ್ಷೇತ್ರದಿಂದ ನಾಲ್ಕು ಬಾರಿ ಶಾಸಕರಾಗಿದ್ದಾರೆ. ಕರ್ನಾಟಕ ಸರ್ಕಾರದಲ್ಲಿ ಕ್ಯಾಬಿನೆಟ್ ಸಚಿವರಾಗಿದ್ದ ವೇಳೆ ಇವರನ್ನು ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಲಾಯಿತು. ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡ ನಂತರ ಅವರು ಕ್ಯಾಬಿನೆಟ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು.
ಇದನ್ನೂ ಓದಿ: CT Ravi: ಸಿ ಟಿ ರವಿ ಮಾಂಸ ತಿಂದು ದೇವಸ್ಥಾನಕ್ಕೆ ಹೋದರೂ ಮಠಾಧೀಶರ ಮೌನ; -ಮಾಜಿ ಸಿಎಂ ಸಿದ್ದರಾಮಯ್ಯ ಅಚ್ಚರಿ
ಸಿ.ಟಿ.ರವಿ ಬಗ್ಗೆ ಐದು ಆಸಕ್ತಿಕರ ಅಂಶಗಳು ಹೀಗಿವೆ.
1) ಸಿ.ಟಿ. ರವಿ ಕರ್ನಾಟಕದಲ್ಲಿ ಬಿಜೆಪಿ ಪಕ್ಷದ ಪರ ಟೊಂಕ ಕಟ್ಟಿ ನಿಂತ ನಾಯಕ. ರಾಜ್ಯ ಬಿಜೆಪಿ ಚುನಾವಣೆ ಸಮೀಪದಲ್ಲಿ ಮುನ್ನೆಲೆಗೆ ತಂದ ಉರಿಗೌಡ, ನಂಜೇಗೌಡ ವಿಚಾರದ ಬಗ್ಗೆ ಮೊದಲು ಪ್ರತಿಪಾದಿಸಿದವರಲ್ಲಿ ಸಿ.ಟಿ.ರವಿ ಪ್ರಮುಖರು.
ಮೈಸೂರಿನ 18ನೇ ಶತಮಾನದ ದೊರೆ, ಮೈಸೂರು ಹುಲಿ ಖ್ಯಾತಿಯ ಟಿಪ್ಪು ಸುಲ್ತಾನನನ್ನು ಇಬ್ಬರು ಒಕ್ಕಲಿಗ ನಾಯಕರಾದ ಊರಿಗೌಡ ಮತ್ತು ನಂಜೇಗೌಡರು ಕೊಂದಿದ್ದಾರೆಯೇ ಹೊರತು ಬ್ರಿಟಿಷರು ಮತ್ತು ಮರಾಠರ ಸೇನೆ ಅಲ್ಲ ಎಂದು ಸಿಟಿ ರವಿ ಪ್ರತಿಪಾದಿಸಿದ್ದರು.
2) ಸಿ.ಟಿ.ರವಿ ಅವರು 1999 ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಚಿಕ್ಕಮಗಳೂರು ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಪಡೆದು ಸ್ಪರ್ಧಿಸುವ ಮೂಲಕ ಚುನಾವಣಾ ರಾಜಕೀಯಕ್ಕೆ ಪ್ರವೇಶಿಸಿದರು. ಈ ಎಲೆಕ್ಷನ್‌ನಲ್ಲಿ ಇವರು ಕಾಂಗ್ರೆಸ್‌ನ ಸಗೀರ್ ಅಹಮದ್ ವಿರುದ್ಧ 982 ಮತಗಳ ಅಂತರದಿಂದ ಗೆದ್ದಿದ್ದರು.
3) 2004ರಲ್ಲಿ ಮತ್ತೆ ಇದೇ ಕ್ಷೇತ್ರದಿಂದ ಚುನಾವಣೆಗೆ ಸಿ.ಟಿ.ರವಿ ಕಣಕ್ಕಿಳಿದರು. 2004ರ ಚುನಾವಣೆಯಲ್ಲಿ ಮೊದಲ ಬಾರಿಗೆ ಗೆದ್ದು ಶಾಸಕರಾದ ನಂತರ 2008, 2013 ಮತ್ತು 2018 ರಲ್ಲಿ ಚಿಕ್ಕಮಗಳೂರು ಕ್ಷೇತ್ರದಿಂದಲೇ ಒಟ್ಟು ನಾಲ್ಕು ಬಾರಿ ವಿಜಯಶಾಲಿಗಳಾಗಿ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ.
4) ರಾಜಕೀಯಕ್ಕೆ ಬರುವ ಮುನ್ನ ಸಿ.ಟಿ.ರವಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಸದಸ್ಯರಾಗಿದ್ದರು ಮತ್ತು ನಂತರ ರಾಜಕೀಯ ಪ್ರವೇಶಿಸಿ ಬಿಜೆಪಿ ಪಕ್ಷವನ್ನು ಸೇರಿಕೊಂಡರು.
5) ಸಿ.ಟಿ. ರವಿ ಬಿಜೆಪಿ ಕರ್ನಾಟಕ ಯುವ ಮೋರ್ಚಾ (ಪಕ್ಷದ ಯುವ ಘಟಕ) ಅಧ್ಯಕ್ಷರಾಗಿದ್ದರು. ಶಾಸಕರಾಗಿದ್ದ ಇವರು 2020ರಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡರು. ಸಿ.ಟಿ.ರವಿ ಸಚಿವರಾಗಿ ಉನ್ನತ ಶಿಕ್ಷಣ, ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಇಲಾಖೆಗಳನ್ನು ನಿಭಾಯಿಸಿದ್ದಾರೆ.
ಸದ್ಯ ಕರ್ನಾಟಕದಲ್ಲಿನ ನಡೆಯಲಿರುವ ಚುನಾವಣೆಯಲ್ಲಿ ಸಿ.ಟಿ. ರವಿ ಅವರು ಸಹ ಸ್ಪರ್ಧಿಸಬಹುದೆಂಬ ಜೋರಾದ ಚರ್ಚೆಗಳು ನಡೆಯುತ್ತಿದ್ದು, ಇನ್ನು ಸ್ವಲ್ಪ ಸಮಯದಲ್ಲೇ ಈ ಬಗ್ಗೆ ಹೆಚ್ಚಿನ ಸ್ಪಷ್ಟನೆ ದೊರೆಯಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ