ಚಿಕ್ಕಮಗಳೂರು(ಫೆ.13): ಹೊಟ್ಟೆಬಟ್ಟೆ ಕಟ್ಟಿ, ಕಷ್ಟಪಟ್ಟು ಒಂದೂವರೆ ಎಕರೆ ಜಮೀನಿನಲ್ಲಿ ಅಡಿಕೆ ತೋಟ ಬೆಳೆದಿದ್ದ ಕುಟುಂಬ ಅದು. ಫಸಲು ಕೊಡುವ ಮಟ್ಟಕ್ಕೆ ಬೆಳೆದು ನಿಂತಿದ್ದವು ಅಡಿಕೆ ಮರಗಳು. ಆದ್ರೆ, ಅದ್ಯಾರ ಕಣ್ಣು ಬಿತ್ತೋ ಗೊತ್ತಿಲ್ಲ. ಇದ್ದಕ್ಕಿದ್ದಂತೆ 45 ಅಡಿಕೆ ಮರಗಳು ಧರಾಶಾಹಿಯಾಗಿವೆ. ಮಕ್ಕಳಂತೆ ಸಾಕಿ ಬೆಳೆಸಿದ್ದ ಅಡಿಕೆ ಮರಗಳು ಕಣ್ಣೆದುರೇ ಧ್ವಂಸವಾಗುತ್ತಿರೋದನ್ನ ಕಂಡ ಆ ಬಡ ಕುಟುಂಬ ಅಕ್ಷರಶಃ ಕಂಗಾಲಾಗಾಗಿ, ಕಣ್ಣೀರಿಟ್ಟಿತ್ತು. ಹಣವಂತರ ತಾಳಕ್ಕೆ ಕುಣಿಯುವ ಅಧಿಕಾರಿಗಳು ಅಡಿಕೆ ಮರಗಳನ್ನ ನಾಶಮಾಡಿದ್ದಾರೆಂದು ನೊಂದ ಕುಟುಂಬ ಆರೋಪಿಸಿದೆ.
ಕಾಲುದಾರಿ ನೆಪದಲ್ಲಿ ಮಕ್ಕಳಂತೆ ಸಾಕಿ ಬೆಳೆಸಿದ ಅಡಿಕೆ ಮರಗಳು ಕಣ್ಣೆದುರೇ ಧ್ವಂಸಗೊಳಿಸಿದ್ದಾರೆಂದು ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಬಳ್ಳಾವರ ಗ್ರಾಮದ ಶಿವಣ್ಣ ಆರೋಪಿಸಿದ್ದಾರೆ. ಸರ್ವೇ ನಂಬರ್ 37/4, 37/1 ರಲ್ಲಿ ಶಿವಣ್ಣ ಎಂಬುವವರು ತನ್ನ ಜಮೀನಿನಲ್ಲಿ 13 ವರ್ಷದಿಂದ ಅಡಿಕೆ ಬೆಳೆದಿದ್ದಾರೆ. ಆದರೆ ಕಾಲುದಾರಿ ನೆಪದಲ್ಲಿ ತೋಟದ ಮಧ್ಯೆ ಅಡಿಕೆ ಮರಗಳನ್ನ ಕಡಿದಿದ್ದಾರೆಂದು ಶಿವಣ್ಣ ಆರೋಪಿಸಿದ್ದಾರೆ. ನಕ್ಷೆ ಪ್ರಕಾರ ನನ್ನ ತೋಟದ ತುದಿಯಲ್ಲಿ ದಾರಿ ಇದೆ. ಆದ್ರೆ, ನನ್ನ ತೋಟದ ಮಧ್ಯೆಯೇ ಕಾಲುದಾರಿ ಅಂತ ಅಡಿಕೆ ಮರಗಳನ್ನ ಕಡಿಯಲಾಗಿದೆ. ನನ್ನ ಬಳಿ ಈ ಜಮೀನಿಗೆ ಸಂಬಂಧಪಟ್ಟ ಎಲ್ಲಾ ದಾಖಲೆಗಳಿದ್ರು ಏಕಾಏಕಿ ಕಷ್ಟಪಟ್ಟು ಬೆಳೆದಿದ್ದ ಅಡಿಕೆ ಮರಗಳನ್ನ ಕಡಿಯಲಾಗಿದೆ. ಜಿಲ್ಲಾಧಿಕಾರಿಗಳು ಕೂಡ ಪರಿಶೀಲನೆ ನಡೆಸುವಂತೆ ತಾಲೂಕು ಆಡಳಿತಕ್ಕೆ ಸೂಚಿಸಿದ್ದಾರೆ. ಆದ್ರೆ, ಡಿಸಿ ಆದೇಶಕ್ಕೂ ಬೆಲೆ ಕೊಡದೆ ದೌರ್ಜನ್ಯವೆಸಗಿದ್ದಾರೆ ಅಂತ ನೊಂದ ಶಿವಣ್ಣ ಆರೋಪಿಸಿದ್ದಾರೆ. ಮರಗಳನ್ನ ಕಡಿದು ಅಕ್ರಮವೆಸಗಿದ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಕೃಷಿಕ ಶಿವಣ್ಣ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಕೊರೋನಾ ಮಧ್ಯೆಯೂ ದಾಖಲೆಯ ರಸಗೊಬ್ಬರ ಪೂರೈಕೆ ಬಗ್ಗೆ ಸದಾನಂದಗೌಡರಿಗೆ ಉಪರಾಷ್ಟ್ರಪತಿ ಮೆಚ್ಚುಗೆ
ಹೊಟ್ಟೆಬಟ್ಟೆ ಕಟ್ಟಿ ಕಷ್ಟಪಟ್ಟು ಬೆಳೆದ ಅಡಿಕೆ ಮರಗಳನ್ನ ಪೋಷಿಸಿ ಬೆಳೆಸಿದ್ದೆವು. ಆದ್ರೆ, ಏಕಾಏಕಿ ಈ ರೀತಿ ಅಡಿಕೆ ಮರಗಳು ನೆಲಕ್ಕುರುಳಿಸಿರುವುದನ್ನು ಕಂಡು ನಾವು ಬದುಕುವುದು ಹೇಗೆಂದು ಸಂತ್ರಸ್ಥ ಕುಟುಂಬದ ಅಳಲು. ತಮ್ಮ ಜಮೀನಿನ ಪಕ್ಕದ ಜಾಗವನ್ನ ವ್ಯಕ್ತಿಯೊಬ್ಬರು ನಿವೇಶನ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ. ಇದಕ್ಕೆ ನಮ್ಮ ಜಮೀನನ್ನೂ ನೀಡುವಂತೆ ಕೇಳಿಕೊಂಡಿದ್ದರು. ನಾನು ಕೊಡಲು ನಿರಾಕರಿಸಿದ್ದಕ್ಕೆ ಹೀಗೆ ಮಾಡಿದ್ದಾರೆ ಅನ್ನೋದು ಕೃಷಿಕ ಶಿವಣ್ಣ ಆರೋಪ. ಆದ್ರೆ, ಅಡಿಕೆ ಮರಗಳನ್ನ ಕಾಲುದಾರಿ ಇರೋದ್ರಿಂದ ಕಾನೂನು ಪ್ರಕಾರವೇ ಅಧಿಕಾರಿಗಳೇ ನಿಂತು ಕಡಿಸಿದ್ದಾರೆ. ಇದಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ ಅಂತಾರೆ ಪಕ್ಕದ ತೋಟದ ಮಾಲೀಕ ಮಹೇಂದ್ರ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ