ಬೆಂಗಳೂರು: ನಿರ್ಮಾಣ ಹಂತದಲ್ಲಿರುವ ಮೆಟ್ರೋ ಪಿಲ್ಲರ್ (Namma Metro Pillar) ಉರುಳಿ ಬಿದ್ದಿದ್ದು ಬಿಜೆಪಿ ಸರ್ಕಾರದ (BJP Government) 40% ಕಮಿಷನ್ ಭ್ರಷ್ಟಾಚಾರ ಸಾರ್ವವ್ಯಾಪಿಯಾಗಿರುವುದಕ್ಕೆ ನಿದರ್ಶನ ಎಂದು ಕಾಂಗ್ರೆಸ್ (Congress) ಆರೋಪಿಸಿದೆ. ಸಾಲು ಸಾಲು ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್ ಘಟಕ, ಇದು ಸರ್ಕಾರಿ ಕೊಲೆ ಎಂದ ಗಂಭೀರ ಆರೋಪವನ್ನು ಮಾಡಿದೆ. ಬಿಜೆಪಿಯ ಭ್ರಷ್ಟಾಚಾರಕ್ಕೆ (Corruption) ಮತ್ತೆರಡು ಜೀವಗಳು ಬಲಿಯಾಗಿವೆ. ಬಸವರಾಜ್ ಬೊಮ್ಮಾಯಿ (CM Basavaraj Bommai) ಅವರೇ, ಮೆಟ್ರೋ ಪಿಲ್ಲರ್ಗಳು ನಿರ್ಮಾಣದಲ್ಲೇ ಕುಸಿಯುತ್ತವೆ ಎಂದಾದರೆ ಮುಂದೆ ಜನತೆ ಧೈರ್ಯವಾಗಿ ಓಡಾಡಬಹುದೇ? ಬಿಜೆಪಿಯ ಕಮಿಷನ್ ಲೂಟಿಯ ಕಾರಣದಿಂದ ಉಂಟಾದ ಮೆಟ್ರೋ ಪಿಲ್ಲರ್ ಕುಸಿತದ ಘಟನೆಯಿಂದ ಬೆಂಗಳೂರಿನ ಗೌರವ ಮಣ್ಣುಪಾಲಾಗಿದೆ ಎಂದು ಕಾಂಗ್ರೆಸ್ ಆಕ್ರೋಶ ಹೊರಹಾಕಿದೆ.
ಬೆಂಗಳೂರಿನ ಘನತೆಯ ಕಿರಿಟಕ್ಕೆ ಗರಿಯಾಗಿದ್ದ ಮೆಟ್ರೋಗೆ ಬಿಜೆಪಿಯ ಭ್ರಷ್ಟಾಚಾರ ಮಸಿ ಬಳಿದಿದೆ. ಕಮಿಷನ್ ಲೂಟಿಗೆ ಇದು ಸಾಕ್ಷಿಯಲ್ಲವೇ ಬಸವರಾಜ್ ಬೊಮ್ಮಾಯಿ ಅವರೇ, ತಾಯಿ, ಮಗುವಿನ ಸಾವು ಸರ್ಕಾರ ನಡೆಸಿದ ಕೊಲೆಯಲ್ಲವೇ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
50 ಲಕ್ಷ ಪರಿಹಾರಕ್ಕೆ ಆಗ್ರಹ
ಮೆಟ್ರೋ ಪಿಲ್ಲರ್ ಕುಸಿತಕ್ಕೆ, ಬಿಜೆಪಿಯ ಭ್ರಷ್ಟಾಚಾರಕ್ಕೆ ಬಲಿಯಾದ ತಾಯಿ, ಮಗುವಿನ ಸಾವು ಆಕಸ್ಮಿಕವಲ್ಲ, ಅದು 'ಸರ್ಕಾರಿ ಕೊಲೆ' ಮೃತರ ಕುಟುಂಬಕ್ಕೆ ಸರ್ಕಾರ 50 ಲಕ್ಷ ಪರಿಹಾರ ನೀಡಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.
ವೈಯುಕ್ತಿಕ ವೈಷಮ್ಯಕ್ಕೆ ಕೊಲೆಯಾದವರ ಮನೆಗೆ ಹೋಗಿ ಪರಿಹಾರ ನೀಡುವ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಈ ವಿಚಾರದಲ್ಲಿ ಕುರುಡಾಗಿರುವುದೇಕೆ ಎಂದು ಕಾಂಗ್ರೆಸ್ ಕೇಳಿದೆ.
ಹೆಚ್ ಡಿ ಕುಮಾರಸ್ವಾಮಿ ಟ್ವೀಟ್
ಬೆಂಗಳೂರಿನ ಹೆಚ್ಬಿಆರ್ ಲೇಔಟ್ ಬಳಿ ಮೆಟ್ರೋ ಪಿಲ್ಲರಿನ ಕಬ್ಬಿಣದ ರಾಡುಗಳು ಕಳಚಿಬಿದ್ದು ತಾಯಿ ಮಗು ಸಾವನ್ನಪ್ಪಿರುವ ಘಟನೆ ನನಗೆ ಅತೀವ ನೋವುಂಟು ಮಾಡಿದೆ. ನಿರ್ಲಕ್ಷ್ಯ ಹಾಗೂ ಸುರಕ್ಷತಾ ಕ್ರಮಗಳನ್ನು ಸಮರ್ಪಕವಾಗಿ ಕೈಗೊಳ್ಳದ ಕಾರಣಕ್ಕೆ ಈ ದುರಂತ ಘಟಿಸಿದೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಕಾಮಗಾರಿ ನಡೆಯುತ್ತಿದ್ದರೆ ಕೆಳಗಿನ ರಸ್ತೆಯಲ್ಲಿ ದೊಡ್ಡ ಪ್ರಮಾಣದಲ್ಲಿ ವಾಹನ ಸಂಚಾರ ಇರುತ್ತದೆ. ಆದರೆ, ಮೆಟ್ರೋ ಅಧಿಕಾರಿಗಳು ಮುನ್ನೆಚ್ಚರಿಕೆ ವಹಿಸದಿರುವುದು ಇಬ್ಬರ ಜೀವಕ್ಕೆ ಕುತ್ತು ತಂದಿದೆ. ಮುಂದೆ ಹೀಗೆ ಅಗದಂತೆ ಅಧಿಕಾರಿಗಳು ಹಾಗೂ ರಾಜ್ಯ ಸರಕಾರ ಎಚ್ಚರಿಕೆ ವಹಿಸಬೇಕು ಎಂದು ಮಾಜಿ ಸಿಎಂ ಆಗ್ರಹಿಸಿದ್ದಾರೆ.
ಮೆಟ್ರೋ ಕಾಮಗಾರಿಗಳು ವ್ಯವಸ್ಥಿತವಾಗಿ ನಡೆಯದೆ, ಹೇಗೆಂದರೆ ಹಾಗೆ ನಡೆಯುತ್ತಿರುವ ಬಗ್ಗೆ ದೂರುಗಳು ಬರುತ್ತಲೇ ಇವೆ. ಇಂಥದನ್ನು ತಡೆಯುವುದರ ಜತೆಗೆ, ಕುಟುಂಬಕ್ಕೆ ಸೂಕ್ತ ಪರಿಹಾರವನ್ನು ಸರಕಾರ ನೀಡಬೇಕು. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ, ಗಾಯಗೊಂದಿರುವ ಇನ್ನೊಂದು ಮಗು ಶೀಘ್ರ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ ಅಂತ ಹೇಳಿದ್ದಾರೆ.
ಮೆಟ್ರೋ ಸಿಬ್ಬಂದಿ ವಿಚಾರಣೆ
ನಿರ್ಮಾಣ ಹಂತದ ಕಬ್ಬಿಣದ ರಾಡ್ ಪಿಲ್ಲರ್ ಕುಸಿತ ಪ್ರಕರಣ ಸಂಬಂಧ ಅಧಿಕಾರಿ ಮತ್ತು ಸಿಬ್ಬಂದಿ ವಿಚಾರಣೆ ನಡೆಸಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಅವಘಡ ಕುರಿತು ಸೈಟ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಅಧಿಕಾರಿ ಮತ್ತು ಸಿಬ್ಬಂದಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಲಿದ್ದು, ಕೆಲ ಪ್ರಮುಖ ಅಧಿಕಾರಿಗಳನ್ನು ಬಂಧಿಸುವ ಸಾಧ್ಯತೆಗಳಿವೆ.
ಇದನ್ನೂ ಓದಿ: Namma Metro Tragedy: ಇಂದು ತಾಯಿ-ಮಗನ ಅಂತ್ಯಕ್ರಿಯೆ; BMRCL ಇಂಜಿನಿಯರ್ ಅಮಾನತು
ಐವರ ವಿರುದ್ಧ ಎಫ್ಐಆರ್ ದಾಖಲು
ದುರಂತದಲ್ಲಿ ಪತ್ನಿ ಹಾಗೂ ಮಗುವನ್ನು ಕಳೆದುಕೊಂಡಿರು ಲೋಹಿತ್ ಕುಮಾರ್ ನೀಡಿದ ದೂರಿನಡಿಯಲ್ಲಿ ಐವರ ವಿರುದ್ಧ ಗೋವಿಂದಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಎ1 ಸೈಟ್ ಇಂಜಿನಿಯರ್, ಎ2 ಮೆಟ್ರೋ ಗುತ್ತಿಗೆದಾರರು, ಎ3 ಸೈಟ್ ಇನ್ಚಾರ್ಜ್ ಅಧಿಕಾರಿಗಳು, ಎ4 ಬಿಎಂಆರ್ ಸಿಎಲ್ ಅಧಿಕಾರಿಗಳು, ಎ5 ಇತರರ ಮೇಲೆ ಐಪಿಸಿ ಸೆಕ್ಷನ್ 336, 337, 304ಎ, 427, ಹಾಗೂ ಸೆಕ್ಷನ್ 34 ಅಡಿಯಲ್ಲಿ ಎಫ್ಐಆರ್ ದಾಖಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ