ಪ್ರಾಕೃತಿಕ ವಿಕೋಪಕ್ಕೆ ನಲುಗಿದ ಕೊಡಗು ಪ್ರವಾಸೋದ್ಯಮ ಅಭಿವೃದ್ಧಿಗೆ 40 ಕೋಟಿ ನೀಡಿದ ಸರ್ಕಾರ

 ಪ್ರವಾಸೋದ್ಯಮವನ್ನೇ ನಂಬಿ ಜೀವನ ನಡೆಸುತ್ತಿದ್ದ ಸಾವಿರಾರು ಕುಟುಂಬಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದವು. ಪ್ರವಾಸೋದ್ಯಮಕ್ಕೆ ಪೂರಕವಾಗಿ ಸಾವಿರಾರು ಹೋಂಸ್ಟೇ, ರೆಸಾರ್ಟ್‍ಗಳು ಕೂಡ ನಡೆಯುತ್ತಿದ್ದವು. ಅವೆಲ್ಲವೂ ಸಂಪೂರ್ಣ ಸ್ಥಬ್ಧವಾಗಿದ್ದು, ಪ್ರವಾಸೋದ್ಯಮದ ಪುನಶ್ಚೇತನಕ್ಕೆ ಸರ್ಕಾರ ಸಾಕಷ್ಟು ಅನುದಾನ ನೀಡುತ್ತಿರುವುದು ಸ್ವಾಗತಾರ್ಹ.

news18-kannada
Updated:September 16, 2020, 6:58 PM IST
ಪ್ರಾಕೃತಿಕ ವಿಕೋಪಕ್ಕೆ ನಲುಗಿದ ಕೊಡಗು ಪ್ರವಾಸೋದ್ಯಮ ಅಭಿವೃದ್ಧಿಗೆ 40 ಕೋಟಿ ನೀಡಿದ ಸರ್ಕಾರ
ಸಾಂದರ್ಭಿಕ ಚಿತ್ರ
  • Share this:
ಮಡಿಕೇರಿ (ಸೆ.16): ಕೊಡಗು ಜಿಲ್ಲೆ ಮೂರು ವರ್ಷಗಳಿಂದಲೂ ನಿರಂತರವಾಗಿ ಪ್ರಾಕೃತಿಕ ವಿಕೋಪಕ್ಕೆ ತತ್ತರಿಸಿದೆ. ಈ ಬಾರಿ ಮಳೆಯ ಜೊತೆ ಕೊರೋನಾ ಮಹಾಮಾರಿ ಕೂಡ ಪ್ರವಾಸೋದ್ಯಮಕ್ಕೆ ದೊಡ್ಡ ಪೆಟ್ಟು ನೀಡಿದೆ. ಪ್ರವಾಸೋದ್ಯಮವನ್ನೇ ನಂಬಿಕೊಂಡಿದ್ದ ಸಾವಿರಾರು ಕುಟುಂಬಗಳು ಇದರಿಂದ ಸಂಕಷ್ಟಕ್ಕೆ ಸಿಲುಕಿವೆ. ಹೀಗಾಗಿ ಪ್ರವಾಸೋದ್ಯಮವನ್ನು ಅಭಿವೃದ್ಧಿಗೊಳಿಸಲು ಸರ್ಕಾರ ಕೊಡಗಿಗೆ 40 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ. ಭಾರತದ ಸ್ಕಾಟ್‍ಲೆಂಡ್, ದಕ್ಷಿಣದ ಭಾರತದ ಕಾಶ್ಮೀರ ಎಂದೆಲ್ಲಾ ಕರೆಸಿಕೊಳ್ಳುವ ಕೊಡಗು ಜಿಲ್ಲೆ ತನ್ನ ಪ್ರಾಕೃತಿಕ ಸೌಂದರ್ಯದಿಂದಲೇ ದೇಶ, ವಿದೇಶಗಳ ಪ್ರವಾಸಿಗರನ್ನು ತನ್ನತ್ತ ಸೂಜಿಗಲ್ಲಿನಂತೆ ಸೆಳೆಯುತ್ತದೆ.

ಕಾಡಿನೊಳಗೆ ನಡೆದ ಅನುಭವ ನೀಡುವ ಕಾವೇರಿ ನಿಸರ್ಗಧಾಮ, ಮಂಜುಮುಸುಕಿದ ವ್ಹೀವ್ ಪಾಯಿಂಟ್ ಇರುವ ರಾಜಾಸೀಟ್, ಮುಗಿಲೆತ್ತರದ ಬೆಡ್ಡಗಳಿಗೆ ಚುಂಬಿಸಿ ಹೊಂದಾಗುವ ಮಂಜಿನ ಊರು ಮಾಂದಲ್‍ಪಟ್ಟಿ, ಭೋರ್ಗರೆದು ಧುಮ್ಮಿಕ್ಕಿ ಬೆಳ್ನೊರೆಯ ಹಾಲಿನಂತೆ ಕಂಗೊಳಿಸುವ ಅಬ್ಬಿ, ಮಲ್ಲಳ್ಳಿ ಜಲಪಾತಗಳು...ಹೀಗೆ ಸಾಲು ಸಾಲು ಪ್ರವಾಸಿತಾಣಗಳು ಪ್ರವಾಸಿಗರ ಕಣ್ಮನ ಕೋರೈಸುತ್ತವೆ. ಆದರೆ ಮೂರು ವರ್ಷಗಳಿಂದ ಎದುರಾದ ಪ್ರಾಕೃತಿಕ ವಿಕೋಪದ ಜೊತೆಗೆ ಕೋವಿಡ್ ನಿಂದಾಗಿ ಕೊಡಗಿನ ಪ್ರವಾಸೋದ್ಯಮ ಸಂಪೂರ್ಣ ಸ್ತಬ್ಧವಾಗಿತ್ತು.

ವಾರದ ಹಿಂದೆಯಷ್ಟೇ ಮತ್ತೆ ಪ್ರವಾಸಿಗರಿಗೆ ವೀಕ್ಷಣೆಗೆ ಮುಕ್ತವಾಗಿರುವ ಪ್ರವಾಸಿ ತಾಣಗಳನ್ನು ಮತ್ತಷ್ಟು ಅಭಿವೃದ್ಧಿಗೊಳಿಸಿ ಪ್ರವಾಸಿಗರನ್ನು ಸೆಳೆಯಲು ಸರ್ಕಾರ ಕೊಡಗಿನ ಪ್ರವಾಸೋದ್ಯಮ ಅಭಿವೃದ್ಧಿಗೆ 40 ಕೋಟಿ ರೂಪಾಯಿಯ ಅನುದಾನ ನೀಡಿದೆ ಎಂದು ಕೊಡಗು ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ರಾಘವೇಂದ್ರ ಹೇಳಿದ್ದಾರೆ.

ಪ್ರವಾಸೋದ್ಯಮವನ್ನೇ ನಂಬಿ ಜೀವನ ನಡೆಸುತ್ತಿದ್ದ ಸಾವಿರಾರು ಕುಟುಂಬಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದವು. ಪ್ರವಾಸೋದ್ಯಮಕ್ಕೆ ಪೂರಕವಾಗಿ ಸಾವಿರಾರು ಹೋಂಸ್ಟೇ, ರೆಸಾರ್ಟ್‍ಗಳು ಕೂಡ ನಡೆಯುತ್ತಿದ್ದವು. ಅವೆಲ್ಲವೂ ಸಂಪೂರ್ಣ ಸ್ಥಬ್ಧವಾಗಿದ್ದು, ಪ್ರವಾಸೋದ್ಯಮದ ಪುನಶ್ಚೇತನಕ್ಕೆ ಸರ್ಕಾರ ಸಾಕಷ್ಟು ಅನುದಾನ ನೀಡುತ್ತಿರುವುದು ಸ್ವಾಗತಾರ್ಹ. ಆದರೆ ಕೊರೋನಾ ಇನ್ನೂ ಹರಡುತ್ತಲೇ ಇರುವುದರಿಂದ ನಾವು ಎಲ್ಲಿಯೂ ಎಚ್ಚರ ತಪ್ಪದೇ ಸಾಕಷ್ಟು ಮುಂಜಾಗ್ರತೆ ವಹಿಸಬೇಕಾಗಿದೆ. ಬರುವ ಪ್ರವಾಸಿಗರಿಂದ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಕೊಡಗಿನ ಪ್ರಾಕೃತಿಕ ಸೌಂದರ್ಯವನ್ನು ತೋರಿಸಲು ಮತ್ತು ಪ್ರವಾಸಿಗರನ್ನು ಸೆಳೆಯಲು ಯೋಜನೆ ರೂಪಿಸಿಕೊಳ್ಳಲಾಗುತ್ತಿದೆ ಎನ್ನುತ್ತಾರೆ ಹೋಂಸ್ಟೇ ಮತ್ತು ರೆಸಾರ್ಟ್ ಮಾಲಿಕ ಸತ್ಯ.

ಒಟ್ಟಿನಲ್ಲಿ ಮೂರು ವರ್ಷಗಳಿಂದ ತತ್ತರಿಸಿ ಹೋಗಿರುವ ಪ್ರವಾಸೋದ್ಯಮಕ್ಕೆ ಪುನಃಶ್ಚೇತನ ನೀಡಲು ಸರ್ಕಾರ 40 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ. ಆ ಅನುದಾನ ಸರಿಯಾಗಿ ಬಳಕೆಯಾಗಿ ಪ್ರವಾಸಿತಾಣಗಳ ಸಹಜ ಸೌಂದರ್ಯ ಮತ್ತಷ್ಟು ಇಮ್ಮಡಿಗೊಳ್ಳಲಿ ಎನ್ನೋದು ನಮ್ಮ ಆಶಯ.
Published by: zahir
First published: September 16, 2020, 6:58 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading