ಹಾಸನದಲ್ಲಿ ಇನ್ಮುಂದೆ ವಾರದ ನಾಲ್ಕು ದಿನ ಕಟ್ಟು ನಿಟ್ಟಿನ ಲಾಕ್​ಡೌನ್; ಮದ್ಯ ಮಾರಾಟಕ್ಕೂ ಬ್ರೇಕ್​

ಮಂಗಳವಾರ, ಗುರುವಾರ, ಶನಿವಾರ ಮತ್ತು ಭಾನುವಾರ ಜಿಲ್ಲೆಯಲ್ಲಿ ಸಂಪೂರ್ಣ ಲಾಕ್​ಡೌನ್​ ಇರಲಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • News18
 • Last Updated :
 • Share this:
  ಹಾಸನ (ಮೇ. 5): ಜಿಲ್ಲೆಯಲ್ಲಿ ಸೋಂಕಿನ ಪ್ರಮಾಣ ಹೆಚ್ಚುತ್ತಿರುವ ಹಿನ್ನಲೆ ಕಟ್ಟು ನಿಟ್ಟಿನ ಲಾಕ್​ಡೌನ್​ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ. ಸೋಂಕು ಹೆಚ್ಚುತ್ತಿರುವ ಹಿನ್ನಲೆ ಈ ಕುರಿತು ಸಭೆ ನಡೆಸಿದ ಜಿಲ್ಲಾ ಉಸ್ತುವಾರಿ ಹಾಗೂ ಅಬಕಾರಿ ಸಚಿವರಾಗಿರುವ ಕೆ ಗೋಪಾಲಯ್ಯ ಈ ನಿರ್ಧಾರ ಪ್ರಕಟಿಸಿದ್ದಾರೆ. ಜಿಲ್ಲೆಯ ಸ್ಥಳೀಯ ಶಾಸಕರು ಮತ್ತು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅವರು ಈ ನಿರ್ಧಾರ ಕೈ ಗೊಂಡಿದ್ದಾರೆ. ಈ ಕುರಿತು ಮಾತನಾಡಿರುವ ಅವರು ಸೋಂಕು ಹರಡುವಿಕೆಯಲ್ಲಿ ಹಾಸನ ಜಿಲ್ಲೆಯ ಎರಡನೇ ಸ್ಥಾನದಲ್ಲಿದೆ. ಈ ಹಿನ್ನಲೆ ಈ ಕ್ರಮ ಅನಿವಾರ್ಯವಾಗಿದೆ ಎಂದು ಅವರು ತಿಳಿಸಿದ್ದಾರೆ. ದಿನಬಿಟ್ಟು ದಿನದಂತೆ ಲಾಕ್​ಡೌನ್​ ಘೋಷಣೆ ಮಾಡಲಾಗಿದೆ. ಮಂಗಳವಾರ, ಗುರುವಾರ, ಶನಿವಾರ ಮತ್ತು ಭಾನುವಾರ ಜಿಲ್ಲೆಯಲ್ಲಿ ಸಂಪೂರ್ಣ ಲಾಕ್​ಡೌನ್​ ಇರಲಿದೆ ಎಂದರು

  ಕೊರೋನ ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ಈ ಕ್ರಮ ನಡೆಸಲಾಗಿದೆ. ಇನ್ನು ಉಳಿದ ದಿನಗಳಾದ ಸೋಮವಾರ, ಬುಧವಾರ ಮತ್ತು ಶುಕ್ರವಾರ ಬೆಳಗ್ಗೆ 6 ರಿಂದ 10 ಗಂಟೆವರೆಗೆ ಎಲ್ಲಾ ರೀತಿಯ ವ್ಯಾಪಾರ ವಹಿವಾಟಿಗೆ ಅವಕಾಶ ಇರಲಿದೆ. ವೈದ್ಯಕೀಯ ವ್ಯವಸ್ಥೆ, ಮೆಡಿಕಲ್​ ಶಾಪ್​, ಹಾಲು ದಿನನಿತ್ಯ ಸೇವೆ ಒದಗಿಸಲಿದೆ ಎಂದರು.

  ಕೋವಿಡ್ ಸೋಂಕಿತ ವ್ಯಕ್ತಿಗಳನ್ನು ದಾಖಲಿಸಿ ಚಿಕಿತ್ಸೆ ನೀಡಲು ಸೂಚನೆ ನೀಡಲಾಗಿದೆ. ಅಲ್ಲದೆ ಕೋವಿಡ್ ಸೋಂಕಿತ ವೃದ್ಧರಿಗೆ ಮನೆಯಲ್ಲಿ ಐಸೋಲೇಶನ್ ಮಾಡುವ ಮೂಲಕ ಸೂಕ್ತ ಚಿಕಿತ್ಸೆ ಹಾಗೂ ಔಷಧ ಸೌಲಭ್ಯ ಒದಗಿಸುವಂತೆ ತಿಳಿಸಲಾಗಿದೆ.
  ಇನ್ನು ಈ ನಿರ್ಧಾರಕ್ಕೆ ರೇವಣ್ಣ ಸೇರಿದಂತೆ ಸ್ಥಳೀಯ ಶಾಸಕರು ಕೂಡ ಬೆಂಬಲ ವ್ಯಕ್ತಪಡಿಸಿದ್ದಾರೆ. ಲಾಕ್​ಡೌನ್​ಗೆ ಜನರು ಸಹಕರಿಸಬೇಕು. ಯಾವುದೇ ಅಂಗಡಿ ಮುಂಗಟ್ಟುಗಳನ್ನು ತೆರೆಯದಂತೆ ಸೂಚನೆ ನೀಡಲಾಗಿದ್ದು, ಜನರು ಅನಗತ್ಯ ಸಂಚಾರ ನಡೆಸಬಾರದು ಎಂದರು. ಇನ್ನು ಲಾಕ್ಡೌನ್​ ಇರುವ ದಿನದಂದು ಮದ್ಯ ಮಾರಾಟಕ್ಕೂ ಕೂಡ ಅವಕಾಶ ನೀಡಲಾಗಿಲ್ಲ.

  ಇದನ್ನು ಓದಿ: ಚಾಮರಾಜನಗರ ದುರಂತ ಮರುಕಳಿಸದಂತೆ ಎಚ್ಚರವಹಿಸಿ; ಸಿಎಂ ಬಿಎಸ್​ವೈಗೆ ದೇವೇಗೌಡರಿಂದ ಸಲಹೆ

  ಹಾಸನ ಜಿಲ್ಲೆಯಲ್ಲಿ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನಲೆ ಇಂದು ಜಿಲ್ಲೆಯ ಕೋವಿಡ್​ ಪರಿಸ್ಥಿತಿ ಕುರಿತು ಮಾಜಿ ಪ್ರಧಾನಿ ದೇವೇಗೌಡ ಅವರು ದೂರವಾಣಿ ಕರೆ ಮೂಲಕ ಸಿಎಂ ಬಿಎಸ್​ ಯಡಿಯೂರಪ್ಪ ಅವರೊಂದಿಗೆ ಸಂಭಾಷಣೆ ನಡೆಸಿದರು. ಈ ವೇಳೆ ಜಿಲ್ಲೆಯಲ್ಲಿನ ಸಮಸ್ಯೆಗಳ ಕುರಿತು ಗಮನಕ್ಕೆ ತಂದರು. ಹಾಸನ ಜಿಲ್ಲೆಯಲ್ಲೂ ವೈದ್ಯಕೀಯ ಸೌಲಭ್ಯಗಳು ಸಿಗದಂತೆ ಜನರು ಪರದಾಡುತ್ತಿದ್ದಾರೆ. ಲಸಿಕೆ, ರೆಮಿಡಿಸಿವಿರ್ ಇಂಜೆಕ್ಷನ್ ಕೊರತೆ ಇದೆ ಈ ಬಗ್ಗೆ ಗಮನ ಹರಿಸುವಂತೆ ತಿಳಿಸಿದರು. ಇದಕ್ಕೆ ಸಿಎಂ ಕೂಡ ಸಕಾರತ್ಮಕವಾಗಿ ಸ್ಪಂದಿಸಿದ್ದಾರೆ

  ಹಾಸನದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಬೆಡ್​ ಸಮಸ್ಯೆ ಹೆಚ್ಚಾಗುತ್ತಿದೆ. ಹಿಮ್ಸ್​ ಆಸ್ಪತ್ರೆಯಲ್ಲಿ ಬೆಡ್​ ಸಮಸ್ಯೆ ಎದುರಾಗಿದೆ. 400 ಬೆಡ್​ ಗಳ ಕೋವಿಡ್​ ಘಟಕವೂ ಭರ್ತಿಯಾಗಿದೆ ಎಂಬ ಬೋರ್ಡ್​ ಹಿಮ್ಸ್​ ಹೊರಗೆ ಕಂಡು ಬಂದಿದ್ದು, ಈ ಮೂಲಕ ಬೆಡ್​ ಸಮಸ್ಯೆ ತಲೆದೂರಿದೆ.

  ಹಾಸನದಲ್ಲಿ ಇಂದು 1604 ಸೋಂಕು ಪ್ರಕರಣ ದಾಖಲಾಗಿದೆ. ಜಿಲ್ಲೆಯಲ್ಲಿ ಒಟ್ಟು ಸೋಂಕಿತರು 46429 ಇದ್ದಾರೆ. ಒಟ್ಟು ಜಿಲ್ಲೆಯಲ್ಲಿ 10733 ಸಕ್ರಿಯ ಪ್ರಕರಣಗಳಿದ್ದು, ಇಂದು ಕೋವಿಡ್​ಗೆ 11 ಮಂದಿ ಬಲಿಯಾಗಿದ್ದಾರೆ.
  Published by:Seema R
  First published: