ಬೆಂಗಳೂರು: ನಗರದ ನಾಗವಾರ-ಯಲಹಂಕ ಮಾರ್ಗದಲ್ಲಿ ಕಿಲ್ಲರ್ ಬಿಎಂಟಿಸಿ ಬಸ್ಗೆ (BMTC Bus) ಮತ್ತೊಂದು ಬಲಿ ಆಗಿದೆ. ಭಾರತೀಯ ಸಿಟಿ ಕ್ರಾಸ್ (Bhartiya City Cross) ಬಳಿ ರಾತ್ರಿ ಈ ಅಪಘಾತ ನಡೆದಿದೆ. ಸಿಗ್ನಲ್ನಲ್ಲಿ ನಿಂತಿದ್ದವರ ಮೇಲೆ ವೇಗವಾಗಿ ಬಂದೆರಗಿದ ಬಿಎಂಟಿಸಿ ಬಸ್ ಓರ್ವನ ಪ್ರಾಣ ಬಲಿ ಪಡೆದಿದ್ದು, ಮೂವರು ಗಾಯಗೊಂಡಿದ್ದಾರೆ. ಅಲ್ಲದೇ ಘಟನೆಯಲ್ಲಿ 2 ಕಾರು, 3 ದ್ವಿಚಕ್ರ ವಾಹನಗಳು ಜಖಂಗೊಂಡಿವೆ. ಬಸ್ ಬ್ರೇಕ್ ಫೇಲ್ ಆಗಿದ್ದರಿಂದ ನಿಯಂತ್ರಣ ಬಸ್ ನಿಯಂತ್ರಣ ಮಾಡಲು ಸಾಧ್ಯವಾಗಲಿಲ್ಲ. ಹೀಗಾಗಿ ಅಪಘಾತ ನಡೆಯಿತು ಎಂದು ಬಸ್ ಚಾಲಕ (Bus Driver) ಸಬೂಬು ಹೇಳಿದ್ದಾನಂತೆ. ಸದ್ಯ ಮೂವರು ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಮೃತನ ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿದೆ.
ಭಾರತೀಯ ಸಿಟಿ ಕ್ರಾಸ್ ಬಳಿ ಸರಣಿ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ ಮೃತಪಟ್ಟ ಬೈಕ್ ಸವಾರರನ್ನು 35 ವರ್ಷದ ಅಯೂಬ್ ಎಂದು ಗುರುತಿಸಲಾಗಿದೆ. ನಿನ್ನೆ ಸಂಜೆ 7.30 ರ ಸುಮಾರಿಗೆ ದುರ್ಘಟನೆ ಸಂಭವಿಸಿದ್ದು, ಭಾರತೀಯ ಸಿಟಿ ಜಂಕ್ಷನ್ ಬಳಿ ಟ್ರಾಫಿಕ್ ವಾರ್ಡನ್ ಸೂಚನೆ ಮೇರೆಗೆ ನಿಂತಿದ್ದ ಬೈಕ್, ಕಾರು ಸೇರಿದಂತೆ ಇತರೆ ವಾಹನಗಳ ಮೇಲೆ ಹರಿದಿದೆ.
ವೇಗವಾಗಿ ಬಸ್ ಬಂದ ಕಾರಣ ಜಂಕ್ಷನ್ನಲ್ಲಿ ನಿಂತಿದ್ದ ವಾಹನಗಳನ್ನು ಎದುಗಡೆ ಇರುವ ರಸ್ತೆಗೆ ತಳ್ಳಿಕೊಂಡು ಬಂದಿದೆ. ಉಳಿದಂತೆ ಗಾಯಗೊಂಡವರನ್ನು ರಫಿಯುಲ್ಲಾ ಖಾನ್, ಮುಸಾದ್ಧೀಕ್, ಮುನ್ನಾವರ್ ಎಂದು ಗುರುತಿಸಲಾಗಿದ್ದು, ಗಾಯಾಳುಗಳಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಚಿಕ್ಕಜಾಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ನಕಲಿ ಅಂಕಪಟ್ಟಿ ಜಾಲ ಬೆಳಕಿಗೆ
ರಾಜ್ಯ ರಾಜಧಾನಿ, ಸಿಲಿಕಾನ್ ಸಿಟಿಯಲ್ಲಿ ಕಾಸು ಕೊಟ್ಟರೆ ಏನ್ ಬೇಕಾದರೂ ಸಿಗುತ್ತೆ. ಅದರಲ್ಲೂ ಇತ್ತೀಚಿಗೆ ನಕಲಿ ಮಾರ್ಕ್ಸ್ ದಂಧೆ ನಗರದಲ್ಲಿ ಜೋರಾಗಿ ನಡೆಯುತ್ತಿದ್ದು, ಬಗೆದಷ್ಟು ಹೊರ ಬರುತ್ತಿದೆ. ಎರಡು ತಿಂಗಳ ಹಿಂದಷ್ಟೇ ಬೃಹತ್ ನಕಲಿ ಅಂಕಪಟ್ಟಿ ಜಾಲ ಬೆನ್ನತ್ತಿದ್ದ ಸಿಸಿಬಿ ಪೊಲೀಸರು, ಇದೀಗ ಮತ್ತೊಂದು ರಾಕೆಟ್ ಬಯಲಿಗೆ ತಂದಿದ್ದಾರೆ. ಬೇರೆ ಬೇರೆ ರಾಜ್ಯಗಳ ವಿಶ್ವವಿದ್ಯಾಲಯ ಸೇರಿದಂತೆ ಹಲವು ವಿವಿಗಳ ನಕಲಿ ಅಂಕಪಟ್ಟಿಗಳನ್ನು 20 ರಿಂದ 30 ಸಾವಿರ ರೂಪಾಯಿಗೆ ನೀಡುತ್ತಿದ್ದ ಜಾಲವನ್ನು ಸಿಸಿಬಿ ಪೊಲೀಸರು ಬೆಳಕಿಗೆ ತಂದಿದ್ದಾರೆ. ಅಲ್ಲದೇ, ಐದು ಸಂಸ್ಥೆಗಳ ಮೇಲೆ ದಾಳಿ ಮಾಡಿ ಒರ್ವನನ್ನು ಬಂಧನ ಮಾಡಿದ್ದಾರೆ.
ನಗರದ 5 ಇನ್ಸ್ಟಿಟ್ಯೂಟ್ ಮೇಲೆ CCB ಮಿಂಚಿನ ದಾಳಿ!
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇತ್ತೀಚಿಗೆ ನಕಲಿ ಮಾರ್ಕ್ಸ್ ಕಾರ್ಡ್ ಜಾಲ ಎಗ್ಗಿಲ್ಲದೆ ನಡೆಯುತ್ತಿದೆ. ಎರಡು ತಿಂಗಳ ಹಿಂದಷ್ಟೇ ಬೃಹತ್ ಜಾಲ ಭೇದಿಸಿದ್ದ ಸಿಸಿಬಿ ಪೊಲೀಸರು, ಈಗ ಮತ್ತೊಂದು ನಕಲಿ ಮಾರ್ಕ್ಸ್ ಕಾರ್ಡ್ ರಾಕೆಟ್ ಬಯಲು ಮಾಡಿದ್ದಾರೆ. ಸಿಸಿಬಿ ಪೊಲೀಸರ ದಾಳಿ ವೇಳೆ ಸಾವಿರಾರರು ನಕಲಿ ಮಾರ್ಕ್ಸ್ ಕಾರ್ಡ್ಗಳು ಪತ್ತೆಯಾಗಿದೆ. ಎಲ್ಲಾ ನಕಲಿ ಮಾರ್ಕ್ಸ್ ಕಾರ್ಡ್ ಹಾಗೂ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡು ಸಾಲು ಸಾಲಾಗಿ ಪ್ರದರ್ಶನಕ್ಕೆ ಇಟ್ಟಿದ್ದರು.
ಇನ್ನು, ನಕಲಿ ಮಾರ್ಕ್ಸ್ ಕಾರ್ಡ್ ದಂಧೆ ನಡೆಯುತ್ತಿದೆ ಎನ್ನುವ ಖಚಿತ ಮಾಹಿತಿ ಸಂಗ್ರಹಿಸಿದ್ದ ಸಿಸಿಬಿ ಪೊಲೀಸರು ಮಿಂಚಿನ ದಾಳಿ ನಡೆಸಿತ್ತು. ಕೆಲವು ಇನ್ಸ್ಟಿಟ್ಯೂಟ್ಗಳ ಮೇಲೆ ದಾಳಿ ಮಾಡಿದ್ದರು. ಸಿಸಿಬಿ ಪೊಲೀಸರ ಐದು ವಿಶೇಷ ತಂಡಗಳನ್ನು ರಚಿಸಿಕೊಂಡು ಜೆಪಿ ನಗರ, ರಾಜಾಜಿನಗರ, ಭದ್ರಪ್ಪಲೇಔಟ್, ದಾಸರಹಳ್ಳಿ ಮತ್ತು ವಿಜಯನಗರದ ಕೆಲವು ಇನ್ಸ್ಟಿಟ್ಯೂಟ್ಸ್ ಮೇಲೆ ದಾಳಿ ನಡೆಸಿದ್ದು, ಬರೋಬ್ಬರಿ 6,800 ನಕಲಿ ಮಾರ್ಕ್ಸ್ ಕಾರ್ಡ್‌ಗಳನ್ನ ವಶಕ್ಕೆ ಪಡೆಯಲಾಗಿದೆ.
ಇದನ್ನೂ ಓದಿ: Bengaluru: ಲುಡೋ ಗೇಮ್ ಆಡುವಾಗ ಲವ್; ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಪಾಕಿಸ್ತಾನದ ಯುವತಿ ಅರೆಸ್ಟ್
ಸಿಸಿಬಿ ಪೊಲೀಸರ ತನಿಖೆ ವೇಳೆ ಬೆಂಗಳೂರು, ಮಂಗಳೂರು, ಕುವೆಂಪು ಯೂನಿವರ್ಸಿಟಿ, ರಾಜಸ್ತಾನ, ಎಸ್ಎಸ್ಎಲ್ಸಿ ಬೋರ್ಡ್ ಪರೀಕ್ಷೆ, ವೆಂಕಟೇಶ್ವರ ವಿವಿ ಸೇರಿದಂತೆ ಸುಮಾರು 15 ಯೂನಿವರ್ಸಿಟಿಗಳ 6,800 ಮಾರ್ಕ್ಸ್ ಕಾರ್ಡ್ ಪತ್ತೆಯಾಗಿದೆ. ದಾಳಿ ವೇಳೆ ವಿಕಾಸ್ ಎಂಬಾತ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದು, ಸಿಸಿಬಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಸಿಸಿಬಿ ತನಿಖೆ ವೇಳೆ ಆರೋಪಿಗಳು 20 ರಿಂದ 30 ಸಾವಿರ ರೂಪಾಯಿ ಪಡೆದು ಮಾರ್ಕ್ಸ್ ಕಾರ್ಡ್ ಮಾರಾಟ ಮಾಡುತ್ತಿದ್ದರು ಅನ್ನೋದು ಗೊತ್ತಾಗಿದೆ. ಪತ್ತೆಯಾದ ಮಾರ್ಕ್ಸ್ ಕಾರ್ಡ್ ಅಸಲಿಯತ್ತು ಪತ್ತೆಗೆ ಪೊಲೀಸರು ವಿಶ್ವವಿದ್ಯಾಲಯಕ್ಕೆ ಪತ್ರ ಬರೆದಿದ್ದಾರೆ.
ಉಳಿದಂತೆ ಬಂಧಿತ ಆರೋಪಿ ವಿಕಾಸ್ ಜೊತೆ ಕೈಜೋಡಿಸಿರುವ ವ್ಯಕ್ತಿಗಳ ಪತ್ತೆಗೆ ಸಿಸಿಬಿ ಪೊಲೀಸರು ಶೋಧ ನಡೆಸಿದ್ದಾರೆ. ಇನ್ನೂ ಮಾರ್ಕ್ಸ್ ಕಾರ್ಡ್ ಪಡೆದ ಅಭ್ಯರ್ಥಿಗಳಿಗೂ ಕೂಡ ಸಂಕಷ್ಟ ಎದುರಾಗಿದೆ. ತನಿಖೆ ನಡೆಸಿ ನಕಲಿ ಅಂಕಪಟ್ಟಿ ಪಡೆದವರ ಮೇಲೂ ಕೇಸ್ ದಾಖಲಿಸಲು ಸಿದ್ಧತೆ ನಡೆದಿದೆ. ನಕಲಿ ಮಾರ್ಕ್ಸ್ ಕಾರ್ಡ್ ದಂಧೆಗೆ ಬ್ರೇಕ್ ಹಾಕದಿದ್ದರೆ ಶಿಕ್ಷಣ ತನ್ನ ಮೌಲ್ಯ ಕಳೆದುಕೊಳ್ಳಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ