ಬಸ್‌ನಲ್ಲಿ ಪ್ರಯಾಣಿಸುವ ಸಮಯದಲ್ಲಿ ಕಂಡೆಕ್ಟರ್‌ನಿಂದ (Conductor) ಚೇಂಜ್ ಪಡೆದುಕೊಳ್ಳಲು ಪ್ರಯಾಣಿಕರು ಎಷ್ಟೆಲ್ಲಾ ಹರಸಾಹಸಪಡುತ್ತಾರೆ ಎಂಬುದನ್ನು ನಾವು ನೋಡಿದ್ದೇವೆ. ಇಂತಹ ಘಟನೆಗಳು ಸ್ವಯಂ ಅನುಭವಕ್ಕೂ ಬಂದಿರುವಂತಹದ್ದೇ. ಒಮ್ಮೊಮ್ಮೆ ಚೇಂಜ್ ಕೂಡಲೇ ದೊರೆತರೆ ಇನ್ನು ಕೆಲವೊಮ್ಮೆ ಪ್ರಯಾಣಿಕರನ್ನು (Passengers) ಸಾಕಷ್ಟು ಸತಾಯಿಸುವ ನಿರ್ವಾಹಕರೂ ಇರುತ್ತಾರೆ.
ಪರಿಹಾರ ರೂಪದಲ್ಲಿ 3000:
ಇಂತಹ ನಿರ್ವಾಹಕರು ಹಾಗೂ ಬಿಎಮ್‌ಟಿಸಿಯಂತಹ ಜವಬ್ದಾರಿಯುತ ಸಂಸ್ಥೆಗೆ ತಕ್ಕ ಪಾಠ ಕಲಿಸಬೇಕೆಂದೇ ಬೇಸತ್ತ ಪ್ರಯಾಣಿಕರೊಬ್ಬರು ಗ್ರಾಹಕ ಕೋರ್ಟ್ ಮೆಟ್ಟಲೇರಿ ನ್ಯಾಯ ಪಡೆದುಕೊಂಡಿದ್ದಾರೆ. 1 ರೂ ಚೇಂಜ್‌ಗಾಗಿ ಗ್ರಾಹಕ ಕೋರ್ಟ್‌ನ ಮೊರೆ ಹೋದ ಪ್ರಯಾಣಿಕರು ತಮಗಾದ ನಷ್ಟಕ್ಕೆ ರೂ 3,000 ವನ್ನು ಪರಿಹಾರ ರೂಪದಲ್ಲಿ ಪಡೆದುಕೊಂಡಿದ್ದಾರೆ.
ಬರೋಬ್ಬರಿ ಮೂರು ವರ್ಷಗಳ ನ್ಯಾಯಾಂಗ ಕಾದಾಟದ ನಂತರ ತುಮಕೂರು ನಿವಾಸಿ ರಮೇಶ್ ನಾಯಕ್. ಎಲ್ ತಮಗೆ ನ್ಯಾಯುಯುತವಾಗಿ ಸಲ್ಲಬೇಕಾದ ರೂ .1 ಅನ್ನು ಪಡೆದುಕೊಂಡಿದ್ದು ಮಾತ್ರವಲ್ಲದೆ ನಿರ್ವಾಹಕರ ದುರ್ವರ್ತನೆ ಹಾಗೂ ಹಿರಿಯ ಅಧಿಕಾರಿಗಳ ಬೇಜಾವಾಬ್ದಾರಿತನಕ್ಕೆ ಪರಿಹಾರ ರೂಪದಲ್ಲಿ ರೂ 3000 ಅನ್ನು ರಮೇಶ್‌ಗೆ ನೀಡುವಂತೆ ಗ್ರಾಹಕ ನ್ಯಾಯಾಲಯ ಬಿಎಮ್‌ಟಿಸಿಗೆ ಆದೇಶಿಸಿದೆ.
ಇದನ್ನೂ ಓದಿ: CM Bommai: ಸಿಎಂ ಬೊಮ್ಮಾಯಿ ಸನ್ಮಾನ ತಿರಸ್ಕರಿಸಿದ ಖ್ಯಾತ ಟೆನಿಸ್ ಆಟಗಾರ
ಚೇಂಜ್ ಕೊಡದೆ ಸತಾಯಿಸಿದ ಮಹಿಳಾ ನಿರ್ವಾಹಕಿ:
ಸಪ್ಟೆಂಬರ್ 11, 2019 ರಂದು ನಾಯಕ್ ಅವರು ಮೆಜೆಸ್ಟಿಕ್ ಕಡೆಗೆ ಹೋಗುವ ಬಿಎಮ್‌ಟಿಸಿ ವೋಲ್ವೋ ಅನ್ನು ಶಾಂತಿನಗರ್ ಬಸ್ ಡಿಪೋದಿಂದ ಹತ್ತಿದ್ದರು. 37 ರ ಹರೆಯದ ರಮೇಶ್ ಅವರು ಮಹಿಳಾ ನಿರ್ವಾಹಕರಿಗೆ ಟಿಕೆಟ್ ಬೆಲೆ ರೂ 29 ಕ್ಕೆ ಪ್ರತಿಯಾಗಿ ರೂ 30 ಅನ್ನು ನೀಡಿದ್ದರು. ಆ ಸಮಯದಲ್ಲಿ ರೂ 1 ಚೇಂಜ್ ಅನ್ನು ಕೇಳಿದ್ದಕ್ಕೆ ನಿರ್ವಾಹಕಿ ಸಿಡಿಮಿಡಿಗೊಂಡಿದ್ದರು ಹಾಗೂ ಇತರ ಪ್ರಯಾಣಿಕರ ಮುಂದೆ ಅಸಮಾಧಾನದಿಂದ ಉತ್ತರಿಸಿದ್ದರು.
ಗ್ರಾಹಕ ನ್ಯಾಯಾಲಯದ ಮೊರೆಹೋದ ಪ್ರಯಾಣಿಕ:
ಇದರಿಂದ ಅವಮಾನಿತರಾದ ರಮೇಶ್ ಹೀಗೆಯೇ ಈ ಪ್ರಕರಣವನ್ನು ಬಿಡುವುದಿಲ್ಲ ಎಂದು ತೀರ್ಮಾನಿಸಿ, ಕಂಡೆಕ್ಟರ್‌ಗೆ ವಿರುದ್ಧವಾಗಿ ಬಿಎಮ್‌ಟಿಸಿಯ ಹಿರಿಯ ಅಧಿಕಾರಿಯನ್ನು ಸಂಪರ್ಕಿಸಿದರು. ಆದರೆ ಅಧಿಕಾರಿ ಕೂಡ ರಮೇಶ್ ಅವರಿಗೆ ಛೀಮಾರಿ ಹಾಕಿ ಕಳುಹಿಸಿದ್ದಾರೆ.
ಅಧಿಕಾರಿಗಳ ವರ್ತನೆಯಿಂದ ಕೋಪಗೊಂಡ ರಮೇಶ್, ಅಧಿಕಾರಿಗಳು ಹಾಗೂ ಕಂಡೆಕ್ಟರ್‌ಗೆ ಪಾಠ ಕಲಿಸಬೇಕೆಂದು ನಿಶ್ಚಯಿಸಿದರು. ಬಿಎಮ್‌ಟಿಸಿ ಹಾಗೂ ಸಂಸ್ಥೆಯ ನಿರ್ವಾಹಕ ಅಧಿಕಾರಿಗಳ ವಿರುದ್ಧ ಶಾಂತಿನಗರದಲ್ಲಿರುವ ಬೆಂಗಳೂರು IV ಹೆಚ್ಚುವರಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ಸಲ್ಲಿಸಿ ರೂ 15,000 ಪರಿಹಾರವನ್ನು ಆಗ್ರಹಿಸಿದ್ದರು. ನ್ಯಾಯಾಲದಯಲ್ಲಿ ತಮ್ಮ ಕೇಸ್ ಅನ್ನು ಸ್ವತಃ ನಾಯಕ್ ಅವರೇ ವಾದಿಸಿದ್ದು, ಬಿಎಮ್‌ಟಿಸಿ ಯ ಪರವಾಗಿ ವಾದ ಮಾಡಿದ ವಕೀಲರು ಆಪಾದನೆಯನ್ನು ನಿರಾಕರಿಸಿದರು ಹಾಗೂ ದೂರನ್ನು ಕ್ಷುಲ್ಲಕ ಎಂದು ವಾದಿಸಿದರು.
ಪ್ರಯಾಣಿಕನಿಗೆ ನಷ್ಟ ತುಂಬುವಂತೆ ಆದೇಶ:
ಜನವರಿ 31, 2023 ರ ತೀರ್ಪಿನಲ್ಲಿ ನ್ಯಾಯಾಲಯದ ನ್ಯಾಯಾಧೀಶರು ದೂರು ಕ್ಷುಲ್ಲಕವಾಗಿದ್ದರೂ, ಬಿಎಮ್‌ಟಿಸಿ ನಿರ್ವಾಹಕರ ನಿರ್ಲಕ್ಷ್ಯ ಮತ್ತು ಅಸಡ್ಡೆ ಸೇವೆ ಸ್ವೀಕಾರಾರ್ಹವಲ್ಲ ಎಂದು ತಿಳಿಸಿದ್ದಾರೆ. ತಮ್ಮ ಹಣ ಅದು 1 ರೂ ಆಗಿರಲಿ ಹೆಚ್ಚಿನ ಮೊತ್ತವೇ ಆಗಿರಲಿ ಅದನ್ನು ಪಡೆದುಕೊಳ್ಳುವುದು ಗ್ರಾಹಕರ ಹಕ್ಕಾಗಿದೆ. ಗ್ರಾಹಕ ಸಂರಕ್ಷಣಾ ಕಾಯ್ದೆಯಿಂದ ಗ್ರಾಹಕರು ಸಂರಕ್ಷಿತರಾಗಿದ್ದು, ಆತನಿಗಾದ ನಷ್ಟಕ್ಕೆ ಬಿಎಮ್‌ಟಿಸಿ ಸೂಕ್ತ ಪರಿಹಾರವನ್ನೊದಗಿಸಬೇಕು ಎಂದು ನ್ಯಾಯಾಲಯ ತೀರ್ಪಿತ್ತಿದೆ.
45 ದಿನಗಳ ಗಡುವು:
ಬಿಎಮ್‌ಟಿಸಿ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಬಸ್ ಪ್ರಯಾಣಿರಿಗೆ ರೂ 1 ಅನ್ನು ಹಿಂತಿರುಗಿಸಬೇಕು ಹಾಗೂ ಆತನಿಗಾದ ತೊಂದರೆಗೆ ರೂ 2000 ಅನ್ನು ಪರಿಹಾರವಾಗಿ ನೀಡಬೇಕು ಎಂದು ಆದೇಶಿಸಿದೆ.
ನ್ಯಾಯಾಲಯದ ಖರ್ಚುವೆಚ್ಚಗಳಿಗಾಗಿ ರಮೇಶ್ ನಾಯಕ್ ಅವರಿಗೆ ರೂ 1000 ಅನ್ನು ಹೆಚ್ಚುವರಿಯಾಗಿ ನೀಡಬೇಕು ಎಂದು ನ್ಯಾಯಾಲಯ ತಿಳಿಸಿದೆ. ಇದಿಷ್ಟೂ ಮೊತ್ತವನ್ನು ಪರಿಹಾರಾರ್ಥಿಯಾದ ರಮೇಶ್‌ಗೆ 45 ದಿನಗಳೊಳಗಾಗಿ ಸಂಸ್ಥೆ ಪಾವತಿಸಬೇಕು ಇಲ್ಲದೇ ಹೋದಲ್ಲಿ ದಂಡವಾಗಿ ಬಡ್ಡಿಯನ್ನು ವಿಧಿಸಲಾಗುತ್ತದೆ ಎಂದು ತಿಳಿಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ