ಆನೇಕಲ್(ಜ.23): ಜಲ್ಲಿಕಟ್ಟು ಸ್ಪರ್ಧೆ ಹೇಳಿ ಕೇಳಿ ಅಪಾಯಕಾರಿ ಸ್ಪರ್ಧೆ. ಅದ್ರಲ್ಲು ಸ್ವಲ್ಪ ಎಡವಟ್ಟಾದ್ರು ಜಲ್ಲಿಕಟ್ಟು ಸ್ಪರ್ಧೆಯಲ್ಲಿ ಭಾಗವಹಿಸುವ ಜನ ಮತ್ತು ದನಗಳ ಜೀವಕ್ಕೆ ಕುತ್ತು ಕಟ್ಟಿಟ್ಟ ಬುತ್ತಿ. ಮೊದಲೇ ನಶೆಯೇರಿ ನುಗ್ಗಿ ಬರುವ ದನಗಳ ಎದುರು ಸಿಕ್ಕವರು ಬದುಕುಳಿವುದೇ ಅದೃಷ್ಟದ ಮಾತು. ಆದರೂ ಅಲ್ಲಿ ಜಲ್ಲಿಕಟ್ಟು ಸ್ಪರ್ಧೆ ಆಯೋಜನೆ ಮಾಡುತ್ತಾರೆ. ನೋಡಲು ಸಾವಿರಾರು ಮಂದಿ ಜಮಾಯಿಸುತ್ತಾರೆ. ಅಷ್ಟಕ್ಕೂ ಅಪಾಯಕಾರಿ ಜಲ್ಲಿಕಟ್ಟು ಆಯೋಜನೆ ಮಾಡುವುದಾದರೂ ಎಲ್ಲಿ ಅಂತೀರಾ...? ಈ ಸ್ಟೋರಿ ಓದಿ.....
ಜನ ಜಾತ್ರೆ ಮೇಲೆ ಶರವೇಗದಲ್ಲಿ ನುಗ್ಗಿ ಬರುತ್ತಿರುವ ದನಗಳು. ದನಗಳ ದಾಳಿಗೆ ಗಾಯಗೊಂಡು ಚೆಲ್ಲಾಪಿಲ್ಲಿಯಾಗಿ ಓಡುತ್ತಿರುವ ಜನ. ನಶೆಯೇರಿ ನುಗ್ಗಿ ಬರುತ್ತಿರುವ ದನಗಳನ್ನು ಅಡ್ಡಗಟ್ಟಲು ಯತ್ನಿಸುತ್ತಿರುವ ಸಾಹಸಿ ಯುವಕರು ಕಂಡುಬಂದದ್ದು ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆ ಹೊಸೂರು ಸಮೀಪದ ಉದ್ದನಪಲ್ಲಿ ಗ್ರಾಮದ ಬಳಿ ನಡೆಯುತ್ತಿರುವ ಜಲ್ಲಿಕಟ್ಟು ಸ್ಪರ್ಧೆಯಲ್ಲಿ. ಹೌದು, ಅಪಾಯಕಾರಿ ಜಲ್ಲಿಕಟ್ಟು ಸ್ಪರ್ಧೆ ವೇಳೆ ನಶೆಯೇರಿದ ದನಗಳು ನೆರೆದಿದ್ದ ಗುಂಪಿನ ಮೇಲೆ ನುಗ್ಗಿ ಮೂವತ್ತಕ್ಕೂ ಅಧಿಕ ಮಂದಿ ಗಾಯಗೊಂಡು ಮೂವರ ಸ್ಥಿತಿ ಚಿಂತಾಜನಕವಾಗಿದೆ. ಗಾಯಗೊಂಡವರನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ರೆಸಾರ್ಟ್ ರಾಜಕಾರಣಕ್ಕೆ ಹೋಲಿಸಬೇಡಿ, ನಾನು ಪಕ್ಷದ ಶಿಸ್ತಿನ ಸಿಪಾಯಿ; ಸಚಿವ ಸಿ.ಸಿ.ಪಾಟೀಲ್
ರೋಮಾಂಚಕಾರಿಯಾದ ಜಲ್ಲಿಕಟ್ಟು ಸ್ಪರ್ಧೆ ಅಷ್ಟೆ ಅಪಾಯಕಾರಿಯು ಹೌದು. ಹಾಗಾಗಿ ಜಲ್ಲಿಕಟ್ಟು ಸ್ಪರ್ಧೆ ವೇಳೆ ಎಷ್ಟು ಜಾಗರೂಕತೆ ವಹಿಸಿದರೂ ಸಾಲದು. ಇಲ್ಲಿಯೂ ಸಹ ಆಯೋಜಕರು ಎರಡು ಕಡೆ ಮರಗಳಿಂದ ತಡೆಗೋಡೆಗಳನ್ನು ನಿರ್ಮಿಸಿದ್ದರೂ ಸಹ ಹದ್ದಿನ ಕಡೆ ಸಾಗುವ ಬರದಲ್ಲಿ ದನಗಳು ತಡೆಗೋಡೆಯನ್ನು ಛಿದ್ರಗೊಳಿಸಿ ಜನರ ಮೇಲೆ ದಾಳಿ ನಡೆಸಿವೆ. ಘಟನೆಯಲ್ಲಿ ಕೆಲವರು ಕೂದಲೆಳೆ ಅಂತರದಲ್ಲಿ ದನಗಳ ದಾಳಿಯಿಂದ ಪಾರಾಗಿದ್ದಾರೆ. ಸಾಮಾನ್ಯವಾಗಿ ಜಲ್ಲಿಕಟ್ಟು ಸ್ಪರ್ಧೆಯಲ್ಲಿ ಭಾಗವಹಿಸುವ ದನಗಳಿಗೆ ನಶೆಯೇರಲು ಸಾರಾಯಿ ಸೇರಿದಂತೆ ಮತ್ತು ಬರುವ ಪಾನೀಯಗಳನ್ನು ನೀಡಲಾಗುತ್ತದೆ. ಹಾಗಾಗಿ ದನಗಳು ದಿಕ್ಕೆಟ್ಟು ದಿಕ್ಕಾ ಪಾಲಾಗಿ ಸಾಗುತ್ತವೆ. ಇದರಿಂದ ದನಗಳ ಜೀವಕ್ಕೂ ಹಾನಿ ಮತ್ತು ಜನಗಳ ಜೀವಕ್ಕೂ ಹಾನಿ ಎನ್ನಲಾಗಿದೆ.
ಇನ್ನೂ ಜಲ್ಲಿಕಟ್ಟು ಸ್ಪರ್ಧೆಯಲ್ಲಿ ಪದೇ ಪದೇ ಸಾವು ನೋವುಗಳು ಸಂಭವಿಸಿದರು ಸ್ಪರ್ಧೆಯಲ್ಲಿ ತಮ್ಮ ದನಗಳು ಗೆಲ್ಲಬೇಕು. ಹದ್ದಿನಲ್ಲಿ ಯಾರು ಹಿಡಿಯಬಾರದು ಎಂದು ನಶೆ ಪಾನಿಯಗಳನ್ನು ನೀಡುತ್ತಾರೆ ಎನ್ನಲಾಗಿದ್ದು, ಸದ್ಯ ರಾಜ್ಯದಲ್ಲಿ ನಿಷೇಧವಿರುವ ಜಲ್ಲಿಕಟ್ಟು ಪಕ್ಕದ ರಾಜ್ಯ ತಮಿಳುನಾಡಿನಲ್ಲಿ ರಾಜಾರೋಷವಾಗಿ ಸರ್ಕಾರದ ಅನುಮತಿಯಲ್ಲಿಯೆ ಸಾಗುತ್ತಿದ್ದು, ನಮ್ಮ ರಾಜ್ಯದಿಂದಲು ದನಗಳು ಕೊಂಡೊಯ್ದು ಜಲ್ಲಿಕಟ್ಟು ಸ್ಪರ್ಧೆಯಲ್ಲಿ ಭಾಗವಹಿಸುತ್ತಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ