ಕೊಪ್ಪಳ: ಸಾಮಾನ್ಯ ಜೂಜಾಟ (Gambling) ಸಂದರ್ಭದಲ್ಲಿ ಅಲ್ಲಿ ಜೂಜಾಡುವವರನ್ನು ಹಿಡಿದು ಜೈಲಿಗೆ ಹಾಕುವುದು ವಾಡಿಕೆ. ಆದರೆ ಇಲ್ಲೊಂದು ವಿಚಿತ್ರ ಘಟನೆ ನಡೆದಿದೆ. ಜೂಜಾಟದಲ್ಲಿ ತೊಡಗಿಸಿದ್ದ ಹುಂಜಗಳನ್ನು (Roosters) ಹಿಡಿದು ಬಂಧಿಖಾನೆಯಲ್ಲಿ ಹಾಕಿದ ಹಾಸ್ಯಾಸ್ಪದ ಘಟನೆ ಕೊಪ್ಪಳ (Koppal) ಜಿಲ್ಲೆಯ ಕಾರಟಗಿಯಲ್ಲಿ (Karatagi Town Police) ನಡೆದಿದೆ. ಕಾರಟಗಿ ಬಳಿಯ ಬಸವಣ್ಣ ಕ್ಯಾಂಪಿನ ಹೊರವಲಯದಲ್ಲಿ ಕೋಳಿ ಅಂಕ (ಪಂದ್ಯ) (Cockfight Scene) ನಡೆಯುತ್ತಿದೆ ಎಂಬ ಮಾಹಿತಿ ಕಾರಟಗಿ ಪೊಲೀಸರಿಗೆ ಸಿಕ್ಕಿತ್ತು. ಈ ಮಾಹಿತಿ ಆಧರಿಸಿ ಎಎಸ್ಐ ಬಸವರಾಜ ಸೇರಿ ಪೊಲೀಸ್ ತಂಡ ಜೂಜಾಟ ನಡೆಯುತ್ತಿದ್ದ ಸ್ಥಳದ ಮೇಲೆ ದಾಳಿ ನಡೆಸಿದ್ದರು. ಆದರೆ ಪೊಲೀಸರು (Police) ಬರುತ್ತಿದ್ದಂತೆ ಕೋಳಿ ಪಂದ್ಯ ಆಡುತ್ತಿದ್ದವರು ಎದ್ದೆನೋ ಬಿದ್ದೆನೋ ಅಂತ ಸ್ಥಳದಿಂದ ದಿಕ್ಕಾಪಾಲಾಗಿ ಪರಾರಿಯಾಗಿದ್ದರು.
ಇನ್ನು, ಪೊಲೀಸರಿಂದ ತಪ್ಪಿಸಿಕೊಂಡು ಪರಾರಿಯಾಗುವ ಸಂದರ್ಭದಲ್ಲಿ ತಾವು ಜೂಜಾಟಕ್ಕಾಗಿ ತಂದಿದ್ದ ಹುಂಜಗಳನ್ನು ಅಲ್ಲಿಯೇ ಬಿಟ್ಟು ಆದರ ಮಾಲೀಕರು ಪರಾರಿಯಾದವರು. ಈ ಸಂದರ್ಭದಲ್ಲಿ ಪೊಲೀಸರು ಜೂಜಾಟದಲ್ಲಿ ತೊಡಗಿದ್ದವರನ್ನು ಬೆನ್ನಟ್ಟಿ ಹಿಡಿಯಬೇಕಿತ್ತು. ಇಲ್ಲವೇ ಅವರನ್ನು ಆಮೇಲೆ ಆದರೂ ಬಂಧಿಸಬಹುದಿತ್ತು. ಆದರೆ ಅದನ್ನು ಮಾಡದೆ ಪೊಲೀಸರು, ಅಲ್ಲಿದ್ದ ಮೂರು ಹುಂಜಗಳು ಹಾಗೂ 9 ಬೈಕ್ ಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ವಶಕ್ಕೆ ತೆಗೆದುಕೊಂಡ ಬೈಕ್ ಗಳನ್ನು ಠಾಣೆಯ ಹೊರಗಡೆ ನಿಲ್ಲಿಸಿದ್ದು, ಹುಂಜಗಳನ್ನು ನೇರವಾಗಿ ಬಂಧಿಖಾನೆಯಲ್ಲಿಟ್ಟು ಲಾಕ್ ಮಾಡಿದ್ದಾರೆ.
ಇದನ್ನೂ ಓದಿ: Bengaluru: ನಾಯಿ, ಕೋಳಿ ಆಯ್ತು, ಈಗ ಬೆಕ್ಕುಗಳ ವಿರುದ್ಧ ದೂರು ನೀಡಿದ ಬೆಂಗಳೂರಿನ ಜನರು
ಸೋಮವಾರ ಸಂಜೆಯಿಂದ ಮೂರು ಹುಂಜಗಳು ಬಂಧಿಖಾನೆಯಲ್ಲಿವೆ. ಸದ್ಯ ಅವುಗಳನ್ನು ನೋಡಿಕೊಳ್ಳುವುದು ಸಹ ಪೊಲೀಸರ ಕರ್ತವ್ಯವಾಗಿದೆ. ಪ್ರಾಣಿಗಳನ್ನು ಬಂಧಿಸಿರುವುದು ಸಹಜವಾಗಿ ಪ್ರಾಣಿಪ್ರಿಯರನ್ನು ಕೆರಳಿಸುವಂತೆ ಮಾಡಿದೆ. ಮಾಲೀಕರನ್ನು ಬಿಟ್ಟು, ಹುಂಜಗಳನ್ನು ಹಿಡಿದ ಪೊಲೀಸರ ಕ್ರಮಕ್ಕೆ ಹಲವರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈಗ ಬಂಧಿಖಾನೆಯಲ್ಲಿರುವ ಹುಂಜಗಳನ್ನು ಪೊಲೀಸರು ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಅವುಗಳನ್ನು ಬಿಡುಗಡೆ ಮಾಡಬೇಕಾಗಿದೆ. ಈ ಘಟನೆಯೇ ವಿಚಿತ್ರವಾಗಿದೆ.
ಪೊಲೀಸರು ದಾಳಿಯ ವೇಳೆ ತಾವು ವಶಪಡಿಸಿಕೊಂಡಿರುವ ವಸ್ತುಗಳನ್ನು ನ್ಯಾಯಾಲಯಕ್ಕೆ ಒಪ್ಪಿಸುವುದು ಸಹಜ. ಆದರೆ ಈ ಪ್ರಕರಣದಲ್ಲಿ ಹುಂಜಗಳನ್ನು ಹಿಡಿದಿರುವುದು ಪೊಲೀಸರ ಎಡವಟ್ಟಿಗೆ ಸಾಕ್ಷಿಯಾಗಿದೆ. ಅಲ್ಲದೇ ಪೊಲೀಸರ ಕರ್ತವ್ಯ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ. ಪೊಲೀಸರು ಸ್ವಲ್ಪ ಶ್ರಮ ಪಟ್ಟಿದ್ದರೆ ಹುಂಜಗಳ ಮಾಲೀಕರನ್ನು ವಶಕ್ಕೆ ಪಡಿಸಿಕೊಳ್ಳಬಹುದಿತ್ತು. ಆದರೆ ಅದನ್ನು ಮಾಡದೆ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡರೆ ಸಾಕು ಎಂಬಂತೆ ಹುಂಜಗಳನ್ನು ಹಿಡಿದು ಕೈ ತೊಳೆದುಕೊಂಡಂತೆ ಮಾಡಿದ್ದಾರೆ ಎಂಬ ಮಾತುಗಳು ಸ್ಥಳೀಯರಿಂದ ಕೇಳಿ ಬಂದಿದೆ.
ಆಂಧ್ರ ಪ್ರದೇಶ ಹಾಗೂ ತೆಲಂಗಾಣದಲ್ಲಿ ಮಕರ ಸಂಕ್ರಾಂತಿ ಸಂದರ್ಭದಲ್ಲಿ ಕೋಳಿ ಅಂಕ ಆಯೋಜನೆ ಮಾಡುತ್ತಾರೆ. ಈ ರಾಜ್ಯಗಳ ಪಕ್ಕದಲ್ಲಿರುವ ಕೊಪ್ಪಳ ಜಿಲ್ಲೆಯಲ್ಲಿಯೂ ಕನಕಗಿರಿ. ಕಾರಟಗಿ ಹಾಗೂ ಗಂಗಾವತಿ ತಾಲೂಕಿನಲ್ಲಿ ಆಗಾಗ ಕೋಳಿ ಪಂದ್ಯಗಳು ನಡೆಯುತ್ತಿರುತ್ತವೆ.
ಕೋಳಿ ಪಂದ್ಯದಲ್ಲಿ ಒಂದು ಹುಂಜವನ್ನು ಇನ್ನೊಂದು ಹುಂಜದ ಮೇಲೆ ಫೈಟಿಂಗ್ ಬಿಟ್ಟು ಹಣ ಕಟ್ಟುತ್ತಾರೆ. ಫೈಟಿಂಗ್ ನಲ್ಲಿ ಗೆದ್ದಿರುವ ಕೋಳಿಯ ಮೇಲೆ ಕಟ್ಟಿರುವ ಹಣವನ್ನು ಸೋತ ಕೋಳಿಯ ಮೇಲೆ ಕಟ್ಟಿರುವವರು ನೀಡಬೇಕಾಗುತ್ತದೆ. ಈ ಕೋಳಿ ಪಂದ್ಯವೂ ನೋಡುವವರಿಗೆ ರೋಚಕವಾಗಿ ಕಂಡರು ಸ್ಪರ್ಧೆ ಮಾಡುವ ಎರಡು ಹುಂಜಗಳಲ್ಲಿ ಒಂದು ಜೀವ ತೆರಬೇಕಾಗುತ್ತದೆ.
ಇದನ್ನೂ ಓದಿ: Minister Roja: ಆಂಧ್ರದಲ್ಲಿ ಸಚಿವೆಯ ಸಂಕ್ರಾಂತಿ ಸಡಗರ, ಕೋಳಿಯನ್ನು ರೇಸ್ಗೆ ಬಿಟ್ಟು ಸಂಭ್ರಮಿಸಿದ ರೋಜಾ!
ರಾಜ್ಯದಲ್ಲಿ ಕೋಳಿ ಪಂದ್ಯ ನಡೆಸುವುದನ್ನು ಸರ್ಕಾರ ನಿಷೇಧಿಸಿದೆ. ನಿಷೇಧದ ನಡುವೆಯೂ ಸಾಂಪ್ರಾದಾಯಿಕ ಆಚರಣೆ ಮಾಡಲೇಬೇಕು ಎಂದು ಕೆಲವರು ಕದ್ದು ಮುಚ್ಚಿ ಕೋಳಿ ಪಂದ್ಯಗಳು ನಡೆಸುತ್ತಾರೆ. ಕೋಳಿ ಪಂದ್ಯಕ್ಕೆ ಪಕ್ಕದ ರಾಜ್ಯದಿಂದ ಜೂಜಾಡಲು ಹಲವರು ಆಗಮಿಸುತ್ತಾರೆ. ಈ ಸಂದರ್ಭದಲ್ಲಿ ಲಕ್ಷಾಂತರ ರೂಪಾಯಿ ಹಣದ ವಹಿವಾಟು ನಡೆಯುತ್ತದೆ. ಕೋಳಿ ಪಂದ್ಯದ ತಡೆಯಬೇಕಾದ ಪೊಲೀಸರು ಕಾಟಾಚಾರಕ್ಕೆ ದಾಳಿ ಮಾಡಿ ಒಂದು ಕೇಸ್ ಹಾಕಿ ಕೈತೊಳೆದುಕೊಳ್ಳುತ್ತಾರೆ, ಅದರಂತೆ ಈಗ ಕಾರಟಗಿ ಪೊಲೀಸರು ಸಹ ಹುಂಜಗಳನ್ನು ಹಿಡಿದು ಬಂಧಿಖಾನೆಗೆ ಹಾಕಿ ಕೈತೊಳೆದುಕೊಂಡಂತೆ ಇದ್ದಾರೆ ಎನ್ನಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ